ಗಾಳಿಪಟ ಹಾರಿಸೋ ಮಾಂಜಾ ದಾರದಿಂದ ಪ್ರಾಣಕ್ಕೆ ಕುತ್ತು.. ನಿಷೇಧವಿದ್ರೂ ಹೇಗೆ ಸಿಕ್ತಿದೆ ಈ ದಾರ?

ಗಾಳಿಪಟ ಹಾರಿಸೋ ಮಾಂಜಾ ದಾರದಿಂದ ಪ್ರಾಣಕ್ಕೆ ಕುತ್ತು.. ನಿಷೇಧವಿದ್ರೂ ಹೇಗೆ ಸಿಕ್ತಿದೆ ಈ ದಾರ?

ಆಕಾಶದಲ್ಲಿ ಹಾರೋ ಗಾಳಿಪಟ ನೋಡಲು ಚಂದ ನಿಜ, ಆದ್ರೆ ಇದೇ ಗಾಳಿಪಟ ಮುಗ್ಧ ಜೀವಿಗಳ ಪ್ರಾಣವನ್ನೂ ತೆಗೆಯಬಹುದು ಅನ್ನೋದು ಬಹಳ ಮಂದಿಗೆ ಗೊತ್ತಿರಲಿಕ್ಕಿಲ್ಲ. ಹೇಗೆ ಅಂತೀರಾ ? ಗಾಳಿ ಪಟದ ಸೂತ್ರದ ಹಿಡಿ ಹಿಡಿದಿರುವ ಮಾಂಜ ದಾರದಿಂದ. ಈಗಾಗಲೇ ಹಲವು ಪಕ್ಷಿಗಳು ಈ ಮಾಂಜಕ್ಕೆ ಬಲಿಯಾಗಿದ್ದಾಗಿದೆ. ಹಾಗಂತ ಕೇವಲ ಪ್ರಾಣಿಪಕ್ಷಿಗಳಷ್ಟೇ ಅಲ್ಲ. ಇದೀಗ ಮನುಷ್ಯರೂ ಮಾಂಜಾದಿಂದ ಅನಾಹುತವನ್ನ ಎದುರಿಸುವಂತಾಗಿದೆ. ಈ ದಾರದಿಂದ ಬದುಕುಳಿದು ಬಂದಿರುವವರ ಸ್ಟೋರಿ ಹೇಳ್ತಿವಿ ನೀವೇ ನೋಡಿ.

ಗಾಳಿಪಟ.. ಧರೆಯ ಮೇಲೆ ನಿಂತು ಆಕಾಶಕ್ಕೆ ಮುತ್ತು ಕೊಡ್ಬೆಕಾ ? ಅದು ಗಾಳಿ ಪಟದಿಂದ ಮಾತ್ರ ಸಾಧ್ಯ. ಈ ಗಾಳಿಪಟ ಹಾರಿಸೋಕೆ ಮಕ್ಕಳು, ದೊಡ್ಡವರು, ಗಂಡು, ಹೆಣ್ಣು ಎನ್ನುವ ಬೇಧ ಭಾವವಿಲ್ಲ. ಯಾರಾದರೂ ಸರಿಯೇ ಗಾಳಿಪಟ ಎಂದ ಕೂಡಲೇ, ಸೂತ್ರಧಾರವನ್ನು ಕೈಯಲ್ಲಿ ಹಿಡಿದು ಪಟ ಹಾರಿಸೋಕೆ, ನಾಮುಂದು, ತಾಮುಂದು ಅಂತಾ ಬಂದುಬಿಡ್ತಾರೆ. ಸೂರ್ಯ ಚಂದ್ರರಂತೆ ಆಕಾಶದಲ್ಲಿ ಅದು ತೇಲಾಡುವಾಗ, ನಾವೇ ಆ ಪಟವಾಗಿ ಹಾರಾಡುವ ಅನುಭವ ಉಂಟಾಗುತ್ತಿರುತ್ತದೆ. ಜೀವನದಲ್ಲಿ ಯಾವುದೂ ನಮ್ಮ ಕಂಟ್ರೋಲ್ ನಲ್ಲಿ ಇಲ್ಲದಿರುವಾಗ, ಇದಾದರೂ ನಮ್ಮ ಕೈ ಹಿಡದಲ್ಲಿದೆ, ಎನ್ನುವ ಸಮಾಧಾನಕ್ಕೋ ಏನೋ, ಎಲ್ಲರಿಗೂ ಪಟ ಹಾರಿಸೋದು ಅಂದ್ರೆ ಇಷ್ಟ.

