ದೇಶದಲ್ಲಿ ಮೊದಲ ಬಾರಿ ನಡೆಯಿತು ಡ್ರೋನ್‌ ದಾಳಿ.. ಇದರ ತಡೆಗೆ ಭಾರತಕ್ಕೆ ಬೇಕೇಬೇಕು ಈ ಸಾಧನ

ದೇಶದಲ್ಲಿ ಮೊದಲ ಬಾರಿ ನಡೆಯಿತು ಡ್ರೋನ್‌ ದಾಳಿ.. ಇದರ ತಡೆಗೆ ಭಾರತಕ್ಕೆ ಬೇಕೇಬೇಕು ಈ ಸಾಧನ

ಭಾರೀ ಭದ್ರತೆ, ಭಾರೀ ಕಣ್ಗಾವಲಿನ ನಡುವೆಯೂ ಭಾನುವಾರ ಜಮ್ಮುವಿನ ವಾಯುಪಡೆ ಸ್ಟೆಷನ್‌ ಮೇಲೆ ಡ್ರೋನ್‌ನಿಂದ ಬಾಂಬ್‌ ದಾಳಿ ನಡೆದಿದೆ. ಇದು ಭಾರತದಲ್ಲಿ ಡ್ರೋನ್‌ ಮೂಲಕ ನಡೆದ ಮೊದಲ ಭಯೋತ್ಪಾದಕ ದಾಳಿ.

ನೀವು ಮದುವೆ ಅಟೆಂಡ್​ ಮಾಡುವಾಗ ನಿಮ್ಮ ತಲೆ ಮೇಳೆ ಗಾಳಿ ಬೀಸುತ್ತೆ ಚಿಕ್ಕ ಹೆಲಿಕಾಪ್ಟರ್​ನಂತೆ ಸೌಂಡ್ ಮಾಡುವ ಕ್ಯಾಮರಾ ಹಾರುತ್ತಲ್ಲವಾ? ನೀವು ಡಿಫರೆಂಟ್​ ಆಗಿ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಿಕೊಳ್ಳಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಹೀಗೆ ಡಿಫೆರೆಂಟ್​ ಶೂಟ್​ ಮಾಡಿಸಿಕೊಳ್ಳಲೂ ಕೂಡ ಇಂದು ಕಡ್ಡಾಯವಾಗಿ ಹಾರುವ ಕ್ಯಾಮರಾ ಬೇಕೇಬೇಕು. ಅಂಥ ಕ್ಯಾಮರಾಕ್ಕೇ ಡ್ರೋನ್‌ ಕ್ಯಾಮರಾ ಅಂತಾರೆ. ಆ ಕ್ಯಾಮರಾ ಹೊತ್ತು ತರುವ ಮಷೀನ್ ಇದೆಯಲ್ಲ ಅದೇ ಡ್ರೋನ್‌.

ಅದೇ ಡ್ರೋನ್‌ ಇಂದು ಸಾಕಷ್ಟು ಸದ್ದು ಮಾಡ್ತಿದೆ. ಅದ್ರಲ್ಲೂ ಜಮ್ಮುವಿನ ಏರ್​ಫೋರ್ಸ್​ ನೆಲೆ ಮೇಲೆ ದಾಳಿ ನಡೆದ ಬಳಿಕವಂತೂ ಈ ಡ್ರೋನ್‌ನ ಸದ್ದು ದೊಡ್ಡದಾಗುತ್ತಿದೆ. ಎಲ್ಲಿಯ ಬಾಂಬ್​ ದಾಳಿ ನಡೆಸಿದ ಡ್ರೋನ್‌​.. ಎಲ್ಲಿಯ ಮದುವೆ ಡ್ರೋನ್‌ ಅಂದ್ರಾ? ಅದೇ ವಿಷಯ.. ಈ ಡ್ರೋನ್‌​ಗಳಿಗೂ ಆ ಡ್ರೋನ್‌ಗಳಿಗೂ ಹೆಚ್ಚೇನು ವ್ಯತ್ಯಾಸವಿಲ್ಲ. ಹಾಗಂತ ಈ ಡ್ರೋನ್‌ನ ರೂಪಾಂತರ ಇಷ್ಟಕ್ಕೇ ನಿಲ್ಲೋದಿಲ್ಲ.  ಕೆಲವೇ ಸಾವಿರದಿಂದ ಹಿಡಿದು ನೂರಾರು ಕೋಟಿ ಬೆಲೆ ಬಾಳುವ ಡ್ರೋನ್‌​ಗಳಿವೆ. ಇಂಥ ಡ್ರೋನ್‌ಗಳೇ ಇಂದು ಭಯವನ್ನೂ ಹುಟ್ಟಿಸಿದ್ದು, ಉಗ್ರರ ಕಣ್ಣು ಸದ್ಯ ಇವುಗಳನ್ನು ಬಳಸಿ ದಾಳಿ ಮಾಡುವುದರ ಮೇಲೆ ಬಿದ್ದಿದೆ.

