ಕೊರೊನಾ ವಿರುದ್ಧದ ಹೋರಾಟ – ದೇಶದ ಗಮನ ಸೆಳೆಯಿತು ದಕ್ಷಿಣ ಕನ್ನಡದ ಗ್ರಾಮ

ಮಂಗಳೂರು: ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಕೋವಿಡ್ ಮಹಾಮಾರಿಗೆ ಕಡಿವಾಣ ಹಾಕಲು ಸರ್ಕಾರ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ, ಮಾರ್ಗಸೂಚಿಗಳನ್ನು ಹೊರಡಿಸುತ್ತಿದೆ. ಆದರೆ ಕೋವಿಡ್‍ನನ್ನು ನಿಯಂತ್ರಿಸಬೇಕಾದ ಪ್ರಮುಖ ಜವಾಬ್ದಾರಿ ಇರುವುದು ತಳಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯತ್‍ಗಳದ್ದು. ಈ ನಿಟ್ಟಿನಲ್ಲಿ ಬೆಸ್ಟ್ ಪ್ರಾಕ್ಟಿಸ್ ಮೂಲಕ ಕೋವಿಡ್ -19 ಎಂಬ ಮಹಾಕಂಟಕವನ್ನು ಎದುರಿಸಿದ ಕರ್ನಾಟಕದ ಮೂರು ಗ್ರಾಮ ಪಂಚಾಯತ್‍ಗಳು ರಾಷ್ಟ್ರದ ಗಮನಸೆಳೆದಿವೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ್ ಒಂದು ಕೂಡ ಸೇರಿದೆ.

ಕೋವಿಡ್‍ಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಸಾಥ್ ನೀಡಬೇಕಾದವರು ಜನತೆಯ ಜೊತೆಗೆ ಗ್ರಾಮ ಪಂಚಾಯತ್‍ಗಳು. ದೇಶದಲ್ಲಿ ಕೊರೋನಾಗೆ ನಿಯಂತ್ರಣ ಹೇರುವಲ್ಲಿ ಗ್ರಾಮ ಪಂಚಾಯತ್‍ಗಳು ಪ್ರಮುಖ ಪಾತ್ರ ವಹಿಸಬೇಕೆಂದು ಸರ್ಕಾರ ಮೊದಲೇ ಸೂಚನೆ ನೀಡಿತ್ತು. ಅದರಂತೆ ಪಂಚಾಯತ್‍ಗಳ ಮೂಲಕ ಆಗಿರುವ ಕೆಲಸಗಳ ಬಗ್ಗೆ ಪಂಚಾಯತ್ ರಾಜ್ ಇಲಾಖೆಯು ದೇಶದ ಎಲ್ಲಾ ರಾಜ್ಯಗಳಲ್ಲಿ ಸರ್ವೇ ಮಾಡಿದೆ. ಸಮೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಾಳೆಪುಣಿ ಗ್ರಾಮ ಪಂಚಾಯತ್ ಕೂಡ ಸೇರಿದೆ. ಇದನ್ನೂ ಓದಿ: ದಕ್ಷಿಣ ಕನ್ನಡದಲ್ಲಿ ಮತ್ತಷ್ಟು ಅನ್‍ಲಾಕ್- ವೀಕೆಂಡ್ ಕರ್ಫ್ಯೂ ಮುಂದುವರಿಕೆ

