ಕಡ್ಡಾಯ ಗ್ರಾಮೀಣ ಸೇವೆ: 180 ವೈದ್ಯರಿಗೆ 2 ವಾರ ರಿಲೀಫ್ ಕೊಟ್ಟ ಹೈಕೋರ್ಟ್

ಕಡ್ಡಾಯ ಗ್ರಾಮೀಣ ಸೇವೆ: 180 ವೈದ್ಯರಿಗೆ 2 ವಾರ ರಿಲೀಫ್ ಕೊಟ್ಟ ಹೈಕೋರ್ಟ್

ಬೆಂಗಳೂರು: ನೂತನ ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದನ್ನ ಪ್ರಶ್ನಿಸಿ 180 ವೈದ್ಯರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನ ಇಂದು ಹೈಕೋರ್ಟ್​ನ ಏಕಸದಸ್ಯ ಪೀಠ ನಡೆಸಿತು.

ಸರ್ಕಾರದ ಆದೇಶಕ್ಕೆ ನಿರ್ಬಂಧ
ವಿಚಾರಣೆ ನಡೆಸಿದ ಕೋರ್ಟ್​.. ಸರ್ಕಾರದ ಆದೇಶಕ್ಕೆ 2 ವಾರ ಮಧ್ಯಂತರ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ. ಈ ಮೂಲಕ 180 ವೈದ್ಯರಿಗೆ ಕಡ್ಡಾಯ ಗ್ರಾಮೀಣ ಸೇವೆಯಲ್ಲಿ 2 ವಾರ ರಿಲೀಫ್ ನೀಡಿದೆ.

ಸರ್ಕಾರಿ ಸೀಟು ಪಡೆದವರು & 2021ರಲ್ಲಿ ಎಂಬಿಬಿಎಸ್​ ಪೂರೈಸಿದವರಿಗೆ ಗ್ರಾಮೀಣ ಸೇವೆಯನ್ನ ಕಡ್ಡಾಯ ಮಾಡಿ ಸರ್ಕಾರ ಆದೇಶಿಸಿತ್ತು. ಜೊತೆಗೆ ಆದೇಶದಲ್ಲಿ ಕಡ್ಡಾಯ ಗ್ರಾಮೀಣ ಸೇವೆಗೆ ಆನ್‌ಲೈನ್‌ ರಿಜಿಸ್ಟರ್ ಮಾಡಿಕೊಳ್ಳಲು ಹೇಳಿತ್ತು. ಆದರೆ ಇದೀಗ ಕೋರ್ಟ್​.. 180 ನೂತನ ವೈದ್ಯರಿಗೆ ರಿಜಿಸ್ಟರ್ ಮಾಡಲು 2 ವಾರಗಳ ಕಾಲ ರಾಜ್ಯ ಸರ್ಕಾರ ಒತ್ತಾಯಿಸಬಾರದು. ಜೊತೆಗೆ ಸರ್ಕಾರ 2 ವಾರ ಪ್ರಕರಣದ ಬಗ್ಗೆ ತ್ವರಿತ ನಿರ್ಧಾರ ತೆಗೆದುಕೊಳ್ಳಬಾರದು ಎಂದು ನ್ಯಾ.ಸಚಿನ್‌ ಶಂಕರ್‌ ಮಗದುಮ್‌ ಮಧ್ಯಂತರ ಆದೇಶ ಹೊರಡಿಸಿದ್ದಾರೆ.

180 ಅರ್ಜಿದಾರರಿಗೆ ಮಾತ್ರ ಅನ್ವಯ
ಸರ್ಕಾರದ ಎಜಿ ವಾದ ಪೂರ್ಣಗೊಳಿಸಬೇಕು. ಹಾಗೂ ಹೈಕೋರ್ಟ್ ಅರ್ಜಿದಾರರ ಪರ ವಾದ ಆಲಿಸಬೇಕಿದೆ. ಈ ನಡುವೆ ಸರ್ಕಾರ ಕೇವಲ 2 ವಾರಗಳ ಅವಧಿಗೆ ಅನುಬಂಧ -ಎ ಪ್ರಕಾರ ಆಕ್ಷೇಪಾರ್ಹ ಅಧಿಸೂಚನೆ ಅನುಸರಿಸಿ ತ್ವರಿತ ನಿರ್ಧಾರ ತೆಗೆದುಕೊಳ್ಳಬಾರದು. ಇನ್ನೂ ಈ‌ ಆದೇಶ 180 ಅರ್ಜಿದಾರರಿಗೆ ಮಾತ್ರ ಅನ್ವಯ. ಉಳಿದವರಿಗೆ ಅನ್ವಯ ಆಗಲ್ಲ ಎಂದು ಸಹ ಹೈಕೋರ್ಟ್ ಸ್ಪಷ್ಟನೆ ನೀಡಿದೆ.