blank
ಹೌದು, ಅಂಥದ್ದೊಂದು ಬದಲಾವಣೆಗೆ ಕಾರಣವಾಗುತ್ತಿರುವುದು ಡ್ರೋನ್‌ ಮೂಲಕ ನಡೆದ ಬಾಂಬ್‌ ದಾಳಿ. ಕೆಳಮಟ್ಟದಲ್ಲಿ ಹಾರಿ ಬರುವ ಡ್ರೋನ್‌ಗಳು ರೇಡಾರ್‌ ಕಣ್ಗಾವಲಿಗೂ ಸಿಗಲ್ಲ. ಹಾಗಾದ್ರೆ ಏನು ಮಾಡೋದು? ನಿರ್ದಿಷ್ಟ ದೂರದಲ್ಲಿಯೇ ಗುರುತಿಸಿ ಹೊಡೆದುರುಳಿಸಬೇಕು. ಇಲ್ಲವೇ ಅದರ ಜಿಪಿಎಸ್‌ ನಿಷ್ಕ್ರಿಯಗೊಳಿಸುವ ತಂತ್ರಜ್ಞಾನ ಹೊಂದಿರೋ ಆ್ಯಂಟಿ ಡ್ರೋನ್‌ ಭಾರತಕ್ಕೆ ಬೇಕಿದೆ. ಆ ನಿಟ್ಟಿನಲ್ಲಿ ಭಾರತ ಕೂಡ ಹೆಜ್ಜೆ ಇಟ್ಟಿದೆ.

ದೇಶದಲ್ಲಿ ಮೊದಲ ಬಾರಿಗೆ ನಡೆಯಿತು ಡ್ರೋನ್‌ ದಾಳಿ
ಸೋಮವಾರ ಮತ್ತೆ ವಾಯುನೆಲೆ ಬಳಿ ಹಾರಾಡಿದ ಡ್ರೋನ್‌

ಭಾನುವಾರ ನಸುಕಿನ ಜಾವ ಸ್ಫೋಟಕ ಹೊತ್ತ ಎರಡು ಡ್ರೋನ್‌ಗಳು ಪಾಕಿಸ್ತಾನ ಕಡೆಯಿಂದ ಹಾರಿ ಬರುತ್ತವೆ. ಜಮ್ಮು ಏರ್‌ಪೋರ್ಟ್‌ನಲ್ಲಿರುವ ವಾಯುಪಡೆ ಸ್ಟೆಷನ್‌ನಲ್ಲಿ ಸ್ಫೋಟಗೊಳ್ಳುತ್ತವೆ. ಉಗ್ರರ ಕೃತ್ಯ ಇಷ್ಟಕ್ಕೆ ನಿಲ್ಲುವುದಿಲ್ಲ. ಮತ್ತೆ ಸೋಮವಾರ ಬೆಳಗ್ಗಿನ ಜಾವ ಜಮ್ಮುವಿನ ರತ್ನುಚಕ್‌-ಕಲುಚಕ್‌ ಆರ್ಮಿ ಸ್ಟೇಷನ್‌ ಗುರಿಯಾಗಿಸಿಕೊಂಡು ದಾಳಿಗೆ ಮುಂದಾಗುತ್ತಾರೆ. ಇದೇ ಉದ್ದೇಶಕ್ಕೆ ಎರಡು ಡ್ರೋನ್‌ಗಳನ್ನು ಹಾರಿ ಬಿಡಲಾಗುತ್ತೆ. ಆದ್ರೆ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಡ್ರೋನ್‌ ಗುರುತಿಸಿ ಗುಂಡಿನ ದಾಳಿ ನಡೆಸುತ್ತಾರೆ. ಗುಂಡಿನ ದಾಳಿ ನಡೆಯುತ್ತಿದ್ದಂತೆ ಡ್ರೋನ್‌ಗಳು ವಾಪಸ್‌ ಮರಳಿ ಬಿಡುತ್ತವೆ. ಆದ್ರೆ, ಭದ್ರತಾ ಪಡೆಗಳಿಗೆ ಡ್ರೋನ್‌ ಹೊಡೆದುರುಳಿಸಲು ಸಾಧ್ಯ ಆಗಲ್ಲ.

