ಮಧ್ಯರಾತ್ರಿ ಕುರಿಗಳನ್ನ ಕದ್ದು.. ಎಣ್ಣೆಗೋಸ್ಕರ ಕಳ್ಳರೇ ದೊಡ್ಡ ಕುರಿಗಳಾದ ಕಥೆ

ಮಧ್ಯರಾತ್ರಿ ಕುರಿಗಳನ್ನ ಕದ್ದು.. ಎಣ್ಣೆಗೋಸ್ಕರ ಕಳ್ಳರೇ ದೊಡ್ಡ ಕುರಿಗಳಾದ ಕಥೆ

ಕುರಿಗಳು ಸಾರ್, ಕುರಿಗಳು.. ಮಂದೆಯಲಿ ಒಂದಾಗಿ, ಸ್ವಂತತೆಯನ್ನೇ ಬಂದಾಗಿಸಿಕೊಂಡು.. ಒಂದರ ಬಾಲ ಮತ್ತೊಂದು ಹಿಡಿದು.. ಕಣ್ಣು ಮುಚ್ಚೊ, ತೆಗೆದೊ ಓಡಾಡ್ತಾ ಇರ್ತಾವೆ. ಇಂತಹ ಕುರಿಗಳನ್ನು ಬೆಂಗಳೂರಿನಿಂದ ಕದ್ದು ಸಾಗಿಸುತ್ತಿದ್ದ ಕುರಿಗಳ್ಳರು, ಬೆಂಗಳೂರು ಪೋಲಿಸರ ಕೈಗೆ ಕುರಿಗಳ ಹಾಗೆಯೇ ಸಿಕ್ಕಿಬಿದ್ದಿದ್ದಾರೆ. ಕುರಿ ಕಳ್ಳತನ ಮಾಡಲು ಹೋಗಿ, ದೊಡ್ಡ ಕುರಿಗಳಾದವರ ಸ್ಟೋರಿ ಇಲ್ಲಿದೆ.

ಕೋವಿಡ್ ಸಾಂಕ್ರಾಮಿಕ ಉಲ್ಭಣವಾದ ಬೆನ್ನಲ್ಲೇ, ದೇಶ ಸಂಪೂರ್ಣ ಲಾಕ್ ಡೌನ್ ಆಗಿದ್ದೇನು ಹೊಸದಲ್ಲ. ಆದರೆ ಈ ಸಂಕಷ್ಟಕರ ದಿನಗಳನ್ನ ಹಲವರು ಉಪಯೋಗ.. ಅಲ್ಲಲ್ಲ ದುರುಪಯೋಗ ಮಾಡಿಕೊಂಡಿದ್ದೂ ಇದೆ. ಅದ್ರಲ್ಲಿ ಸೈಬರ್ ಕಳ್ಳರ ಹಾವಳಿ ಎಲ್ಲದಕ್ಕಿಂತ ಹೆಚ್ಚು. ಇನ್ನು ಲಾಕ್ ಡೌನ್ ಸಡಿಲಿಕೆಯಾದ ಬೆನ್ನಲ್ಲೇ, ಮನೆಯಲ್ಲೆ ಕೂತು ಹೊಂಚು ಹಾಕುತ್ತಿದ್ದ ಕಳ್ಳರೆಲ್ಲರೂ ರೋಡಿಗಿಳಿಯೋಕೆ ಶುರು ಮಾಡಿದ್ದಾರೆ. ಇದರಿಂದ ಚೈನ್ ಸ್ನಾಚಿಂಗ್, ಒಂಟಿ ಮನೆ ದರೋಡೆಯಂತಹ ಪ್ರಕರಣಗಳು ಅಲ್ಲಿ ಇಲ್ಲಿ ವರದಿಯಾಗ್ತಿವೆ. ಇದನ್ನೆಲ್ಲ ಹೊರತುಪಡಿಸಿ, ಇಲ್ಲೊಂದು ಗ್ಯಾಂಗ್ ಬೆಂಗಳೂರಿನ ಮನೆಯೊಂದ್ರಲ್ಲಿ ಸಾಕಿದ್ದ ಕುರಿಗಳನ್ನ ಕದ್ದು ಸಾಗಾಣಿಕೆ ಮಾಡಲು ಭರ್ಜರಿ ಪ್ಲಾನ್ ಮಾಡಿತ್ತು. ಆದ್ರೆ ಈ ಕಳ್ಳರು ಮಾಡಿಕೊಂಡ ಎಡವಟ್ಟಿನಿಂದ, ಬೆಂಗಳೂರು ಪೊಲೀಸರಿಗೆ ಸಲೀಸಾಗಿ ತಗ್ಲಾಕೊಂಡಿದ್ದಾರೆ.

