ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

1. ರಮೇಶ್ ಜಾರಕಿಹೊಳಿ ದೆಹಲಿ ದಂಡಯಾತ್ರೆ ಯಶಸ್ವಿ
ದೆಹಲಿಗೆ ತೆರಳಿದ್ದ ರಮೇಶ್ ಜಾರಕಿಹೊಳಿ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ. ರಮೇಶ್ ಜಾರಕಿಹೊಳಿಯ ದೆಹಲಿ ದಂಡಯಾತ್ರೆ ಬಹುತೇಕ ಸಫಲವಾಗಿದೆ ಅಂತ ಜಾರಕಿಹೊಳಿ ಆಪ್ತ ಮೂಲಗಳು ಮಾಹಿತಿ ನೀಡಿವೆ.. ಈ ಮಧ್ಯೆ ಜಾರಕಿಹೊಳಿ ಇಂದು ಸಿಎಂ ಯಡಿಯೂರಪ್ಪ ಭೇಟಿ‌ ಆಗುವ ಸಾಧ್ಯತೆಗಳಿವೆ.

2. ಇಂದಿನಿಂದ ಬೆಳಗ್ಗೆ 7 ರಿಂದ ಸಂಜೆ 6ರ ವರೆಗೆ ಮೆಟ್ರೋ ಸಂಚಾರ
ಇಂದಿನಿಂದ ಬೆಂಗಳೂರಿನಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಮೆಟ್ರೋ ಸಂಚಾರ ಆರಂಭವಾಗಿದೆ. ಕಾರ್ಡ್ ಬಳಸಿ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಆದ್ರೆ ವೀಕೆಂಡ್ ಕರ್ಫ್ಯೂ ಹಿನ್ನೆಲೆ ಶನಿವಾರ ಮತ್ತು ಭಾನುವಾರದಂದು ಮಾತ್ರ ಮೆಟ್ರೋ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಇನ್ನು ಜನದಟ್ಟಣೆ ಇರುವ ಸಂದರ್ಭದಲ್ಲಿ 5 ‌ನಿಮಿಷಕ್ಕೊಂದರಂತೆ ಹಾಗೂ ಜನದಟ್ಟಣೆ ಇಲ್ಲದ ವೇಳೆ 15 ನಿಮಿಷಕ್ಕೊಂದರಂತೆ ಮೆಟ್ರೋ ಓಡಾಡಲಿದೆ.

3. ಜುಲೈ 31ರ ವರೆಗೆ ವಿಮಾನಯಾನ ನಿರ್ಬಂಧ ವಿಸ್ತರಣೆ
ಅಂತ‌ರಾಷ್ಟ್ರೀಯ ವಿಮಾನಯಾನ ನಿರ್ಬಂಧವನ್ನ ಜುಲೈ 31ರ ವರೆಗೆ ವಿಸ್ತರಿಸಲಾಗಿದೆ. ಈ ಕುರಿತು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ ಮಾಹಿತಿ ನೀಡಿದೆ.. ಕೊರೊನಾ ಆರ್ಭಟ ತಗ್ಗಿದ್ದ ಮಾರ್ಗಗಳಲ್ಲಿ ನಿಗದಿತ ವಿಮಾನಯಾನಕ್ಕೆ ಅನುಮತಿ ನೀಡಲಾಗುವುದು ಎಂದು ಜಿಡಿಸಿಎ ತಿಳಿಸಿದೆ. ಆದ್ರೆ ಅನುಮತಿ ಪಡೆದ ಸರಕು ಸಾಗಾಟ ವಿಮಾನಗಳಿಗೆ ಹಾರಾಟ ನಿಷೇಧ ಅನ್ವಯವಾಗುವುದಿಲ್ಲ ಅಂತ ಸ್ಪಷ್ಟಪಡಿಸಿದೆ.

4. ವೈದ್ಯರ ದಿನಾಚರಣೆಯಲ್ಲಿ ಇವತ್ತು ಮೋದಿ ಭಾಗಿ
ಇವತ್ತು ರಾಷ್ಟ್ರೀಯ ವೈದ್ಯರ ದಿನ. ಇದರ ನಿಮಿತ್ತ ಪ್ರಧಾನಿ ಮೋದಿ ವೈದ್ಯರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಭಾರತೀಯ ವೈದ್ಯಕೀಯ ಸಂಘ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಸ್ವತಃ ತಮ್ಮ ಟ್ವಿಟರ್​​ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಮಧ್ಯಾಹ್ನ 3 ಗಂಟೆಗೆ ವೈದ್ಯ ಸಮುದಾಯವನ್ನ ಉದ್ದೇಶಿಸಿ ಮಾತನಾಡುವುದಾಗಿ ಅವರು ತಿಳಿಸಿದ್ದಾರೆ.