blank

ಭಾರತಕ್ಕೆ ಬೇಕಾದ ತಂತ್ರಜ್ಞಾನ ಏನು?
ಕೆಳಮಟ್ಟದಲ್ಲಿ ಹಾರುವ ಡ್ರೋನ್‌ ರೇಡಾರ್‌ಗೆ ಸಿಗಲ್ವ?

ಯಾವುದೇ ರಾಕೆಟ್‌, ಯುದ್ಧವಿಮಾನ ದೇಶದ ವಾಯುನೆಲೆ ಪ್ರವೇಶಿಸುತ್ತಲೇ ರೇಡಾರ್‌ಗಳು ಮಾಹಿತಿ ನೀಡುತ್ತವೆ. ಕ್ಷಣಾರ್ಧದಲ್ಲಿಯೇ ಭದ್ರತಾ ಪಡೆಗಳು ಅವನ್ನ ಹೊಡೆದುರುಳಿಸಿ ಬಿಡುತ್ತವೆ. ಆದ್ರೆ, ಈಗ ಸಮಸ್ಯೆ ಆಗುತ್ತಿರುವುದು ಡ್ರೋನ್‌ ದಾಳಿ. ಅದರಲ್ಲಿಯೂ ಕಡಿಮೆ ವೆಚ್ಚದ, ಅತ್ಯಂತ ಕೆಳ ಮಟ್ಟದಲ್ಲಿ ಹಾರುವ ಡ್ರೋನ್‌ಗಳು ರೇಡಾರ್‌ ಕಣ್ಗಾವಲಿಗೆ ಸರಿಯಾಗಿ ಸಿಗಲ್ಲ. ಇದುವೆ ಉಗ್ರಗಾಮಿಗಳಿವೆ, ವೈರಿ ರಾಷ್ಟ್ರಗಳಿಗೆ ಅಸ್ತ್ರವಾಗಿ ಬಿಟ್ಟಿದೆ. ಇನ್ನು ಮುಂದೆ ಇಂತಹ ದಾಳಿಗಳು ಹೆಚ್ಚಾಗಿಯೇ ನಡೆಯುತ್ತವೆ. ಆದ್ರೆ, ಅದನ್ನು ಗುರುತಿಸಿ ಹೊಡೆದುರುಳಿಸುವ ತಂತ್ರಜ್ಞಾನ ಅಭಿವೃದ್ಧಿಯಾಗಬೇಕು. ಅದೇ ನಿಟ್ಟಿನಲ್ಲಿ ಭಾರತ ಹೆಜ್ಜೆ ಇಟ್ಟಿದೆ.

