ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

1. ಇಂದು ಅನ್ಲಾಕ್ 3.0 ಭವಿಷ್ಯ
ಕೊರೊನಾ ಸೋಂಕು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಮೂರನೇ ಹಂತದ ಅನ್ಲಾಕ್ ಬಗ್ಗೆ ಸರ್ಕಾರ ಇಂದು ತೀರ್ಮಾನ ಕೈಗೊಳ್ಳಲಿದೆ. ಸಿಎಂ ಬಿಎಸ್ವೈ ತಮ್ಮ ಗೃಹ ಕಚೇರಿಯಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿ ಜುಲೈ 5 ರಿಂದ ಮೂರನೇ ಹಂತದ ಅನ್ಲಾಕ್ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಇನ್ನು ಜುಲೈ 5 ರ ಬಳಿಕ ರಾಜ್ಯದಲ್ಲಿ ಅನ್‌ಲಾಕ್ 3.0 ಪ್ರಕ್ರಿಯೆ ಹೇಗಿರಬೇಕು ಎನ್ನುವ ಬಗ್ಗೆ ಸಭೆಯಲ್ಲಿ ಚರ್ಚಿಸಲಿದ್ದು, ಸಭೆಯ ನಂತರ ಸಿಎಂ ಸುದ್ದಿಗೋಷ್ಠಿ ನಡೆಸಲಿದ್ದಾರೆ.

2. ಅಪಘಾತದ ಬಳಿಕ ಡ್ಯಾನ್ಸ್ ಮಾಡಿದ್ರಾ ಜಗ್ಗೇಶ್ ಪುತ್ರ?
ನವರಸ ನಾಯಕ ಜಗ್ಗೇಶ್ ಪುತ್ರ ಯತಿರಾಜ್ ಅಪಘಾತಕ್ಕೀಡಾದ ನಂತರದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡ್ತಿದೆ. ಯತಿರಾಜ್ ಡ್ಯಾನ್ಸ್ ಮಾಡಿರೋದನ್ನ ವಿಡಿಯೋದಲ್ಲಿ ಕಾಣಬಹುದು. ಚಿಕ್ಕಬಳ್ಳಾಪುರ ಸಮೀಪ ಅಪಘಾತ ನಡೆದ ನಂತರ ಪಕ್ಕದ ಎಸ್ಟೇಟ್ ಸೇರಿದ್ದ ಯತಿರಾಜ್‌, ಎಸ್ಟೇಟ್ ರಸ್ತೆಯಲ್ಲಿ ವಾಕಿಂಗ್ ಮಾಡ್ತಾ ಡ್ಯಾನ್ಸ್ ಮಾಡಿದ್ದು ವಿಡಿಯೋದಲ್ಲಿದೆ ಎನ್ನಲಾಗಿದೆ.

3. ಸಿಎಂ ರಾಜೀನಾಮೆ, ದೇವಭೂಮಿಯಲ್ಲಿ ನಾಯಕತ್ವ ಬಿಕ್ಕಟ್ಟು
ಸಿಎಂ ಆದ ಕೇವಲ ನಾಲ್ಕೇ ತಿಂಗಳಲ್ಲಿ ಉತ್ತರಾಖಂಡ್​​ನ ಸಿಎಂ ತೀರಥ್ ಸಿಂಗ್ ರಾವತ್ ರಾಜೀನಾಮೆ ನೀಡಿದ್ದಾರೆ. ಸಿಎಂ ಆಗಲು ಶಾಸಕರಾಗಿರಬೇಕು. ಪ್ರಸ್ತುತ ಸಂಸದರಾಗಿರುವ ರಾವತ್‌ ಸಿಎಂ ಗದ್ದುಗೆಯಲ್ಲಿ ಮುಂದುವರಿಯಲು ಸೆಪ್ಟೆಂಬರ್ 10 ರೊಳಗೆ ಶಾಸಕರಾಗಿ ಆಯ್ಕೆಯಾಗಬೇಕಾಗಿದೆ. ಆದ್ರೆ ಕೊರೊನಾದಿಂದಾಗಿ ಗಂಗೋತ್ರಿ ಮತ್ತು ಹಲ್ದವಾನಿ ಕ್ಷೇತ್ರಗಳ ಉಪ ಚುನಾವಣೆಯನ್ನು ಚುನಾವಣೆ ಆಯೋಗ ಮುಂದೂಡಿದ್ದು, ತೀರಥ್ ಪಾಲಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ. ಒಂದು ವೇಳೆ ಉಪಚುನಾವಣೆ ನಡೆಯದಿದ್ದರೆ ಬಿಜೆಪಿ ಹೈಕಮಾಂಡ್ಗೂ ನಾಯಕತ್ವ ಬದಲಾವಣೆ ಅನಿವಾರ್ಯವಾಗಲಿದ್ದು, ಶಾಸಕರಲ್ಲಿ ಒಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕಿದೆ. ಇನ್ನು ಇಂದು ಡೆಹ್ರಾಡೂನ್ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಮುಂದಿನ ಸಿಎಂ ಯಾರು ಅನ್ನೋದು ತಿಳಿಯಲಿದೆ.

4. ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ ವಿರುದ್ಧ ಪ್ರಧಾನಿಗೆ ಪತ್ರ
ಸಾಲಿಸಿಟರ್ ಜನರಲ್‌ ತುಷಾರ್‌ ಮೆಹ್ತಾ ಅವರನ್ನ ಹುದ್ದೆಯಿಂದ ಕೈಬಿಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಅಂತ ತೃಣಮೂಲ ಕಾಂಗ್ರೆಸ್‌ನ ಮೂವರು ಸಂಸದರು ಪ್ರಧಾನಿ ನರೇಂದ್ರ ಮೋದಿಗೆ ಆಗ್ರಹಿಸಿದ್ದಾರೆ. ನಾರದ ಹಾಗೂ ಶ್ರದ್ಧಾ ಚಿಟ್‌ ಫಂಡ್‌ ಹಗರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಪಶ್ಚಿಮ ಬಂಗಾಳ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಅವರನ್ನು ತುಷಾರ್‌ ಮೆಹ್ತಾ ಭೇಟಿ ಮಾಡಿದ್ದಾರೆ ಎನ್ನಲಾಗಿದ್ದು, ಇದನ್ನು ಮೂವರು ಟಿಎಂಸಿ ಸಂಸದರು ಪ್ರಶ್ನಿಸಿದ್ದಾರೆ.

5. ಟಿಟಿಡಿ ಸೇವಾ ಕೌಂಟರ್ ಖಾಸಗೀಕರಣಕ್ಕೆ ವಿರೋಧ
ಟಿಟಿಡಿ ದೇವಸ್ಥಾನದ ವಾಣಿಜ್ಯೀಕರಣ ಹಾಗೂ ಖಾಸಗೀಕರಣದ ವಿರುದ್ಧ ಮಾಜಿ ಸಿಎಂ ಚಂದ್ರಬಾಬು ನಾಯ್ಡು ದನಿ ಎತ್ತಿದ್ದಾರೆ. ತಿರುಮಲದ ಶ್ರೀ ತಿಮ್ಮಪ್ಪನ ದೇಗುಲದಲ್ಲಿ ಶ್ರೀವಾರಿ ಸೇವಾ ಕೌಂಟರ್ಗಳನ್ನು ಖಾಸಗಿಯವರಿಗೆ ಒಪ್ಪಿಸುವುದಕ್ಕೆ ಟಿಡಿಪಿ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂತಹ ದೈವತ್ವದ ಸ್ಥಳದಲ್ಲಿಯೂ ಜಗನ್ ಸರ್ಕಾರ ಕಮಿಶನ್ ಹೊಡೆಯಲು ಯತ್ನಿಸುತ್ತಿದ್ದು, ದೇಗುಲವನ್ನ ಗೊಂದಲಗಳ ಗೂಡಾಗಿ ಪರಿವರ್ತಿಸುತ್ತಿದ್ದಾರೆ ಅಂತ ಆರೋಪಿಸಿದ್ದಾರೆ.

6. ಬಾಲಿವುಡ್ ನಟ ಡಿನೊ ಮೊರಿಯಾ ಆಸ್ತಿ ಜಪ್ತಿ
ಬ್ಯಾಂಕ್​ಗೆ 14,500 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಬಾಲಿವುಡ್ ನಟ ಡಿನೊ ಮೊರಿಯಾ ಹಾಗೂ ರಾಜ್ಯಸಭಾ ಮಾಜಿ ಸದಸ್ಯ ಅಹ್ಮದ್ ಪಟೇಲ್ ಅಳಿಯನ ಕೋಟಿಗಟ್ಟಲೆ ಬೆಲೆ ಬಾಳುವ ಆಸ್ತಿ ಜಪ್ತಿ ಮಾಡಲಾಗಿದೆ. ಗುಜರಾತ್ ಮೂಲದ ಉದ್ಯಮಿ ಸಂದೇಸಾರ ಸೋದರರಿಂದ ಬ್ಯಾಂಕ್ ಗೆ 14,500 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಡಿನೊ ಮೊರಿಯಾ ಮತ್ತು ಅಹ್ಮದ್ ಪಟೇಲ್ ಅವರ ಅಳಿಯ ಡಿಜೆ ಅಬ್ದುಲ್ ಖಲೀಲ್ ಬಾಚೂ ಅಲಿಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

