ತಂಡದಲ್ಲಿ ಮತ್ತೆ ಶುರುವಾಯ್ತು ನಾಯಕತ್ವದ ಬದಲಾವಣೆಯ ಕೂಗು

ತಂಡದಲ್ಲಿ ಮತ್ತೆ ಶುರುವಾಯ್ತು ನಾಯಕತ್ವದ ಬದಲಾವಣೆಯ ಕೂಗು

ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​ ಸೋತ ಬೆನ್ನಲ್ಲೆ, ನಾಯಕತ್ವದ ಚರ್ಚೆಗಳು ಮತ್ತೆ ಮುನ್ನಲೆಗೆ ಬಂದಿವೆ. ಐಸಿಸಿ ಟೂರ್ನಿಮೆಂಟ್​​ಗಳಲ್ಲಿ ಕೊಹ್ಲಿ ಕ್ಯಾಪ್ಟನ್ಸಿ ರೆಕಾರ್ಡ್​, ಹೇಳಿಕೊಳ್ಳುವಂತಿಲ್ಲ ಅಂತೆಲ್ಲಾ ಟೀಕೆ ಮಾಡ್ತಿದ್ದಾರೆ. ಹಾಗಾದ್ರೆ ನಾಯಕತ್ವದ ಚರ್ಚೆ ವಿರಾಟ್​ ಕೊಹ್ಲಿಗೆ ಕುತ್ತು ತಂದಿದ್ಯಾ..? ಮಾಜಿ ಕ್ರಿಕೆಟಿಗರು ಹೇಳಿದ್ದಾದ್ರೂ ಏನು..?

ಟೀಮ್​ ಇಂಡಿಯಾ ಕಂಡ ಅಗ್ರೆಸ್ಸಿವ್ ಆ್ಯಂಡ್ ಸುಪ್ರೀಂ​ ಕ್ಯಾಪ್ಟನ್,​ ವಿರಾಟ್​ ಕೊಹ್ಲಿ.! ಕ್ರಿಕೆಟ್​​ ಲೋಕದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ ಕೊಹ್ಲಿ​, 21ನೇ ಶತಮಾನದ ಗ್ರೇಟ್​ ಕ್ಯಾಪ್ಟನ್. ಜೊತೆಗೆ ಕೊಹ್ಲಿ ನಾಯಕತ್ವದಲ್ಲಿ ದೇಶ-ವಿದೇಶಗಳಲ್ಲಿ ಟೆಸ್ಟ್​​​ ಸರಣಿಗಳನ್ನ ಭಾರತ ಗೆದ್ದಿದೆ. ದಿಗ್ಗಜ ಎಂ.ಎಸ್.ಧೋನಿ ರೆಕಾರ್ಡ್​​ ಬ್ರೇಕ್​​ ಮಾಡಿರುವ ಕೊಹ್ಲಿ, ಅತ್ಯಂತ ಯಶಸ್ವಿ ನಾಯಕ ಕೂಡ ಹೌದು. ಹಾಗೇ ತಂಡವನ್ನ ಐದು ವರ್ಷಗಳ ಕಾಲ ನಂ.1 ಪಟ್ಟ ಅಲಂಕರಿಸುವಂತೆ ಮಾಡಿದ್ದು ಕೂಡ, ಕೊಹ್ಲಿಯ ನಾಯ​​​ಕತ್ವವೇ ಅನ್ನೋದನ್ನ ಯಾರೂ ಮರೆಯುವಂತಿಲ್ಲ.

