ಈ ಜಿಲ್ಲೆಯಲ್ಲಿ ಸೆಲ್ಫಿ ಬ್ಯಾನ್.. ಕ್ಲಿಕ್ಕಿಸಿದ್ರೆ ಬೀಳುತ್ತೆ ಕೇಸ್

ಈ ಜಿಲ್ಲೆಯಲ್ಲಿ ಸೆಲ್ಫಿ ಬ್ಯಾನ್.. ಕ್ಲಿಕ್ಕಿಸಿದ್ರೆ ಬೀಳುತ್ತೆ ಕೇಸ್

ಅದೊಂದು ಕಾಲ ಇತ್ತು. ಕ್ಯಾಮರಾಗೆ ಇನ್ನಿಲ್ಲದ ಮಹತ್ವ. ಫೋಟೋಗ್ರಾಫರ್​​ಗೆ ಇನ್ನಿಲ್ಲದ ಗೌರವ. ಯಾವಾಗ ಕೈಗೆ ಮೊಬೈಲ್ ಬಂದು ಬಿಡ್ತೋ.. ಇಲ್ಲಿ ಎಲ್ಲರು ಫೋಟೋಗ್ರಾಫರ್​ಗಳೇ. ಅದರ ಜೊತೆಗೆ ಈಗ ಇರೋದು ಸೆಲ್ಫಿ ಯುಗ. ಸೆಲ್ಫಿ ಅನ್ನೊದು ಒಂದು ಕ್ರೇಜ್. ಅಲ್ಲದೆ ಅಪಾಯ ಕೂಡ. ಈಗಾಗಲೇ ಹಲವು ಅಪಘಾತಗಳು ಈ ಸೆಲ್ಫಿಯಿಂದ ನಡೆದು ಹೋಗಿದೆ. ಅದಕ್ಕೆ ಇಲ್ಲೊಂದು ಜಿಲ್ಲೆ ಸೆಲ್ಫಿಯನ್ನೆ ಬ್ಯಾನ್ ಮಾಡಿಬಿಟ್ಟಿದೆ. ಅಲ್ಲಿ ಹೋಗಿ ನೀವೇನಾದ್ರೂ ಸೆಲ್ಫಿ ಕ್ಲಿಕ್ಕಿಸಿದ್ರೆ ಅಂದರ್ ಆಗೋದು ಗ್ಯಾರಂಟಿ.

ಹಿಂದಿನ ಕಾಲದಲ್ಲಿ ಕ್ಯಾಮರಾ ಅಂದ್ರೆ ಅದು ಯಾವುದೋ ದೊಡ್ದ ಮಿಷಿನ್ ರೀತಿ ಕಾಣುತ್ತಿತ್ತು. ಅದನ್ನು ಆಪರೇಟ್ ಮಾಡಲು, ಆ ಫೋಟೋಗ್ರಾಫರ್ ಸಕಲಶಾಸ್ತ್ರ ಪರಿಣಿತನಾಗಿರಬೇಕಿತ್ತು. ದಿನ ಕಳೆದಂತೆ, ಟೆಕ್ನಾಲಜಿ ಬೆಳೆದಂತೆ ಕ್ಯಾಮರಾ ಅನ್ನೋದು ಮಕ್ಕಳ ಆಟಿಕೆಯ ರೀತಿ ಆಗಿಬಿಡ್ತು. ಇನ್ನೂ ಮುಂದುವರೆದು.. ಕ್ಯಾಮರಾ ಈಗ ಪ್ರತಿಯೊಬ್ಬರ ಜೇಬಿನಲ್ಲಿ ಬಂದು ಕೂತಿದೆ. ಆಗ ಕ್ಯಾಮರಾಗಳಿಗಿದ್ದ ಮಹತ್ವ ಈಗ ಕಡಿಮೆಯಾಗಿದೆ. ಗಲ್ಲಿ ಗಲ್ಲಿಗೊಬ್ಬ ಫೋಟೋಗ್ರಾಫರ್ ಕಾಣಿಸುತ್ತಾರೆ. ಹೇಗಿದ್ದ ಕಾಲ ಎಲ್ಲಿಗೆ ಬಂತು ನೋಡಿ. ಇದಕ್ಕೆ ಅಲ್ವ ಅನ್ನೋದು ಲೈಫ್ ಸೈಕಲ್ ಅಂತ.