5. ಹಿರಿಯ ನಟ ನಾಸಿರುದ್ದೀನ್ ಶಾ ಆಸ್ಪತ್ರೆಗೆ ದಾಖಲು
ಬಾಲಿವುಡ್ ಹಿರಿಯ ನಟ ನಾಸೀರುದ್ದೀನ್ ಶಾ ಅನಾರೋಗ್ಯದಿಂದಾಗಿ ಮುಂಬೈನ ಆಸ್ಪತ್ರೆಗೆ ದಾಖಲಾಗಿದ್ದಾರೆ. ನ್ಯೂಮೋನಿಯಾದಿಂದ ನಾಸೀರುದ್ದೀನ್ ಶಾ ಬಳಲುತ್ತಿದ್ದು, ಮುಂಬೈನ ಹಿಂದುಜಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ. ಶ್ವಾಸಕೋಶದಲ್ಲಿ ನ್ಯೂಮೋನಿಯಾದ ಸಣ್ಣ ಪ್ಯಾಚ್ ಕಾಣಿಸಿಕೊಂಡಿದೆ ಎನ್ನಲಾಗಿದೆ. ಸದ್ಯ ನಾಸೀರುದ್ದೀನ್ ಶಾ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಶೀಘ್ರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗೋ ಸಾಧ್ಯತೆಗಳಿವೆ.

6. ಭಾರತಕ್ಕೆ 500 ಮಿಲಿಯನ್ ಡಾಲರ್ ಆರ್ಥಿಕ ನೆರವು
ಕೊರೊನಾ ನಿರ್ವಹಣೆ ಸಂಬಂಧ ವಿಶ್ವ ಬ್ಯಾಂಕ್ ಭಾರತದ ನೆರವಿಗೆ ಬಂದಿದ್ದು, 500 ಮಿಲಿಯನ್ ಡಾಲರ್ ಹಣಕಾಸು ನೆರವು ನೀಡಲು ಅನುಮೋದನೆ ನೀಡಿದೆ. ಭಾರತದಲ್ಲಿ ಸಾಂಕ್ರಮಿಕ ರೋಗದ ನಿರ್ವಹಣೆಗಾಗಿ, ಹವಾಮಾನ ಬದಲಾವಣೆ ಮತ್ತು ವಿಪತ್ತು ಆಘಾತಗಳನ್ನು ಎದುರಿಸಲು ನೆರವಾಗಲಿದೆ ಅಂತ ವಿಶ್ವಬ್ಯಾಂಕ್ ಹೇಳಿದೆ. ಇದಲ್ಲದೆ, ದೊಡ್ಡಮಟ್ಟದಲ್ಲಿ ಉದ್ಯೋಗಿಗಳನ್ನು ಬೆಂಬಲಿಸುವುದಕ್ಕಾಗಿ ಈ ಹಣವನ್ನ ವಿನಿಯೋಗಿಸಲು ಸಲಹೆ ನೀಡಿದೆ.

7. ಎಮಿಲಿಯೊ ವಿಶ್ವದ ಅತ್ಯಂತ ಹಿರಿಯ ಅಜ್ಜ
ವಿಶ್ವದ ಹಿರಿಯ ವ್ಯಕ್ತಿ ಎನ್ನುವ ಕೀರ್ತಿಗೆ ಪೋರ್ಟೊ ರಿಕೊದ ಎಮಿಲಿಯೊ ಫ್ಲಾರಸ್‌ ಮಾರ್ಕ್ವಝ್‌ ಪಾತ್ರರಾಗಿದ್ದಾರೆ. ಎಮಿಲಿಯೊಗೆ 112 ವರ್ಷ 326 ದಿನಗಳಾಗಿದ್ದು, ಗಿನ್ನಿಸ್‌ ವಿಶ್ವ ದಾಖಲೆ ಬರೆದಿದ್ದಾರೆ. 1908ರಲ್ಲಿ ಕೊರೊಲಿನಾದಲ್ಲಿ ಜನಿಸಿರುವ ಎಮಿಲಿಯೊನ್ನ ಗುರುತಿಸಿ ಗಿನ್ನಿಸ್‌ ದಾಖಲೆಯ ಪ್ರಮಾಣ ಪತ್ರ ನೀಡಲಾಗಿದೆ. ಬಹುವರ್ಷಗಳ ಕಾಲ ಬದುಕಬೇಕಾದರೆ ಪ್ರೀತಿಸುವುದನ್ನು ಕಲಿಯಬೇಕು. ಇನ್ನೊಬ್ಬರ ಬಗ್ಗೆ ಸಹಾನುಭೂತಿ ಇರಬೇಕು ಅಂತ ಎಮಿಲಿಯೊ ತಮ್ಮ ಜೀವನದ ಗುಟ್ಟನ್ನ ಹೇಳಿದ್ದಾರೆ.