blank

ಮುಂಚೆ ಎಲ್ಲ ಸಂಕ್ರಾಂತಿ ಕಾಲದಲ್ಲಿ ಮನೆಯವರೆಲ್ಲ ಸೇರಿ ಗಾಳಿಪಟ ಹಾರಿಸುತ್ತಿದ್ದರು. ಈ ದಿನದಂದು ಗಾಳಿಪಟ ಹಾರಿಸುವುದು ಅನಾದಿ ಕಾಲದಿಂದಲೂ ನಡೆದು ಬಂದ ಸಂಪ್ರದಾಯವಾಗಿದ್ದರೂ ಅದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಬಿಸಿಲಿನಲ್ಲಿ ಗಾಳಿಪಟ ಹಾರಿಸುವುದರಿಂದ ದೇಹಕ್ಕೆ ವಿಟಮಿನ್ ಡಿ ಅಗತ್ಯ ಪ್ರಮಾಣದಲ್ಲಿ ದೊರೆಯುತ್ತದೆ. ಚಳಿಗಾಳಿಯಿಂದ ಉಂಟಾಗುವ ಸೋಂಕು ಹಾಗೂ ಕಾಯಿಲೆಗಳ ವಿರುದ್ಧ ಹೋರಾಡಲು ವಿಟಮಿನ್ ಡಿ ಶಕ್ತಿ ಒದಗಿಸುವ ಜೊತೆಗೆ ಚಳಿಗಾಲದಲ್ಲಿ ಕಾಡುವ ಅನೇಕ ಚರ್ಮ ಸಮಸ್ಯೆಗಳನ್ನು ದೂರವಾಗಿಸುತ್ತದೆ. ಇದರಿಂದ ಈ ಒಂದು ಆಟ, ಮಜದ ಜೊತೆಗೆ ಆರೋಗ್ಯಕರವೂ ಹೌದು. ಆದರೆ ಇದೆ ಗಾಳಿಪಟ ಮಾರಣಾಂತಿಕ ಎನ್ನುವುದು ಮರೆಯುವಂತಿಲ್ಲ. ಹೌದು, ಇತ್ತೀಚೆಗೆ ಕೋವಿಡ್ ಲಾಕ್ಡೌನ್ ಸಮಯದಲ್ಲಿ ಈ ಗಾಳಿಪಟಗಳ ಹಾರಾಟ ಹೆಚ್ಚಾಗಿದೆ. ಇದರಿಂದ ಎಷ್ಟು ಸಂತೋಷ ಸಿಗುವುದೋ, ಅಷ್ಟೆ ಮಾರಣಾಂತಿಕವೂ ಹೌದು. ಇದಕ್ಕೆ ಕಾರಣ ಗಾಳಿಪಟ ಹಾರಿಸಲು ಬಳಸುವ ಮಾಂಜಾ ದಾರ.

ಮಾರಣಾಂತಿಕವಾಗುತ್ತಿದೆ ಪಟದ ಮಾಂಜಾ ದಾರ!
ಮಾಂಜಾ ದಾರ ತಯಾರಿಸೋದು ಹೇಗೆ ಗೊತ್ತಾ ?

