ಸಿಎಂ ಪುತ್ರನ ಹೆಸರಲ್ಲಿ ರಾಮುಲು PA ಡೀಲ್..? – 3 ಆಡಿಯೋದಲ್ಲಿ 5 ಕೋಟಿಗೆ ಡಿಮ್ಯಾಂಡ್

– ಕೋಟಿ ಡೀಲ್‍ಗೆ ನೂರು ರೂಪಾಯಿ ಕೋಡ್‍ವರ್ಡ್
– ಪ್ರಭಾವಿಗಳ ಒತ್ತಡಕ್ಕೆ ಮಣಿದ್ರಾ ಸಿಸಿಬಿ ಪೊಲೀಸರು..?
– ನಂಗೆ ಗೊತ್ತಿಲ್ಲದೆ ಅರೆಸ್ಟ್ ಮಾಡಿದ್ದು ಸರೀನಾ ಅಂದ್ರು ರಾಮುಲು..?

ಬೆಂಗಳೂರು: ಸಿಎಂ ಪುತ್ರ ವಿಜಯೇಂದ್ರ ಹಾಗೂ ಮೂವರು ಸಚಿವರ ಹೆಸರೇಳಿಕೊಂಡು ಗುತ್ತಿಗೆ, ವರ್ಗಾವಣೆ, ಕೆಲಸದ ಆಮಿಷವೊಡ್ಡಿ ಕೋಟಿ ಕೋಟಿ ದೋಖಾ ಮಾಡಿದರೂ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಆಪ್ತ ಸಹಾಯಕ ಬಚಾವ್ ಆಗಿದ್ದಾರೆ.

ನೀರಾವರಿ ಇಲಾಖೆ ಸಬ್ ಕಾಂಟ್ರಾಕ್ಟ್ ನೀಡೋ ವಿಚಾರದಲ್ಲಿ ಮೂವರು ಗುತ್ತಿಗೆದಾರರೊಂದಿಗೆ ಸಚಿವ ಶ್ರೀರಾಮುಲು ಪಿಎ ರಾಜಣ್ಣ ಮಾತನಾಡಿದ್ದಾರೆ ಎನ್ನಲಾಗಿದ್ದು, ಅದರಲ್ಲಿ ಸಿಎಂ ಪುತ್ರ ವಿಜಯೇಂದ್ರ ಹೆಸರನ್ನು ಪ್ರಸ್ತಾಪಿಸಿದ್ದಾರೆ ಅಂತ ಗೊತ್ತಾಗಿದೆ. 3 ಆಡಿಯೋದಲ್ಲಿ ಸುಮಾರು 5 ಕೋಟಿವರೆಗೆ ಪ್ರಸ್ತಾಪಿಸಿದ್ದಾರೆ. ಡೀಲ್ ಓಕೆಯಾದ್ರೆ ವಿಜಯೇಂದ್ರ ಹತ್ತಿರ ಮಾತನಾಡಿ ಸಹಿ ಹಾಕಿಸಿಕೊಡೋದಾಗಿಯೂ ರಾಮುಲು ಪಿಎ ಆಶ್ವಾಸನೆ ಕೊಟ್ಟಿದ್ದಾರೆ ಅಂತ ಹೇಳಲಾಗಿದೆ.

ಸಿಎಂ ಪುತ್ರ ವಿಜಯೇಂದ್ರ ದೂರು ಕೊಟ್ಟಿದ್ಯಾಕೆ…?:
* ಆಡಿಯೋ 1 – ಗುತ್ತಿಗೆದಾರನ ಬಳಿ 1 ಕೋಟಿ ಹಣಕ್ಕೆ ಬೇಡಿಕೆ!
(1 ಕೋಟಿಗೆ 100 ರೂ. ಅಂತ ಕೋಡ್ ವರ್ಡ್)
* ಆಡಿಯೋ 2 – ಗುತ್ತಿಗೆದಾರನ ಬಳಿ 3 ಕೋಟಿ ಹಣಕ್ಕೆ ಡಿಮ್ಯಾಂಡ್!
(3 ಕೋಟಿಗೆ 300 ರೂ. ಅಂತ ಕೋಡ್ ವರ್ಡ್)
* ಆಡಿಯೋ 3 – 75 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ!
(75 ಲಕ್ಷಕ್ಕೆ 75 ರೂಪಾಯಿ ಅಂತ ಕೋಡ್ ವರ್ಡ್…..)