ಆ್ಯಂಟಿ ಡ್ರೋನ್‌ ಸಾಧನ ಉಪಯೋಗಕ್ಕೆ ಬರ್ತಾ ಇಲ್ವಾ?
ಗಡಿಯೊಳಗೆ ಪ್ರವೇಶಿಸಿ ಬರುವ ಅಪರಿಚಿತ ಡ್ರೋನ್‌ಗಳನ್ನು ಹೊಡೆದುರುಳಿಸುವ ಆ್ಯಂಟಿ ಡ್ರೋನ್‌ ಈಗಾಗಲೇ ಭಾರತದಲ್ಲಿದೆ. ಅದನ್ನು ಡಿಆರ್‌ಡಿಒ 2020ರಲ್ಲಿಯೇ ಸಂಶೋಧಿಸಿದ್ದು, ಭಾರತೀಯ ಸೇನೆಯಲ್ಲಿ ಬಳಕೆ ಮಾಡಲಾಗುತ್ತಿದೆ. ಇದಲ್ಲದೇ ಬೇರೆ ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಂಡ ಡ್ರೋನ್‌ಗಳು ಭಾರತೀಯ ಸೇನೆಯಲ್ಲಿವೆ. ಅವು ಗಡಿ ದಾಟಿ ಬರುವ ‘ಕಳ್ಳ ಡ್ರೋನ್’ಗಳನ್ನು ಹೊಡೆದುರುಳಿಸುತ್ತವೆ. ಆದ್ರೆ, ಸಮಸ್ಯೆ ಆಗುತ್ತಿರುವುದು ತೀರಾ ಕೇಳಮಟ್ಟದಲ್ಲಿ ಹಾರಿ ಬರುವ ಡ್ರೋನ್‌ಗಳಿಂದ. ಅವು ಕಣ್ಣು ತಪ್ಪಿಸಿ ಒಳನುಗ್ಗಿ ಬಿಡುತ್ತವೆ. ಜಮ್ಮುವಿನಲ್ಲಿ ದಾಳಿ ಮಾಡಲು ಅಂತಹ ಡ್ರೋನ್‌ಗಳನ್ನೇ ಬಳಸಿಕೊಳ್ಳಲಾಗಿತ್ತು. ಇದನ್ನೆಲ್ಲಾ ನೋಡಿದಾಗ ಅತ್ಯಾಧ್ಯುನಿಕ ತಂತ್ರಜ್ಞಾನದ ಆ್ಯಂಟಿ ಡ್ರೋನ್‌ ಅಗತ್ಯ ಭಾರತಕ್ಕಿದೆ. ತಜ್ಞರು ಕೂಡ ಇದನ್ನೇ ಹೇಳುತ್ತಾರೆ.

ಇಸ್ರೇಲ್​ನಿಂದ ಆ್ಯಂಟಿ ಡ್ರೋನ್‌ ಖರೀದಿಸುತ್ತಾ ಭಾರತ?
ಯಾವ ಯಾವ ರಾಷ್ಟ್ರಗಳಲ್ಲಿ ಇವೆ ಹೈಟೆಕ್‌ ಆ್ಯಂಟಿ ಡ್ರೋನ್‌ಗಳು

ರಷ್ಯಾ, ಅಮೆರಿಕ, ಇಸ್ರೇಲ್‌, ಚೀನಾ ತಂತ್ರಜ್ಞಾನದಲ್ಲಿ ಭಾರೀ ಮುನ್ನಡೆ ಸಾಧಿಸಿರುವಂತಹ ದೇಶಗಳು. ಈ ನಾಲ್ಕು ರಾಷ್ಟ್ರಗಳು ಅಭಿವೃದ್ಧಿಪಡಿಸಿರುವ ಆ್ಯಂಟಿ ಡ್ರೋನ್‌ ಸಾಧನಗಳು ಗಡಿಯಿಂದ ಸುಮಾರು ಎರಡ್ಮೂರು ಕಿಲೋಮೀಟರ್‌ ದೂರದಲ್ಲೇ ಗುರುತಿಸಿ ಬಿಡುತ್ತವೆ. ಅಲ್ಲಿಯೇ ಹೊಡೆದುರುಳಿಸುತ್ತೆ. ಸದ್ಯ ಭಾರತಕ್ಕೆ ಬೇಕಾಗಿರುವುದು ಅಂತಹದ್ದೇ ಸಾಧನ. ಒಂದು ಕಡೆ ಚೀನಾ ಮತ್ತೊಂದು ಕಡೆ ಪಾಕಿಸ್ತಾನ ಜೊತೆ ಗಡಿ ಹಂಚಿಕೊಂಡಿರುವ ಭಾರತಕ್ಕೆ ಆ ಸಾಧನ ಬೇಕೇಬೇಕು. ಅದರಲ್ಲಿಯೂ ಚೀನಾ, ಪಾಕಿಸ್ತಾನ ಪರಸ್ಪರ ಪರಮಾಪ್ತ ರಾಷ್ಟ್ರಗಳು. ಇದನ್ನು ನೋಡಿ ಭಾರತ ಸುಮ್ಮನಿಲ್ಲ. ಡ್ರೋನ್‌ ದಾಳಿಯನ್ನು ಮೊದಲೇ ಅರಿತ್ತಿತ್ತು. ಹೀಗಾಗಿಯೇ ಇಸ್ರೇಲ್‌ನಿಂದ ಅತ್ಯಾಧುನಿಕ ಆ್ಯಂಟಿ ಡ್ರೋನ್‌ ಖರೀದಿಸಲು ಮುಂದಾಗಿದೆ. ಅದು, ಶೀಘ್ರದಲ್ಲಿಯೇ ಭಾರತೀಯ ಸೇನೆಯನ್ನು ಸೇರಿಕೊಳ್ಳುವ ಸಾಧ್ಯತೆಯೂ ಇದೆ. ಈಗಾಗಲೇ ಭಾರತದ ಬಳಿ ಇರುವ ಕಾಳಿ ಆ್ಯಂಟಿ ಡ್ರೋನ್‌ ಬಳಕೆ ಸಮರ್ಥವಾಗಿ ಆಗಬೇಕು.