blank

ಆದರೆ ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್ ಪಂದ್ಯದ ಸೋಲಿನ ಬೆನ್ನಲ್ಲೇ, ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಚರ್ಚೆಗಳು ಶುರುವಾಗಿದೆ. ನಾಯಕತ್ವ ಬದಲಾವಣೆ ಅನ್ನೋದು ಪದೆಪದೇ ಸದ್ದು ಮಾಡ್ತಿರೋದು, ಇದೇ ಮೊದಲಲ್ಲ. ಆಸ್ಟ್ರೇಲಿಯಾ ಟೆಸ್ಟ್ ​ಸರಣಿ ನಂತರ ತಣ್ಣಗಾಗಿದ್ದ ಈ ವಿಚಾರ, ಈಗ ಮತ್ತೆ ಗರಿಗೆದರಿದೆ. ಆ ಮೂಲಕ ಕೊಹ್ಲಿ ಸ್ಥಾನಕ್ಕೆ ಕುತ್ತು ತಂದಿದೆ ಎನ್ನಲಾಗ್ತಿದೆ. ಹಾಗಾಗಿ ಕೂಡಲೇ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಸಿ ಬೇರೆಯವರಿಗೆ ಮಣೆ ಹಾಕಿ ಎಂಬೆಲ್ಲಾ ಅಪಸ್ವರದ ಮಾತುಗಳು ಎದ್ದಿವೆ.

ಒಂದೂ ಐಸಿಸಿ ಟ್ರೋಫಿ ಗೆದಿಲ್ಲ ವಿರಾಟ್​ ಕೊಹ್ಲಿ..!
ವಿರಾಟ್​ ಕೊಹ್ಲಿಯನ್ನ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿ ಎಂಬ ಚರ್ಚೆಗಳು ಮುನ್ನಲೆಗೆ ಬಂದಿರೋದು, ಇದುವರೆಗೂ ಐಸಿಸಿ ಟ್ರೋಫಿ ಗೆಲ್ಲದಿರೋದೇ ಅದಕ್ಕೆ ಕಾರಣ. ಕೊಹ್ಲಿ ನಾಯಕನಾಗಿ ಇದುವರೆಗೂ ಮೂರು ಐಸಿಸಿ ಟೂರ್ನಿಮೆಂಟ್​​ಗಳಲ್ಲಿ ತಂಡವನ್ನ ಮುನ್ನಡೆಸಿದ್ದಾರೆ. 2017ರಲ್ಲಿ ಐಸಿಸಿ ಚಾಂಪಿಯನ್​ ಟ್ರೋಫಿಯಲ್ಲಿ ಫೈನಲ್​, 2019ರ ಏಕದಿನ ವಿಶ್ವಕಪ್​ನಲ್ಲಿ ಸೆಮೀಸ್​ನಲ್ಲಿ ಕೊಹ್ಲಿ ಪಡೆ ಎಡವಿತ್ತು. ಇದೀಗ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​​ ಫೈನಲ್​​​ನಲ್ಲೂ ಚೊಚ್ಚಲ ಐಸಿಸಿ ಟ್ರೋಫಿ ಮುಡಿಗೇರಿಸಿಕೊಳ್ಳುವ ಕನಸು, ಮತ್ತೆ ಭಗ್ನಗೊಂಡಿದೆ. ಇದರೊಂದಿಗೆ ಕೊಹ್ಲಿ ನಾಯಕತ್ವದ ಕುರಿತು, ವ್ಯಾಪಕ ಟೀಕೆಗಳು ಮೂಡಿ ಬರಲಾರಂಭಿಸಿವೆ.

