ಬೇರೊಬ್ಬಳೊಂದಿಗೆ ಪ್ರಿಯಕರನ ನಿಶ್ಚಿತಾರ್ಥ- ದಯಾಮರಣ ನೀಡುವಂತೆ ಯುವತಿ, ಪೋಷಕರ ಆಕ್ರಂದನ

ಕೋಲಾರ: ಪ್ರೀತಿಸಿದ ಯುವಕ ಕೈಕೊಟ್ಟು, ಮತ್ತೊಬ್ಬ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇತ್ತ ಪ್ರೀತಿಸಿದವನಿಲ್ಲದೆ ದಯಾಮರಣ ಕೋರಿ ಯುವತಿ ಜಿಲ್ಲಾ ರಕ್ಷಣಾಧಿಕಾರಿಗಳ ಮೊರೆ ಹೋಗಿದ್ದಾಳೆ.

ಕೋಲಾರ ತಾಲೂಕಿನ ಅರಾಭಿಕೊತ್ತನೂರು ನಿವಾಸಿಯಾಗಿರುವ ಅಂಬಿಕಾ ಸುಮಾರು 10 ವರ್ಷಗಳಿಂದ ಮಹೇಶ್‍ನನ್ನು ಪ್ರೀತಿಸಿಸುತ್ತಿದ್ದರು. ಮಹೇಶ್ ಸಹ ಅರಾಭಿಕೊತ್ತನೂರು ಗ್ರಾಮದವನೇ ಆಗಿರುವುದರಿಂದ ಇಬ್ಬರ ನಡುವೆ ಇದ್ದ ಪ್ರೀತಿ ದೈಹಿಕ ಸಂಪರ್ಕದವರಿಗೆ ಬೆಳೆದಿತ್ತು. ಅಂಬಿಕಾಳನ್ನು ಸಂಪೂರ್ಣವಾಗಿ ನಂಬಿಸಿದ್ದ ಮಹೇಶ್, ನಾನು ನಿನ್ನನು ಹೇಗಿದ್ರು ಮದುವೆ ಆಗುತ್ತೇನೆ, ನಮ್ಮಿಬ್ಬರ ನಡುವೆ ಇರುವ ಈ ಸಂಬಂಧವನ್ನು ಗುಟ್ಟಾಗಿಡು ಎಂದು ಅಂಬಿಕಾಳಿಗೆ ಹೇಳಿದ್ದಾನೆ. ಆದರೆ ಮಾರ್ಚ್ 15ರಂದು ಮಹೇಶ್ ತನ್ನ ಮನೆಯಲ್ಲಿ ತೋರಿಸಿದ್ದ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ.

ವಿಷಯ ತಿಳಿದ ಅಂಬಿಕಾ, ಎಷ್ಟೇ ಮನವಿ ಮಾಡಿದರೂ ಮಹೇಶ್ ತನ್ನ ಮನೆಯವರ ಮಾತಿನಂತೆ ನಡೆದುಕೊಂಡಿದ್ದಾನಂತೆ. ಬಳಿಕ ಬೇಸತ್ತ ಅಂಬಿಕಾ ಮಾರ್ಚ್ 26ರಂದು ಮಹೇಶ್ ವಿರುದ್ಧ ರೇಪ್ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ. ಮಹೇಶ್ ಜಾಮೀನಿನ ಮೇಲೆ ಹೊರಗಡೆ ಬಂದಿದ್ದು, ಬಳಿಕ ಅಂಬಿಕಾಳನ್ನು ಮದುವೆ ಆಗುತ್ತಾನೆ. ಆದರೆ ಒಂದು ದಿನವೂ ಸಂಸಾರ ಮಾಡದೆ ಹೋದವನು ಈ ವರೆಗೆ ಪತ್ತೆ ಇಲ್ಲ. ಹೀಗಾಗಿ ಇಂದು ಎಸ್‍ಪಿ ಕಚೇರಿಗೆ ತೆರಳಿ ನನ್ನ ಸಾವಿಗೆ ಪತಿ ಮಹೇಶ್, ಆತನ ಕುಟುಂಬಸ್ಥರು ಕಾರಣ ಎಂದು ತಂದೆ ಮುನಿಯಪ್ಪ, ತಾಯಿ ಲಕ್ಷ್ಮಮ್ಮ ಮೂರು ಜನರಿಗೂ ದಯಾಮರಣ ನೀಡಿ ಎಂದು ಕೋರಿ ಎಸ್‍ಪಿಗೆ ಅರ್ಜಿ ಸಲ್ಲಿಸಿದ್ದಾರೆ.