ಕ್ಯಾಮರಾ ಬಳಕೆ ಅನ್ನೋದು ಒಂದು ಕಲೆ. ಕ್ಯಾಮರಾ ಒಳಗೆ ಶಟ್ಟರ್ ಸ್ಪೀಡ್ ಸೆಟ್ ಮಾಡ್ಬೇಕು, ಲೆನ್ಸ್ ಅಪಾರ್ಚರ್ ಸೆಟ್ ಮಾಡ್ಬೇಕು, ಫ್ರೇಂ ಆ್ಯಂಗಲ್ ಜೋಡಿಸಬೇಕು, ಎಲ್ಲದಕ್ಕಿಂತ ಮುಖ್ಯವಾಗಿ ಲೈಟಿಂಗ್. ಆದ್ರೆ ಈಗಿರುವ ಮೊಬೈಲ್ ಕ್ಯಾಮರಾದ ಹಲವು ಬಳೆಕೆದಾರರು.. ಈ ಯಾವುದನ್ನು ಯೋಚಿಸುವುದಿಲ್ಲ. ಅವರಿಗೆ ತಮ್ಮ ಫೋನ್ ಮೆಮೊರಿಗೆ ಆ ಒಂದು ಚಿತ್ರ ಬಂದರೆ ಸಾಕು ಎಷ್ಟೋ ಸಂತೋಷಪಡ್ತಾರೆ. ಈ ಮೊಬೈಲ್ ಕ್ಯಾಮರಾದಲ್ಲೂ ಹಲವು ಸೆಟ್ಟಿಂಗ್ಗಳನ್ನು ಸೆಟ್ ಮಾಡುವ ಕಲೆಗಾರರು ಇದ್ದಾರೆ. ಆದ್ರೆ ಹಲವರಿಗೆ ಇದರ ಅರಿವೂ ಕೂಡ ಇಲ್ಲ. ಮೊಬೈಲ್ ಫೋಟೋಗ್ರಫಿಗೆ ಮತ್ತೊಂದು ಸೇರ್ಪಡೆ ಸೆಲ್ಫಿ ಕ್ರೇಜ್. ಸೆಲ್ಫಿ ಅಂದ್ರೆ ಗೊತ್ತೆ ಇದೆ. ಕ್ಯಾಮರ ಟಾಪ್ ನಲ್ಲಿ ಹಿಡಿದು ಫೋಟೋ ತೆಗೆಯುವವನ ಜೊತೆ ಇಡೀ ಗ್ಯಾಂಗ್ ಒಂದೆ ಫ್ರೇಂನಲ್ಲಿ ಕಾಣಿಸೋದು.. ಅಥವಾ ಇನ್ನೊಬ್ಬರ ಸಹಾಯ ಇಲ್ಲದೆ ಪ್ರೇಕ್ಷಣೀಯ ಸ್ಥಳಕ್ಕೆ ಹೋದಾಗ ಸ್ಥಳದ ಜೊತೆ ತಮ್ಮನ್ನು ಕ್ಲಿಕ್ಕಿಸಿಕೊಳ್ಳೋದು. ಇದು ಎಷ್ಟೊ ಮಜವೋ ಅಷ್ಟೆ ಡೇಂಜರ್ ಕೂಡ ಹೌದು.

ಸೆಲ್ಫಿ ಕ್ಲಿಕ್ಕಿಸಲು ಹೋಗಿ ನಡೆದು ಹೋಗಿದೆ ಹಲವು ಅಪಘಾತ
ಪ್ರಾಣ ಹೋಗಿದ್ರೂ , ಡೆಂಜರಸ್​ ಸೆಲ್ಫಿ ಕ್ರೇಜ್ ಕಡಿಮೆ ಆಗಿಲ್ಲ

