ನಮ್ಮ ಪಕ್ಷದಲ್ಲಿ ಬಣ ರಾಜಕಾರಣ ಇಲ್ಲ -ಒಗ್ಗಟ್ಟಿನ ಮಂತ್ರ ಜಪಿಸಿದ ಸಿದ್ದರಾಮಯ್ಯ

ನಮ್ಮ ಪಕ್ಷದಲ್ಲಿ ಬಣ ರಾಜಕಾರಣ ಇಲ್ಲ -ಒಗ್ಗಟ್ಟಿನ ಮಂತ್ರ ಜಪಿಸಿದ ಸಿದ್ದರಾಮಯ್ಯ

ಬೆಂಗಳೂರು: ನಮ್ಮ ಪಕ್ಷದಲ್ಲಿ ಯಾವುದೇ ಬಣ ರಾಜಕಾರಣ ಇಲ್ಲ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೊರೊನಾ ಮೂರನೇ ಅಲೆಗೆ ಸರ್ಕಾರ ಸಿದ್ಧತೆಯನ್ನೇ ಮಾಡಿಕೊಂಡಿಲ್ಲ. ಸರ್ಕಾರ ಸಿದ್ಧತೆ ಮಾಡಿಕೊಳ್ಳಬೇಕು.  ಬೆಡ್ ಇಲ್ಲದೆಯೇ ಬಹಳ ಜನ ಸತ್ತು ಹೋಗಿದ್ರು.  ಆದರೂ ಸರ್ಕಾರ ಇನ್ನೂ ಎಚ್ಚೆತ್ತುಕೊಂಡಿಲ್ಲ ಅಂತ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ “ಕಾಂಗ್ರೆಸ್ ಬದುಕಿದೆ” ಎಂಬ ಹೇಳಿಕೆ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದರ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ. ಆ ವಿಚಾರ ಇಲ್ಲಿ ಚರ್ಚೆ ಮಾಡಲ್ಲ ಎಂದರು. ಪಕ್ಷದ ಆಂತರಿಕ ವಿಚಾರ ಬಹಿರಂಗವಾಗಿ ನಾನು ಚರ್ಚೆ ಮಾಡಲ್ಲ. ಡಿಕೆ ಶಿವಕುಮಾರ್ ಹೇಳಿದ್ದರೆ ಅವರನ್ನೇ ಹೋಗಿ ಕೇಳಿ ಎಂದು ಹೇಳಿದರು.

ಇನ್ನು ಹಿರಿಯ ನಾಯಕರ ಬಣ ದೆಹಲಿಗೆ ಹೋಗಿರುವ ವಿಚಾರವಾಗಿ ಮಾತನಾಡಿದ ಅವರು, ದೆಹಲಿಗೆ ಹೋಗಿರೋ ವಿಚಾರ ನನಗೆ ಗೊತ್ತಿಲ್ಲ. ನಾನು ಸದ್ಯ ದೆಹಲಿಗೆ ಹೋಗಲ್ಲ. ನಾನು ದೆಹಲಿಗೆ ಹೋಗ್ತೀನಿ ಅಂತ ಎಲ್ಲೂ ಹೇಳಿಲ್ಲ. ಆ ಕಾರ್ಯಕ್ರಮ ಸದ್ಯಕ್ಕಿಲ್ಲ ಎಂದರು.

ಕಾಂಗ್ರೆಸ್ ‌ಸಮನ್ವಯ ಸಮಿತಿ ‌ಮಾಡುವ ಯಾವುದೇ ಪ್ರಸ್ತಾವ ಇಲ್ಲ. ಸಮನ್ವಯ ಸಮಿತಿಯ ಅವಶ್ಯಕತೆ ಕಾಂಗ್ರೆಸ್ ‌ಪಕ್ಷಕ್ಕೆ ಇಲ್ಲ, ಸದ್ಯ ಹೈಕಮಾಂಡ್ ‌ಭೇಟಿ ಮಾಡಲ್ಲ. ನಾನು ಎಲ್ಲಾದರೂ ಪಕ್ಷದ ಆಂತರಿಕ ವಿಷಯ ಹೊರಗೆ ಮಾತಾಡಿದ್ದೀನಾ? ನಮ್ಮ ಪಕ್ಷದಲ್ಲಿ ಯಾವುದೇ ಬಣಗಳಿಲ್ಲ. ಯಾರ ಮಧ್ಯೆಯೂ ಜಗಳ ಇಲ್ಲ, ನಾವೆಲ್ಲ ಒಗ್ಗಟ್ಟಾಗಿದ್ದೇವೆ. ರಾಹುಲ್ ಗಾಂಧಿ ಭೇಟಿ ಬಗ್ಗೆ ನನಗೆ ಗೊತ್ತಿಲ್ಲ. ನಾನು ಪಕ್ಷದ ಯಾವುದೇ ವಿಚಾರಕ್ಕೆ ರಿಯಾಕ್ಷನ್ ಮಾಡಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಬಣ ರಾಜಕಾರಣ ಇಲ್ಲ ಎಂದು  ಸಿದ್ದರಾಮಯ್ಯ ಒಗ್ಗಟ್ಟಿನ ಮಂತ್ರ ಜಪಿಸಿದರು.

The post ನಮ್ಮ ಪಕ್ಷದಲ್ಲಿ ಬಣ ರಾಜಕಾರಣ ಇಲ್ಲ -ಒಗ್ಗಟ್ಟಿನ ಮಂತ್ರ ಜಪಿಸಿದ ಸಿದ್ದರಾಮಯ್ಯ appeared first on News First Kannada.

Source: newsfirstlive.com

Source link