ನಾಯಕನಾಗಿ ಧೋನಿಗೆ ದಕ್ಕಿದ ಯಶಸ್ಸು, ವಿರಾಟ್​​ಗೆ ಯಾಕೆ ದಕ್ಕಲಿಲ್ಲ..?

ನಾಯಕನಾಗಿ ಧೋನಿಗೆ ದಕ್ಕಿದ ಯಶಸ್ಸು, ವಿರಾಟ್​​ಗೆ ಯಾಕೆ ದಕ್ಕಲಿಲ್ಲ..?

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಸೋಲಿನೊಂದಿಗೆ, ವಿರಾಟ್​ ಕೊಹ್ಲಿ ನಾಯಕತ್ವದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ನಾಯಕತ್ವದ ಬದಲಾವಣೆ ಕೂಗು ಒಂದೆಡೆಯಾದ್ರೆ, ವಿರಾಟ್​​ ಕೊಹ್ಲಿ ಯಾವೆಲ್ಲಾ ನಿರ್ಧಾರಗಳಲ್ಲಿ ಎಡವುತ್ತಿದ್ದಾರೆ ಅನ್ನೋದು ಇನ್ನೊಂದೆಡೆ. ಅಷ್ಟಕ್ಕೂ ನಾಯಕನಾಗಿ ಧೋನಿಗೆ ದಕ್ಕಿದ ಯಶಸ್ಸು, ವಿರಾಟ್​​ಗೆ ಯಾಕೆ ದಕ್ಕಲಿಲ್ಲ..? ಕೊಹ್ಲಿ ಕ್ಯಾಪ್ಟೆನ್ಸಿ ಶೈಲಿ ಭಾರತಕ್ಕೆ ಹಿನ್ನಡೆಯಾಗಿದ್ಯಾ..?

ವಿಶ್ವ ಟೆಸ್ಟ್​​ ಚಾಂಪಿಯನ್​ಶಿಪ್​ ಫೈನಲ್​ ಗೆಲುವಿನೊಂದಿಗೆ ನ್ಯೂಜಿಲೆಂಡ್​ ತಂಡ, ಬಹುಕಾಲದ ಪದಕದ ಬರವನ್ನ ನೀಗಿಸಿಕೊಂಡರೆ, ಭಾರತದ ಅಭಿಮಾನಿಗಳ ಪಾಲಿನ ನಿರಾಸೆ ಮುಂದುವರೆಯಿತು. 2013ರ ಚಾಂಪಿಯನ್ಸ್​ ಟ್ರೋಫಿ ಫೈನಲ್​, ಭಾರತದ ಪಾಲಿನ ಕೊನೆಯ ಐಸಿಸಿ ಟ್ರೋಫಿಯಾಗಿದೆ. ಅದಾದ ಬಳಿಕ ಆಡಿದ ಯಾವ ಐಸಿಸಿ ಟೂರ್ನಿಗಳಲ್ಲೂ, ಪ್ರಶಸ್ತಿ ದಕ್ಕಿಲ್ಲ. ಅದರಲ್ಲೂ ವಿರಾಟ್​ ಕೊಹ್ಲಿ ನಾಯಕತ್ವದಲ್ಲಿ ಆಡಿದ 3 ಐಸಿಸಿ ಟೂರ್ನಿಗಳಲ್ಲೂ ಕೊನೆಯ ಹಂತದಲ್ಲಿ ಭಾರತ ಎಡವಿದೆ.

ಕೊಹ್ಲಿಯ ನಾಯಕತ್ವದ ಶೈಲಿಯೇ ಭಾರತಕ್ಕೆ ಹಿನ್ನಡೆಯಾ..?
ಕ್ಯಾಪ್ಟನ್​ ವಿರಾಟ್​​ಗಿಲ್ವಾ ಆಟಗಾರರ ಮೇಲೆ ನಂಬಿಕೆ..?

