ಮಾಡರ್ನಾ ಲಸಿಕೆ ತುರ್ತು ಬಳಕೆಗೆ ಅನುಮತಿ.. ಶೀಘ್ರದಲ್ಲೇ ಫೈಜರ್​​ ಜೊತೆಗಿನ ಒಪ್ಪಂದ ಕಡಿತ

ಮಾಡರ್ನಾ ಲಸಿಕೆ ತುರ್ತು ಬಳಕೆಗೆ ಅನುಮತಿ.. ಶೀಘ್ರದಲ್ಲೇ ಫೈಜರ್​​ ಜೊತೆಗಿನ ಒಪ್ಪಂದ ಕಡಿತ

ನವದೆಹಲಿ: ಭಾರತದಲ್ಲಿ ಅಮೆರಿಕ ವ್ಯಾಕ್ಸಿನ್ ಉತ್ಪಾದಕ ದೈತ್ಯ ಮಾಡರ್ನಾ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಭಾರತೀಯ ಔಷಧಿ ನಿಯಂತ್ರಣ ಪ್ರಾಧಿಕಾರ ( ಡಿಸಿಜಿಐ) ಅನುಮೋದನೆ ನೀಡಿದೆ ಅಂತಾ ಕೋವಿಡ್ ಟಾಸ್ಕ್​ ಫೋರ್ಸ್​ ಮುಖ್ಯಸ್ಥ ವಿಕೆ ಪೌಲ್ ಮಾಹಿತಿ ನೀಡಿದ್ದಾರೆ. ಈ ಮೂಲಕ ದೇಶದಲ್ಲಿ 4 ಕೊರೊನಾ ವ್ಯಾಕ್ಸಿನ್​​ಗಳ ತುರ್ತು ಬಳಕೆಗೆ ಅನುಮತಿ ಸಿಕ್ಕಂತಾಗಿದೆ.

ಈ ಮೂಲಕ ದೇಶದಲ್ಲಿ ಕೋವ್ಯಾಕ್ಸಿನ್, ಕೋವಿಶೀಲ್ಡ್​, ಸ್ಪುಟ್ನಿಕ್​ ವಿ ಮತ್ತು ಮಾಡರ್ನಾ ಲಸಿಕೆಗಳು ದೇಶದಲ್ಲಿ ಲಭ್ಯ ಇರಲಿವೆ. ಹೀಗಾಗಿ ಸರ್ಕಾರ ಫೈಜರ್​ ಸಂಸ್ಥೆ ಜೊತೆ ಮಾಡಿಕೊಂಡಿರುವ ಒಪ್ಪಂದವನ್ನ ಶೀಘ್ರದಲ್ಲೇ ಕೈಬಿಡಲಿದೆ ಎಂದು ಅವರು ತಿಳಿಸಿದ್ದಾರೆ.

ಸಿಪ್ಲಾ ಕಂಪನಿಗೆ ಅನುಮತಿ 
18 ವರ್ಷ ಮೇಲ್ಪಟ್ಟವರಲ್ಲಿ ಈ ಲಸಿಕೆಯ ತುರ್ತು ಬಳಕೆ ಆಗಲಿದೆ. ಅಮೆರಿಕದಲ್ಲಿ ಬಳಕೆಯಾಗುತ್ತಿರುವ ಈ ಲಸಿಕೆಯನ್ನ ಆಮದು ಮಾಡಿಕೊಳ್ಳಲು ಮತ್ತು ಮಾರುಕಟ್ಟೆ ಹಕ್ಕುಗಳಿಗಾಗಿ ದೇಶದ ಔಷಧಿ ಕಂಪನಿ ಸಿಪ್ಲಾ ಮನವಿ ಸಲ್ಲಿಸಿತ್ತು. ಇದೀಗ ಡಿಸಿಜಿಐ ಮಾಡರ್ನಾ ಕೋವಿಡ್ ಲಸಿಕೆಯನ್ನ ಆಮದು ಮಾಡಿಕೊಳ್ಳಲು ಸಿಪ್ಲಾ ಕಂಪನಿಗೆ ಅನುಮತಿ ನೀಡಿದೆ.

ಮಾಡೆರ್ನಾ mRNA-1273 ವ್ಯಾಕ್ಸಿನ್​​ ಅನ್ನ ಅಭಿವೃದ್ಧಿಪಡಿಸಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಲರ್ಜಿ ಅಂಡ್ ಇನ್​​​ಫೆಕ್ಷನಲ್ ಡಿಸೀಸ್ (ಎನ್‌ಐಎಐಡಿ) ಮತ್ತು ಅಮೆರಿಕದ ಬಯೋಮೆಡಿಕಲ್ ಅಡ್ವಾನ್ಸ್ಡ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಅಥಾರಿಟಿ (BARDA) ಸಹಯೋಗದೊಂದಿಗೆ ಮಾಡರ್ನಾ ಈ ಲಸಿಕೆಯನ್ನ ಅಭಿವೃದ್ಧಿಪಡಿಸಿದೆ. ಈ ಲಸಿಕೆಯನ್ನ ಅಮೆರಿಕದಲ್ಲಿ Spikevax ಹೆಸರಲ್ಲಿ ನೀಡಲಾಗುತ್ತಿದೆ.

ಶೇಕಡಾ 94.1 ರಷ್ಟು ಪರಿಣಾಮಕಾರಿ
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಮಾಡೆರ್ನಾ ಲಸಿಕೆಯು ಕೊರೊನಾ ವಿರುದ್ಧ ಶೇಕಡಾ 94.1 ರಷ್ಟು ಪರಿಣಾಮಕಾರಿಯಾಗಿ ಹೋರಾಟ ಮಾಡುತ್ತದೆ. ಮೊದಲ ಡೋಸ್ ಪಡೆದ 14 ದಿನಗಳ ನಂತರ ಇದು ಕಾರ್ಯಪ್ರವೃತ್ತವಾಗುತ್ತದೆ. ಅಲ್ಲದೇ ಕೊರೊನಾದ ಹೊಸ ರೂಪಾಂತರಿ ವೈರಸ್​ಗಳಾದ SARS-CoV-2, B.1.1.7 ಮತ್ತು 501Y.V2 ವಿರುದ್ಧವೂ ಪರಿಣಾಮಕಾರಿಯಾಗಿ ಹೋರಾಡಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ 33 ಕೋಟಿಗೂ ಹೆಚ್ಚು ಡೋಸ್​ ವ್ಯಾಕ್ಸಿನ್​ ಅನ್ನ ದೇಶದಲ್ಲಿ ನೀಡಲಾಗಿದೆ. ಪ್ರತಿ ದಿನ 40 ಲಕ್ಷ ಮಂದಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ. 14.99 ಕೋಟಿ ಡೋಸ್​ ಅನ್ನ ಮಹಿಳೆಯರಿಗೆ ನೀಡಿದ್ರೆ, 17.48 ಕೋಟಿ ಡೋಸ್​ ಅನ್ನ ಪುರುಷರಿಗೆ ನೀಡಲಾಗಿದೆ.

The post ಮಾಡರ್ನಾ ಲಸಿಕೆ ತುರ್ತು ಬಳಕೆಗೆ ಅನುಮತಿ.. ಶೀಘ್ರದಲ್ಲೇ ಫೈಜರ್​​ ಜೊತೆಗಿನ ಒಪ್ಪಂದ ಕಡಿತ appeared first on News First Kannada.

Source: newsfirstlive.com

Source link