ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಅತ್ತೆಯನ್ನೇ ಕೊಲೆ ಮಾಡಿಸಿದ ಸೊಸೆ

ತುಮಕೂರು: ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸಿದರು ಎಂದು ಅತ್ತೆಯನ್ನೇ ಕೊಲೆ ಮಾಡಿದ ಸೊಸೆಯೋರ್ವಳು ತನ್ನ ಪ್ರಿಯಕರನ ಸಮೇತವಾಗಿ ಪೊಲೀಸರ ಅತಿಥಿಯಾಗಿದ್ದಾಳೆ.

ಶಿರಾ ತಾಲೂಕು ಗೌಡಗೆರೆ ಹೋಬಳಿ ಉಜ್ಜನಕುಂಟೆ ಗ್ರಾಮದ ಸುಧಾಮಣಿ(28) ಹಾಗೂ ಆಕೆಯ ಪ್ರಿಯಕರ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ಜವಗೊಂಡನಹಳ್ಳಿ ಹೋಬಳಿಯ ಎಳನೀರು ವ್ಯಾಪಾರಿ ಶ್ರೀರಂಗಪ್ಪ(35) ಬಂಧಿತರು.

ಏನಿದು ಘಟನೆ..?
ಇದೇ ಜೂನ್ 24ರಂದು ತಾವರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಉಜ್ಜನಕುಂಟೆ ಗ್ರಾಮದಲ್ಲಿ ಸರೋಜಮ್ಮ(65) ಎಂಬ ಮಹಿಳೆ ತನ್ನ ವಾಸದ ಮನೆಯಲ್ಲಿ ಬೆಂಕಿ ಹಚ್ಚಿಕೊಂಡು ಮೃತಪಟ್ಟಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತಾವರೆಕೆರೆ ಪಿಎಸ್‍ಐ ಪಾಲಾಕ್ಷಪ್ರಭು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆಗ ಘಟನೆಯು ಆಕಸ್ಮಿಕವಾಗಿ ನಡೆದಿಲ್ಲ ಎಂಬ ಶಂಕೆ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆ ಕೈಗೊಂಡರು. ಇದಕ್ಕೆ ಪೂರಕವಾಗಿ ಮೃತ ಸರೋಜಮ್ಮಳ ಅಳಿಯ ಪ್ರೇಮ್ ಕುಮಾರ್ ಅವರು ಸೊಸೆ ಸುಧಾಮಣಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಪೊಲೀಸ್ ದೂರು ದಾಖಲಿಸಿದರು. ಇದನ್ನೂ ಓದಿ: ಅಡುಗೆ ಮಾಡುವ ವರ ಬೇಕಾಗಿದ್ದಾನೆ- ಜಾಹೀರಾತು ವೈರಲ್

ದೂರಿನಲ್ಲಿ ಸೊಸೆ ಸುಧಾಮಣಿಯು ಶ್ರೀರಂಗಪ್ಪ ಎಂಬಾತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಈ ವಿಚಾರದಲ್ಲಿ ಅತ್ತೆ ಸರೋಜಮ್ಮ ಪ್ರಶ್ನೆ ಮಾಡಿ ಜಗಳ ಮಾಡಿದ್ದರು. ಹೀಗಾಗಿಯೇ ಸೊಸೆ ಸುಧಾಮಣಿ ಬೆಂಕಿ ಹಚ್ಚಿ ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು.

ಪೆಟ್ರೋಲ್ ತಂದಿದ್ದ ಪ್ರಿಯಕರ:
ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ನಿಜಾಂಶ ತಿಳಿಯಲು ಹೆಚ್ಚು ದಿನ ಬೇಕಾಗಲಿಲ್ಲ. ಜೂನ್ 26ರಂದು ಸುಧಾಮಣಿ ಮತ್ತು ಶ್ರೀರಂಗಪ್ಪನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಹೊರಬಿದ್ದಿದೆ. ಆರೋಪಿ ಸುಧಾಮಣಿಯು ಶ್ರೀರಂಗಪ್ಪನೊಂದಿಗೆ ಇಟ್ಟುಕೊಂಡಿದ್ದ ಅಕ್ರಮ ಸಂಬಂಧಕ್ಕೆ ಅತ್ತೆ ಅಡ್ಡಿಪಡಿಸಿದ್ದರಿಂದ ಅತ್ತೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದಳು. ಅದರಂತೆ ಪ್ರಿಯಕರ ಶ್ರೀರಂಗಪ್ಪನು ಸರೋಜಮ್ಮಳಿಗೆ ಬೆಂಕಿ ಹಚ್ಚಲು ಪೆಟ್ರೋಲ್ ತಂದುಕೊಟ್ಟಿದ್ದನು.

blank

ಸುಧಾಮಣಿಯು ಪ್ಲಾನ್ ಮಾಡಿದಂತೆ ಅತ್ತೆ ಸರೋಜಮ್ಮರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಳು ಎನ್ನುವುದು ವಿಚಾರಣೆ ವೇಳೆ ತಿಳಿದುಬಂದಿದೆ. ಈಗ ಈ ಇಬ್ಬರೂ ಆರೋಪಿಗಳು ಜೈಲು ಪಾಲಾಗಿದ್ದಾರೆ. ಆದರೆ ಯಾವುದೇ ತಪ್ಪು ಮಾಡದ ಅತ್ತೆ ಸರೋಜಮ್ಮ ಸೊಸೆಯ ಅಕ್ರಮ ಸಂಬಂಧಕ್ಕೆ ಬಲಿಯಾಗಿದ್ದು ಮಾತ್ರ ವಿಪರ್ಯಾಸ.

The post ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಅತ್ತೆಯನ್ನೇ ಕೊಲೆ ಮಾಡಿಸಿದ ಸೊಸೆ appeared first on Public TV.

Source: publictv.in

Source link