2017ರ ಚಾಂಪಿಯನ್ಸ್​​ ಟ್ರೋಫಿ, 2019 ಏಕದಿನ ವಿಶ್ವಕಪ್​.. ಇದೀಗ ಟೆಸ್ಟ್​ ಚಾಂಪಿಯನ್​ಶಿಪ್​..! ಪ್ರಮುಖ ಐಸಿಸಿ ಟ್ರೋಫಿಗಳಲ್ಲಿ ಕೊಹ್ಲಿ ನಾಯಕತ್ವದಲ್ಲಿ ಕಣಕ್ಕಿಳಿದ ಟೀಮ್​ ಇಂಡಿಯಾ, ಕಪ್​ ಇಲ್ಲದೇ ಹಿಂದಿರುಗಿದೆ. ಕೇವಲ ಟೀಮ್​ ಇಂಡಿಯಾ ಮಾತ್ರವಲ್ಲ..! ಕೊಹ್ಲಿ ಮುನ್ನಡೆಸೋ ಆರ್​​ಸಿಬಿಯದ್ದೂ, ಇದೇ ಪಾಡು. ಪ್ರತಿ ಸಲ ಕಪ್​ ನಮ್ದೇ ಎಂದು ಅಭಿಯಾನ ಆರಂಭಿಸಿತ್ತಷ್ಟೇ..! ಈವರೆಗೆ ಚಾಂಪಿಯನ್​ ಪಟ್ಟ ಮಾತ್ರ ದಕ್ಕಿಲ್ಲ….!

ಹೀಗೆ ಮಹತ್ವದ ಟೂರ್ನಿಗಳಲ್ಲಿ ಎಡವುತ್ತಿರೋದು, ಇದೀಗ ಮತ್ತೆ ನಾಯಕತ್ವದ ಬಗೆಗಿನ ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದ ಬಳಿಕವಂತೂ, ಕೊಹ್ಲಿಗೆ ಸಹ ಆಟಗಾರರ ಮೇಲೆ ನಂಬಿಕೆಯೇ ಇಲ್ವಾ ಅನ್ನೋ ಅನುಮಾನವನ್ನ ಮೂಡಿಸಿದೆ. ಹೀಗೆ ಅನುಮಾನ ಹುಟ್ಟುಲು ಕಾರಣವಾಗಿರೋದು, ಕೊಹ್ಲಿ ಆಡಿದ ಈ ಮಾತುಗಳು.

‘ನಮ್ಮ ತಂಡದ ಸಾಮರ್ಥ್ಯ ಹೆಚ್ಚಿಸಲು ಬೇಕಾದ ವಿಷಯಗಳ ಕುರಿತು ಚರ್ಚಿಸುತ್ತೇವೆ. ಸರಿಯಾದ ಮಾರ್ಗದಲ್ಲಿ ನಾವು ಸಾಗುತ್ತೇವೆ. ಇದಕ್ಕಾಗಿ ವರ್ಷಗಟ್ಟಲೆ ಕಾಯುವುದಿಲ್ಲ. ಯಾಕಂದ್ರೆ ಈಗಾಗಲೇ ನಮ್ಮ ಬಳಿ ಯೋಜನೆ ಸಿದ್ದವಾಗಿದೆ. ನಮ್ಮ ವೈಟ್ ಬಾಲ್ ತಂಡದ ಹುಡುಗರು ಬಹಳ ಆತ್ಮವಿಶ್ವಾಸದಿಂದ ಇದ್ದಾರೆ. ಅವರ ಕೌಶಲ್ಯದ ಮೇಲೆ, ಅವರಿಗೆ ವಿಶ್ವಾಸವಿದೆ. ಟೆಸ್ಟ್​ ಕ್ರಿಕೆಟ್​​ನಲ್ಲೂ ಇದು ಆಗಬೇಕು. ನಾವು ಈ ನಿಟ್ಟಿನಲ್ಲಿ ಮರು ಯೋಜನೆ ಸಿದ್ಧಪಡಿಸಬೇಕು. ಮತ್ತು ತಂಡದ ಯಾವ ವಿಭಾಗಕ್ಕೆ ಹೆಚ್ಚು ಒತ್ತು ನೀಡಬೇಕು. ಸರಿಯಾದ ಆಟಗಾರರನ್ನ ಆಯ್ಕೆ ಮಾಡಬೇಕು’ –ಕೊಹ್ಲಿ. ಭಾರತ ತಂಡದ ನಾಯಕ

