85 ದೇಶಗಳಲ್ಲಿ ಪತ್ತೆಯಾಯ್ತು ಡೇಂಜರಸ್ ಡೆಲ್ಟಾ ವೇರಿಯಂಟ್: ಮತ್ತೆ ಲಾಕ್​ಡೌನ್ ಆಗ್ತಿರೋ ದೇಶಗಳಿವು..

85 ದೇಶಗಳಲ್ಲಿ ಪತ್ತೆಯಾಯ್ತು ಡೇಂಜರಸ್ ಡೆಲ್ಟಾ ವೇರಿಯಂಟ್: ಮತ್ತೆ ಲಾಕ್​ಡೌನ್ ಆಗ್ತಿರೋ ದೇಶಗಳಿವು..

ಕೋವಿಡ್​ ಕೇಸ್​ಗಳು ಕಡಿಮೆಯಾಗುತ್ತಿವೆ ಅನ್ನೋ ಸಮಾಧಾನದ ಹಿಂದೆಯೇ ವಿಶ್ವ ಆರೋಗ್ಯ ಸಂಸ್ಥೆ ಶಾಕಿಂಗ್ ಮಾಹಿತಿಯೊಂದನ್ನ ನೀಡಿದೆ. ಕೊರೊನಾ ಮೂರನೇ ಅಲೆಗೆ ಕಾರಣವಾಗಲಿದೆ ಎನ್ನಲಾಗಿರೋ ಡೆಲ್ಟಾ ವೇರಿಯಂಟ್ ಸುಮಾರು 85 ದೇಶಗಳಿಗೆ ಈಗಾಗಲೇ ಹರಡಿದೆ ಎಂದು ಡಬ್ಲ್ಯೂಹೆಚ್​ಓ ಹೇಳಿದೆ.

ಡೆಲ್ಟಾ ವೇರಿಯಂಟ್ ಕೋವಿಡ್​ 19 ವೈರಸ್​ನಲ್ಲೇ ಅತೀ ವೇಗವಾಗಿ ಹರಡುವ ವೇರಿಯಂಟ್ ಆಗಿದೆ ಅಂತ ಈ ಹಿಂದೆಯೇ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಭಾರತದಲ್ಲಿ ಈಗಾಗಲೇ ಇಂಥ 50 ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಹೇಳಿದೆ.

ದೇಶದಾದ್ಯಂತ ವ್ಯಾಪಕವಾಗಿ ಕೊರೊನಾ ಸೋಂಕಿಗೆ ವ್ಯಾಕ್ಸಿನೇಷನ್ ಪ್ರಕ್ರಿಯೆ ನಡೆಯುತ್ತಿದ್ದರೂ ದಿನದಿಂದ ದಿನಕ್ಕೆ ವ್ಯಾಕ್ಸಿನ್ ಪಡೆದವರ ಸಂಖ್ಯೆ ಏರಿಕೆ ಕಾಣುತ್ತಿದ್ದರೂ ಡೆಲ್ಟಾ ವೇರಿಯಂಟ್ ಮತ್ತೊಂದು ಅಲೆಯ ಭೀತಿಯನ್ನು ಸೃಷ್ಟಿಸಿದೆ.

ಡೆಲ್ಟಾ ವೇರಿಯಂಟ್ ವಿರುದ್ಧ ಹೋರಾಟ ಹೇಗಿದೆ..?

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ

ಅಮೆರಿಕಾದಲ್ಲಿ ಈಗಾಗಲೇ ಬಹುತೇಕ ವ್ಯಾಕ್ಸಿನೇಷನ್ ಮುಗಿಯುತ್ತಾ ಬಂದಿದ್ದರೂ ಡೆಲ್ಟಾ ವೇರಿಯಂಟ್​ನಿಂದಾಗಿ ಜನರಿಗೆ ಸಾರ್ವಜನಿಕ ಪ್ರದೇಶಗಳಲ್ಲಿ ಹಾಗೂ ಒಳಾಂಗಣ ಪ್ರದೇಶಗಳಲ್ಲೂ ಮಾಸ್ಕ್ ಧರಿಸುವಂತೆ ಹೇಳಲಾಗಿದೆ. ವೈಟ್ ಹೌಸ್​ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆ್ಯಂಥೋನಿ ಫೌಸಿ ಡೆಲ್ಟಾ ವೇರಿಯಂಟ್​ನ್ನು ಕೊರೊನಾ ವಿರುದ್ಧ ಹೋರಾಡುತ್ತಿರುವ ಅಮೆರಿಕಾಗೆ ಎದುರಾಗಿರುವ ಅತಿದೊಡ್ಡ ಬೆದರಿಕೆ ಎಂದು ಕರೆದಿದ್ದಾರೆ.

ಬ್ರಿಟನ್
ಯುನೈಟೆಡ್ ಕಿಂಗಡಮ್​ನಲ್ಲಿ ಜನವರಿ 30 ರಿಂದೀಚೆಗೆ ಇದೇ ಮೊದಲ ಬಾರಿಗೆ ಅತೀ ಹೆಚ್ಚು ಕೊರೊನಾ ಕೇಸ್​​ಗಳು ದಾಖಲಾಗಿವೆ. ಡೆಲ್ಟಾ ಕೇಸ್​ಗಳು ಏರಿಕೆಯಾದ ಬೆನ್ನಲ್ಲೇ ಬ್ರಿಟನ್ ದೇಶದಲ್ಲಿ ಜೂನ್ 21 ಕ್ಕೆ ಅನ್​ಲಾಕ್​ ಮಾಡಲು ತೆಗೆದುಕೊಂಡಿದ್ದ ನಿರ್ಧಾರವನ್ನ ಜುಲೈ 19ಕ್ಕೆ ಮುಂದೂಡಿಕೆ ಮಾಡಲಾಗಿದೆ. ಇನ್ನು ಬ್ರಿಟನ್​ 80 ಪರ್ಸೆಂಟ್​ಗೂ ಹೆಚ್ಚು ವಯಸ್ಕರು ಮೊದಲ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ.

