ಲಾಕ್​ಡೌನ್ ಮುಗಿಯುತ್ತಲೇ ಆ್ಯಕ್ಟಿವ್ ಆಯ್ತಾ ಬವಾರಿಯಾ ಗ್ಯಾಂಗ್..? ಇವರ ಟಾರ್ಗೆಟ್ ಯಾರು..?

ಲಾಕ್​ಡೌನ್ ಮುಗಿಯುತ್ತಲೇ ಆ್ಯಕ್ಟಿವ್ ಆಯ್ತಾ ಬವಾರಿಯಾ ಗ್ಯಾಂಗ್..? ಇವರ ಟಾರ್ಗೆಟ್ ಯಾರು..?

ನಗರದ ಹೊರವಲಯಗಳಲ್ಲಿ ಸರಗಳ್ಳತನದ ಪ್ರಕರಣಗಳು ಇದ್ದಕ್ಕಿದ್ದಂತೆ ಹೆಚ್ಚಾಗಿವೆ.. ಈ ಕೃತ್ಯ ನಡೆಸುತ್ತಿರುವುದು ಬವಾರಿಯಾ ಗ್ಯಾಂಗ್ ಅಂತಾ ಪೊಲೀಸರು ಶಂಕಿಸಿದ್ದಾರೆ. ಹಾಗಾದ್ರೆ ಈ ಬವಾರಿಯಾ ಗ್ಯಾಂಗ್ ಕೈಚಳಕ ಹೇಗಿರುತ್ತೆ..? ಈ ಗ್ಯಾಂಗ್ ಎಲ್ಲಿಂದ ಬಂದು ಹೇಗೆ ಕಾರ್ಯಾಚರಣೆ ನಡೆಸುತ್ತೆ.?

ಈ ಬವಾರಿಯಾ ಗ್ಯಾಂಗ್ ಮಾಡೋದಿಷ್ಟೇ. ಉತ್ತರ ಭಾರತದ ಕಡೆಯಿಂದ ದಕ್ಷಿಣ ಭಾರತದ ಕಡೆ ಬಂದು ರಾಬರಿ, ಸುಲಿಗೆ ಮಾಸ್ ಆಗಿ ಮಾಡಿಕೊಂಡು ಸುಮಾರು ಕೆಜಿಗಟ್ಟಲೆ ಚಿನ್ನಾಭರಣೆಗಳನ್ನ ದೋಚಿಕೊಂಡು ಅದನ್ನೆಲ್ಲಾ ಟ್ರೈನ್​ ನಲ್ಲಿ ಪಾರ್ಸೆಲ್ ಮಾಡಿ, ಫ್ಲೈಟ್​ನಲ್ಲಿ ಎಸ್ಕೇಪ್ ಆಗ್ತಿದ್ದರು.

ಲಾಕ್​ಡೌನ್ ಆಗಿ ಅನ್​ಲಾಕ್​ ಆಗುತ್ತಿದ್ದಂತೆ ಎಲ್ಲ ಕಡೆ ಕ್ರೈಂ ಆ್ಯಕ್ಟಿವಿಟಿ ಹೆಚ್ಚಾಗಿಬಿಟ್ಟಿದೆ. ಅದರ ಮೊದಲ ಭಾಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನಿನ್ನೆ ನಡೆದ ಸರಣಿ ಸರಗಳ್ಳತನವೇ ಸಾಕ್ಷಿ. ಹೌದು. ಇಷ್ಟು ದಿನ ಸೈಲೆಂಟಾಗಿದ್ದ ಖದೀಮರು, ಪುಂಡರು, ಕಳ್ಳರು ಪೋಕರಿಗಳು ಫುಲ್ ವೈಲೆಂಟ್ ಆಗಿಬಿಟಿದ್ದಾರೆ. ಯಾಕಂದ್ರೆ ಬಹಳ ದಿನಗಳ ಹಿಂದೆ ಸರಗಳ್ಳರು ತಮ್ಮ ಕೈಚಳಕವನ್ನ ತೋರಿಸಿ ಎಸ್ಕೇಪ್ ಆಗ್ತಿದ್ದರು. ಕೊರೊನಾ ಬಂದು ಲಾಕ್​ಡೌನ್ ಆದಮೇಲೆ ಎಲ್ಲದಕ್ಕೂ ತಾತ್ಕಲಿಕವಾಗಿ ಬ್ರೇಕ್ ಬಿದ್ದಿತ್ತು. ಆದ್ರೆ ಈಗ ಮತ್ತೆ ಬ್ಲಾಕ್ ಪಲ್ಸರ್​ ಸದ್ದು ಮಾಡೋಕೆ ಶುರು ಆಗಿದೆ.