8. ರಜಿನಿ ಪೋಸ್​ಗೆ ಫಿದಾ ಆದ ಅಭಿಮಾನಿಗಳು
ರಜನಿಕಾಂತ್ ಎಲ್ಲಿದ್ರೂ ಅಷ್ಟೇ, ಅಭಿಮಾನಿಗಳು ಮುಗಿಬೀಳೊದು ಸಹಜ. ಸದ್ಯ ಮೆಡಿಕಲ್ ಚೆಕಪ್​​ಗಾಗಿ ಅಮೆರಿಕಾದಲ್ಲಿರುವ ರಜನಿಕಾಂತ್​ಗೆ ಅಲ್ಲೂ ಫ್ಯಾನ್ಸ್​ ಮುತ್ತಿಕೊಳ್ತಿದ್ದಾರೆ. ನೆಚ್ಚಿನ ನಟನೊಂದಿಗೆ ಫೋಟೋ ತೆಗೆಸಿಕೊಳ್ತಿದ್ದಾರೆ. ಪಶ್ಚಿಮ ವರ್ಜೀನಿಯಾದ ಓರ್ವ ಅಭಿಮಾನಿ ಜೊತೆ ತೆಗೆಸಿಕೊಂಡಿರುವ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫೋಟೋಗೆ ರಜನಿಕಾಂತ್ ಕೊಟ್ಟಿರುವ ಪೋಸ್​ನಿಂದಲೇ ಅಭಿಮಾನಿಗಳು ಪುಳಕಗೊಂಡಿದ್ದಾರೆ.

9. ಐಸಿಸಿ ಱಂಕಿಂಗ್ ಅಗ್ರ ಸ್ಥಾನಕ್ಕೇರಿದ ಕೇನ್ ವಿಲಿಯಮ್ಸನ್
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವಿಜೇತ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಐಸಿಸಿ ಟೆಸ್ಟ್ ಱಂಕಿಂಗ್ ನಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 4ನೇ ಸ್ಥಾನದಲ್ಲಿದ್ರೆ, ಆಸ್ಟ್ರೇಲಿಯಾದ ಮಾರ್ನಸ್ ಲಾಬುಷೇನ್ 3ನೇ ಸ್ಥಾನದಲ್ಲಿದ್ದಾರೆ. ಡಬ್ಲ್ಯುಟಿಸಿ ಫೈನಲ್‌ನಲ್ಲಿ ಕೇನ್ ವಿಲಿಯಮ್ಸನ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದರು. ಇನ್ನು ಐಸಿಸಿ ಪಟ್ಟಿಯಲ್ಲಿ ಹತ್ತು ಪಾಯಿಂಟ್‌ಗಳ ಕುಸಿತದಿಂದ ಆಸ್ಟ್ರೇಲಿಯಾದ ಸ್ಟೀವ್‌ ಸ್ಮಿತ್ 2ನೇ ಸ್ಥಾನದಲ್ಲಿದ್ದಾರೆ.

10. ಅಭಿಮನ್ಯು ಮಿಶ್ರಾ ಕಿರಿಯ ಗ್ರ್ಯಾಂಡ್ ಮಾಸ್ಟರ್
ಮೂರ್ತಿ ಚಿಕ್ಕದಾದ್ರೂ ಕೀರ್ತಿ ದೊಡ್ಡದು ಅನ್ನೋ ಮಾತಿಗೆ ತಕ್ಕಂತೆ ಸಾಧನೆಯೊಂದು ನಡೆದಿದೆ. 12 ವರ್ಷದ ಅಭಿಮನ್ಯು ಮಿಶ್ರಾ ಚೆಸ್ ಇತಿಹಾಸದಲ್ಲಿ ಕಿರಿಯ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರ ಹೊಮ್ಮಿದ್ದಾರೆ. ತಮ್ಮ ಕಡಿಮೆ ವೃತ್ತಿ ಜೀವನದಲ್ಲಿ ಅತಿದೊಡ್ಡ ಸಾಧನೆ ಮಾಡಿದ್ದಾರೆ. 15 ವರ್ಷದ ಭಾರತೀಯ ಜಿಎಂ ಲಿಯಾನ್ ಲ್ಯೂಕ್ ಮೆಂಡೂನ್ಕಾ ಅನ್ನು ಸೋಲಿಸುವ ಮೂಲಕ ಚೆಸ್ ಇತಿಹಾಸದಲ್ಲೆ ದಾಖಲೆ ಸೃಷ್ಟಿಸಿದ್ದಾರೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link