ಗಾಳಿ ಪಟ ಹಾರಿಸೋದು ಪಂದ್ಯದ ರೀತಿ. ಆಡುವವರು, ಈ ರೀತಿ ಮಾಂಜಾ ದಾರವನ್ನು ಬಳಸಿ ಆಡುವುದುಂಟು. ಈ ಮಾಂಜಾ ದಾರದ ತಯಾರಿಕೆ ಒಂದು ಕಲೆ. ಟ್ಯೂಬ್ ಲೈಟ್, ಬಲ್ಬ್ ಮುಂತಾದ ಗಾಜಿನ ತುಂಡುಗಳನ್ನು ಸಂಪೂರ್ಣ ಪುಡಿ ಮಾಡಿ ಅದನ್ನು ರಬ್ಬರ್ ಹಾಗೂ ಇನ್ನಿತರ ಕೆಮಿಕಲ್ಸ್ ಗಳಲ್ಲಿ ಕುದಿಯುವ ನೀರಿಗೆ ಬೆರೆಸಲಾಗುತ್ತದೆ. ಅದು ಗಂಜಿಯ ರೀತಿ ಆದಾಗ ಬಣ್ಣವನ್ನು ಬೆರೆಸಿ, ಒಂದು ರೀತಿಯ ದ್ರವವನ್ನು ತಯಾರಿಸಲಾಗುತ್ತದೆ. ಇದನ್ನು ಹತ್ತಿಯದಾರಕ್ಕೆ ಹಚ್ಚಿ ಒಣಗಿಸಿ ಸುತ್ತಿ ಮಾಂಜಾ ದಾರವನ್ನು ತಯಾರಿಸಲಾಗುತ್ತದೆ. ಈ ದಾರ ಕೈಗಳನ್ನು ಕತ್ತರಿಸುವಷ್ಟು ಚೂಪಾಗಿರುತ್ತದೆ. ಇದರಿಂದ ಗಾಳಿಪಟ ಹಾರಿಸುವವರು ಕೈ ಬೆರೆಳಿಗೆ ರಬ್ಬರ್ ಫಿಂಗರ್ ರಿಂಗ್ ಅಥವಾ ಗ್ಲೌಸ್​ಗಳನ್ನು ಹಾಕಿಕೊಂಡಿರ್ತಾರೆ. ಪಟ ಹಾರಿಸುವ ಸ್ಪರ್ಧೆ ನಡೆಯುವಾಗ, ಇನ್ನೊಬ್ಬ ಸ್ಪರ್ಧಿಯ ಪಟದ ದಾರವನ್ನು ಕತ್ತರಿಸಲು ಈ ರೀತಿಯ ದಾರವನ್ನು ಬಳಸುತ್ತಾರೆ. ಇದು ಪಟ ಹಾರಾಡುವಾಗ ಮನರಂಜನೆ ನೀಡಿದರೂ, ದಾರ ಕೈ ತಪ್ಪಿ ಆಕಾಶದ ಮಧ್ಯದಲ್ಲಿ ನೇತಾಡುವಾಗ ಅನಾಹುತಗಳು ಸಂಭವಿಸುತ್ತವೆ. ಇದೇ ದಾರ ಹಲವು ಪಕ್ಷಿಗಳ ರೆಕ್ಕೆಗೆ ಸಿಕ್ಕಿ, ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳಿವೆ. ಇದು ಪ್ರಾಣಿ ಪಕ್ಷಿಗಳಿಗೆ ಮಾತ್ರ ಸೀಮಿತವಲ್ಲ. ಮಾನವರಿಗೂ ಅಪಾಯಕಾರಿಯೇ. ನಡೆದಾಡುವಾಗ ಅಥವಾ ವೇಗವಾಗಿ ಗಾಡಿ ಓಡಿಸುವಾಗ ಕತ್ತಿಗೆ ಸಿಕ್ಕಿದರೆ, ಕತ್ತನ್ನೆ ಕುಯ್ದು ಪ್ರಾಣ ತೆಗೆಯುವುದರಲ್ಲಿ ಸಂಶಯವೇ ಇಲ್ಲ.

blank

ಮಾರಣಾಂತಿಕ ಮಾಂಜಾ ದಾರ ಬ್ಯಾನ್ ಮಾಡಿದೆ ಸರ್ಕಾರ
ಆದರೂ ಕಾಳಸಂತೆಯಲ್ಲಿ ಕದ್ದು ಮಾರುತ್ತಿರುವ ಕಿಡಿಗೇಡಿಗಳು