blank

ಪೊಲೀಸ್ ಫ್ರೆಶರ್: ಸಚಿವ ಶ್ರೀರಾಮುಲು ಆಪ್ತ ಸಹಾಯಕ ರಾಜಣ್ಣ ಕೇಸಲ್ಲಿ ಸಿಸಿಬಿ ಪೊಲೀಸರು ಒತ್ತಡಕ್ಕೆ ಒಳಗಾದ್ರಾ ಅನ್ನೋ ಸಂಶಯ ವ್ಯಕ್ತವಾಗಿದೆ. ಸಿಎಂ ಪುತ್ರ ವಿಜಯೇಂದ್ರ ದೂರು ಕೊಟ್ಟರೂ, ಕೇವಲ ವಿಚಾರಣೆಯನ್ನಷ್ಟೇ ನಡೆಸಿ, ಬಂಧನ ಮಾಡದೆ ರಾಮುಲು ಆಪ್ತನನ್ನು ಬಿಟ್ಟು ಕಳುಹಿಸಿದ್ದಾರೆ. ಬೆಳಗ್ಗೆಯಿಂದ ಪೊಲೀಸರ ಮೇಲೆ ರಾಮುಲು ಒತ್ತಡ ಹೇರಿದ್ದರಿಂದ ಯಾವುದೇ ಎಫ್‍ಐಆರ್ ಹಾಕದೆ ಧ್ವನಿ ಮಾದರಿ ಸಂಗ್ರಹ, ವಾಟ್ಸಪ್ ಚಾಟ್, ಡೀಲ್ ಆಡಿಯೋವನ್ನು ಪಡೆದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟು ಕಳುಹಿಸಿದ್ದಾರೆ. ಸಾಮಾನ್ಯರ ಮೇಲೆ ದೂರು ಬಂದಿದ್ದರೆ, ಸಿಸಿಬಿ ಪೊಲೀಸರು ಹೀಗೆಯೇ ವರ್ತಿಸುತ್ತಿದ್ದಾರಾ..? ಪ್ರಭಾವಿಗಳ ಕೇಸ್ ಅಂತ ಪೊಲೀಸರು ಬೇಕಾಬಿಟ್ಟಿಯಾಗಿ ವರ್ತಿಸಿದ್ರಾ ಅನ್ನೋ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ವಿಜಯೇಂದ್ರನೇ ಡಿ ಪ್ಯಾಕ್ಟರ್ ಸಿಎಂ, ಯಡಿಯೂರಪ್ಪ ಡಿ ಜೀರೋ ಸಿಎಂ: ಸಿದ್ದರಾಮಯ್ಯ

blank

ಸಿಸಿಬಿ ಪೊಲೀಸರು ಎಡವಿದ್ದೆಲ್ಲಿ….?
ಸೈಬರ್ ಠಾಣೆಯಲ್ಲಿ ಎಫ್‍ಐಆರ್ ದಾಖಲು ವೇಳೆ ಎಡವಟ್ಟು ಮಾಡಿದ್ದಾರೆ. ರಾಮುಲು ಆಪ್ತನ ವಿರುದ್ಧ ಸಿಸಿಬಿ ಹಾಕಿರೋದು 2 ಸೆಕ್ಷನ್ ಅಷ್ಟೇ. ಐಟಿ ಆಕ್ಟ್ ಸೆಕ್ಷನ್ 66 ಮತ್ತು ಐಪಿಸಿ ಸೆಕ್ಷನ್ 420 ಅಡಿ ಎಫ್‍ಐಆರ್ ದಾಖಲಿಸಲಾಗಿದೆ. ಐಟಿ ಆಕ್ಟ್ 66- ಸೋಷಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಬಿಡುಗಡೆ ಮಾಡಲಾಗಿದೆ. ಐಪಿಸಿ 420- ವಂಚನೆ ಆರೋಪ(ವಿಜಯೇಂದ್ರ ತನಗೆ ಆಗಿರೋ ವಂಚನೆ ಉಲ್ಲೇಖಿಸಿಲ್ಲ). ಎಫ್‍ಐಆರ್ ಪ್ರಾಥಮಿಕ ಸಾರಂಶದಲ್ಲಿ ಹೆಸರಷ್ಟೇ ಬಳಕೆ ಮಾಡಲಾಗಿದೆ.