ಈ ಸೆಲ್ಫಿಯಿಂದ ಆದ ಅನಾಹುತಗಳು ಒಂದೆರಡಲ್ಲ. ನೋಡ್ತಾ ಹೋಗ್ತಾ ಇದ್ರೆ ಸಿಕ್ತಾನೆ ಇರ್ತಾವೆ. ಸೋಷಿಯಲ್ ಮೀಡಿಯಾದಲ್ಲಿ ಜನರ ಮೆಚ್ಚುಗೆ ಗಳಿಸಲು ವಿವಿಧ ಸ್ಟಂಟ್ಸ್ ಮಾಡುವ ಸೆಲ್ಫಿ ಪ್ರಿಯರು ಈ ರೀತಿ ಅನಾಹುತಕ್ಕೆ ಒಳಗಾಗುತ್ತಾರೆ. ಎತ್ತರದ ಗುಡ್ಡದ ಮೇಲೆ ನಿಂತು ಸೆಲ್ಫಿ ತೆಗೆಯೋದು, ಬರುತಿರುವ ಟ್ರೈನ್​ಗೆ ಅಡ್ಡ ನಿಂತು ಸೆಲ್ಫಿಗೆ ಪೋಸ್ ಕೊಡೋದು, ವನ್ಯ ಜೀವಿಗಳ ಬಳಿ ನಿಂತು ಕ್ಯಾಮರಾ ಹಿಡಿದು ತಾನೊಬ್ಬನೆ ಈ ಸಾಧನೆ ಮಾಡಿರುವುದು ಎಂದು ಕೊಚ್ಚಿಕೊಳ್ಳಲು ಹೋಗಿ ಪ್ರಾಣವನ್ನೆ ಕಳೆದುಕೊಂಡಿದ್ದಾರೆ.

ಸೆಲ್ಫಿ ಅಪಘಾತಕ್ಕೀಡಾದವ್ರಲ್ಲಿ ಭಾರತೀಯರಿಗೆ ಮೊದಲ ಸ್ಥಾನ
ಪ್ರಾಣ ತೆಗಿಯೋ ಸೆಲ್ಫಿ ಬೇಡವೇ ಬೇಡ ಅಂತಿದೆ ಇಲ್ಲೊಂದು ಜಿಲ್ಲೆ

ಸೆಲ್ಫಿ ಮಾಡಿರುವ ಅನಾಹುತಗಳು ದೇಶದಲ್ಲಿ ಸರ್ವೇ ಸಾಮಾನ್ಯವಾಗಿ ಹೋಗಿದೆ. ಇವು ಅಪಾಯಕಾರಿ ಎನಿಸಿದರೂ ಹುಂಬ ಧೈರ್ಯದಲ್ಲಿ ಜನರು ಸೆಲ್ಫಿ ಗೀಳಿಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾರೆ. ಸೆಲ್ಫಿ ತೆಗೆದುಕೊಳ್ಳುವಾಗ ಸಾವನ್ನಪ್ಪುವವರು ಜಗತ್ತಿನೆಲ್ಲೆಡೆ ಕಾಣಸಿಗುತ್ತಾರಾದರೂ ಭಾರತದಲ್ಲೇ ಇದು ಹೆಚ್ಚು. ಭಾರತ ಬಿಟ್ಟರೆ ರಷ್ಯಾ, ಅಮೆರಿಕ, ಪಾಕಿಸ್ತಾನ ದೇಶಗಳು ನಂತರದ ಸ್ಥಾನದಲ್ಲಿವೆ. ಪ್ರವಾಸಕ್ಕೆ ಹೋಗುವ ಜನರೇ ಹೆಚ್ಚಾಗಿ ಈ ರೀತಿ ಸೆಲ್ಫೀ ಹುಚ್ಚಿಗೆ ಜೀವವನ್ನೇ ಕಳೆದುಕೊಳ್ತಾರೆ. ಈ ರೀತಿ ಹಲವು ಉದಾಹರಣೆಗಳು ಕಣ್ಣ ಮುಂದಿದ್ರೂ , ಈ ಸೆಲ್ಫಿಯ ಹುಚ್ಚು ಚಟ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಅದಕ್ಕೆ ಇಲ್ಲೊಂದು ಜಿಲ್ಲೆ ಸೆಲ್ಫಿಯಿಂದ ಆಗೋ ರಿಸ್ಕ್ ಬೇಡವೇ ಬೇಡ ಅಂತಿದೆ. ದೇಶದಲ್ಲೆ ಸೆಲ್ಫಿ ಬ್ಯಾನ್ ಮಾಡಿದ ಮೊದಲ ಜಿಲ್ಲೆ ಆಗಿ ಈ ಒಂದು ಜಿಲ್ಲೆ ಎಲ್ಲರ ಗಮನ ಸೆಳೆದಿದೆ.