ಈ ಮಾಂಜಾ ದಾರ ತುಂಡಾದ ನಂತರ ಮರಕ್ಕೋ ಅಥವಾ ಕಂಬಗಳಿಗೋ ಸುತ್ತಿಕೊಂಡಿರುತ್ತದೆ. ಇದನ್ನು ಕಾಣದೇ ಹಾರುವ ಪಕ್ಷಿಗಳ ರೆಕ್ಕೆ ಅಥವಾ ಕಾಲು ಸಿಲುಕಿ ಪ್ರಾಣ ತೆಗೆಯುತ್ತದೆ. ಹೀಗಾಗಿಯೇ ಈ ದಾರವನ್ನು ಮಾರಾಟ ಮಾಡುವಂತಿಲ್ಲ ಹಾಗೂ ಬಳಸುವಂತಿಲ್ಲ ಎಂದು ಸರ್ಕಾರ ಬ್ಯಾನ್ ಮಾಡಿದೆ. ಆದರೆ ಈ ದಾರವನ್ನು ಕಾಳಸಂತೆಯಲ್ಲಿ ಕೆಲ ಕಿಡಿ ಗೇಡಿಗಳು ಈಗಲೂ ಮಾರಾಟ ಮಾಡುತ್ತಿದ್ದಾರೆ. ಅದರಲ್ಲೂ ಕೋವಿಡ್ 2ನೇ ಅಲೆಯ ಈ ಸಂದರ್ಭದಲ್ಲಿ ಗಾಳಿಪಟ ಹಾರಿಸುವವರು ಹೆಚ್ಚಾಗಿದ್ದು ಇದರಿಂದ ದಿನಕ್ಕೆ 14 ರಿಂದ 15 ಪಕ್ಷಿಗಳು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿವೆ. ಹೀಗೆ ಮಾಂಜಾ ದಾರದ ಮಾರಾಟ ಮುಂದುವರೆದರೆ, ಪಟ ಹಾರಿಸುವವರ ಸಂಖ್ಯೆ ಕೂಡ ದ್ವಿಗುಣವಾಗಿ, ಪಕ್ಷಿ ಸಂಕುಲ ನಾಶವಾಗುವ ಸಾಧ್ಯತೆ ಇದೆ. ಈ ದಾರದ ವಿರುದ್ಧ ಹಲವು ಪಕ್ಷಿ, ಪರಿಸರ ವಾದಿಗಳು ಸಿಡಿದೆದ್ದಿರೋದೂ ಇದೆ. ಆದ್ರೂ ಇದನ್ನು ನಿಲ್ಲಿಸಲು ಆಗ್ತಾ ಇಲ್ಲ.

ಪ್ರಾಣಿ ಪಕ್ಷಿ ಆಯ್ತು ಈಗ ಮಾನವರಿಗೂ ಕಾದಿದೆ ಆಪತ್ತು
ಮಾಂಜಾ ದಾರದಿಂದ ಪಾರಾಗಿ ಬಂದ ಬೆಂಗಳೂರಿಗ

ಇವತ್ತು ಈ ಮಾಂಜಾದಾರದ ಬಗ್ಗೆ ಯಾಕಿಷ್ಟು ಹೇಳ್ತಾ ಇದ್ದಿವಿ ಅಂದ್ರೆ ಅದಕ್ಕೊಂದು ಕಾರಣ ಇದೆ. ಇದೇ ಮಾಂಜಾ ದಾರದಿಂದ ಬೆಂಗಳೂರಿನಲ್ಲಿ ನಡೆದ ಆ ಒಂದು ಘಟನೆ. ಆ ದಾರ ಅದ್ಯಾವ ಪರಿ ಅನಾಹುತ ಮಾಡುತ್ತೆ ಅನ್ನೋದನ್ನ ಸಾರಿ ಹೇಳುತ್ತಿದೆ. ಮಾಂಜಾ ದಾರಕ್ಕೆ ಸಿಕ್ಕ ಮಲ್ಲಿಕಾರ್ಜುನ್ ಬದುಕುಳಿದಿದ್ದೇ ಪವಾಡ. ಆದ್ರೂ ಅವರ ಕೈ ಬೆರಳುಗಳು ಉಳಿದಿಲ್ಲ.