ನಗರ ಬಿಟ್ಟು ಗ್ರಾಮೀಣ ಭಾಗದ ಮಹಿಳೆಯರೇ ಟಾರ್ಗೆಟ್​​​

ಈ ಹಿಂದೆಲ್ಲಾ ಸರಗಳ್ಳರು ಮಹಿಳೆಯರನ್ನ ಹೆಚ್ಚು ಟಾರ್ಗೆಟ್​ ಮಾಡುತ್ತಿದ್ದರು. ಬ್ಲಾಕ್​ ಪಲ್ಸರ್​ನಲ್ಲಿ ಸಿಟಿಗೆ ಎಂಟ್ರಿ ಕೊಡುತ್ತಿದ್ದ ಸರಗಳ್ಳರು ಒಂಟಿ ಮಹಿಳೆಯರನ್ನ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡಿಕೊಂಡು ಎಸ್ಕೇಪ್ ಆಗುತ್ತಿದ್ದರು. ಆದ್ರೆ ಈಗ ಅದ್ರಲ್ಲೂ ನಿನ್ನೆ ಮತ್ತು ಮೊನ್ನೆ ನಡೆದ ಸರಗಳ್ಳತನ ಪ್ರಕರಣಗಳೇ ಸಾಕ್ಷಿ. ಹೌದು ಈ ಬಾರಿ ಸರಗಳ್ಳರ ಟಾರ್ಗೆಟ್ ಆಗಿದ್ದು ಬೆಂಗಳೂರು ಗ್ರಾಮಂತರ ಜಿಲ್ಲೆ.

6 ಗಂಟೆಯಲ್ಲಿ 6 ಕಡೆ ತೋರಿಸಿದ್ರು ಕೈಚಳಕ

ನಿನ್ನೆ ಬೆಳಗ್ಗೆ 8 ಗಂಟೆಗೆ ರುಮ್ ರುಮ್ ಅಂತಾ ಇಬ್ಬರು ಖತರ್ನಾಕ್​ಗಳು ಬ್ಲಾಕ್ ಪಲ್ಸರ್​ ಬೈಕ್ ಅನ್ನ ಎತ್ತಿಕೊಂಡು ರೈಡಿಂಗ್​ಗೆ ಹೊರಟೇ ಬಿಟ್ಟಿದ್ದರು. ಹೀಗೆ 8.30 ಕ್ಕೆ ಶುರು ಆದ ಕೈಚಳಕ ಮತ್ತು ಬ್ಲಾಕ್ ಪಲ್ಸರ್​ ಸದ್ದು ಮದ್ಯಾಹ್ನ 1.30 ರವರೆಗೂ ಮುಂದುವರೆದಿರುತ್ತೆ. ಹೀಗೆ 6 ಕಡೆ ಬ್ಲಾಕ್​ ಪಲ್ಸರ್​ನಲ್ಲಿ ಬಂದ ಸರಗಳ್ಳರು ತಮ್ಮ ಕೈಚಳಕ ತೊರಿಸಿ ಎಸ್ಕೇಪ್ ಆಗಿದ್ದಾರೆ. ಹಾಗಾದ್ರೆ ಎಷ್ಟೊತ್ತಿಗೆ ಎಲ್ಲಿ ಹೇಗೆಲ್ಲಾ ಕೃತ್ಯವನ್ನ ಎಸಗಿದ್ದರು ಅನ್ನೋದನ್ನ ಒಂದೊಂದಾಗಿ ನೋಡ್ತಾ ಹೋಗೋಣ.