ಕೊಹ್ಲಿ ಆಡಿದ ಈ ಮಾತುಗಳೇ, ಇದೀಗ ಚರ್ಚೆಗೆ ಕಾರಣವಾಗಿರೋದು. ಒಂದು ಸೋಲಿಗೆ ತಂಡವನ್ನ ಬದಲಾಯಿಸಬೇಕು ಎಂದುಕೊಳ್ಳುವ ಮನೋಭಾವವೇ, ಇದೀಗ ಭಾರತಕ್ಕೆ ಹಿನ್ನಡೆಯಾಗಿದೆ ಅನ್ನೋದು ವಿಶ್ಲೇಷಕರ ಅಭಿಪ್ರಾಯವಾಗಿದೆ. ಕೊಹ್ಲಿಯ ಈ ಮನೋಭಾವದಿಂದ ಆಟಗಾರರು ಸದಾ ಒತ್ತಡದಲ್ಲಿರ್ತಾರೆ. ಹೀಗಾಗಿ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನವನ್ನ ನೀಡುವಲ್ಲಿ ವಿಫಲರಾಗ್ತಾರೆ ಎಂದು ವಿಶ್ಲೇಷಕ ಆಕಾಶ್​ ಚೋಫ್ರಾ ಅಭಿಪ್ರಾಯಪಟ್ಟಿದ್ದಾರೆ.

‘ಬದಲಾವಣೆ ಒತ್ತಡಕ್ಕೆ ಕಾರಣ’..!

‘ಆದ್ರೆ ವಿರಾಟ್​ ಕೊಹ್ಲಿಯ ನಾಯಕತ್ವದ ತಂಡವನ್ನ ಗಮನಿಸಿ, ಗ್ರೂಪ್​ ಹಂತದಿಂದ ನಾಕೌಟ್​ ಹಂತದವರೆಗೆ ತಂಡದಲ್ಲಿ ಬದಲಾವಣೆಯನ್ನ ಕಡಿಮೆ ಪ್ರಮಾಣದಲ್ಲಿ ಮಾಡ್ತಾರೆ. ಆದ್ರೆ ಕ್ವಾರ್ಟರ್​ ಫೈನಲ್​, ಸೆಮಿಫೈನಲ್​ ಅಥವಾ ಫೈನಲ್​ ಹಂತದಲ್ಲಿ ಬದಲಾವಣೆ ಮುಂದಾಗುತ್ತಾರೆ. ಇದು ಆಟಗಾರರಲ್ಲಿ ಉತ್ತಮ ಪ್ರದರ್ಶನವನ್ನ ನೀಡಲೇಬೇಕಾದ ಒತ್ತಡಕ್ಕೆ ಎಡೆ ಮಾಡಿಕೊಡುತ್ತದೆ. ಆದರೆ ಧೋನಿ ಯಾವ ಆಟಗಾರನನ್ನೂ ಅಸುರಕ್ಷಿತವಾಗಿರಲು ಬಿಡುತ್ತಿರಲಿಲ್ಲ’- ಆಕಾಶ್​ ಚೋಪ್ರಾ, ಮಾಜಿ ಕ್ರಿಕೆಟಿಗ

ವಿಶ್ಲೇಷಕರ ಈ ವಾದಕ್ಕೆ ಸಾಕ್ಷಿಗಳೂ ಇವೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರೋಚಿತ ಹೋರಾಟ ನಡೆಸಿದ ಹನುಮ ವಿಹಾರಿ, ಮೊಹಮ್ಮದ್​ ಸಿರಾಜ್​ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​​ನಲ್ಲಿ ಬೆಂಜ್​ಗೆ ಸೀಮಿತವಾದ್ರು. 2 ಪಂದ್ಯಗಳಲ್ಲಿ ವೈಫಲ್ಯ ಕಂಡ ಬೆನ್ನಲ್ಲೇ ಟೆಸ್ಟ್​ ಕ್ರಿಕೆಟ್​​ನಲ್ಲಿ 45.74ರ ಸರಾಸರಿಯಲ್ಲಿ ರನ್​ ಕಲೆ ಹಾಕಿರುವ ಕನ್ನಡಿಗ ಮಯಾಂಕ್​ ಅಗರ್ವಾಲ್​ಗೆ ಗೇಟ್​ಪಾಸ್​ ಸಿಗ್ತು. ಬ್ಯಾಟಿಂಗ್​ ಹಾಗೂ ಬೌಲಿಂಗ್​ ಎರಡರಲ್ಲೂ ನೆರವಾಗಬಲ್ಲ ಶಾರ್ದೂಲ್​ ಠಾಕೂರ್​​ಗೆ ಕೂಡ ಟೆಸ್ಟ್​ ತಂಡದಲ್ಲಿ ಕಡಗಣೆನೆಗೆ ಒಳಗಾಗಿದ್ದಾರೆ. ಹೀಗೆ ಕೊಹ್ಲಿ ಪಂದ್ಯದಿಂದ ಪಂದ್ಯಕ್ಕೆ ತಂಡವನ್ನ ಬದಲಾಯಿಸಿದ್ದಕ್ಕೆ ಸಾಲು- ಸಾಲು ಉದಾಹರಣೆಗಳಿವೆ.