ಕಣ್ಣೀರಲ್ಲೇ ಕೈ ತೊಳೆಯುತ್ತಿರುವ ಅಂಬಿಕಾಳ ಕುಟುಂಬಸ್ಥರು ಚಪ್ಪಲಿ ಸವೆಸಿದರೂ, ಕೋಲಾರ ಗ್ರಾಮಾಂತರ ಪೊಲೀಸರಿಂದ ನ್ಯಾಯ ಸಿಗುತ್ತಿಲ್ಲ. ಮಹೇಶನ ಮನೆಯ ಮುಂಭಾಗ ಕುಳಿತು ಏಕಾಂಗಿಯಾಗಿ ಪ್ರತಿಭಟನೆ ಮಾಡಿದರೂ ಯಾರೂ ಅಂಬಿಕಾಗೆ ನ್ಯಾಯ ಕೊಡಿಸಿಲ್ಲವಂತೆ. ಹಣ ಪಡೆದು ಪೊಲೀಸರು ನಮಗೆ ಅನ್ಯಾಯ ಮಾಡಿದ್ದಾರೆ ಎಂದು ಅಂಬಿಕಾ ಆರೋಪ ಮಾಡುತ್ತಿದ್ದಾರೆ. ಕೇಸ್ ವಾಪಸ್ ತೆಗೆದಿಕೊಳ್ಳಲು ನಂಬಿಸಿ ಮೇ 9 ರಂದು ಮಹೇಶ್ ಮದುವೆಯಾಗಿದ್ದಾನಂತೆ. ಅಂಬಿಕಾ ಬಳಿ ತನ್ನ ಮದುವೆಯ ಒಂದು ಫೋಟೋ ಸಹ ಇಲ್ಲ. ಹೀಗಾಗಿ ಮುಂದೆ ಏನು ಮಾಡಬೇಕು ಎಂದು ದಿಕ್ಕು ತೋಚದ ಪರಿಸ್ಥಿತಿಯಲ್ಲಿ ಇದ್ದಾರೆ.

blank

ಇತ್ತ ಮಗಳ ಈ ಪರಿಸ್ಥಿತಿ ನೋಡದೆ ಮಾನಕ್ಕೆ ಅಂಜಿ ವಯಸ್ಸಾಗಿರುವ ಅಂಬಿಕಾ ಪೋಷಕರು ಊರು ಖಾಲಿ ಮಾಡಿಕೊಂಡು ವೇಮಗಲ್‍ನಲ್ಲಿ ವಾಸಿಸುತ್ತಿದ್ದಾರೆ. ನನ್ನ ಮಗಳು ಮಹೇಶನ ಜೊತೆ ಸಂಸಾರ ಮಾಡಲು ಅವಕಾಶ ಮಾಡಿಕೊಡಿ, ಇಲ್ಲವಾದರೆ ನನ್ನ ಮಗಳ ಜೊತೆ ನಮಗೂ ದಯಾಮರಣ ಕೊಡಿ ಎಂದು ಅಂಗಲಾಚುತ್ತಿದ್ದಾರೆ.

The post ಬೇರೊಬ್ಬಳೊಂದಿಗೆ ಪ್ರಿಯಕರನ ನಿಶ್ಚಿತಾರ್ಥ- ದಯಾಮರಣ ನೀಡುವಂತೆ ಯುವತಿ, ಪೋಷಕರ ಆಕ್ರಂದನ appeared first on Public TV.

Source: publictv.in

Source link