ಸರಗಳ್ಳತನ ಪ್ರಕರಣ 1
ಸಮಯ : ಬೆಳಗ್ಗೆ 8.30
ಸ್ಥಳ : ಅನುಗೊಂಡನಳ್ಳಿ

ನಿನ್ನೆ ಬೆಳಗ್ಗೆ ಸುಮಾರು 8.30 ಆಗಿತ್ತು. ಅಷ್ಟೊತ್ತಿಗಾಗಲೇ ಬ್ಲಾಕ್ ಪಲ್ಸರ್​ನಲ್ಲಿ ಅನುಗೊಂಡನಳ್ಳಿಗೆ ಸರಗಳ್ಳರು ಎಂಟ್ರಿ ಕೊಟ್ಟಿದ್ದರು. ಹೀಗೆ ಎಂಟ್ರಿ ಕೊಟ್ಟಿದ್ದವರ ಕಣ್ಣಿಗೆ ಬಿದ್ದಿದ್ದು ವೆಂಕಟಮ್ಮ ಅನ್ನೋ ವೃದ್ಧೆ. ಡಿ ಹೊಸಳ್ಳಿ ಗ್ರಾಮದ ನಿವಾಸಿ ಆಗಿರೋ ವೆಂಕಟಮ್ಮ ಬೆಳಗ್ಗೆ ಎದ್ದು ಪಕ್ಕದ ಮನೆಯವರನ್ನ ಮಾತಾಡಿಸೋಕೆಂದು ಹೋಗಿ, ಕಷ್ಟ ಸುಖ ಮಾತಾಡಿಸಿಕೊಂಡು ಮನೆಗೆ ವಾಪಸ್ ಬರುತ್ತಿದ್ದರು. ಆಗ ಹಿಂಬದಿಯಿಂದ ಬಂದ ವ್ಯಕ್ತಿಯೊಬ್ಬ ಮೊಬೈಲ್​ ತೋರಿಸಿ ಈ ವಿಳಾಸ ಎಲ್ಲಿದೆ ಅಂತಾ ಹೇಳಿ, ಆಕೆ ಮೊಬೈಲ್ ನೋಡಲು ತಲೆ ಬಗ್ಗಿಸುತ್ತಿದ್ದಂತೆ, ಕೊರಳಿಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ 30 ಗ್ರಾಂ ಚಿನ್ನದ ಸರವನ್ನ ಕದ್ದು ಪರಾರಿಯಾಗಿದ್ದ.

ಸರಗಳ್ಳತನ ಪ್ರಕರಣ 2
ಸಮಯ : ಬೆಳಗ್ಗೆ 9.30
ಸ್ಥಳ : ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿ

ಆಗ ಸಮಯ 9.30 ಆಗಿತ್ತು. ಶಾಂತಮ್ಮ ಅನ್ನೋ ಮಹಿಳೆ ಮನೆಯಿಂದ ಹೊರಗಡೆ ಬಂದು ಕೂತಿದ್ದರು. ಸುಮ್ಮನೇ ಯಾಕೆ ಕೂರೋದು ಬಿಸಿಲಿದೆ ಅಂತಾ ಅಂದುಕೊಂಡು ರಾಗಿ ಬೀಸೋದಕ್ಕೆ ಶುರು ಮಾಡಿಕೊಂಡಿದ್ದರು. ಆಗ ಅಲ್ಲಿಗೆ ಎಂಟ್ರಿ ಕೊಟ್ಟಿತ್ತು ಬ್ಲಾಕ್ ಪಲ್ಸರ್​​. ಶಾಂತಮ್ಮ ಮುಂದೆ ಬಂದು ಬೈಕ್ ಅನ್ನ ನಿಲ್ಲಿಸಿದ್ದ ಬೈಕ್​ನಲ್ಲಿದ್ದವರು ಅಮ್ಮಾ ಇಲ್ಲಿ ಚೆನ್ನಮ್ಮ ಮನೆ ಎಲ್ಲಿದೆ ಅಂತಾ ಕೇಳಿದ್ರು. ನಂಗೊತ್ತಿಲ್ಲಪ್ಪ ಅಂತಾ ಹೇಳಿ ಅಗೋ ಮುಂದೆ ಅಲ್ಲೆಲ್ಲೋ ಇರಬೇಕೆನೋ ನೋಡಿ ಅಂತಾ ಹೇಳಿದ್ದರು. ಆಗ ಜೇಬಿನಿಂದ ಮೊಬೈಲ್ ತೆಗೆದು ಇವರೇ ಚೆನ್ನಮ್ಮ ಅಂತಾ ತೋರಿಸಿದ್ದರು. ಅಯ್ಯೋ ಕಾಣಿಸುತ್ತಿಲ್ಲ ಅಂತಾ ಶಾಂತಮ್ಮ ಹತ್ತಿರ ಬಂದು ನೋಡಿದ್ದರು. ಆಗಲೇ ನೋಡಿ. ಬೈಕ್​ನಲ್ಲಿದ್ದವರು ನೇರವಾಗಿ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರವನ್ನ ಕಿತ್ತುಕೊಂಡು ಎಸ್ಕೇಪ್ ಆಗಿದ್ದು. ಆಮೇಲೆ ಅಲ್ಲಿಂದ ಮುಂದೆ ಸಾಗಿದ್ದರು ಸರಗಳ್ಳರು.. ಅಲ್ಲಿಂದ ಮುಂದೆ ಸಾಗಿದ್ದು ಸೂಲಿಬೆಲೆ ಕಡೆಗೆ..