blank

ಇತ್ತ ತಮ್ಮ ಆಪ್ತ ಸಹಾಯಕ ರಾಜಣ್ಣ ಕೋಟಿ ಕೋಟಿ ಡೀಲ್ ಮಾಡಿ ವಂಚನೆ ಎಸಗಿದ್ದಾನೆ ಅನ್ನೋ ಆರೋಪಕ್ಕಿಂತ ವಿಜಯೇಂದ್ರ ತಮಗೆ ನೆಪಮಾತ್ರಕ್ಕೂ ಮಾಹಿತಿ ಕೊಟ್ಟಿಲ್ಲ ಅಂತ ಸಚಿವ ಶ್ರೀರಾಮುಲು ಆಪ್ತರ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ. ಆಪ್ತ ರಾಜಣ್ಣನನ್ನು ಸಿಸಿಬಿಯವರು ಎತ್ತಾಕಿಕೊಂಡು ಹೋದ್ರು ಎಂಬ ಸುದ್ದಿ ಕೇಳಿ, ಆಪ್ತರ ಬಳಿ ವಿಜಯೇಂದ್ರ ಬಗ್ಗೆ ರಾಮುಲು ಕೂಗಾಡಿದ್ರಂತೆ. ನನಗೆ ಹೇಳಿದ್ರೆ ಆಗ್ತಿರಲಿಲ್ವಾ..? ನಾನು ಸರಿ ಮಾಡ್ತಿರಲಿಲ್ವಾ..? ನನಗೆ ಕೆಟ್ಟ ಹೆಸರು ತರಬೇಕು ಅಂತಾನೆ ಹೀಗೆ ಮಾಡಿದಂತಿದೆ. ನಾನು ವಿಜಯೇಂದ್ರರನ್ನು ಭೇಟಿ ಮಾಡಲ್ಲ, ಅದೇನಾಗುತ್ತೋ ಆಗ್ಲಿ ಅಂತಾ ಗರಂ ಆಗಿದ್ರು ಎನ್ನಲಾಗಿದೆ.

blank

ಇಡೀ ರಾತ್ರಿ ಸಚಿವ ರಾಮುಲು ನಿದ್ದೆ ಕೂಡ ಮಾಡಿರಲಿಲ್ಲ ಅಂತಾ ತಿಳಿದುಬಂದಿದೆ. ಬೆಳಗ್ಗೆ ರಾಮುಲು ಆಡಿದ ಮಾತುಗಳಲ್ಲೂ ಇದೇ ಧ್ವನಿಸ್ತಾ ಇತ್ತು. ತಪ್ಪು ಯಾರು ಮಾಡಿದ್ರು ತಪ್ಪು.. ತನಿಖೆ ನಡೀತಿದೆ ಅಂದ್ರು. ಹಿರಿಯ ಮಂತ್ರಿಯಾಗಿ ತಮಗೆ ಈ ವಿಚಾರದಲ್ಲಿ ಅವಮಾನವಾಗಿದೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ರು. ಇದಾದ ಕೂಡಲೇ ಸಿಎಂ ಭೇಟಿ ಮಾಡಿ ರಾಜಣ್ಣನ ಬಿಡುಗಡೆಗೆ ಒತ್ತಡ ಹೇರಿದ್ರು. ಕೆಲವೇ ಕ್ಷಣಗಳಲ್ಲಿ ಆರೋಪಿ ರಾಜಣ್ಣನನ್ನು ಸಿಸಿಬಿ ಬಿಟ್ಟು ಕಳಿಸಿದ್ದು ಕಾಕತಾಳಿಯ.