blank

ಅನ್ನ ಹಾಕಿದ ಮನೆಗೆ ಕನ್ನ ಹಾಕಲು ಹೊರಟ ಕಿರಾತಕ
ಕುರಿ ಕಾಯುವ ನೆಪದಲ್ಲಿ, ಅದನ್ನ ಕದ್ದು ಸಾಗಿಸಲು ಪ್ಲಾನ್

ಇದು ಬೆಂಗಳೂರಿನ ಸೋಲದೇವನಹಳ್ಳಿಯ ಕುಂಬಾರಹಳ್ಳಿಯಲ್ಲಿ ನಡೆದ ಘಟನೆ. 54 ವಯಸ್ಸಿನ ನಂದಕುಮಾರ್ ಎನ್ನುವವರ ಮನೆಯಲ್ಲಿ 6 ಕುರಿಗಳು, 39 ಮೇಕೆಗಳನ್ನು ಸಾಕಿದ್ದರಂತೆ. ಇವುಗಳನ್ನು ಕಾಯಲು ನಂದಕುಮಾರ್, ರಾಜು ಎಂಬಾತನನ್ನ ಕೆಲಸಕ್ಕಿಟ್ಟುಕೊಂಡಿದ್ರು. ಈ ರಾಜು ಮೂಲತಃ ಆಂಧ್ರ ಪ್ರದೇಶದ ಧರ್ಮಾವರಂನವನು. ತನ್ನ ಕುಟುಂಬ ಸಮೇತನಾಗಿ, ಆಂಧ್ರದಿಂದ ಬೆಂಗಳೂರಿಗೆ ಬಂದಿದ್ದ ರಾಜುಗೆ ನಂದಕುಮಾರ್ ವಸತಿ, ಊಟ ಕೊಟ್ಟ ಆಶ್ರಯ ನೀಡಿದ್ರು. ಕಳೆದ ವರ್ಷದಿಂದ  ಕುರಿ ಕೊಟ್ಟಿಗೆಯಲ್ಲೇ, ಕುರಿಗಳು ಹಾಗೂ ಮೇಕೆಗಳಿಗೆ ಉಪಚಾರ ಮಾಡಿಕೊಂಡಿದ್ದ ರಾಜು, ತಿಂದ ಮನೆಗೆ ದ್ರೋಹ ಬಗೆಯಲು ಪ್ಲಾನ್ ನಡೆಸಿದ್ದ. ತಾನು ಪಾಲನೆ ಮಾಡುತ್ತಿದ್ದ ಪ್ರಾಣಿಗಳನ್ನು ನೇರ ಆಂಧ್ರಪ್ರದೇಶಕ್ಕೆ ಸಾಗಿಸಲು ಸ್ಕೆಚ್ ಹಾಕಿದ್ದ.

ಒಂದು ವರ್ಷಗಳಿಂದ ಕುಟುಂಬ ಸಮೇತ ಇಲ್ಲೇ ವಾಸವಿದ್ದ ರಾಜು
ಸಂಬಂಧಿಕರಿಗೆ ಆಕ್ಸಿಡೆಂಟ್ ಅಂತ ಹೇಳಿ ದೋಚೋಕೆ ಪ್ಲಾನ್‌