ಗುಜರಾತ್​ನ ದಾಂಗ್ ಜಿಲ್ಲೆಯಲ್ಲಿ ಇನ್ಮುಂದೆ ಸೆಲ್ಫಿ ಬ್ಯಾನ್
ನಿಯಮ ಉಲ್ಲಂಘನೆ ಮಾಡಿದ್ರೆ ಕ್ರಿಮಿನಲ್ ಅಪರಾಧ

ಗುಜರಾತ್​​ನ ದಾಂಗ್ ಜಿಲ್ಲೆಯ ಸಾಪುತರ ಹಿಲ್ ಸ್ಟೇಷನ್ ಹಾಗೂ ದಾನ್ ಹಿಲ್ ಸ್ಟಷನ್​ನಲ್ಲಿ ಜರ್ನಿ ಮಾಡ್ತಾ ಇದ್ರೆ ನಿಮ್ಮನ್ನು ನೀವೇ ಮರೆತುಬಿಡ್ತೀರ. ಇನ್ನೊಂದೆಡೆ ಪಂಪ ಸರೋವರ, ಅಂಜನಿ ವಾಟರ್ ಫಾಲ್ಸ್.. ಎಲ್ಲವೂ ಕೂಡಿಸಿ ನೋಡಿದರೆ ಭೂಮಿಯ ಮೇಲಿನ ಸ್ವರ್ಗ ಅನ್ನಿಸುತ್ತೆ. ಅಷ್ಟು ಬ್ಯೂಟಿಫುಲ್ ಈ ದಾಂಗ್ ಜಿಲ್ಲೆ. ಇನ್ನು ಈ ಜಿಲ್ಲೆಯ ಟ್ರೈಬಲ್ ಕಲ್ಚರ್ ಹಾಗೂ ಇಲ್ಲಿನ ಊಟೋಪಚಾರದ ಮೂಲಕ ದೇಶ ವಿದೇಶದ ಪ್ರವಾಸಿಗರನ್ನ ಈ ಜಿಲ್ಲೆ ಆಕರ್ಷಿಸುತ್ತದೆ. ಇದಷ್ಟೆ ಅಲ್ಲ ಇನ್ನು ಹಲವು ಪ್ರೇಕ್ಷಣೀಯ ಸ್ಥಳಗಳು ಈ ಜಿಲ್ಲೆಯಲ್ಲಿವೆ. ಪ್ರೇಕ್ಷಣೀಯ ಸ್ಥಳ ಅಂದ್ಮೇಲೆ ಇಲ್ಲಿನ ಟೂರಿಸಂ ಕೂಡ ಜೋರಾಗೆ ಇದೆ. ಆದ್ರೆ ಇನ್ಮುಂದೆ ದಾಂಗ್​ಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಸೆಲ್ಫಿ ತೆಗೆಯೋ ಹಾಗಿಲ್ಲ. ಎಲ್ಲಂದರಲ್ಲಿ ನಿಂತು ಸೆಲ್ಫಿ ತೆಗೆದರೆ ಕ್ರಿಮಿನಲ್ ಅಪರಾಧ ದಾಖಲಿಸಲಾಗುತ್ತೆ ಅಂತಿದ್ದಾರೆ ಅಲ್ಲಿನ ಅಧಿಕಾರಿಗಳು.