blank

ಕತ್ತಿಗೆ ಸುತ್ತಿದ ದಾರದಿಂದ ಬಚಾವಾಗಲು ಕೈಗಳ ತಡೆ
ಮಾಂಜಾ ದಾರದಿಂದ ತನ್ನೆರಡು ಕೈ ಬೆರಳುಗಳು ಕಟ್

ಹೌದು. ಮಾಂಜಾ ದಾರ ತುಂಬ ತೆಳುವಾಗಿ ಇರೋದ್ರಿಂದ ಅದು ಕಣ್ಣಿಗೆ ಕಾಣೋದಿಲ್ಲ. ಅದರ ಅರಿವೂ ಕೂಡ ಇಲ್ಲದೆ, ತಮ್ಮ ಪಾಡಿಗೆ ತಾವು ಹೋಗ್ತಾ ಇದ್ದಾಗ ಈ ಮಾಂಜಾ ದಾರ ಕತ್ತಿಗೆ ಸುತ್ತಿಕೊಂಡಿದೆ. ಕತ್ತಿನಲ್ಲಿ ಹಲವು ಕಟ್ಸ್ ಮಾಡಿದೆ. ಹೇಗೋ ಚಾಕಚಕ್ಯತೆಯಿಂದ ಕೈಗಳನ್ನ ಅಡ್ಡ ಹಿಡಿದ ಮಲ್ಲಿಕಾರ್ಜುನ್‌, ಪ್ರಾಣ ಉಳಿಸಿಕೊಂಡಿದ್ದೇ ಹೆಚ್ಚು. ಆದ್ರೆ ಈ ಸಂದರ್ಭದಲ್ಲಿ ಮಲ್ಲಿಕಾರ್ಜನ್‌ ಅವರ ಬಲಗೈನ ಎರಡು ಬೆರಳುಗಳು ಕಟ್ ಆಗಿ ಹೋಗಿವೆ. ಹೇಗೋ ಮಾಂಜಾದ ಸುರುಳಿಯಿಂದ ಬಿಡಿಸಿಕೊಂಡ ಮಲ್ಲಿಕಾರ್ಜುನ್‌ರನ್ನ ತಕ್ಷಣ ಸ್ಥಳಿಯರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದರು. ಮೈಮೇಲೆ ಆಗಿದ್ದ ಹಲವು ಕಟ್ ಗಳಿಗೆ ಆಸ್ಪತ್ರೆಯವರು ಸ್ಟೀಚ್ ಗಳನ್ನು ಹಾಕಿ ಅವರನ್ನು ದೊಡ್ಡ ತೊಂದರೆಯಿಂದ ರಕ್ಷಿಸಿದ್ದರು.

ಸರ್ಕಾರ ಈ ಮಾಂಜಾ ದಾರವನ್ನು 2016ರಲ್ಲೆ ಬ್ಯಾನ್ ಮಾಡಿದೆ. ಆದರೆ ಈ ದಾರದ ಬಳಕೆ ಮಾತ್ರ ಕಡಿಮೆಯಾಗಿಲ್ಲ. ಗಾಳಿಪಟ ಹಾರುವಾಗ, ಭೀಕರ ಗಾಳಿಗೆ ಅಥವ ಮಳೆಗೆ ಸಿಲುಕಿ ದಾರ ಕಟ್ ಆಗಿ ಹೋಗುತ್ತೆ ಅನ್ನೊ ಕಾರಣಕ್ಕೋ ಅಥವಾ ಬೇರೆಲ್ಲ ದಾರಕ್ಕಿಂತ ಮಾಂಜಾ ದಾರಕ್ಕೆ ಬೆಲೆ ಕಡಿಮೆ ಅನ್ನೊ ಕಾರಣಕ್ಕೋ ಗೊತ್ತಿಲ್ಲ. ಜನರು ಮಾತ್ರ ಇದರ ಬಳಕೆ ಮಾಡ್ತಾನೆ ಇದ್ದಾರೆ. ಪ್ರಾಣಿ ಪ್ರಿಯರು ಹಾಗೂ ವೈಲ್ಡ್ ಲೈಫ್ ರೆಸ್ಕ್ಯೂ ಟೀಂ ಈ ದಾರ ಮಾರಾಟ ತಡೆಯಲು ಹಿಂದೆ ಬಿದ್ದಿದ್ದಾರೆ. ಎಲ್ಲೆಲ್ಲಿ ಈ ದಾರ ಮಾರಾಟವಾಗುತ್ತೋ ಅಲ್ಲಲ್ಲಿ ನುಗ್ಗಿ ರೇಡ್ ಮಾಡಿ ದಾರಗಳನ್ನು ಸೀಜ್ ಮಾಡ್ತಾ ಇದ್ದಾರೆ. ಇದಕ್ಕಾಗಿ ಅದರ ತಯಾರಿಕೆ ಹಾಗೂ ಹೋಲ್ ಸೇಲ್ ಮಾರಾಟ ಎಲ್ಲಿ ನಡಿತಾ ಇದೆ ಅನ್ನೋದ್ರ ಬಗ್ಗೆ ಮಾಹಿತಿ ಕಲೆ ಹಾಕ್ತಾ ಇದ್ದಾರೆ ವೈಲ್ಡ್ ಲೈಫ್ ರೆಸ್ಕ್ಯೂ ಟೀಂ.