blank

ಡ್ರೋನ್‌ನ ಜಿಪಿಎಸ್‌ ನಿಷ್ಕ್ರಿಯಗೊಳಿಸಬೇಕು
ರೇಡಿಯೋ ತರಂಗಗಳನ್ನು ನಾಶ ಮಾಡ್ಬೇಕು

ಡ್ರೋನ್‌ಗಳು ಗಡಿದಾಟಿ ಪ್ರವೇಶಿಸಿದಾಗ ಜನವಸತಿ ಪ್ರದೇಶವಲ್ಲದಿದ್ದರೆ ಹೊಡೆದುರುಳಿಸಬಹುದು. ಆದ್ರೆ, ಅದು ಜನವಸತಿ ಪ್ರದೇಶವಾದ್ರೆ ಏನು ಮಾಡುವುದು. ಸಮಸ್ಯೆ ಇರುವುದೇ ಇಲ್ಲಿ. ಇಸ್ರೇಲ್, ಅಮೆರಿಕ, ಚೀನಾ ಹಾಗೂ ರಷ್ಯಾದಲ್ಲಿ ಅಭಿವೃದ್ಧಿಪಡಿಸಿರುವ ಆ್ಯಂಟಿ ಡ್ರೋನ್‌ಗಳು ಅತ್ಯಾಧುನಿಕ ತಂತ್ರಜ್ಞಾನ ಹೊಂದಿವೆ. ಅದೇನಂದ್ರೆ ವೈರಿಪಡೆಯಿಂದ ಬರುವ ಡ್ರೋನ್‌ ಗುರುತಿಸಿ ಅದರ ಜಿಪಿಎಸ್‌ ಮತ್ತು ರೆಡಿಯೋ ತರಂಗ ನಿಷ್ಕ್ರಿಯಗೊಳಿಸುತ್ತವೆ.

ಭಾರತದ ಗಡಿಯಲ್ಲಿ ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಪಾಕಿಸ್ತಾನ
ಜಮ್ಮುವಿನಲ್ಲಿ ನಡೆದ ಡ್ರೋನ್‌ ದಾಳಿಯಲ್ಲಿ ಪಾಕಿಸ್ತಾನದ ಕುಮ್ಮಕ್ಕಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅಲ್ಲಿಯ ಭಯೋತ್ಪಾದಕ ಸಂಘಟನೆಗೆ ಐಎಸ್‌ಐ ಬೆಂಬಲ ಇದೆ. ಹೀಗಾಗಿ ಸೇನೆಯ ಬೆಂಬಲದಿಂದಲೇ ಭಯೋತ್ಪಾದಕ ಸಂಘಟನೆಗಳು ಭಾರತದ ಮೇಲೆ ಅಟ್ಯಾಕ್‌ ಮಾಡುತ್ತಲೇ ಇರುತ್ತವೆ. ಬಾಲಕೋಟ್‌ ಅಟ್ಯಾಕ್‌ಗೂ ಮುನ್ನ ಪಾಕಿಸ್ತಾನ ಶಸ್ತ್ರಾಸ್ತ್ರಗಳನ್ನು ಭಾರತದ ಗಡಿಯೊಳಗೆ ಸಾಗಿಸಲು ಡ್ರೋನ್‌ ಬಳಸಿಕೊಳ್ಳುತ್ತಿತ್ತು. ಆದ್ರೆ, ಇದೀಗ ಭಾರತ ಅದಕ್ಕೆ ಕಡಿವಾಣ ಹಾಕಿದೆ.