blank

ಟ್ವೀಟ್ ಸಮರ: ಸಿಎಂ ಪುತ್ರ ವಿಜಯೇಂದ್ರ ಹಾಗೂ ರಾಮುಲು ಆಪ್ತ ಸಹಾಯಕ ರಾಜಣ್ಣ ಮಧ್ಯೆ ಟ್ವೀಟ್ ಸಮರ ನಡೆದಿದೆ. ರಾಮುಲು ಪಿಎ ವಿರುದ್ಧ ದೂರು ನೀಡಿದ್ದನ್ನು ವಿಜಯೇಂದ್ರ ಸಮರ್ಥಿಸಿಕೊಂಡಿದ್ದಾರೆ. ಹಾಗೆಯೇ ರಾಮುಲು ಆಪ್ತ ಸಹಾಯಕ, ಆರೋಪಿ ರಾಜಣ್ಣ ನಾನು ತಪ್ಪೇ ಮಾಡಿಲ್ಲ. ಆಡಿಯೋದಲ್ಲಿರುವ ಧ್ವನಿ ನನ್ನದಲ್ಲ ಎಂದಿದ್ದಾರೆ. ವಿಜಯೇಂದ್ರ ಕರೆದು ಮಾತನಾಡಬಹುದಿತ್ತು ಅಂತಲೂ ಬೇಸರಿಸಿಕೊಂಡಿದ್ದಾರೆ. ಅಂದ ಹಾಗೇ ಬಳ್ಳಾರಿ ಮೂಲದ ರಾಜಣ್ಣ ಕಳೆದ 20 ವರ್ಷದಿಂದ ರಾಮುಲು-ಜನಾರ್ದನರೆಡ್ಡಿ ಬಲಗೈ ಬಂಟರಾಗಿದ್ದರು.

blank

ಸಚಿವ ರಾಮುಲು ಪಿಎ ರಾಜಣ್ಣ ವಿರುದ್ಧದ ಡೀಲ್ ಆರೋಪ, ಬಂಧನ ಬಿಡುಗಡೆ ಪ್ರಹಸನ.. ಸಹಜವಾಗಿಯೇ ವಿಪಕ್ಷಗಳಿಗೆ ಅಸ್ತ್ರವಾಗಿ ಪರಿಣಮಿಸಿದೆ. ಸಿದ್ದರಾಮಯ್ಯ ಅವರಂತೂ ಸಿಎಂ ಕುಟುಂಬದ ವಿರುದ್ಧ, ಸಚಿವ ರಾಮುಲು ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತ್ರ, ರಾಮುಲು ಪಿಎ, ವಿಜಯೇಂದ್ರ ಬಗ್ಗೆ ಮಾತನಾಡೋದು ನನ್ನ ಲೆವೆಲ್ ಅಲ್ಲ ಎನ್ನುತ್ತಾ ಜಾರಿಕೊಂಡಿದ್ದಾರೆ. ಇನ್ನೂ ಸಿಎಂ ಯಡಿಯೂರಪ್ಪ ವಿರುದ್ಧ ಕಿಡಿಕಾಡಿರೋ ಮಾಜಿ ಸಚಿವ ರೇವಣ್ಣ, ಡಿನೋಟಿಫಿಕೇಶನ್ ಮುಖ್ಯಮಂತ್ರಿ ಯಡಿಯೂರಪ್ಪಗೆ ದೇವರೇ ಶಿಕ್ಷೆ ಕೊಡೋ ಕಾಲ ಬರುತ್ತೆ ಅಂತಾ ಶಪಿಸಿದ್ದಾರೆ.

The post ಸಿಎಂ ಪುತ್ರನ ಹೆಸರಲ್ಲಿ ರಾಮುಲು PA ಡೀಲ್..? – 3 ಆಡಿಯೋದಲ್ಲಿ 5 ಕೋಟಿಗೆ ಡಿಮ್ಯಾಂಡ್ appeared first on Public TV.

Source: publictv.in

Source link