ಐರ್​ಲ್ಯಾಂಡ್
ಐರ್​ಲ್ಯಾಂಡ್​ನಲ್ಲೂ ಸಹ ಜುಲೈ 5 ರಿಂದ ಅನ್​ಲಾಕ್ ಮಾಡಲು ಈ ಹಿಂದೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಡೆಲ್ಟಾ ವೇರಿಯಂಟ್ ಭೀತಿಯಲ್ಲಿ ಇದೀಗ ಅನ್​ಲಾಕ್​ ಪ್ರಕ್ರಿಯೆಯನ್ನ ಮತ್ತಷ್ಟು ಮುಂದೂಡಿಕೆ ಮಾಡಲು ನಿರ್ಧರಿಸಿದೆ. ಜುಲೈ ಮಧ್ಯಂತರದಲ್ಲಿ ಐರ್​ಲ್ಯಾಂಡ್​ನಲ್ಲಿ ಡೆಲ್ಟಾ ವೇರಿಯಂಟ್ ಸೋಂಕು ಪ್ರಕರಣಗಳು ಏರಿಕೆಯಾಗಲಿವೆ ಎಂದು ಅಂದಾಜಿಸಲಾಗಿದೆ.

ಆಸ್ಟ್ರೇಲಿಯಾ
ಆಸ್ಟ್ರೇಲಿಯಾದಲ್ಲಿ ಬಹುತೇಕ 70 ಪರ್ಸೆಂಟ್ ಜನರನ್ನು ಲಾಕ್​ಡೌನ್​ನಲ್ಲಿ ಇರಿಸಲಾಗಿದೆ. ಬ್ರಿಸ್ಬೇನ್ ಮತ್ತು ಪರ್ತ್ ನಗರಗಳನ್ನು ಇತ್ತೀಚೆಗೆ ಲಾಕ್​ಡೌನ್​ಗೆ ಒಳಪಡಿಸಲಾಗಿದೆ. ಇತ್ತ ಪ್ರಮುಖ ನಗರಗಳಾದ ಸಿಡ್ನಿ ಹಾಗೂ ಡಾರ್ವಿನ್​ನಲ್ಲಿ ಕೂಡ ಲಾಕ್​ಡೌನ್ ಜಾರಿಯಾಗಿದೆ.

ದಕ್ಷಿಣ ಆಫ್ರಿಕಾ
ದಕ್ಷಿಣ ಆಪ್ರಿಕಾ ಸದ್ಯ ಮೂರನೇ ಅಲೆಯಿಂದ ಭಾರೀ ಹೊಡೆತ ತಿಂದ ದೇಶವಾಗಿದೆ. ಈ ವಾರದಿಂದ ಜಾರಿಯಾಗುವಂತೆ ಇಲ್ಲಿ ಹೊಸ ನಿಯಮಗಳನ್ನು ಜಾರಿತರಲಾಗಿದೆ. ಅಲ್ಲದೇ ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ. ದಕ್ಷಿಣ ಆಫ್ರಿಕಾ ಸರ್ಕಾರ ಐಸಿಯು ಬೆಡ್​ಗಳ ಕೊರತೆ ಬಗ್ಗೆಯೂ ಆತಂಕ ವ್ಯಕ್ತಪಡಿಸಿದೆ.

ಇಸ್ರೇಲ್
ಕೊರೊನಾ ವ್ಯಾಕ್ಸಿನೇಷನ್​ ಹೆಸರಿನಲ್ಲಿ ಜಗತ್ತಿಗೇ ಮಾದರಿ ಎನ್ನಿಸಿಕೊಂಡಿದ್ದು ಇಸ್ರೇಲ್ ದೇಶ.. ಈ ಬೆನ್ನಲ್ಲೇ ಇಸ್ರೇಲ್​ನಲ್ಲಿ ಮಾಸ್ಕ್ ಕಡ್ಡಾಯವಲ್ಲ ಅನ್ನೋ ಆದೇಶವನ್ನ ಹೊರಡಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಡೆಲ್ಟಾ ವೇರಿಯಂಟ್ ಕೇಸ್​ಗಳು ಹೆಚ್ಚಾಗುತ್ತಿವೆ. ಕಳೆದ ಬುಧವಾರ ಮೂರು ತಿಂಗಳಲ್ಲೇ ವರದಿಯಾಗದಷ್ಟು ಸೋಂಕು ಪ್ರಕರಣಗಳು ವರದಿಯಾಗಿದ್ದು ಆತಂಕ ಹೆಚ್ಚಾಗಿದೆ.

The post 85 ದೇಶಗಳಲ್ಲಿ ಪತ್ತೆಯಾಯ್ತು ಡೇಂಜರಸ್ ಡೆಲ್ಟಾ ವೇರಿಯಂಟ್: ಮತ್ತೆ ಲಾಕ್​ಡೌನ್ ಆಗ್ತಿರೋ ದೇಶಗಳಿವು.. appeared first on News First Kannada.

Source: newsfirstlive.com

Source link