ಸರ್ಕಾರ ಕೊಟ್ಟ 2 ಸಾವಿರ ಪರಿಹಾರ ಪಡೆಯಲಿಕ್ಕೂ ಲಂಚ ಕೊಡ್ಬೇಕಾ..?- ಹೈಕೋರ್ಟ್​​ ಬೇಸರ

ಸರ್ಕಾರ ಕೊಟ್ಟ 2 ಸಾವಿರ ಪರಿಹಾರ ಪಡೆಯಲಿಕ್ಕೂ ಲಂಚ ಕೊಡ್ಬೇಕಾ..?- ಹೈಕೋರ್ಟ್​​ ಬೇಸರ

ಬೆಂಗಳೂರು: ಕೊರೊನಾ ಸಂಕಷ್ಟದಲ್ಲಿ ಸರ್ಕಾರ ಕೊಟ್ಟ 2 ಸಾವಿರ ಪಡೆಯಲು 100 ರಿಂದ 150 ರೂಪಾಯಿ ಪಡೆದುಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಕೆ ಮಾಡಿದ್ದ ವರದಿಯ ಅಂಶಗಳನ್ನು ಕಂಡು ರಾಜ್ಯ ಹೈಕೋರ್ಟ್​ ತೀವ್ರ ಬೇಸರ ವ್ಯಕ್ತಪಡಿಸಿದೆ. ಅಲ್ಲದೇ ಮುಂದಿನ ವಿಚಾರಣೆ ವೇಳೆ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಹಾಜರಾಗಬೇಕು ಎಂದು ಸೂಚನೆ ನೀಡಿದೆ.

ಕೊರೊನಾ ಸಂಕಷ್ಟದಲ್ಲಿ ಜನರಿಗೆ ಆರ್ಥಿಕವಾಗಿ ನೆರವಾಗಲು ರಾಜ್ಯ ಸರ್ಕಾರ ಎರಡು ಸಾವಿರ ರೂಪಾಯಿಗಳ ಪರಿಹಾರ ನೀಡೋದಾಗಿ ಘೋಷಣೆ ಮಾಡಿತ್ತು. ಆದರೆ ಈ ಅಲ್ಪ ಮೊತ್ತವನ್ನು ಕಾರ್ಮಿಕರು ಪಡೆಯಬೇಕಾದರೂ ಅಧಿಕಾರಿಗಳಿಗೆ 2 ಸಾವಿರಕ್ಕೆ 150 – 250 ರೂಪಾಯಿ ಲಂಚ ಕೊಡಬೇಕಾಗಿತ್ತು ಎನ್ನಲಾಗಿದೆ. ಸೇವಾ ಸಿಂಧು ಕೇಂದ್ರಗಳಲ್ಲಿ ಕಮಿಷನ್ ರೂಪದಲ್ಲಿ ಲಂಚ ಸ್ವೀಕಾರ ಮಾಡುತ್ತಿರುವುದು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ (ಕೆಎಸ್ಎಲ್ಎಸ್ಎ) ನಡೆಸಿದ ಕಾರ್ಯಾಚರಣೆ ವೇಳೆ ಪತ್ತೆಯಾಗಿತ್ತು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರ ತನ್ನ ವರದಿಯನ್ನು ಹೈಕೋರ್ಟ್ ಸಲ್ಲಿಕೆ ಮಾಡಿತ್ತು. ಅಸಂಘಟಿತ ವಲಯದ ಕಾರ್ಮಿಕರು ಹಣವನ್ನು ಪಡೆಯಬೇಕಾದರೆ ಸೇವಾ ಸಿಂಧು ಪೋರ್ಟಲ್​​ನಲ್ಲಿ ರಿಜಿಸ್ಟರ್ ಮಾಡಲು ಸರ್ಕಾರ ಹೇಳಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಸೇವಾ ಸಿಂಧು ಇಲಾಖೆಯ ನೌಕರರು, ಸರ್ಕಾರ ಕೊಡುವ ಚಿಲ್ಲರೆ ಹಣದಲ್ಲೂ ಕಿತ್ತು ತಿನ್ನುತ್ತಿರುವ ಆರೋಪ ಕೇಳಿಬಂದಿತ್ತು.

