ನನ್ನ ವಾಟ್ಸಪ್ ಮೆಸೇಜಿಗೆ ಸದಾ ಉತ್ತರಿಸುತ್ತಿದ್ದ ನೀವು ಈ ಬಾರಿ ಉತ್ತರಿಸಲೇ ಇಲ್ಲ ಹಾಲ್ದೊಡ್ಡೇರಿ ಸರ್..!

[ದಿಢೀರ್ ದೂರವಾದ ಹಿರಿಯ ವಿಜ್ಞಾನಿ, ಸರಳವಾಗಿ ವೈಜ್ಞಾನಿಕ ಬರವಣಿಗೆಗಳನ್ನ ಕಣ್ಣಿಗೆ ಕಟ್ಟುವಂತೆ ಬರೆಯುತ್ತಿದ್ದ ಸುಧೀಂದ್ರ ಹಾಲ್ದೊಡ್ಡೇರಿ ಜೊತೆಗಿನ ಒಡನಾಟ, ನೆನಪುಗಳಿಗೆ ಅಕ್ಷರ ರೂಪ ಕೊಟ್ಟಿದ್ದಾರೆ ಪಬ್ಲಿಕ್ ಟಿವಿಯ ಬುಲೆಟಿನ್ ಪ್ರೊಡ್ಯೂಸರ್ ಆನಂದ್ ಪಿಎನ್.]

ದು 2012ರ ಅವಧಿ, ಹೊಸದಿಗಂತದ ಕಾಲ. ಪತ್ರಿಕೋದ್ಯಮಕ್ಕೆ ನಾನಿನ್ನೂ ಅಂಬೆಗಾಲಿಡುತ್ತಿದ್ದ ದಿನಗಳು. ನನಗೆ ಈ ವಿಸ್ಮಯಕಾರಿ ವಿಜ್ಞಾನ, ರಾಕೆಟ್ ಸೈನ್ಸ್, ಆಸ್ಟ್ರಾನಮಿ, ಆಸ್ಟ್ರಾನಾಟ್ಸ್, ಆಸ್ಟ್ರಾಯಡ್ಸ್, ಏಲಿಯನ್ಸ್, ಸೈ-ಫೈ ವಿಷಯಗಳು, ಸೈನ್ಸ್ ಅಂಡ್ ಟೆಕ್ನಾಲಜಿ ಅಂದರೆ ಅದೊಂಥರ ವಿಸ್ಮಯ, ಕೌತುಕ. ಈ ಕುರಿತಂತೆ ನನ್ನ ಅದೆಷ್ಟು ಪ್ರಶ್ನೆಗಳಿಗೆ ಸಾವಧಾನ, ಸಮಚಿತ್ತದಿಂದ ಉತ್ತರಿಸ್ತಿದ್ರಿ. ಭೂಮಂಡಲ ಉಗಮ, ಗಾಡ್ ಪಾರ್ಟಿಕಲ್ (ದೇವ ಕಣ) ಬಗ್ಗೆ ನನ್ನ ಕುತೂಹಲಕಾರಿ ಪ್ರಶ್ನೆಗಳಿಗೆ ಅಷ್ಟೇ ಸವಿವರಣೆ, ಕೆಲ ಉದಾಹರಣೆಗಳ ಸಮೇತ ತಾಳ್ಮೆಯಿಂದ ಉತ್ತರಿಸಿದ ದಿನಗಳು.. ನೆನಪಿಗೆ ಬರ್ತಿವೆ ಸರ್..

ಆ ಬಳಿಕ ನಾನು ಮಾಧ್ಯಮ ಕ್ಷೇತ್ರಕ್ಕೆ ಹೆಜ್ಜೆಯಿಟ್ಟು ಮೂರ್ನಾಲ್ಕು ಚಾನೆಲ್ ಬದಲಾಯಿಸಿದಾಗಲೂ ಮಂಗಳಯಾನ, ಚಂದ್ರಯಾನ-2, ಅಗ್ನಿ ಪರಮಾಣು ಕ್ಷಿಪಣಿ, ಬೆಂಗಳೂರಿನಲ್ಲಿ ನಿಗೂಢ ಸದ್ದಿನ ಭೀತಿ… ಸೂಪರ್-ರೆಡ್-ಪಿಂಕ್ ಮೂನ್ ಗಳು… ಸೂರ್ಯ-ಚಂದ್ರ ಗ್ರಹಣ.. ಹೀಗೆ ಹಲವಾರು ಸಂದರ್ಭಗಳಲ್ಲಿ ನನ್ನ ಜ್ಞಾನದಾಹ ತೀರಿಸಿದ್ದೀರಿ.