blank

ಕೊಹ್ಲಿ ನಾಯಕತ್ವಕ್ಕೆ ಮಾಜಿ ಕ್ರಿಕೆಟಿಗರ ಪರ-ವಿರೋಧ.!
ವಿರಾಟ್​ ಕೊಹ್ಲಿ ನಾಯಕತ್ವದ ವಿಚಾರ ಕ್ರಿಕೆಟ್​ ಲೋಕದಲ್ಲೇ ಚರ್ಚೆ ನಡೀತಿದೆ. ಅದೇ ರೀತಿ ಪಾಕಿಸ್ತಾನದ ಕ್ರಿಕೆಟಿಗರು ಕೂಡ, ಇದೇ ವಿಚಾರದ ಬಗ್ಗೆ ಮಾತಾಡಿದ್ದಾರೆ. ಪಾಕಿಸ್ತಾನದ ಕ್ರಿಕೆಟಿಗರೊಬ್ಬರು ಕೊಹ್ಲಿ ಪರ ಬ್ಯಾಟ್ ಬೀಸಿದ್ರೆ, ಮತ್ತೊಬ್ಬರು ಪರೋಕ್ಷವಾಗಿ ಸಿಡಿದಿದ್ದಾರೆ. ಕೊಹ್ಲಿ ಒಬ್ಬ ಟಾಪ್​ ಕ್ಲಾಸ್​ ಬ್ಯಾಟ್ಸ್​ಮನ್​​. ಆದರೆ ನಾಯಕನ ಸ್ಥಾನಕ್ಕೆ ತಕ್ಕಮಟ್ಟಿಗೆ ಸರಿ ಕಾಣೋದಿಲ್ಲ ಅಂತ ಸಲ್ಮಾನ್​ ಭಟ್​ ಹೇಳಿದ್ದಾರೆ. ಇನ್ನು ಕಮ್ರಾನ್​ ಅಕ್ಮಲ್, ಕೊಹ್ಲಿ ಒಬ್ಬ ಗ್ರೇಟ್​​ ಕ್ಯಾಪ್ಟನ್​ ಅಂತ ಬಣ್ಣಿಸಿದ್ದಾರೆ.

‘ರೋಹಿತ್​ ಉತ್ತಮ ಕ್ಯಾಪ್ಟನ್​’
‘ವಿರಾಟ್ ಕೊಹ್ಲಿಗಿಂತ ರೋಹಿತ್ ಶರ್ಮಾ ಉತ್ತಮ ಕ್ಯಾಪ್ಟನ್. 2018ರ ಏಷ್ಯಾಕಪ್​ ವೇಳೆ ರೋಹಿತ್ ನಾಯಕತ್ವದ ಗುಣಗಳನ್ನ ಪ್ರತ್ಯಕ್ಷವಾಗಿ ಕಂಡಿದ್ದೇನೆ. ತಾತ್ಕಾಲಿಕ ನಾಯಕನಾಗಿದ್ದರೂ ತಂಡವನ್ನು ಒತ್ತಡವಿಲ್ಲದೆ ಮುನ್ನಡೆಸಿದ್ರು. ಆದ್ರೆ ವಿರಾಟ್ ಎಂಥಹ ಗ್ರೇಟ್​ ಕ್ಯಾಪ್ಟನ್ ಆದರೂ ಒಂದೇ ಒಂದು ಐಸಿಸಿ ಟ್ರೋಫಿ ಗೆದ್ದಿಲ್ಲ. ಹಾಗೆಯೇ ಐಪಿಎಲ್​​ನಲ್ಲೂ ಟ್ರೋಫಿ ಜಯಿಸಿಲ್ಲ. ಆದ್ರೆ ಆತ ಟಾಪ್ ಕ್ಲಾಸ್ ಆ್ಯಂಡ್ ಅಗ್ರೆಸ್ಸಿವ್ ಪ್ಲೇಯರ್. ಆದ್ರೆ ನಾಯಕತ್ವದ ಜವಾಬ್ದಾರಿ ವಹಿಸಿದ್ದಾಗ ಶಾಂತ ಚಿತ್ತದಿಂದ ಇರಬೇಕಾಗುತ್ತೆ’.