ಈ ನಡುವೆ ಗೃಹ ಕಾರ್ಮಿಕರಿಗೂ ಪರಿಹಾರ ನೀಡಲು ನಿರ್ದೇಶನ ಕೋರಿ ಹೈಕೋರ್ಟ್​ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕರ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠ ವಿಚಾರಣೆ ನಡೆಸಿತ್ತು. ಈ ವೇಳೆ ಕೆಎಸ್ಎಲ್ಎಸ್ಎ ಕಾರ್ಯಾಚರಣೆ ವರದಿಯನ್ನು ಕಂಡು ಸಿಜೆ ಎ.ಎಸ್ ಒಕಾ ಬೇಸರ ವ್ಯಕ್ತಪಡಿಸಿದ್ರು.

ಎರಡು ಸಾವಿರ ಸಣ್ಣ ಮೊತ್ತದ ಪರಿಹಾರ ಪಡೆಯೋಕೆ ಈ ಪರಿ ಕಷ್ಟಪಡಬೇಕೇ.? ನೋಂದಣಿ ಪ್ರಕ್ರಿಯೆಯೂ ಕ್ಲಿಷ್ಟವಾಗಿದೆ. ಇದು ಅರ್ಹ ಫಲಾನುಭವಿ ಸೌಲಭ್ಯದಿಂದ ವಂಚಿತರಾಗುವ ಅಪಾಯವಿದೆ. ಕಾರ್ಮಿಕ ಇಲಾಖೆ ಈ ಸಂಬಂಧ ಕೂಡಲೇ ಗಮನಹರಿಸಬೇಕು. ಮುಂದಿನ ವಿಚಾರಣೆ ವೇಳೆ ಕಾರ್ಮಿಕ ಇಲಾಖೆಯ ಕಾರ್ಯದರ್ಶಿ ಹಾಜರಾಗಿ ಇದಕ್ಕೆ ವಿವರಣೆ ನೀಡಬೇಕು ಎಂದು ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠದಿಂದ ಆದೇಶ ನೀಡಿದೆ.

ಸರ್ಕಾರ ಘೋಷಣೆ ಮಾಡಿದ್ದ ಪರಿಹಾರ ಪಡೆಯಲು ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಕೆಎಸ್ಎಲ್ಎಸ್ಎ ಗೆ ದೂರುಗಳು ಬಂದಿದ್ದವು. ಅದರಂತೆ ರಾಜ್ಯದ ಅನೇಕ ಜಿಲ್ಲಾ DLSA ಸದಸ್ಯ ಕಾರ್ಯದರ್ಶಿಗಳಿಗೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳ ಸದಸ್ಯ ಕಾರ್ಯದರ್ಶಿಗಳಿಗೆ ಪರಿಶೀಲಿಸಲು ಸೂಚನೆ ನೀಡಲಾಗಿತ್ತು. ಪರಿಶೀಲಿಸಿದಾಗ ಲಂಚ ಪಡೆಯುವ ಬಗ್ಗೆ ವರದಿ ಸಲ್ಲಿಕೆ ಆಗಿತ್ತು. ಕೆಎಸ್ಎಲ್ಎಸ್ಎ ತನ್ನ ವರದಿಯಲ್ಲಿ‌ ಕಾರ್ಮಿಕ ಇಲಾಖೆ ಅರ್ಜಿ ಸಲ್ಲಿಸುವುದಕ್ಕೆ ಸೂಕ್ತವಾದ ವ್ಯವಸ್ಥೆ ರೂಪಿಸಬೇಕು ಎಂದು ಸಲಹೆ ನೀಡಿದೆ.

The post ಸರ್ಕಾರ ಕೊಟ್ಟ 2 ಸಾವಿರ ಪರಿಹಾರ ಪಡೆಯಲಿಕ್ಕೂ ಲಂಚ ಕೊಡ್ಬೇಕಾ..?- ಹೈಕೋರ್ಟ್​​ ಬೇಸರ appeared first on News First Kannada.

Source: newsfirstlive.com

Source link