ಸರ್ ಇಂಥ ಘಟನೆ ಆಗಿದೆ. ಈ ಬಗ್ಗೆ ನಿಮ್ಮಿಂದ ಹೆಚ್ಚಿನ ಮಾಹಿತಿ ಬೇಕಿದೆ. ಅಂತ ಎಷ್ಟೇ ಹೊತ್ತಲ್ಲಿ ಮೆಸೇಜ್ / ಕಾಲ್ ಮಾಡಿದಾಗಲೂ, ಸರಿ… ಆನಂದ್… ಮಾತಾಡ್ತೇನೆ, ಕನೆಕ್ಟ್ ಮಾಡಿಸು ಅಂತ ಒಂದೇ ರಿಂಗ್ ಗೆ ಕಾಲ್ ಪಿಕ್ ಮಾಡ್ತಿದ್ರಿ. ನಿರರ್ಗಳವಾಗಿ ಮಾತನಾಡ್ತಿದ್ರಿ. ಟಿವಿ ಆಂಕರ್‍ಗಳ ಪ್ರಶ್ನೆ ಅಥವಾ ವಿವರಣೆ ತಪ್ಪಾಗಿದ್ದಲ್ಲಿ ಜನರಿಗೆ ತಪ್ಪು ಸಂದೇಶ ಆಗುತ್ತೆ ಅಂತ ಅಲ್ಲೇ ಸರಿ ಮಾಡ್ತಿದ್ರಿ.

2011ರ ಗಾಡ್ ಪಾರ್ಟಿಕಲ್‍ನಿಂದ ಶುರುವಾದ ನಿಮ್ಮ ಜೊತೆಗಿನ ನನ್ನ ಒಡನಾಟ, ಎರಡು ತಿಂಗಳ ಹಿಂದೆ ಕೊರೋನಾ ವಿರುದ್ಧ DRDO ಅಭಿವೃದ್ಧಿ ಪಡಿಸಿರೋCovid Drug 2-DG ಪೌಡರ್. Sputnik V ಮತ್ತು sputnik light ನಡುವಿನ ತಪ್ಪಾದ ವಿವರಣೆ ಹೋಗ್ತಿದೆ… Sputnik ಡಬಲ್ ಡೋಸ್.. Sputnik light ಸಿಂಗಲ್ ಡೋಸ್ ಅಂತ ಮಾಡಿ ಎಂದು ಕರೆಕ್ಷನ್ ಹಾಕಿಸುವಂತೆ ವಾಟ್ಸಪ್ ಮೆಸೇಜ್ ಹಾಕಿದ್ರಿ. ಅಷ್ಟರ ಮಟ್ಟಿಗೆ ತಪ್ಪನ್ನ ತಿದ್ದುತ್ತಿದ್ರಿ. ವಿಜ್ಞಾನ ಸಂಬಂಧಿ ವಿಷಯಗಳ ಬಗ್ಗೆ ನಿಮ್ಮ ಜೊತೆ ಕೆಲವೊಂದು ಇಂಟರ್‍ನ್ಯಾಷನಲ್ ಟಾಪಿಕ್‍ಗಳನ್ನೂ ಹಂಚಿಕೊಳ್ತಿದ್ದೆ. ಅದಕ್ಕೆ ನಿಮ್ಮ ಸ್ಪಂದನೆಯೂ ಸಿಗ್ತಿತ್ತು.

ಪತ್ರಿಕೆಗಳಲ್ಲಿ ನಿಮ್ಮ ಅಂಕಣಗಳನ್ನೂ ಓದುತ್ತಿದ್ದೆ. ಕೆಲವೊಮ್ಮೆ ನೀವೇ ಅಂಕಣಗಳ ಕಟಿಂಗ್ ಲಿಂಕ್ ಕಳಿಸ್ತಿದ್ರಿ. ನಿಮ್ಮ ಮಗಳು ಮೇಘನಾ ಅವರ ಅಂಕಣ, ಪುಸ್ತಕದ ಬಗ್ಗೆಯೂ ಕಳಿಸ್ತಿದ್ರಿ. ಓದ್ತಿದ್ದೆ, ಚಂದ ಇದೆ ಸರ್ ಅಂತಿದ್ದೆ..  ಇದನ್ನೂ ಓದಿ:  ಡಿಆರ್‌ಡಿಒ ಮಾಜಿ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಇನ್ನಿಲ್ಲ