ಸರಗಳ್ಳತನ ಪ್ರಕರಣ 3
ಸಮಯ : ಬೆಳಗ್ಗೆ 10.30
ಸ್ಥಳ : ಸೂಲಿಬೆಲೆ

ಎರಡು ಗಂಟೆ ಸಮಯದಲ್ಲಿ ಎರಡು ಕಡೆ ಕೈಚಳಕ ತೋರಿಸಿ ಚಿನ್ನ ಸರವನ್ನ ಕಿತ್ತುಕೊಂಡು ಸೂಲಿಬೆಲೆ ಕಡೆ ಬಂದಿತ್ತು ಬ್ಲಾಕ್ ಪಲ್ಸರ್​. ಆ ಸಮಯದಲ್ಲಿ ಸರಗಳ್ಳರ ಕಣ್ಣಿಗೆ ಬಿದ್ದಿದ್ದೇ ರಪಾ ಅನ್ನೋ ಮಹಿಳೆ. ರೂಪಾ ಕೂಡ ಮನೆ ಮುಂದೆ ಕೂತುಕೊಂಡು ರಾಗಿ ಬೀಸುತ್ತಿದ್ದರು. ಆಗ ಅಲ್ಲಿಗೆ ಬಂದ ಸರಗಳ್ಳರು ಅಮ್ಮಾ ಈ ಅಡ್ರೆಸ್ ಇಲ್ಲೇನಾ ಬರೋದು ನೋಡಿ ಅಂತಾ ಹೇಳಿ ಹತ್ತಿರ ಕರೆಸಿಕೊಂಡು, ಚಿನ್ನದ ಸರವನ್ನ ಎಗರಿಸಿಕೊಂಡು ಅಲ್ಲಿಂದ ಎಸ್ಕೇಪ್ ಆಗ್ತಾರೆ. ಬೆಳಗ್ಗೆ 10.30 ಆಗಿದ್ದರಿಂದ ಮನೆಯಲ್ಲಿದ್ದ ಪುರುಷರೆಲ್ಲರೂ ಹೊಲ ಗದ್ದೆ ಕಡೆ ಹೋಗಿದ್ದರು. ಹಾಗಾಗಿ ಅವರಿಗೆ ಪೋನ್ ಮಾಡಿ ರೂಪಾ ವಿಚಾರಣೆ ಮುಟ್ಟಿಸಿದ್ದರು. ಹೀಗೆ ಅಲ್ಲಿ ರೂಪಾ ಅವರ ಕುತ್ತಿಗೆಯಲ್ಲಿದ್ದ ಸುಮಾರು 38 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನ ಕಿತ್ತುಕೊಂಡು ಅಲ್ಲಿಂದ ಸರಗಳ್ಳರು ಎಸ್ಕೇಪ್ ಆಗಿದ್ದರು. ಅಲ್ಲಿಂದ ಮುಂದೆ ಸಾಗಿ ಹೋಗಿದ್ದು ಎಲ್ಲಿಗೆ ಗೊತ್ತಾ?