blank

ಡ್ರೋನ್‌ ಮೂಲಕ ನಡೆಯುವ ಯುದ್ಧಕ್ಕೂ ಸಿದ್ಧತೆ ಬೇಕು
ಯಾವುದೇ ಯುದ್ಧ ವಿಮಾನಗಳನ್ನು ಹಾರಿಸದೇ, ರಾಕೆಟ್‌ಗಳನ್ನು ಹಾರಿಸದೇ ಕೆವಲ ಡ್ರೋನ್‌ ಮೂಲಕ ಯುದ್ಧ ಮಾಡುವ ಪದ್ಧತಿಯೂ ಬಂದಿದೆ. ಅತ್ಯಂತ ಕಡಿಮೆ ಖರ್ಚಿನಲ್ಲಿಯೇ ಇದು ಆಗಿ ಹೋಗುತ್ತದೆ. ನಿಗದಿತ ಗುರಿ ಇಟ್ಟು ಸ್ಫೋಟಕ ವಸ್ತು ತುಂಬಿಸಿ ಹಾರಿಸಿಬಿಟ್ಟರೆ ಸಾಕು. ಅವುಗಳು ಆ ಸ್ಥಳಕ್ಕೆ ಹೋಗಿ ಸ್ಫೋಟಗೊಳ್ಳುತ್ತವೆ. ಅವುಗಳನ್ನು ಸೂಸೈಡ್‌ ಡ್ರೋನ್‌ ಅಂತಲೂ ಕರೆಯುತ್ತಾರೆ. ಯುದ್ಧದ ಸಂದರ್ಭದಲ್ಲಿ ಅವುಗಳನ್ನು ಬಳಸುತ್ತಿರುವುದು ಆಘಾತಕಾರಿ. ಈ ಎಲ್ಲಾ ಬೆಳವಣಿಗೆ ನೋಡಿದರೆ ಭಾರತಕ್ಕೆ ಅತ್ಯಾಧುನಿಕ ಆ್ಯಂಟಿ ಡ್ರೋನ್‌ ಅಗತ್ಯವನ್ನು ಸಾರಿ ಸಾರಿ ಹೇಳುತ್ತಿದೆ.

ಪಾಕ್‌ ಭಯೋತ್ಪಾದಕರಿಗೆ ಡ್ರೋನ್‌ ಹೊಸ ಅಸ್ತ್ರವಾಯ್ತಾ?
ಹೌದು, ಇಲ್ಲಿಯವರೆಗೆ ಟಿಫಿನ್‌ ಬಾಕ್ಸ್‌ಗಳಲ್ಲಿ, ಸೈಕಲ್‌ಗಳಲ್ಲಿ, ಚೀಲದಲ್ಲಿ ಸ್ಫೋಟಕ ಇಟ್ಟು ಕೃತ್ಯ ಎಸಗಲಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಅಲ್ಲಿಯ ಸಿಸಿಟಿವಿ, ಮೊಬೈಲ್‌ ಲೊಕೇಷನ್‌ ಎಲ್ಲಾ ಜಾಲಾಡಿ ಸ್ಫೋಟಕ ಇಟ್ಟ ಉಗ್ರಗಾಮಿ ಯಾರು, ಆತ ಯಾವ ಸಂಘಟನೆಯವನು ಅನ್ನೋದನ್ನು ಗುರುತಿಸಲಾಗುತ್ತಿತ್ತು. ರೇಖಾಚಿತ್ರವನ್ನು ಬಿಡಿಸಲಾಗುತ್ತಿತ್ತು. ಉಗ್ರಗಾಮಿಯ ಬೇಟೆಗೆ ಅದು ಸುಲಭ ಮಾರ್ಗವಾಗಿತ್ತು. ಆದ್ರೆ, ಡ್ರೋನ್‌ ದಾಳಿ ಪೂರ್ಣ ವಿಭಿನ್ನ. ಇದರಲ್ಲಿ ಭಯೋತ್ಪಾದಕ ಎಲ್ಲೋ ಕುಳಿತುಕೊಂಡು ಕೃತ್ಯ ಎಸಗಿ ಬಿಡ್ತಾನೆ. ಪಾಕಿಸ್ತಾನದ ಉಗ್ರಗಾಮಿಗಳಿಗೆ ಇದು ಈಗ ಹೊಸ ಅಸ್ತ್ರವಾಗಿ ಬಿಟ್ಟಿದೆ.