ಧರ್ಮಾವರಂನಿಂದ ಕೆಲಸದ ಅಪೇಕ್ಷೆ ಹೊತ್ತು ಬೆಂಗಳೂರಿಗೆ ಬಂದಿದ್ದ ರಾಜು. ಕಳೆದ ಒಂದು ವರ್ಷದಿಂದ ನಂದಕುಮಾರ್ ಅವರ ಸಹಾಯಕನಾಗಿ ದುಡಿದು ನಂಬಿಕೆ ಗಳಿಸಿದ್ದ. ರಾಜು ಕೆಲಸವನ್ನು ಸಂಪೂರ್ಣವಾಗಿ ನಂಬಿದ್ದ ನಂದಕುಮಾರ್ಗೆ, ಬೆನ್ನ ಹಿಂದೆ ಚೂರಿ ಇರಿದಂತಾಗಿದ್ದು ಕಳೆದ ಜೂನ್ 2ರಂದು. ಆವತ್ತು ತನ್ನ ಸಂಬಂಧಿಕರೊಬ್ಬರಿಗೆ ಆಕ್ಸಿಡೆಂಟ್‌ ಆಗಿದೆ, ಕೂಡ್ಲೇ ನಾನು ಧರ್ಮಾವರಂಗೆ ಹೋಗಬೇಕು ಅಂತ ನಂದಕುಮಾರ್‌ಗೆ ಕೇಳಿಕೊಂಡಿದ್ದ ರಾಜು, ತನ್ನ ಹೆಂಡತಿ ಮಕ್ಕಳನ್ನ ಕರೆದುಕೊಂಡು ಬೆಂಗಳೂರನ್ನ ಬಿಟ್ಟಿದ್ದಾನೆ. ಆದ್ರೆ ಅವನು ಹೋಗುವ ಜೊತೆಗೆ ಅಲ್ಲಿದ್ದ ಕುರಿ ಮೇಕೆಯನ್ನು ಕದಿಯಲು ಪ್ಲಾನ್ ಮಾಡಿರುತ್ತಾನೆ ಎಂದು ಯಾರು ಊಹಿಸಿರಲಿಲ್ಲ.

blank

ಜೂನ್ 22ರಂದು ಮತ್ತೆ ಬಂದಿದ್ದ ರಾಜು!
ಆವತ್ತು ರಾತ್ರಿ ಆಗಿತ್ತು ಕುರಿ ಸಾಗಿಸುವ ಪ್ಲಾನ್

ತನ್ನ ಕುಟುಂಬವನ್ನು ಧರ್ಮಾವರಂಗೆ ಬಿಟ್ಟು ಬಂದಿದ್ದ ರಾಜು ಜೂನ್ 22ರಂದು ಕುರಿ ಶೆಡ್ ಗೆ ಮತ್ತೆ ಬಂದಿದ್ದಾನೆ. ತನ್ನ ಹೆಂಡತಿ, ಇನ್ನು ಕೆಲವೇ ದಿನಗಳಲ್ಲಿ ಬರ್ತಾಳೆ ಅಂತ ಹೇಳಿದ್ದಾನೆ. ಆವತ್ತು ಶೆಡ್ ಬೀಗ ತೆಗೆದ ನಂದಕುಮಾರ್‌ಗೆ ಅಲ್ಲಿ ಎಂದಿನಂತೆ 6 ಕುರಿ ಹಾಗೂ 36 ಮೇಕೆ ಇದ್ದಿದ್ದು ಕಾಣಿಸಿದೆ. ಇದಾದ ಬಳಿಕ ರಾಜು ಎಂದಿನಂತೆ ತನ್ನ ಕೆಲಸ ಮುಂದುವರೆಸಿದ್ದ. ಆ ದಿನ ರಾತ್ರಿ ಅದೇ ಕುರಿಗಳ ಮಂದೆಯಿಂದ 5 ಕುರಿಗಳನ್ನು ಹಾಗೂ 20 ಮೇಕೆಗಳನ್ನು ಶೆಡ್ ನಿಂದ ನೇರವಾಗಿ ಹತ್ತಿರದಲ್ಲೇ ಎಲ್ಲ ಸಿದ್ದತೆ ಮಾಡಿಕೊಂಡಿದ್ದ ಮಿನಿ ಗೂಡ್ಸ್ ಟ್ರಕ್​ಗೆ ಶಿಫ್ಟ್​ ಮಾಡಿ ಬಿಟ್ಟಿದ್ದ ಕಿಲಾಡಿ ರಾಜು.