blank

ಮಾಂಜಾಕ್ಕೆ ಸಿಕ್ಕಿ ನಲುಗುವ ಪಕ್ಷಿಗಳ ರಕ್ಷಣೆಗೆ ಮುಂದಾದ ಟೀಂ
ತಿಂಗಳಿಗೆ 200ಕ್ಕೂ ಹೆಚ್ಚು ಪಕ್ಷಿಗಳ ರಕ್ಷಣೆಗೆ ಬರ್ತಿವೆ ಕರೆಗಳು

ಈಗಾಗಲೆ ಮಾಂಜಾ ದಾರದಿಂದ ಹಲವು ಪಕ್ಷಿಗಳು ಪ್ರಾಣ ಕಳೆದುಕೊಂಡಿವೆ. ಅದು ಲಾಕ್ ಡೌನ್ ವೇಳೆಯಲ್ಲಿ ಗಾಳಿಪಟ ಹಾರಿಸುವವರ ಸಂಖ್ಯೆ ಹೆಚ್ಚಿದ್ದ ಕಾರಣ, ಸಹಜವಾಗಿ ದಿನಕ್ಕೆ ಹತ್ತು ಪಕ್ಷಿಗಳಿಗೆ ತೊಂದರೆಯಾಗುತ್ತಿದ್ದದು, ಈಗ ಒಂದೇ ದಿನಕ್ಕೆ 20ಕ್ಕೂ ಹೆಚ್ಚು ಪಕ್ಷಿಗಳು ಈ ಮಾಂಜಾ ಬಲೆಗೆ ಸಿಕ್ಕಿ ತೊಂದರೆಗೊಳಗಾಗುತ್ತಿವೆ. ಈ ಭೀಕರ ಮಾಂಜಾ ಬಲೆಯಲ್ಲಿ ಸಿಲುಕಿ, ಮುಗ್ಧ ಪಕ್ಷಿಗಳು ಬಲಿಯಾಗುತ್ತಿರುವುದನ್ನು ತಡೆಯಲು ಬೆಂಗಳೂರಿನ ಎ.ಆರ್.ಆರ್.ಸಿ ಟೀಂ ರೆಡಿಯಾಗಿದೆ. ಮುಂಚೆಯೆಲ್ಲಾ 15 ದಿಂದ 20 ಅಡಿ ಮೇಲೆ ಮಾಂಜಾಕ್ಕೆ ಸಿಕ್ಕಾಕಿಕೊಳ್ತಿದ್ದ ಪಕ್ಷಿಗಳನ್ನು ಬಿಬಿಎಂಪಿ ವಾಹನದ ಸಹಾಯದಿಂದ ಪಾರು ಮಾಡಲಾಗುತ್ತಿತ್ತು. ಇದೆ ಟೀಂ ಇದೀಗ ಪಕ್ಷಿಗಳನ್ನು ಪಾರು ಮಾಡಲು ಹೊಸದೊಂದು ಹೈ-ಫೈ ಯಂತ್ರವನ್ನೂ ಖರೀದಿಸಿದೆ.

ಪಕ್ಷಿಗಳನ್ನು ರಕ್ಷಿಸಲು ನಗರಕ್ಕೆ ಬಂದಿದೆ ಹೈಫೈ ಯಂತ್ರ
ಇದೇ ಪ್ರಪ್ರಥಮ ಬಾರಿಗೆ ಹೈಫೈ ಯಂತ್ರದಿಂದ ಪಕ್ಷಿಗಳ ರಕ್ಷಣೆ