ಸಲ್ಮಾನ್​ ಭಟ್​, ಮಾಜಿ ಕ್ರಿಕೆಟಿಗ

ರೋಹಿತ್​​ ಶರ್ಮಾಗೆ ಜವಾಬ್ದಾರಿ ಹಸ್ತಾಂತರಿಸುವಂತೆ ಕೇಳಿ ಬರ್ತಿರೋದು, ಇದೇ ಮೊದಲಲ್ಲ. ಈ ಹಿಂದೆ 2019ರ ಏಕದಿನ ವಿಶ್ವಕಪ್​​​ನಲ್ಲೂ ರೋಹಿತ್​ ಪರ ಬ್ಯಾಟ್​ ಬೀಸಿದವ್ರೇ, ಹೆಚ್ಚು. ಇದೀಗ ಮತ್ತೊಮ್ಮೆ ಕೊಹ್ಲಿ ನಾಯಕತ್ವ ವಿಫಲವಾಗಿದೆ. ಅದರ ಬೆನ್ನಲ್ಲೇ ರೋಹಿತ್​ಗೆ ಪಟ್ಟ ಕಟ್ಟುವಂತೆ ಚರ್ಚೆಗಳು ಆರಂಭವಾಗಿವೆ. ಇನ್ನು ಹೀಗೆ ದಿಢೀರನೇ ಅಪಸ್ವರಗಳು ಕೇಳಿ ಬರಲು ಮುಂಬರುವ ವಿಶ್ವಕಪ್​​​ಗಳೇ ಕಾರಣ..! ಆದ್ರೆ ಪಾಕಿಸ್ತಾನದ ಕಮ್ರಾನ್​​ ಅಕ್ಮಲ್, ಕೊಹ್ಲಿ ಬಿಟ್ಟು ಬೇರೆಯವರಿಗೆ ನಾಯಕತ್ವ ನೀಡಿದ್ರೆ, ಐಸಿಸಿ ಪ್ರಶಸ್ತಿ ಗೆದ್ದೆ ಗೆಲ್ತಾರೆ ಅನ್ನೋ ಗ್ಯಾರಂಟಿ ಇದೆಯಾ ಅಂತ ಪ್ರಶ್ನಿಸಿದ್ದಾರೆ.

blank

‘ಕೊಹ್ಲಿ ತಪ್ಪು ಇಲ್ಲ’
‘ವಿರಾಟ್​ ಕೊಹ್ಲಿ ಬಿಗ್​ ಪ್ಲೇಯರ್ ಆ್ಯಂಡ್ ಫೆಂಟಾಸ್ಟಿಕ್​ ಕ್ಯಾಪ್ಟನ್​. ಕೊಹ್ಲಿ ಹೆಚ್ಚು ಅಗ್ರೆಸ್ಸಿವ್​​, ಹಾಗೆ ವೆರಿ ಎಮೋಷನಲ್​. ಹಲವಾರು ಕ್ಯಾಪ್ಟನ್​​ಗಳು ಟೀಮ್​ ಇಂಡಿಯಾವನ್ನ ಮುನ್ನಡೆಸಿದ್ದಾರೆ. ಗಂಗೂಲಿ, ಧೋನಿ, ದ್ರಾವಿಡ್​ ತಂಡದ ಜವಾಬ್ದಾರಿಯನ್ನ ಹೊತ್ತಿದ್ದಾರೆ. ಸದ್ಯ ಕೊಹ್ಲಿ ಐಸಿಸಿ ಟ್ರೋಫಿ ಗೆದ್ದಿಲ್ಲ ಅಂತ ದೂರುತ್ತಿದ್ದಾರೆ. ಆದರೆ ಅದನ್ನು ಹೊರತುಪಡಿಸಿದ್ರೆ, ಕೊಹ್ಲಿ ನಾಯಕತ್ವದಲ್ಲಿ ಟೀಮ್​ ಇಂಡಿಯಾ ಎಷ್ಟೋ ಸರಣಿಗಳನ್ನ ಗೆದ್ದಿದೆ. ಐಸಿಸಿ ಪ್ರಶಸ್ತಿ ಗೆದ್ದಿಲ್ಲ ಎಂದ ತಕ್ಷಣ ಸಂಪೂರ್ಣವಾಗಿ ಕೊಹ್ಲಿ ತಪ್ಪು ಇರುವುದಿಲ್ಲ. ಒಂದು ವೇಳೆ ಇನ್ನೊಬ್ಬರಿಗೆ ಜವಾಬ್ದಾರಿ ನೀಡಿದ್ರೆ, ಅವರು ಐಸಿಸಿ ಟ್ರೋಫಿ ಗೆಲ್ತಾರೆ ಅನ್ನೋದಕ್ಕೆ ಗ್ಯಾರಂಟಿ ಏನು’