ಧರ್ಮಾವರಂನಿಂದಲೇ ಬಂದಿತ್ತು ಮಿನಿ ಗೂಡ್ಸ್ ಟ್ರಕ್
ಈ ಟ್ರಕ್‌ನ ಚಾಲಕರೇ ಮಾಡಿದ್ರು ಎಣ್ಣೆ ಏಟಿನ ಎಡವಟ್ಟು

ಜೂನ್ 2ರಂದೇ ಎಲ್ಲ ಪ್ಲಾನ್ ಮಾಡಿಕೊಂಡು ಬಂದಿದ್ದ ರಾಜು, ಧರ್ಮಾವರಂನಿಂದ ಒಂದು ಮಿನಿ ಟ್ರಕ್ ಮಾಡಿಕೊಂಡು ಇಬ್ಬರು ಚಾಲಕರನ್ನು ಜೊತೆಗೆ ಕರೆದುಕೊಂಡು ಬಂದಿದ್ದ. ಈ ಕಡೆ ರಾಜು ಕುರಿ-ಮೇಕೆ ಸಾಗಿಸಲು ಎಲ್ಲ ಸಿದ್ದತೆ ಮಾಡುಕೊಳ್ಳುವಾಗ, ಈ ಇಬ್ಬರು ಚಾಲಕರು ಸೋಲದೇವನಹಳ್ಳಿ ಸುತ್ತಮುತ್ತಲಿನಲ್ಲಿ ಮದ್ಯದ ಅಂಗಡಿಯನ್ನು ಹುಡುಕಿ ಹೊರಟಿದ್ದಾರೆ. ಆದರೆ ಕೊರೊನಾ ಕಾರಣ ಇಡೀ ಬೆಂಗಳೂರಲ್ಲಿ ನೈಟ್ ಕರ್ಫ್ಯೂ ಇದ್ದಿದ್ದರಿಂದ, ಈ ಖದೀಮರಿಗೆ ಎಣ್ಣೆ ಸಿಗದೆ, ಸಿಕ್ಕ ಸಿಕ್ಕವರಿಗೆಲ್ಲ.. ನಾವು ಧರ್ಮಾವರಂನಿಂದ ಬಂದಿದ್ದೇವೆ.. ನಮಗೆ ಎಣ್ಣೆ ಸಿಗುವ ಜಾಗ ಹೇಳಿ ಎಂದು ಕೆಳ್ಕೊಂಡ್ ಬಂದಿದ್ದಾರೆ.

ಸಮಯ : ಮಧ್ಯರಾತ್ರಿ

ಕುರಿಗಳ್ಳರು : ಅಣ್ಣಾ .. ಇಲ್ಲಿ ಎಣ್ಣೆ ಎಲ್ ಸಿಗುತ್ತೆ ?
ವ್ಯಕ್ತಿ : ಎಣ್ಣೆ .. ಇವಾಗ ಸಿಗಲ್ಲ
ಕುರಿಗಳ್ಳರು : ತುಂಬ ತಲೆ ಕೆಟ್ಟಿದೆ ಅಣ್ಣಾ .. ಎಲ್ಲಿ ಸಿಗ್ಬೋದು ಹೇಳಿ
ವ್ಯಕ್ತಿ : ಏಯ್!! ಈಗ ಲಾಕ್​ಡೌನ್.. ಇಷ್ಟೊತ್ತ್ ಮೇಲೆ ಎಣ್ಣೆ ಸಿಗಲ್ಲ
ಕುರಿಗಳ್ಳರು : ತುಂಬ ಸುಸ್ತಾಗಿದೆ.. ಧರ್ಮಾವರಂನಿಂದ.. ಒಂದೆ ಸಮನೇ ಗಾಡಿ ಓಡ್ಸಿದ್ದೀವಿ.. ಈಗ ಮತ್ತೆ ವಾಪಸ್ಸ್ ಹೋಗ್ಬೇಕು.
ವ್ಯಕ್ತಿ : ಸುಮ್ನೆ ಹಿಂಸೆ ಮಾಡ್ಬೇಡಿ.. ಇವತ್ತು ರಾತ್ರಿ ಕರ್ಫ್ಯೂ.. ಇನ್ನೇನ್ನಿದ್ರೂ ನಾಳೆ ಬೆಳಗ್ಗೆ ಸಿಗೋದು.. ಹೋಗಿ
ಕುರಿಗಳ್ಳರು : ಆಯ್ತು.. ನಿಮ್ಮ ಹತ್ರ ಇದ್ರೆ ಅದ್ನೆ ಕೊಡಿ…
ವ್ಯಕ್ತಿ : ನಂಗೆ ಕುಡಿಯೋ ಅಭ್ಯಾಸ ಇಲ್ಲ.. ಕಣ್ ನಡೀರಿ ಮೊದ್ಲು ಇಲ್ಲಿಂದ..