ಬೆಂಗಳೂರಿನ ಎ.ಆರ್‌.ಆರ್‌.ಸಿ ಅಂದ್ರೆ ಏವಿಯನ್ & ರೆಪ್ಟೈಲ್ ರಿಹ್ಯಾಬಿಲಿಟೇಶನ್ ಸೆಂಟರ್ ಎನ್ನುವ ಸಮಾಜಮುಖಿ ತಂಡವೊಂದು ಪಕ್ಷಿ ರಕ್ಷಣೆಗೆಂದೇ ಈ ಒಂದು ಹೊಸ ಯಂತ್ರವನ್ನು ಖರೀದಿಸಿದೆ. ದೇಶದಲ್ಲೇ ಮೊದಲ ಬಾರಿಗೆ ಈ ರೀತಿ ಯಾಂತ್ರಿಕವಾಗಿ ರಕ್ಷಣೆಗೆ ಮುಂದಾಗಿದೆ ರೆಸ್ಕ್ಯೂ ಟೀಂ. ಆಧುನಿಕ ತಂತ್ರಜ್ಞಾನವನ್ನು ಬಳಸಿ ಈ ಯಂತ್ರವನ್ನು ಸಿದ್ಧಪಡಿಸಲಾಗಿದ್ದು, ಹೈಡ್ರಾಲಿಕ್ಸ್ ತಂತ್ರಜ್ಞಾನ ಸಹಾಯದಿಂದ ಇದು 3 ಅಂತಸ್ಥಿನವರೆಗಿನ ಎತ್ತರವನ್ನು ಸಲೀಸಾಗಿ ತಲುಪಬಹುದಾಗಿದೆ.

blank

ಪಕ್ಷಿಗಳು ಮಾಂಜಾ ಬಲೆಗೆ ಹೇಗೆ ಸಿಕ್ಕಿಕೊಳ್ತಾವೆ ಗೊತ್ತಾ ?
ಗಾಳಿಪಟ ತನ್ನ ನಿಯಂತ್ರಣ ತಪ್ಪಿ ಅಥವಾ ಮರ, ಲೈಟ್ ಕಂಬಗಳಿಗೆ ಸಿಲುಕಿ ಕಟ್ ಆಗಿ ನೇತಾಡುತ್ತಿರುತ್ತದೆ. ಆ ಪಟದ ಮಾಂಜಾ ದಾರ, ಹಾರಾಡುವ ಹಕ್ಕಿಗಳ ಕಾಲಿಗೆ ಅಥವಾ ರೆಕ್ಕೆಗೆ ಸುತ್ತಿಕೊಂಡುಬಿಡುತ್ತೆ. ಇದರಿಂದಾಗಿ ಹಾರಾಡಲಾಗದೆ ಹಕ್ಕಿಗಳು ನೇತಾಡಬೇಕಾಗುತ್ತವೆ. ಇದಲ್ಲದೆ, ಹಕ್ಕಿಗಳು ಗೂಡು ಕಟ್ಟಲು ನಾರುಗಳನ್ನ ಹುಡುಕುವಾಗ, ಗಾಜಿನಿಂದ ಮಾಡಿದ ದಾರ ಆಕಾಶದಲ್ಲಿ ಹೊಳಪಾಗಿ ಕಂಡು, ಅದನ್ನ ಹೆಕ್ಕಲು ಹೋಗಿ ಮಾಂಜಾಗೆ ಬಲಿಯಾಗುತ್ತಿವೆ.

ಉಚಿತವಾಗಿ ಸೇವೆ ಸಲ್ಲಿಸುತ್ತಿರೋ ಎ.ಆರ್‌.ಆರ್‌.ಸಿ ತಂಡ
ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೇ ನಿರಂತರ ಸೇವೆ