ಸರಗಳ್ಳತನ ಪ್ರಕರಣ 4
ಸಮಯ : ಬೆಳಗ್ಗೆ 11 ಗಂಟೆ
ಸ್ಥಳ : ಚೆನ್ನರಾಯಪಟ್ಟಣ, ದೇವನಹಳ್ಳಿ

ಬ್ಲಾಕ್ ಪಲ್ಸರ್​ ಮುಂದೆ ಬಂದು ನಿಂತಿದ್ದು ದೇವನಹಳ್ಳಿ ಬಳಿಯಿರೋ ಚೆನ್ನರಾಯಪಟ್ಟಣಕ್ಕೆ. ಹೀಗೆ ಅಲ್ಲಿಗೆ ಬರುತ್ತಿದ್ದ ಬ್ಲಾಕ್ ಪಲ್ಸರ್​ನಲ್ಲಿದ್ದವರ ಕಣ್ಣಿಗೆ ಬಿದ್ದಿದ್ದು ಮಮತಾ. ಮಮತಾ ಪಾಪ ಆಗ ತಾನೇ ಮನೆಯಲ್ಲಿದ್ದ ಮಗುವನ್ನ ಹೊರಗಡೆ ಕರೆದುಕೊಂಡು ಬಂದು ನಿಂತುಕೊಂಡಿದ್ದರು. ಆಗ ಅಲ್ಲಿಗೆ ನೇರವಾಗಿ ಬಂದ ಸರಗಳ್ಳರು ಅಷ್ಟೇ ವೇಗವಾಗಿ ಮಮತಾ ಕುತ್ತಿಗೆಗೆ ಕೈ ಹಾಕಿ, ಸುಮಾರು 40 ಗ್ರಾಂ ಚಿನ್ನದ ಎರಡೆಳೆ ಸರವನ್ನ ಕಿತ್ತುಕೊಂಡು ಎಸ್ಕೇಪ್ ಆಗ್ತಾರೆ. ಅದಾದ ಬಳಿಕ ಬ್ಲಾಕ್ ಪಲ್ಸರ್​ ಹೊರಟ್ಟಿದ್ದು ಆವಲಳ್ಳಿ ಕಡೆಗೆ..

ಸರಗಳ್ಳತನ ಪ್ರಕರಣ 5
ಸಮಯ : ಬೆಳಗ್ಗೆ 12 ಗಂಟೆ
ಸ್ಥಳ : ಆವಲಳ್ಳಿ

ನಾಲ್ಕು ಕಡೆ ಸರಗಳ್ಳತನ ಮಾಡಿಕೊಂಡು ಒಂದೇ ರಸ್ತೆಯಲ್ಲಿ ಬರುತ್ತಿದ್ದ ಸರಗಳ್ಳರು ದಾರಿಯಲ್ಲಿ ಕಾಣ ಸಿಗೋ ಒಂಟಿ ಮಹಿಳೆಯರನ್ನೇ ಟಾರ್ಗೆಟ್​​​​ ಮಾಡಿಕೊಂಡು ಸುತ್ತ ಮುತ್ತ ವಾಚ್ ಮಾಡುತ್ತಾ, ಚಿನ್ನದ ಸರವನ್ನ ಎಗರಿಸಿಕೊಂಡು ಬರ್ತಿದ್ದರು. ಆಗ ಅವರು ಬಂದು ರೀಚ್ ಆಗಿದ್ದು ಆವಲಳ್ಳಿ. ಆವಲಹಳ್ಳಿ ರಸ್ತೆಯಲ್ಲಿ ಬರುವಾಗ ರಸ್ತೆ ಬದಿಯಲ್ಲಿ ಮಂಜುಳಾ ಅನ್ನೋ ಮಹಿಳೆ ಎದುರುಗಡೆ ಮನೆಯವರನ್ನ ಮಾತಾಡಿಸಿಕೊಂಡು ಮನೆಯೊಳಗೆ ಹೋಗ್ತಾಯಿದ್ದರು. ಆಗ ಬೈಕ್ ನಲ್ಲಿ ಬಂದವರು ತಾಯಿ ಈ ವಿಳಾಸ ಹೇಳಿ ಅಂತಾ ಹೇಳಿ ಮಂಜುಳಾ ಕರೆದು ಕುತ್ತಿಗೆಗೆ ನೇರವಾಗಿ ಕೈ ಹಾಕಿ ಸುಮಾರು 55 ಗ್ರಾಂ ಚಿನ್ನದ ಸರವನ್ನ ಕಿತ್ತುಕೊಂಡು ಎಸ್ಕೇಪ್ ಆಗುತ್ತಾರೆ. ಅಲ್ಲಿಂದ ಮುಂದೆ ಹೋಗಿದ್ದು ಸರ್ಜಾಪುರದ ಕಡೆಗೆ.