ಆದರೂ, ಅನುಬಂಧ-ಎ ಪ್ರಕಾರ ಅಧಿಸೂಚನೆಯನ್ನು ಅನುಷ್ಠಾನಗೊಳಿಸಲು ಪ್ರತಿವಾದಿ-ರಾಜ್ಯ ಸರ್ಕಾರ ಮುಕ್ತವಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಜೂನ್ 8 ರಂದು ಆದೇಶಿಸಿತ್ತು. ಕಡ್ಡಾಯ ಗ್ರಾಮೀಣ ಸೇವೆ ಎಂಬುದು ಕೆಲ ನಿಬಂಧನೆಗಳ ಅಡಿ ರೂಪಿತ ಪರಿಕಲ್ಪನೆಯಾಗಿದೆ. ಕರ್ನಾಟಕ ವೈದ್ಯಕೀಯ ಪದವಿ ಪೂರೈಸಿದ ಅಭ್ಯರ್ಥಿಗಳಿಂದ ಕಡ್ಡಾಯ ಸೇವಾ ಕಾಯಿದೆ-2012 ಅಡಿ ರೂಪಿಸಲಾಗಿದೆ. ಹೈಕೋರ್ಟ್ ಈ ಕಾಯಿದೆಯ ಸಿಂಧುತ್ವವನ್ನು ಎತ್ತಿ ಹಿಡಿದಿದೆ.

ವಿಚಾರಣೆ ಮುಂದೂಡಿಕೆ
ಈ ಕಾಯಿದೆಯು 2015ರ ಜುಲೈ 24ರಂದು ಜಾರಿಗೆ ಬಂದಿದೆ. ಅದಕ್ಕೂ ಮೊದಲು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆದವರಿಗೆ ಅನ್ವಯಿಸಲ್ಲ ಎಂದಿತ್ತು. ಇದಲ್ಲದೇ, 2019ರಲ್ಲಿ ಎನ್‌ಎಂಸಿಕಾಯಿದೆ ಜಾರಿಗೆ ಬಂದಿದೆ. (NMC: ರಾಷ್ಟ್ರೀಯ ವೈದ್ಯಕೀಯ ಆಯೋಗದ ಕಾಯಿದೆ) ಇದರ ಪರಿಣಾಮವಾಗಿ ವೈದ್ಯಕೀಯ ಶಿಕ್ಷಣ ನಿಯಂತ್ರಣವನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಎನ್‌ಎಂಸಿ ಕಾಯಿದೆ ಜಾರಿಯಿಂದ ರಾಜ್ಯ ಸರ್ಕಾರಗಳು ತಮ್ಮ ಹಕ್ಕು ಕಳೆದುಕೊಂಡಿವೆ. ವೈದ್ಯಕೀಯ ಕಾಲೇಜುಗಳ ಪ್ರವೇಶ ನಿಯಂತ್ರಿಸುವ ಹಕ್ಕನ್ನ ಕಳೆದುಕೊಂಡಿವೆ. ಹೀಗಾಗಿ ಜೂ.6 ರ ಸರ್ಕಾರ ಹೊರಡಿಸಿದ ಅಧಿಸೂಚನೆ 2012ರ ನಿಬಂಧನೆಗಳಿಗೆ ಅನುಸಾರವಾಗಿದೆ. ಇದಕ್ಕೆ ಕಾನೂನಿನಲ್ಲಿ ಅದಕ್ಕೆ ಅಸ್ತಿತ್ವವಿಲ್ಲ ಎಂದು ಅರ್ಜಿದಾರ ವಾದವಾಗಿತ್ತು. ವಾದ ಆಲಿಸಿದ ಪೀಠ ಅರ್ಜಿ ವಿಚಾರಣೆಯನ್ನ ಮುಂದೂಡಿಕೆ ಮಾಡಿತು.

The post ಕಡ್ಡಾಯ ಗ್ರಾಮೀಣ ಸೇವೆ: 180 ವೈದ್ಯರಿಗೆ 2 ವಾರ ರಿಲೀಫ್ ಕೊಟ್ಟ ಹೈಕೋರ್ಟ್ appeared first on News First Kannada.

Source: newsfirstlive.com

Source link