ಕೇವಲ ಮಾಂಜಾ ದಾರಗಳಿಂದ ಪಕ್ಷಿಗಳ ರಕ್ಷಣೆಗೆಂದೆ ರೆಡಿ ಇರುವ ಎ.ಆರ್‌.ಆರ್‌.ಸಿ ತಂಡ, ಯಾವುದೇ ಪ್ರತಿಫಲದ ಅಪೇಕ್ಷೆಯಿಲ್ಲದೇ ಉಚಿತವಾಗಿ ಈ ಸೇವೆಯಲ್ಲಿ ಭಾಗಿಯಾಗಿದೆ. 2016ರಿಂದ ಪಕ್ಷಿ ರಕ್ಷಣೆಗೆಂದೇ ಸ್ಥಾಪಿಸಲಾದ ಈ ಸಂಸ್ಥೆ, ನಿರಂತರವಾಗಿ ಪ್ರಾಣಿ ಪಕ್ಷಿಗಳ ಸೇವೆಯಲ್ಲಿ ತೊಡಗಿದ್ದಾರೆ. ನಗರದ ಯಾವುದೇ ಮೂಲೆಯಲ್ಲಿ ಪಕ್ಷಿಗಳು ಸಿಲುಕಿದ್ರೂ ಒಂದು ಕರೆ ಮಾಡಿ ಆ ಪಕ್ಷಿ ಅಥವಾ ಪ್ರಾಣಿಯ ಫೋಟೋ ಜೊತೆಗೆ ಲೋಕೇಷನ್ ಕಳಿಸಿದರೆ ಸಾಕು. ಕೇವಲ ಅರ್ಧ ಗಂಟೆಯಲ್ಲೇ ರಕ್ಷಣೆಗೆ ಮುಂದಾಗುತ್ತೆ ಈ ತಂಡ. ಈ ಮಾಂಜಾ ದಾರ ಮಾಡುತ್ತಿರುವ ಅನಾಹುತವನ್ನು ತಡೆಯಲು, ಮಾಂಜಾ ದಾರವನ್ನು ಬಳಸದಂತೆ ಕೋರಿಕೆ ಇಡ್ತಾ ಇದ್ದಾರೆ ರೆಸ್ಕ್ಯೂ ಟೀಂ.

ಪ್ರಾಣಿ ಪಕ್ಷಿಗಳು ಹಾಗೂ ಎಲ್ಲ ಜೀವಿಗಳಿಗೂ ಈ ಪ್ರಪಂಚದಲ್ಲಿ ಜೀವಿಸುವ ಹಕ್ಕಿದೆ, ಈಗಾಗಲೇ ಮಾನವರಿಂದ, ಇನ್ನಿಲ್ಲದ ತೊಂದರೆಗಳನ್ನು ಅನುಭವಿಸುತ್ತಿರುವ ಪ್ರಾಣಿ- ಪಕ್ಷಿಗಳನ್ನು ಕಾಪಾಡುವುದು ಜವಾಬ್ದಾರಿಯುತ ಪ್ರಜೆಯ ಕರ್ತವ್ಯ. ಹಾಗಂತ ಕೇವಲ ಪ್ರಾಣಿ ಪಕ್ಷಿಗಳು ಮಾತ್ರವಲ್ಲ, ಮಾಂಜಾದಾರದಿಂದ ನೀವು ಕೂಡ ನಿಮ್ಮನ್ನ ರಕ್ಷಿಸಿಕೊಳ್ಳಬೇಕಿದೆ. ಓಡಾಡುವಾಗ ಜೋಪಾನದಿಂದಿರಬೇಕಿದೆ.

ಬೆಂಗಳೂರಿನಲ್ಲಿ ಹೆಚ್ಚು ಪ್ರಾಣಿ ಪ್ರಿಯರಿದ್ದಾರೆ. ಯಾವುದಾದರು ಪ್ರಾಣಿ ಈ ರೀತಿ ತೊಂದರೆಗೆ ಸಿಲುಕ್ಕಿದ್ದರೆ ಅಯ್ಯೋ ಪಾಪಾ ಅನ್ನುತ್ತಾರೆ. ಆದ್ರೆ ನೀವು ಎಂದಾದರೂ ಮೋಜಿಗಾಗಿ ಮಾಂಜಾ ದಾರದಿಂದ ಗಾಳಿ ಪಟ ಹಾರಿಸಿದ್ದರೆ, ಯೋಚಿಸಿ.. ಆ ಪಕ್ಷಿಯ ಪರಿಸ್ಥಿತಿಗೆ ನೀವು ಕೂಡ ಕಾರಣರಾಗಿರಬಹುದು.

The post ಗಾಳಿಪಟ ಹಾರಿಸೋ ಮಾಂಜಾ ದಾರದಿಂದ ಪ್ರಾಣಕ್ಕೆ ಕುತ್ತು.. ನಿಷೇಧವಿದ್ರೂ ಹೇಗೆ ಸಿಕ್ತಿದೆ ಈ ದಾರ? appeared first on News First Kannada.

Source: newsfirstlive.com

Source link