blank

ಆದರೆ, ಕಳೆದ ಕೆಲ ದಿನಗಳ ಹಿಂದೆ.. ನಿಮಗೆ ಹಾರ್ಟ್ ಅಟ್ಯಾಕ್ ಆಗಿದೆ ಅನ್ನೋ ಸುದ್ದಿ ಕೇಳಿ ಮನಸು ಕುಗ್ಗಿತು. ಸಂಪೂರ್ಣ ಮಾಹಿತಿ ಕೆದಕಿದಾಗ, ಅದು ಅಷ್ಟೊಂದು ತೀವ್ರ ಹೃದಯಾಘಾತ ಅಲ್ಲ ಅಂತ ಗೊತ್ತಾಗಿ ಸ್ವಲ್ಪ ನಿಟ್ಟುಸಿರು ಬಿಟ್ಟೆ. ಕಾಲ್ ಮಾಡಿ ಮಾತಾಡುವ ಅಂದುಕೊಂಡಾಗ ನೀವು ಜಯನಗರ ಆಸ್ಪತ್ರೆಗೆ ದಾಖಲಾಗಿದ್ದೀರಿ ಅಂತ ತಿಳಿದು ರೆಸ್ಟ್ ಮಾಡಲಿ, ಚೇತರಿಸಿಕೊಂಡ ಮೇಲೆ ಮಾತಾಡುವ ಅಂತ ಸರ್ ಬೇಗ ಹುಷಾರಾಗಿ ಅಂತ ವಾಟ್ಸಪ್ ಮೆಸೇಜ್ ಮೂಲಕ ಶುಭ ಕೋರಿದೆ.

ಆದರೆ, ನನ್ನ ಮೆಸೇಜ್‍ಗೆ ಸದಾ ರಿಪ್ಲೈ ಮಾಡ್ತಿದ್ದ ನೀವು ಈ ಬಾರಿ ಉತ್ತರಿಸಲೇ ಇಲ್ಲ. ಇವತ್ತು ನಿಮ್ಮ ಅಗಲಿಕೆ ಸುದ್ದಿ ಕೇಳಿ ಮನಸಿಗೆ ಘಾಸಿ ಆಗ್ತಿದೆ ಸರ್.

blank

ನೀವು ಎಷ್ಟು ಹೃದಯವಂತರು ಅಂದರೆ ನನ್ನನ್ನೇ ಸರ್ ಅಂತ ಸಂಬೋಧಿಸ್ತಿದ್ರಿ. ನನಗೆ ಮುಜುಗರ ಆಗಿ. ಸರ್.. ನಿಮ್ಮ ಅರ್ಧ ಏಜಿನಷ್ಟೂ ನನಗೆ ವಯಸ್ಸಾಗಿಲ್ಲ. ನಂಗೆ ಸೈನ್ಸ್ ಗುರು ನೀವು. ನನ್ನನ್ನ ಸರ್ ಅಂತ ಸಂಬೋಧಿಸ್ಬೇಡಿ. ಆನಂದ್ ಅನ್ನಿ ಅಂದಾಗ ಅದರಲ್ಲೇನಿದೆ ತಪ್ಪು. ಸರಿ, ಆನಂದ್ ಅಂತಲೇ ಕರೀತೇನೆ ಅಂತಿದ್ದ ನೀವು ತುಂಬಿದ ಕೊಡ ಸರ್.

ಏರೋಸ್ಪೇಸ್ ಎಂಜಿನಿಯರ್ ಆಗಿದ್ದ ನೀವು ಡಿಆರ್‍ಡಿಓ, ಎಚ್‍ಎಎಲ್‍ನಂಥ ಡಿಫೆನ್ಸ್ ಡಿಪಾರ್ಟ್‍ಮೆಂಟ್‍ನಲ್ಲಿ ಸಲ್ಲಿಸಿದ್ದ ಸೇವೆ ಅನನ್ಯ. ಹೈ ಆಲ್ಟಿಟ್ಯೂಡ್‍ಗಳಲ್ಲಿ ಎಲ್‍ಸಿಎಗಳ ಹಾರಾಟದಲ್ಲಿ ನಿಮ್ಮ ಕೊಡುಗೆ ಅಪಾರ. 61 ವರ್ಷಕ್ಕೇ ನಿಮ್ಮನ್ನ ಕಳೆದುಕೊಂಡ ನಾವು ನತದೃಷ್ಟರು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ…

The post ನನ್ನ ವಾಟ್ಸಪ್ ಮೆಸೇಜಿಗೆ ಸದಾ ಉತ್ತರಿಸುತ್ತಿದ್ದ ನೀವು ಈ ಬಾರಿ ಉತ್ತರಿಸಲೇ ಇಲ್ಲ ಹಾಲ್ದೊಡ್ಡೇರಿ ಸರ್..! appeared first on Public TV.

Source: publictv.in

Source link