ಕಮ್ರಾನ್​ ಅಕ್ಮಲ್​, ಮಾಜಿ ಕ್ರಿಕೆಟಿಗ

ಇದೇ ವರ್ಷ ಟಿ20 ವಿಶ್ವಕಪ್​, 2022ರಲ್ಲಿ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಮತ್ತು 2023ರಲ್ಲಿ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಮುಂಬರುವ ಈ ಮೂರು ವಿಶ್ವಕಪ್ ಟೂರ್ನಿಗಳಿಗಾಗಿ ನಾಯಕನ ಬದಲಾವಣೆ ಅನಿವಾರ್ಯ ಎನ್ನಲಾಗ್ತಿದೆ. ಅದರಲ್ಲೂ ಏಕದಿನ, ಟೆಸ್ಟ್ ಹಾಗೂ ಟಿ20ಗೆ ಬೇರೆ ಬೇರೆ ನಾಯಕರನ್ನು ಆಯ್ಕೆಯ ಬಗ್ಗೆ ಅಭಿಪ್ರಾಯಗಳು ಕೇಳಿ ಬರುತ್ತಿವೆ.

ನಾಯಕನಾಗಿ ಕೊಹ್ಲಿ 61 ಪಂದ್ಯಗಳನ್ನು ಮುನ್ನಡೆಸಿದ್ದು, ಶೇಕಡ 60ರಷ್ಟು ಗೆಲುವಿನ ಪ್ರಮಾಣ ಹೊಂದಿದ್ದಾರೆ. ಹಾಗೆಯೇ ಏಕದಿನದಲ್ಲಿ 95 ಪಂದ್ಯಗಳಲ್ಲಿ ಶೇಕಡ 70ರಷ್ಟು ವಿನ್ನಿಂಗ್​ ಪರ್ಸಂಟೇಜ್​ ಇದೆ. ಇನ್ನು ಟಿ20ಯಲ್ಲಿ 65ರಷ್ಟು ಗೆಲುವಿನ ಪ್ರಮಾಣ ಹೊಂದಿದ್ದಾರೆ. ಇಷ್ಟರ ಮಟ್ಟಿಗೆ ನಾಯಕತ್ವದಲ್ಲಿ ಸಕ್ಸಸ್​ ಕಂಡಿದ್ರೂ, ಐಸಿಸಿ ಟೂರ್ನಿಮೆಂಟ್​ಗಳಲ್ಲಿ ಸೋತ ತಕ್ಷಣ, ಟೀಕಿಸೋದು ಎಷ್ಟು ಸರಿ ಎನ್ನಲಾಗ್ತಿದೆ. ಒಟ್ಟಿನಲ್ಲಿ ಟೆಸ್ಟ್ ಚಾಂಪಿಯನ್​ಶಿಪ್ ಸೋಲಿನ ಬೆನ್ನಲ್ಲೇ ಕೊಹ್ಲಿ ನಾಯಕತ್ವದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದ್ದು, ಈ ಬಾರಿ ಅದು ಹೇಗೆ ಅಂತ್ಯವಾಗಲಿದೆ, ಕಾದು ನೋಡಬೇಕಿದೆ.

The post ತಂಡದಲ್ಲಿ ಮತ್ತೆ ಶುರುವಾಯ್ತು ನಾಯಕತ್ವದ ಬದಲಾವಣೆಯ ಕೂಗು appeared first on News First Kannada.

Source: newsfirstlive.com

Source link