ಈ ಕಿರಾತಕರಿಗೆ ಎಣ್ಣೆ ಸಿಗ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ಇನ್ನೊಂದು ಕಡೆ ರಾಜು.. ತಾನು ಮಾಡಿದ ಪ್ಲಾನ್‌ನಂತೆ ಆ ಕುರಿ ಮಂದೆಯಿಂದ 5 ಕುರಿಗಳನ್ನ ಹಾಗೂ 20 ಮೇಕೆಗಳನ್ನ ಮಿನಿ ಟ್ರಕ್​​ಗೆ ತುಂಬಿಸಿದ್ದ. ನಂತ್ರ ಎಲ್ಲರೂ ಅಲ್ಲಿಂದ ಕಾಲ್ಕಿತ್ತಿದ್ದಾರೆೆ. ಮರುದಿನ ಬೆಳ್ಳಗೆ ಶೆಡ್‌ಗೆ ಬಂದ ನಂದಕುಮಾರ್ ಮೇಕೆ, ಕುರಿಗಳು ಕಾಣೆಯಾಗಿರೋದು ಕಂಡು ರಾಜುಗೆ ಕರೆ ಮಾಡಿದರೆ, ರಾಜು ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ. ಅಷ್ಟು ಹೊತ್ತಿಗಾಗ್ಲೇ ಧರ್ಮಾವರಂ ಗಡಿಯ ಹತ್ತಿರ ಹೋಗಿ ಬಿಟ್ಟಿದ್ದ ರಾಜು.

blank

ಜೂನ್ 23 ರಂದು ರಾಜು ವಿರುದ್ಧ ದೂರು ದಾಖಲು
ಪೊಲೀಸ್ ಕಾರ್ಯಚರಣೆಗೆ ಸಹಾಯಕವಾಗಿದ್ದು ಎಣ್ಣೆ ಮಾತು!

ಇದಾದ ಬಳಿಕ ನಂದಕುಮಾರ್ ನೇರ ಹೋಗಿ ಸೋಲದೇವನಹಳ್ಳಿ ಠಾಣೆಯಲ್ಲಿ ರಾಜು ವಿರುದ್ಧ ದೂರು ದಾಖಲಿಸಿದ್ದಾರೆ. ಕೂಡಲೇ ಸ್ಥಳೀಯ ಪೊಲೀಸರು ಕುರಿಗಳ್ಳರ ಬೆನ್ನು ಹತ್ತಿದಾಗ ಊರಿನ ಜನ, ಎಣ್ಣೆಗಾಗಿ ನಮ್ಮನ್ನು ಕಳ್ಳರು ಮಾಹಿತಿ ಕೇಳಿದ್ದರು ಎನ್ನುವ ವಿಚಾರ ತಿಳಿಸಿದ್ದಾರೆ. ಇದರಿಂದ ಕೂಡಲೇ ಎಚ್ಚೆತ್ತ ಪೊಲೀಸರು ಹತ್ತಿರದ ಸಿಸಿಟಿವಿ ಚಿತ್ರಗಳು ಹಾಗೂ ದೇವನಹಳ್ಳಿ ಟೋಲ್ ಗೇಟ್‌ನಲ್ಲಿ ಸಿಕ್ಕ ಮೊಬೈಲ್ ನಂಬರ್ ಅನ್ನು ಟ್ರಾಕ್ ಮಾಡಿ, ಜೂನ್ 24 ರಂದು ಧರ್ಮಾವರಂ ರೀಚ್ ಆಗಿದ್ದಾರೆ. ಅಲ್ಲಿ ಹೋದ ಕೂಡಲೆ ಕದ್ದ ಮೇಕೆ-ಕುರಿಗಳ ಸಮೇತ ಇಬ್ಬರು ಚಾಲಕರು ಪೊಲೀಸ್ ಕೈಗೆ ತಗ್ಲಾಕ್ಕೊಂಡಿದ್ದಾರೆ. ರಾಜು ಮಾತು ಕೇಳಿ ಕುರಿ ಕದಿಯೋಕೆ ಬಂದವ್ರು ತಾವೇ ಕುರಿಗಳಾಗಿದ್ದಾರೆ. ಆದ್ರೆ ಈ ಕಳ್ಳತನದ ಮಾಸ್ಟರ್‌ ಮೈಂಡ್‌ ರಾಜು ಮಾತ್ರ ತಲೆ ಮರೆಸಿಕೊಂಡಿದ್ದಾನೆ. ಆತನಿಗಾಗಿ ಹುಡುಕಾಟ ಮುಂದುವರೆದಿದೆ.