ಕೋವಿಡ್ ಕಷ್ಟಕಾಲದಲ್ಲಿ ಈ ಪಂಚಾಯತ್‍ಗಳು ಮಾಡಿರುವ ಸಕಾಲಿಕ ಕಾರ್ಯಗಳಿಂದಾಗಿ ಮನ್ನಣೆಗೆ ಪಾತ್ರವಾಗಿವೆ. ಕೋವಿಡ್ ನಿರ್ವಹಣೆಗೆ ಪರಿಣಾಮಕಾರಿ ಹೆಜ್ಜೆಯನ್ನಿಟ್ಟ ಬಾಳೆಪುಣಿ ಗ್ರಾಮ ಪಂಚಾಯತು ಈಗ ರಾಷ್ಟಮಟ್ಟದಲ್ಲಿ ಗುರುತಿಸಿಕೊಂಡಿದೆ. ಇದು ಬಂಟ್ವಾಳ ತಾಲೂಕಿಗೆ ಒಳಪಟ್ಟಿದೆ. ಕೈರಂಗಳ ಮತ್ತು ಬಾಳೆಪುಣಿ ಕಂದಾಯ ಗ್ರಾಮಗಳನ್ನು ಒಳಗೊಂಡಿರುವ ಗ್ರಾಮ ಪಂಚಾಯತ್ ಆಡಳಿತ 2020 ರ ಮಾರ್ಚ್ ನಿಂದಲೇ ಕೋವಿಡ್ ಸೋಂಕನ್ನು ಎದುರಿಸುವಲ್ಲಿ ಪರಿಣಾಮಕಾರಿ ಹೆಜ್ಜೆ ಇಟ್ಟಿತ್ತು. ಸಮಾಜ ಕಾರ್ಯ ಸಂಸ್ಥೆಗಳು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು ಮತ್ತು ಸಮಾನ ಮನಸ್ಕರ ತಂಡ ಪಂಚಾಯತು ಆಡಳಿತದೊಂದಿಗೆ ಕೈಜೋಡಿಸಿತ್ತು. ಆಯುಷ್ ಇಲಾಖೆ, ಮಂಗಳೂರಿನ ಫಾದರ್ ಮುಲ್ಲರ್ ಹೋಮಿಯೋಪತಿ ಕಾಲೇಜಿನ ಬೆಂಬಲವೂ ಇತ್ತು. ಜಾಗೃತಿ ಮೂಡಿಸಿದ ಪಂಚಾಯತು ಮೊದಲಿನಿಂದಲೇ ಮಾಹಿತಿ, ಶಿಕ್ಷಣ ಮತ್ತು ಸಂವಹನಕ್ಕೆ ಒತ್ತು ನೀಡಲಾಗಿತ್ತು. ನಾಲ್ಕು ಕೋವಿಡ್ ತಪಾಸಣಾ ಶಿಬಿರಗಳನ್ನು ಸಂಘಟಿಸುವಲ್ಲಿ ಗ್ರಾಮ ಪಂಚಾಯತ್ ಯಶಸ್ವಿಯಾಗಿತ್ತು.

blank

ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮುಂದಕ್ಕೂ ಕೊರೋನಾಗೆ ಕಡಿವಾಣ ಹಾಕಲು ಸಿದ್ಧತೆಗಳು ನಡೆಯುತ್ತಿವೆ. ಜನಶಿಕ್ಷಣ ಟ್ರಸ್ಟ್ ಬಾಳೆಪುಣಿ ಗ್ರಾಮಪಂಚಾಯತ್ ಮತ್ತು ಫಾದರ್ ಮುಲ್ಲರ್ ಹೋಮಿಯೋಪತಿ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಮುಡಿಪು ನವಚೇತನ ಜೀವನ ಶಿಕ್ಷಣ ಕೇಂದ್ರದಲ್ಲಿ ಕೋವಿಡ್ ಸಮಾಲೋಚನಾ ಕೇಂದ್ರವನ್ನು ಕೂಡಾ ತೆರೆಯಲಾಗಿದೆ. ಇದೆಲ್ಲವನ್ನು ಗಮನಿಸುತ್ತಾ ಬಂದಿರುವ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ’ ಬಾಳೆಪುಣಿ ಗ್ರಾಮ ಪಂಚಾಯತು ಮಾದರಿಯನ್ನು ಗುರುತಿಸಿದೆ. ಅದರಿಂದ ತಂಡಕ್ಕೆ ಆನೆ ಬಲ ಬಂದಂತಾಗಿದೆ. ಇದು ಮುಂದಕ್ಕೂ ಮುಂದುವರಿಯಲಿ ಎನ್ನುವುದು ಗ್ರಾಮಸ್ಥರ ಆಶಯವಾಗಿದೆ.

The post ಕೊರೊನಾ ವಿರುದ್ಧದ ಹೋರಾಟ – ದೇಶದ ಗಮನ ಸೆಳೆಯಿತು ದಕ್ಷಿಣ ಕನ್ನಡದ ಗ್ರಾಮ appeared first on Public TV.

Source: publictv.in

Source link