2018ರಲ್ಲೆ ಸೆಲ್ಫಿ ನಿಷೇಧಿಸಲು ನಡೆದಿತ್ತು ಪ್ಲಾನ್
ಹಲವು ಅಪಘಾತದ ನಂತರ ಎಚ್ಚೆತ್ತ ಅಧಿಕಾರಿಗಳು

ಗುಜರಾತ್​ನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ದಾಂಗ್ ಜಿಲ್ಲೆಯಲ್ಲಿ ಸೆಲ್ಫಿ ಸಂಬಂಧಿತ ದುರಂತಗಳು ನಡೆಯುತ್ತಲೇ ಇವೆ. 2018ರಲ್ಲಿ ಒಬ್ಬ ವ್ಯಕ್ತಿ ಸೆಲ್ಫಿ ತೆಗೆದುಕೊಳ್ಳುವಾಗ ಆಯತಪ್ಪಿ ಕಣಿವೆಗೆ ಉರುಳಿಬಿದ್ದು ಸಾವನ್ನಪ್ಪಿದ್ದ. ಅದೇ ವರ್ಷ ಮತ್ತೊಬ್ಬ ವ್ಯಕ್ತಿ ಗಿರಾ ಜಲಪಾತಕ್ಕೆ ಬಿದ್ದು ಮೃತಪಟ್ಟಿದ್ದ. ಇನ್ನೂ ಅನೇಕ ಸೆಲ್ಫಿ ಸಂಬಂಧಿತ ಸಾವುಗಳು ಬೆಳಕಿಗೆ ಬಂದಿವೆ. ಈ ಕಾರಣ, 2018ರಲ್ಲೆ ಕೆಲವು ಪ್ರೇಕ್ಷಣೀಯ ಸ್ಥಳಗಳಲ್ಲಿ ಸೆಲ್ಫಿ ಬ್ಯಾನ್ ಮಾಡಿ ಹಲವು ನೋಟೀಸ್ ಬೋರ್ಡ್ ಗಳನ್ನು ಹಾಕಿದ್ರೂ. ಆದ್ರೆ ಕೋವಿಡ್​ನಿಂದ ಎಲ್ಲವೂ ಸ್ಥಬ್ದವಾಗಿದ್ದ ಕಾರಣ, ಹಲವು ನಿಯಮಗಳಿಗೆ ಬ್ರೇಕ್ ಬಿದ್ದಿತ್ತು. ಇದೀಗ ದಾಂಗ್ ಜಿಲ್ಲಾಡಳಿತ ಸೆಲ್ಫಿ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಕೆಲವೇ ಕೆಲವು ಸ್ಥಳದಲ್ಲಿದ್ದ ಈ ನಿಯಮ ಇದೀಗ, ಜಿಲ್ಲೆಯ ಎಲ್ಲ ಪ್ರೇಕ್ಷಣೀಯ ಸ್ಥಳಗಳಿಗೂ ವಿಸ್ತರಿಸಿದ್ದು, ಸೆಲ್ಫಿಗೆ ನಿಷೇಧ ಹೇರಿದೆ.

ಲಾಕ್ ಡೌನ್ ಸಡಿಲಿಕೆ ನಂತರ ಟೂರಿಸಂ ಹೆಚ್ಚಾಗುವ ಸಾಧ್ಯತೆ
ದಾಂಗ್ ಜಿಲ್ಲೆಗೆ ಹರಿದು ಬರಲಿದೆ ಪ್ರವಾಸಿಗರ ದಂಡು

ದಾಂಗ್ ಜಿಲ್ಲೆ ಮುಂಚೆಯಿಂದಲೂ ಹೆಚ್ಚಾಗಿ ಟೂರಿಸ್ಟ್ ತಾಣವಾಗಿತ್ತು. ಇಲ್ಲಿ ವರ್ಷವಿಡೀ ಜನರು ಭೇಟಿ ಕೊಡ್ತಾನೆ ಇರ್ತಾರೆ. ಕಳೆದ ಎರಡು ಮೂರು ವರ್ಷಗಳಿಂದಲೂ ಇಲ್ಲಿನ ಹಲವು ತಾಣಗಳಲ್ಲಿ ಸೆಲ್ಫಿ ನಿಷೇಧ ಸೇರಿದಂತೆ ವಿವಿಧ ರೀತಿಯ ನಿರ್ಬಂಧಗಳನ್ನ ಹೇರಲಾಗಿದೆ. ಆದ್ರೆ ಈಗ ಕೋವಿಡ್ ಎರಡನೇ ಅಲೆ ಕಡಿಮೆ ಆಗಿ ಎಲ್ಲಡೆ ಪ್ರವಾಸಿಗರೂ ನುಗ್ಗಿ ಬರುತ್ತಿದ್ದಾರೆ. ಅದರಂತೆ ದಾಂಗ್ ಜಿಲ್ಲೆಯಲ್ಲೂ ಈಗಾಗಲೇ ಹಲವು ಬುಕ್ಕಿಂಗ್ಸ್ ಆಗಿದ್ದು. ಇನ್ನು ಕೆಲವೇ ವಾರಗಳಲ್ಲಿ ಪ್ರವಾಸಿಗರ ದಂಡು ದಾಂಗ್​ಗೆ ಬರಲಿದೆ ಎಂದು ಅಲ್ಲಿನ ಅಧಿಕಾರಿಗಳು ಹೆಚ್ಚಿನ ಎಚ್ಚರಿಕೆಗಳನ್ನು ಕೈಗೆತ್ತಿಕೊಳ್ತಾ ಇದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿ ಸೆಲ್ಫಿ ನಿಷೇಧ ಸೇರಿದಂತೆ ಹಲವು ನಿರ್ಬಂಧಗಳನ್ನ ಜಾರಿಗೆ ತರ್ತಾ ಇದ್ದಾರೆ.