ಇದೀಗ ಆ 20 ಮೇಕೆ 5 ಕುರಿಗಳನ್ನು ಪೊಲೀಸರು ಮಾಲೀಕರಿಗೆ ಹಿಂದಿರುಗಿಸಿದ್ದಾರೆ. ಚಾಲಕರು ಮದ್ಯಪಾನಕ್ಕಾಗಿ ಇಡೀ ಊರಿನಲ್ಲಿ ತಮ್ಮ ಸುಳಿವನ್ನು ಚೆಲ್ಲಿ ಹೋಗಿರೋದೆ ಪೊಲೀಸರಿಗೆ ಈ ಕೇಸ್‌ನಲ್ಲಿ ವರದಾನವಾಗಿಬಿಡ್ತು. ಇದೆಲ್ಲದ್ರ ನಡುವೆ, ಎಣ್ಣೆ ಸಿಗದ ಕಾರಣಕ್ಕೆ ಕುರಿ ಹಾಗೂ ಮೇಕೆಗಳಿಗೆ ಬೆಂಗಳೂರು ಟೂ ಧರ್ಮಾವರಂ ಮತ್ತು ಧರ್ಮಾವರಂ ಟೂ ಬೆಂಗಳೂರು ಒಂದು ಸಣ್ಣ ಟ್ರಿಪ್ ಆದ್ರೆ, ಎಣ್ಣೇ ಆಸೆಗೆ ಈ ಕಳ್ಳರು ಮಾಡಿಕೊಂಡ ಎಡವಟ್ಟು ಇವರನ್ನು ನಿಜವಾದ ಕುರಿಗಳನ್ನಾಗಿ ಮಾಡಿದೆ.

ಮೇಕೆ-ಕುರಿಗಳು ಕಳೆದುಹೋದ ಕೇವಲ 48 ಗಂಟೆಗಳಲ್ಲಿ ವಾಪಸ್ಸಾಗಿದ್ದಾವೆ. ಚಾಲಕರ ಎಣ್ಣೆ ಚಟದಿಂದ, ಈ ಕುರಿಗಳು ಪುನಃ ಮಾಲೀಕನ ಶೆಡ್ ಸೇರಿವೆ. ಉಂಡ ಮನೆಗೆ ಎರಡು ಬಗೆಯೋಕೆ ಹೊರಟವನ ಪ್ಲಾನ್‌ ಇಲ್ಲಿ ಅಟ್ಟರ್‌ ಫ್ಲಾಪ್ ಆಗಿದೆ.

The post ಮಧ್ಯರಾತ್ರಿ ಕುರಿಗಳನ್ನ ಕದ್ದು.. ಎಣ್ಣೆಗೋಸ್ಕರ ಕಳ್ಳರೇ ದೊಡ್ಡ ಕುರಿಗಳಾದ ಕಥೆ appeared first on News First Kannada.

Source: newsfirstlive.com

Source link