ಯಾವಾಗ ಒಂದೇ ಕಲರ್​ ಅದು ಬ್ಲಾಕ್ ಕಲರ್ ಪಲ್ಸರ್​ ಬೈಕ್​ನಲ್ಲಿ ಬಂದ ಇಬ್ಬರು ಆಸಾಮಿಗಳು ಐದು ಕಡೆ ಸರಗಳ್ಳತನ ಮಾಡಿಕೊಂಡು ಹೋಗಿದ್ದಾರೆ ಅನ್ನೋ ಮೆಸೆಜ್ ವೈರ್​ಲೆಸ್​ ಮೂಲಕ ಎಲ್ಲಾ ಕಡೆ ಹರಿದಾಡಿತ್ತು. ಆಗ ಪೊಲೀಸರು ಘಟನೆ ನಡೆದ ಸ್ಥಳಗಳಿಗೆ ದೌಡಾಯಿಸೋಕೆ ಶುರು ಮಾಡಿಕೊಂಡಿದ್ದರು. ಹೀಗೆ ಪೊಲೀಸರು ಅಲರ್ಟ್​ ಆಗ್ತಾಯಿದ್ದಂತೆ ಮತ್ತೊಂದು ಕಡೆ ಸರಗಳ್ಳತನಕ್ಕೆ ಸ್ಕೆಚ್​ ಹಾಕಲಾಗುತ್ತಿತ್ತು.

ಸರಗಳ್ಳತನ ಪ್ರಕರಣ 6
ಸಮಯ : ಮಧ್ಯಾಹ್ನ 1.30
ಸ್ಥಳ : ಸರ್ಜಾಪುರ

ಒಂದು ಕಡೆ ಪೊಲೀಸರು ಫುಲ್ ಅಲರ್ಟ್​ ಆಗ್ತಾಯಿದ್ರೆ ಇತ್ತ ಸರಗಳ್ಳರು ತಮ್ಮಷ್ಟಕ್ಕೆ ಇನ್ನೊಂದು ಮಾಡೋಣು ಇನ್ನೊಂದು ಚೈನ್ ಬೇಕು ಅಂದುಕೊಂಡು ಸ್ಕೆಚ್ ಹಾಕ್ಕೊಂಡೇ ಬರುತ್ತಿರುತ್ತಾರೆ. ಆಗ ಸುಮಾರು ಮದ್ಯಾಹ್ನ 1.30 ಆಗಿರುತ್ತೆ. ಅಷ್ಟೊತ್ತಿಗೆ ಅವರು ಬಂದಿದ್ದು ಸರ್ಜಾಪುರದ ಬಳಿ. ಹೀಗೆ ಬಂದ ಅವರ ಕಣ್ಣಿಗೆ ಬಿದ್ದಿದ್ದು 65 ವರ್ಷದ ಸುಬ್ಬಮ್ಮ. ಅಲ್ಲದೇ ಸುಬ್ಬಮ್ಮ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕೂಡ ಕಣ್ಣಿಗೆ ಬಿದ್ದಿತ್ತು. ಅಷ್ಟು ಸಾಕಾಗಿತ್ತು ಸರಗಳ್ಳರಿಗೆ. ಪಾಪಾ ಸುಬ್ಬಮ್ಮ ಧನವನ್ನ ಕಟ್ಟಲೆಂದು ರಸ್ತೆ ದಾಟುವಾಗಲೇ ಸರಗಳ್ಳರ ಕಣ್ಣಿಗೆ ಬಿದ್ದಿದ್ದು. ಆಗ ಅವರ ಬಳಿ ಬರೋ ಸರಗಳ್ಳರು ಮೊಬೈಲ್ ತೊರಿಸಿ ವಿಳಾಸ ಹೇಳಿ ಎಂದು ಹೇಳಿ, ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನ ಕಿತ್ತುಕೊಂಡು ಎಸ್ಕೇಪ್ ಆಗಿದ್ರು.

ಹೀಗೆ ಅನುಗೊಂಡನಳ್ಳಿಯಲ್ಲಿ ಶುರು ಆಗಿದ್ದ ಸರಗಳ್ಳರ ಕೈಚಳಕ ಕೊನೆಗೆ ಸರ್ಜಾಪುರದಲ್ಲಿ ಎಂಡ್ ಆಗಿತ್ತು. ಅಲ್ಲಿಂದ ಅವರು ಮುಂದೆ ಯಾವ ಕಡೆ ಪ್ರಯಾಣ ಬೆಳೆಸಿದ್ರೋ ಗೊತ್ತಿಲ್ಲ. ಸದ್ಯ ಪೊಲೀಸರು ಹೊಸಕೋಟೆ, ಸರ್ಜಾಪುರ, ಆವಲಳ್ಳಿ, ಚೆನ್ನರಾಯಪಟ್ಟಣ, ಸೂಲಿಬೆಲೆ, ಅನುಗೊಂಡಳ್ಳಿ ಪೊಲೀಸ್​ ಠಾಣೆಗಳಲ್ಲಿ ದೂರು ದಾಖಲಾಗಿದೆ. ಅಂದ್ರೆ 6 ಕಡೆ 6 ಗಂಟೆ 6 ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ. ದೂರು ದಾಖಲಿಸಿಕೊಂಡಿರೋ ಪೊಲೀಸರು ನಿನ್ನೆಯಿಂದ ಫುಲ್ ಅಲರ್ಟ್​ ಆಗಿದ್ದಾರೆ.