ಈಗ ಕೋವಿಡ್ ಎರಡನೇ ಅಲೆ ಕಡಿಮೆಯಾಗಿ ಅನ್​ಲಾಕ್ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ದಾಂಗ್ ಜಿಲ್ಲೆಗೆ ಪ್ರವಾಸಕ್ಕೆ ಬರುವ ಜನರ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಹಲವು ನಿರ್ಬಂಧಗಳನ್ನ ಮತ್ತಷ್ಟು ಕಾಲ ಮುಂದುವರಿಸಲಾಗಿದೆ. ಈ ನಿರ್ಬಂಧಗಳ ಅನ್ವಯ ದಾಂಗ್ ಜಿಲ್ಲೆಯಲ್ಲಿ ಸೆಲ್ಫಿ ತೆಗೆದುಕೊಳ್ಳುವುದನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಿ ಪ್ರಕರಣ ದಾಖಲಿಸಲಾಗುತ್ತದೆ.

– ಅಧಿಕಾರಿಗಳು , ದಾಂಗ್ ಜಿಲ್ಲಾಡಳಿತ, ಗುಜರಾತ್

ಇದು ಅಚ್ಚರಿಯಾದರೂ ಸತ್ಯ. ಹೀಗೊಂದು ನಿರ್ಧಾರ ತೆಗೆದುಕೊಳ್ಳೋದು ದಾಂಗ್ ಅಧಿಕಾರಿಗಳಿಗೆ ಅನಿವಾರ್ಯವಾಗಿತ್ತು. ಎಲ್ಲ ಸಂಕಷ್ಟಗಳ ನಡುವೆ ಪ್ರದರ್ಶನಕ್ಕಾಗಿ ಸೆಲ್ಫಿ ತೆಗೆದುಕೊಂಡು ಅನಾಹುತ ಮಾಡಿಕೊಳ್ಳುವವರು ನಮ್ಮ ಜಿಲ್ಲೆಯಲ್ಲಿ ಬರೋದೆ ಬೇಡ ಎನ್ನುವಂತೆ ಈ ಒಂದು ವಿಶೇಷ ನಿರ್ಧಾರವನ್ನು ಜಾರಿಗೊಳಿಸಿದೆ. ಈಗಾಗಲೇ ಹಲವು ಪ್ರೇಕ್ಷಣೀಯ ಸ್ಥಳದಲ್ಲಿ ಈ ಕುರಿತು ಸೂಚನಾ ಫಲಕಗಳನ್ನು ಹಾಕಲಾಗಿದೆ. ಈ ಸೆಲ್ಫಿ ಬ್ಯಾನ್ ನಿರ್ಧಾರ ಇನ್ನೂ ಎಲ್ಲೆಲ್ಲಿ ಜಾರಿ ಆಗುತ್ತೊ ಗೊತ್ತಿಲ್ಲ. ಆದ್ರೆ ಹೀಗೆ ಸೆಲ್ಫಿಯಿಂದ ಆಗುತ್ತಿರುವ ಅನಾಹುತಗಳು ಹೆಚ್ಚಾಗ್ತಾ ಇದ್ರೆ ಇದನ್ನು ದೇಶದ ಎಲ್ಲೆಡೆ ಪಾಲಿಸಬಹುದೇನೋ.

ಸಾಮಾನ್ಯವಾಗಿ ಎಲ್ಲರಲ್ಲೂ ಸೆಲ್ಫಿ ಕ್ಲಿಕ್ಕಿಸುವ ಹುಚ್ಚು ಈ ಕಾಲದಲ್ಲಿ ಸರ್ವೇ ಸಾಮಾನ್ಯ. ಆದರೆ ಗುಜರಾತ್​ನ ದಾಂಗ್ ಜಿಲ್ಲೆಯಲ್ಲಿ ಸೆಲ್ಫಿ ಕ್ಲಿಕ್ ಮಾಡುವುದು ಅಪರಾಧವಾಗಿ ಹೋಗಿದೆ. ಇನ್ನಾದರು ಸೆಲ್ಫಿ ಚಟಕ್ಕೆ ಬಿದ್ದು ಪ್ರಾಣ ಕಳೆದುಕೊಳ್ಳದಿರಿ.

The post ಈ ಜಿಲ್ಲೆಯಲ್ಲಿ ಸೆಲ್ಫಿ ಬ್ಯಾನ್.. ಕ್ಲಿಕ್ಕಿಸಿದ್ರೆ ಬೀಳುತ್ತೆ ಕೇಸ್ appeared first on News First Kannada.

Source: newsfirstlive.com

Source link