ಡ್ರೋನ್‌ ಹಾರಾಟಕ್ಕೆ ನಿರ್ದಿಷ್ಟ ಸ್ಥಳ ಅಗತ್ಯ
ಡ್ರೋನ್‌ಗಳಿಗೆ ಕಡಿಮೆ ಬೆಲೆ, ಕಡಿಮೆ ತಂತ್ರಜ್ಞಾನ. ಆದ್ರೆ, ಅದರಿಂದ ಭವಿಷ್ಯದಲ್ಲಿ ಆಗುವಂಥ ಅನಾಹುತ ನೆನಪಿಸಿಕೊಂಡರೆ ಮೈ ಝುಮ್‌ ಎನ್ನುತ್ತೆ. ಅಷ್ಟು ಚಿಕ್ಕ ಸಾಧನದಿಂದ ಹೀಗೆಲ್ಲ ಮಾಡಲು ಸಾಧ್ಯನಾ ಅನಿಸಿಬಿಡುತ್ತೆ. ಆದ್ರೆ, ಈಗಲೇ ಡ್ರೋನ್‌ ಹಾರಾಟಕ್ಕೆ ಸೀಮಿತ ಸ್ಥಳದಲ್ಲಿ ಮಾತ್ರ ಅವಕಾಶ ನೀಡುವಂತಾಗಬೇಕು. ಭಾರತದಲ್ಲಿ ಈಗಲೂ ಕೂಡ ನಿಷೇಧಿತ ಸ್ಥಳದಲ್ಲಿ ಡ್ರೋನ್‌ ಹಾರಾಟಕ್ಕೆ ಅವಕಾಶ ಇಲ್ಲ. ಆದ್ರೆ, ನಿಷೇಧಿತ ಸ್ಥಳ ಹೊರತುಪಡಿಸಿ ಡ್ರೋನ್‌ಗಳು ಎಲ್ಲೆಂದರಲ್ಲಿ ಹಾರಾಟ ಮಾಡುತ್ತಿವೆ. ಅದಕ್ಕೆ ಕಡಿವಾಣ ಹಾಕಬೇಕು. ತಜ್ಞರು ಕೂಡ ಇದನ್ನೇ ಹೇಳುತ್ತಾರೆ.

ಆದಷ್ಟು ಬೇಗ ಅತ್ಯಾಧುನಿಕ ಆ್ಯಂಟಿ ಡ್ರೋನ್‌ ಭಾರತೀಯ ಸೇನೆ ಸೇರಬೇಕು. ಭಯೋತ್ಪಾದಕರ ಹುಟ್ಟಡಗಿಸುವ ಕಾರ್ಯ ಆಗಬೇಕು.

 

The post ದೇಶದಲ್ಲಿ ಮೊದಲ ಬಾರಿ ನಡೆಯಿತು ಡ್ರೋನ್‌ ದಾಳಿ.. ಇದರ ತಡೆಗೆ ಭಾರತಕ್ಕೆ ಬೇಕೇಬೇಕು ಈ ಸಾಧನ appeared first on News First Kannada.

Source: newsfirstlive.com

Source link