ಆದ್ರೆ, ಧೋನಿಯ ನಾಯಕತ್ವದ ಶೈಲಿ ಸಂಪೂರ್ಣ ವಿಭಿನ್ನ. ಯಾವುದೇ ಆಟಗಾರರು ವೈಫಲ್ಯ ಅನುಭವಿಸಿದ್ರೂ ಆತನಿಗೆ ಮತ್ತೇ ಮತ್ತೆ ಅವಕಾಶವನ್ನ ನೀಡ್ತಿದ್ರು. ಇದರೊಂದಿಗೆ ಆಟಗಾರರಲ್ಲಿ ವಿಶ್ವಾಸ ತುಂಬೋದ್ರೊಂದಿಗೆ ಆಂತಕವಿಲ್ಲದ ಆಟಕ್ಕೆ ಅನುವು ಮಾಡಿಕೊಡ್ತಿದ್ರು. ಇದಕ್ಕೆ ಈಗ ವಿಶ್ವ ಕ್ರಿಕೆಟ್​ ಲೋಕದ ಸ್ಟಾರ್​ ಓಪನರ್​ ಆಗಿರುವ ರೋಹಿತ್​ ಶರ್ಮಾನೇ ಸಾಕ್ಷಿ. ಮಿಡಲ್​ ಆರ್ಡರ್​ ಬ್ಯಾಟ್ಸ್​ಮನ್​ ಅನ್ನ ಓಪನರ್​ ಆಗಿ ಪ್ರಮೋಟ್​ ಮಾಡಿದ್ದಲ್ಲದೇ, ವೈಫಲ್ಯ ಕಂಡು ಅವಕಾಶ ನೀಡಿದ್ದು ಧೋನಿ ಅನ್ನೋದನ್ನ ಮರೆಯುವಂತಿಲ್ಲ.

ಆಟಗಾರರ ಮೇಲೆ ನಂಬಿಕೆ ಇರಿಸಿದ್ದ ಧೋನಿ ನಾಯಕನಾಗಿ ಮೂರು ಮಾದರಿಯಲ್ಲಿ ತಂಡವನ್ನ ನಂಬರ್​ 1 ಪಟ್ಟಕ್ಕೇರಿಸಿದ್ದಲ್ಲದೇ, 3 ಐಸಿಸಿ ಟ್ರೋಫಿ ಜಯಿಸಿದ್ದಾರೆ. ಆದ್ರೆ, ಮುನ್ನಡೆಸಿದ ಎಲ್ಲಾ ಐಸಿಸಿ ಟೂರ್ನಮೆಂಟ್​ನಲ್ಲೂ ಕೊಹ್ಲಿ ಸೋಲುನ್ನ ಕಂಡಿದ್ದಾರೆ. ಮುಂದಾದ್ರೂ ಕೊಹ್ಲಿ ತಮ್ಮ ನಾಯಕತ್ವದ ಶೈಲಿಯಲ್ಲಿ ಬದಲಾವಣೆ ತಂದುಕೊಳ್ತಾರಾ ಕಾದು ನೋಡಬೇಕಿದೆ.

The post ನಾಯಕನಾಗಿ ಧೋನಿಗೆ ದಕ್ಕಿದ ಯಶಸ್ಸು, ವಿರಾಟ್​​ಗೆ ಯಾಕೆ ದಕ್ಕಲಿಲ್ಲ..? appeared first on News First Kannada.

Source: newsfirstlive.com

Source link