ಈಗ ನಿಮಗೆ ಅನ್ನಿಸಿರಬಹುದು. ಈ ಸರಗಳ್ಳತನಕ್ಕೂ ಬವಾರಿಯಾ ಗ್ಯಾಂಗ್​ಗೆ ಸಂಬಂಧ ಪಟ್ಟ ಚಿತ್ರಕ್ಕೂ ಏನ್ ಸಂಬಂಧ ಅಂತಾ. ಸಂಬಂಧ ಇದೆ.. ಅದು ಬೇರೇನೂ ಅಲ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಸಮಯದಲ್ಲಿ ಒಂದಷ್ಟು ಅನುಮಾನವನ್ನ ವ್ಯಕ್ತಪಡಿಸಿದ್ದರು. ಅದು ಯಾವುದೋ ಒಂದೇ ತಂಡ ಈ ಕೃತ್ಯವನ್ನ ನಡೆಸಿರಬಹುದು ಅನ್ನೋ ಅನುಮಾನ ಅಲ್ಲದೇ ತಮಿಳು ಭಾಷೆ ಮತ್ತು ಹಿಂದಿ ಭಾಷೆ ಮಾತಾಡಿರೋದ್ರಿಂದ ಇವರು ಬವಾರಿಯಾ ಗ್ಯಾಂಗ್ ಇರಬೋದು ಅನ್ನೋ ಅನುಮಾನವನ್ನ ಮತ್ತೊಂದು ಕಡೆ ವ್ಯಕ್ತ ಪಡಿಸಿದ್ದಾರೆ. ಒಟ್ಟಿನಲ್ಲಿ ಸದ್ಯ ನಿನ್ನೆ ನಡೆದ ಸರಗಳ್ಳತನ ಪ್ರಕರಣದಿಂದಾಗಿ ಆ ಭಾಗದಲ್ಲಿ ಮಾತ್ರವಲ್ಲದೇ ಬೆಂಗಳೂರು ನಗರದಲ್ಲಿಯೂ ಕೂಡ ಪೊಲೀಸರು ಫುಲ್ ಅಲರ್ಟ್​ ಆಗಿದ್ದಾರೆ.

6 ಗಂಟೆ, 6 ಕಡೆಯಲ್ಲಿ ಸರಗಳ್ಳತನ, 6 ಪೊಲೀಸ್ ಠಾಣೆಯಲ್ಲಿ ದೂರು ದಾಖಲು. ಈ ಆರು ಗಂಟೆಯಲ್ಲಿ ನಡೆದ ಕೃತ್ಯದಿಂದಾಗಿ ಸದ್ಯ ಬೆಂಗಳೂರು ಹಾಗು ನಗರ ಸುತ್ತ ಮುತ್ತ ಪೊಲೀಸರು ಅಲರ್ಟ್​ ಆಗಿದ್ದು ಎಸ್ಕೇಪ್ ಆಗಿರೋ ಸರಗಳ್ಳರಿಗಾಗಿ ಬಲೆ ಬೀಸಿದ್ದಾರೆ. ಅವರು ಎಲ್ಲಿದ್ದಾರೆ, ಯಾವ ಕಡೆ ಹೋಗಿದ್ದಾರೆ ಇನ್ನು ಪತ್ತೆ ಆಗಿಲ್ಲ, ಯಾವುದಕ್ಕೂ ನೀವು ಹುಷಾರ್​.

The post ಲಾಕ್​ಡೌನ್ ಮುಗಿಯುತ್ತಲೇ ಆ್ಯಕ್ಟಿವ್ ಆಯ್ತಾ ಬವಾರಿಯಾ ಗ್ಯಾಂಗ್..? ಇವರ ಟಾರ್ಗೆಟ್ ಯಾರು..? appeared first on News First Kannada.

Source: newsfirstlive.com

Source link