ಹಿರಿಯ ನಟ ನಾಸೀರುದ್ದೀನ್ ಶಾ ಆಸ್ಪತ್ರೆಗೆ ದಾಖಲು

ಮುಂಬೈ: ಬಾಲಿವುಡ್ ಹಿರಿಯ ನಟ ನಾಸೀರುದ್ದೀನ್ ಶಾ ಅವರ ಆರೋಗ್ಯದಲ್ಲಿ ಏರುಪೇರು ಕಂಡ ಬಂದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಜೂನ್ 29ರಂದು ನಾಸೀರುದ್ದೀನ್ ಅವರನ್ನು ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಸೀರುದ್ದೀನ್ ಅವರು ನ್ಯೂಮೋನಿಯಾದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವರದಿಯಾಗಿದೆ. ನಾಸೀರುದ್ದೀನ್ ಅವರ ಆರೋಗ್ಯ ಮೊದಲಿಗಿಂತ ಸುಧಾರಿಸಿದೆ ಎಂದು ಆಪ್ತ ಸಹಾಯಕ ಮಾಹಿತಿ ನೀಡಿದ್ದಾರೆ.

ಸದ್ಯ ನಾಸೀರುದ್ದೀನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ಇಟ್ಟಿದೆ. ನ್ಯೂಮೋನಿಯಾ ಆಗಿದ್ದರಿಂದ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಎರಡ್ಮೂರು ದಿನಗಳಲ್ಲಿ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ನಾಸೀರುದ್ದೀನ್ ಮ್ಯಾನೇಜರ್ ಹೇಳಿದ್ದಾರೆ.

ಸದ್ಯ ಆಸ್ಪತ್ರೆಯಲ್ಲಿ ನಾಸೀರುದ್ದೀನ್ ಜೊತೆ ಪತ್ನಿ ರತ್ನಾ ಪಾಠಕ್, ಮಕ್ಕಳು ಜೊತೆಯಲ್ಲಿದ್ದಾರೆ. ನಾಸೀರುದ್ದೀನ್ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ತ್ರೀದೇವ್, ಸರ್ಫೋರೋಶ್, ಮಕಬೂಲ್, ಇಕ್ಬಾಲ್, ಬನಾರಸ್, ಪರ್ಜಾನಿಯಾ, ಇಶ್ಕಿಯಾ, ದಿ ಡರ್ಟಿ ಪಿಕ್ಚರ್, ಜಾನ್ ಡೇ, ಬೇಗಂ ಜಾನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪತ್ನಿ ರತ್ನಾ ಪಾಠಕ್ ಸಹ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

2020ರಲ್ಲಿ ನಟರಾದ ಇರ್ಫಾನ್ ಖಾನ್, ರಿಷಿ ಕಪೂರ್ ನಿಧನವಾದಾಗ ನಾಸೀರುದ್ದೀನ್ ಅವರ ಆರೋಗ್ಯದ ಕುರಿತು ಊಹಾಪೋಹ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಕೊನೆಗೆ ನಾಸೀರುದ್ದೀನ್ ಶಾ ಪುತ್ರ ವಿವಾನ್ ಎಲ್ಲ ಸ್ಪಷ್ಟನೆ ನೀಡಿ ತಂದೆ ಆರೋಗ್ಯವಾಗಿರುವ ವಿಷಯ ತಿಳಿಸಿದ್ದರು.

The post ಹಿರಿಯ ನಟ ನಾಸೀರುದ್ದೀನ್ ಶಾ ಆಸ್ಪತ್ರೆಗೆ ದಾಖಲು appeared first on Public TV.

Source: publictv.in

Source link