ರಣ ಬಿಸಿಲಿನ ತಾಪಕ್ಕೆ ಕೆನಡಾದಲ್ಲಿ 130ಕ್ಕೂ ಹೆಚ್ಚು ಬಲಿ- ಬಿರುಕು ಬಿಡ್ತಿವೆ ರಸ್ತೆಗಳು, ಮನೆ ಗೋಡೆಗಳು

ರಣ ಬಿಸಿಲಿನ ತಾಪಕ್ಕೆ ಕೆನಡಾದಲ್ಲಿ 130ಕ್ಕೂ ಹೆಚ್ಚು ಬಲಿ- ಬಿರುಕು ಬಿಡ್ತಿವೆ ರಸ್ತೆಗಳು, ಮನೆ ಗೋಡೆಗಳು

ಕೆನಡಾದ ದೇಶದಲ್ಲಿ ಬಿಸಿಲಿನ ತಾಪಮಾನ ತೀವ್ರಮಟ್ಟದಲ್ಲಿ ಹೆಚ್ಚಳವಾಗಿದ್ದು, ಕಳೆದ ಮೂರು ದಿನಗಳಲ್ಲಿ ದಾಖಲೆ ಪ್ರಮಾನದ ಉಷ್ಣಾಂಶ ವರದಿಯಾಗಿದೆ. ಕೆನಡಾದ ಕೊಲಂಬಿಯಾ ಲಿಟ್ಟನ್​​ನಲ್ಲಿ ಮಂಗಳವಾರ ದಾಖಲೆಯ ಗರಿಷ್ಠ 49.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಕೆನಡಾದಲ್ಲಿ ಎಂದು ಗರಿಷ್ಠ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚು ದಾಖಲಾಗಿರಲಿಲ್ಲ. ಇದೇ ಮೊದಲ ಬಾರಿಗೆ ಭಾರೀ ಪ್ರಮಾಣದಲ್ಲಿ ಉಷ್ಣಾಂಶ ಹೆಚ್ಚಾಗಿದ್ದು, ಜನ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರಿದೆ.

ಕೆನಡಾ ವಾಂಕೂವರ್ ಪ್ರದೇಶದವೊಂದರಲ್ಲೇ ಕಳೆದ ಶುಕ್ರವಾರದಿಂದ 130 ಮಂದಿ ಏಕಾಏಕಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಮೃತರಲ್ಲಿ ಹೆಚ್ಚು ಮಂದಿ ವೃದ್ಧರು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರೇ ಹೆಚ್ಚಿದ್ದಾರೆ. ಬಿಸಿಲಿನ ತಾಪ ತಳಲಾರದೆ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸ್ಥಳೀಯ ಪೊಲೀಸ್ ಅಧಿಕಾರಿ ಸ್ಟೀವ್​ ಅಡಿಸನ್​, ವಾಂಕೂವರ್​​ನಲ್ಲಿ ಎಂದು ನಾವು ಇಷ್ಟು ಬಿಸಿಲಿನ ತಾಪವನ್ನು ನೋಡಿರಲಿಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಜನರು ಬಿಸಿಲಿನ ತಾಪದಿಂದಲೇ ಸಾವನ್ನಪ್ಪುತ್ತಿದ್ದಾರೆ ಎಂದು ಹೇಳಿದ್ದಾರೆ.

ಇತ್ತ ಏಕಾಏಕಿ ದಾಖಲೆಯ ಪ್ರಮಾಣದಲ್ಲಿ ಉಷ್ಣಾಂಶ ಹೆಚ್ಚಳ ಆಗುತ್ತಿರುವುದರಿಂದ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇತ್ತ ಬ್ರಿಟಿಷ್ ಕೊಲಂಬಿಯಾ, ಅಲ್ಬರ್ಡಾ ಪ್ರಾವಿನ್ಸ್​, ವಾಯುವ್ಯ ಪ್ರದೇಶ, ಮಾನಿಟೋಬಾಲದಲ್ಲಿ ಉಷ್ಣಾಂಶ ಹೆಚ್ಚಳದ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.

ವಿಶ್ವದ ಎರಡನೇ ಶೀತ ದೇಶದವಾಗಿರುವ ಕೆನಡಾದಲ್ಲಿ ಮಂಜಿನ ಚಂಡಮಾರುತಗಳನ್ನು ನೋಡುತ್ತಿರುತ್ತೇವೆ. ಆದರೆ ಇಷ್ಟು ಪ್ರಮಾಣ ಉಷ್ಣಾಂಶವನ್ನು ನೋಡಿಲ್ಲ. ಸದ್ಯ ಇಲ್ಲಿನ ಬಿಸಿಲಿನ ತಾಪವನ್ನು ದುಬೈಗೆ ಹೋಲಿಕೆ ಮಾಡಿದರೆ, ದುಬೈ ನಮಗಿಂತ ಕಡಿಮೆ ಉಷ್ಣತೆ ಹೊಂದಿದೆ ಎಂದು ಹೇಳಬಹುದು ಎಂದು ಕೆನಡಾದ ಹಿರಿಯ ಹವಾಮಾನ ತಜ್ಞ ಡೇವಿಡ್​​ ಫಿಲಿಫ್ಸ್​ ಹೇಳಿದ್ದಾರೆ.

ಲಿಟ್ಟನ್​​ನಲ್ಲಿ ಸೂರ್ಯನ ತಾಪಕ್ಕೆ ಜನರು ಮನೆಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಜನರು ಸಾಧ್ಯವಾದಷ್ಟು ಮನೆಯಲ್ಲಿ ಇರಲು ಪ್ರಯತ್ನಿಸುತ್ತಿದ್ದಾರೆ. ಕಳೆದ ಮೂರು ದಿನಗಳಲ್ಲಿ 46.6, 47.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋಗಳನ್ನು ಗಮನಿಸಿದರೆ ಬಿಸಿಲಿನ ತೀವ್ರತೆಗೆ ಅಲ್ಲಿನ ರಸ್ತೆ ಹಾಗೂ ಮನೆಗಳು ಬಿರುಕು ಬಿಡುತ್ತಿರುವುದನ್ನು ಕಾಣಬಹುದಾಗಿದೆ. ಬಿಸಿಲಿನ ತಾಪಕ್ಕೆ ಕೊರೊನಾ ವ್ಯಾಕ್ಸಿನೇಷನ್​ ಕೇಂದ್ರಗಳು ಸೇರಿದಂತೆ, ಒಲಂಪಿಕ್ಸ್ ಆಯ್ಕೆ ನಡೆಸಲಾಗುತ್ತಿದ್ದ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

The post ರಣ ಬಿಸಿಲಿನ ತಾಪಕ್ಕೆ ಕೆನಡಾದಲ್ಲಿ 130ಕ್ಕೂ ಹೆಚ್ಚು ಬಲಿ- ಬಿರುಕು ಬಿಡ್ತಿವೆ ರಸ್ತೆಗಳು, ಮನೆ ಗೋಡೆಗಳು appeared first on News First Kannada.

Source: newsfirstlive.com

Source link