7. ಮತ್ತೆ ಟಿಕ್​ಟಾಕ್ ಬ್ಯಾನ್ ಮಾಡಿದ ಪಾಕಿಸ್ತಾನ
ಚೀನಾವನ್ನು ತನ್ನ ಚಡ್ಡಿ ದೋಸ್ತ್ ಅಂತಾನೇ ಕರೆದುಕೊಳ್ಳುವ ಪಾಕಿಸ್ತಾನ ಮತ್ತೆ ಚೀನಾದ ಟಿಕ್​ಟಾಕ್ ಆ್ಯಪ್ ಬ್ಯಾನ್ ಮಾಡಿದೆ. ಟಿಕ್​ಟಾಕ್ ಮೇಲೆ ಎರಡನೇ ಬಾರಿ ನಿಷೇಧ ಹೇರಿ ಪಾಕಿಸ್ತಾನದ ಉನ್ನತ ನ್ಯಾಯಾಲಯ ಆದೇಶ ನೀಡಿದೆ. ಟಿಕ್​ಟಾಕ್ ಆ್ಯಪ್ ದೇಶದಲ್ಲಿ ಅನೈತಿಕತೆ ಮತ್ತು ಅಶ್ಲೀಲತೆ ಹರಡುತ್ತಿದೆ ಎಂದು ನಾಗರೀಕರು ದೂರು ನೀಡಿದ್ರು. ಹೀಗಾಗಿ ಟಿಕ್​ಟಾಕ್ ಅನ್ನು ನಿಷೇಧಿಸಲಾಗಿದೆ. ಪುನಃ ಆ್ಯಪ್ ಸ್ಥಾಪಿಸಲು ಅವಕಾಶ ನೀಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಸಿಂಧ್ ಹೈ ಕೋರ್ಟ್ ವಿಚಾರಣೆ ಮುಗಿಯುವವರೆಗೂ ದೇಶದಲ್ಲಿ ಟಿಕ್​ಟಾಕ್ ನಿಷೇಧಿಸುವಂತೆ ಪಾಕಿಸ್ತಾನ ಟೆಲಿಕಮ್ಯೂನಿಕೆಷನ್ ಅಥಾರಿಟಿಗೆ ತಿಳಿಸಿತ್ತು.

8. ಗಡಿಯಲ್ಲಿ ಮತ್ತೆ ಪಾಕ್ ಡ್ರೋಣ್ ಪತ್ತೆ
ಜಮ್ಮು ಅಂತರಾಷ್ಟ್ರೀಯ ಗಡಿ ಮೂಲಕ ಭಾರತದೊಳಗೆ ಪ್ರವೇಶಿಸಿದ್ದ ಪಾಕಿಸ್ತಾನದ ಕಣ್ಗಾವಲು ಡ್ರೋಣ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಅರ್ನಿಯಾ ಸೆಕ್ಟರ್​ನಲ್ಲಿ ಈ ಘಟನೆ ನಡೆದಿದ್ದು ಗಡಿ ಭದ್ರತಾ ಪಡೆ ಹಾಗೂ ಬಿಎಸ್ಎಫ್ ಗುಂಡಿನ ದಾಳಿ ನಡೆಸುತ್ತಿದ್ದಂತೆ ಡ್ರೋಣ್ ಎಸ್ಕೇಪ್ ಆಗಿದೆ. ಇನ್ನು ಜಮ್ಮು ವಾಯುಪಡೆ ಠಾಣೆ ಮೇಲಿನ ಡ್ರೋಣ್ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.

9. ಬಿಸಿಸಿಐ ಮನವಿಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಸ್ಪಂದನೆ
ಇಂಗ್ಲೆಂಡ್‌ ವಿರುದ್ಧ ಆಗಸ್ಟ್ 4ರಿಂದ ಆರಂಭಗೊಳ್ಳಲಿರುವ ಟೆಸ್ಟ್‌ ಸರಣಿಗೂ ಮುನ್ನ ಟೀಂ ಇಂಡಿಯಾ ಆಡಲಿರುವ ಅಭ್ಯಾಸ ಪಂದ್ಯಕ್ಕೆ ಸ್ಥಳೀಯ ತಂಡ ಒದಗಿಸಲು ಇಂಗ್ಲೆಂಡ್‌ ಕ್ರಿಕೆಟ್‌ ಮಂಡಳಿ ಗ್ರಿನ್ ಸಿಗ್ನಲ್ ನೀಡಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೋಲಿನ ಬಳಿಕ ಬಿಸಿಸಿಐ, ಅಭ್ಯಾಸ ಪಂದ್ಯಗಳನ್ನ ಆಯೋಜಿಸಲು ಇಂಗ್ಲೆಂಡ್ ಬೋರ್ಡ್ಗೆ ಮನವಿ ಮಾಡಿತ್ತು. ಆದ್ರೆ ಇದಕ್ಕೆ ನಿರಾಕಸಿದ್ದ ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್, ಇಂಟ್ರಾ ಸ್ಕ್ವಾಡ್ ಮ್ಯಾಚ್ ಆಡುವಂತೆ ಸೂಚಿಸಿತ್ತು. ಆದ್ರೆ ಸದ್ಯದ ಮಾಹಿತಿ ಪ್ರಕಾರ, ಡುರಮ್‌ನಲ್ಲಿ ಜುಲೈ 15ರಿಂದ ಟೀಮ್ ಇಂಡಿಯಾ, 4 ದಿನಗಳ ಅಭ್ಯಾಸ ಪಂದ್ಯಗಳನ್ನ ಆಡಲಿದೆ.

10. ಕೊಹ್ಲಿ ಒಂದು ಇನ್ಸ್ಟಾಗ್ರಾಂ ಪೋಸ್ಟ್​ಗೆ ₹5 ಕೋಟಿ
ಇನ್ಸ್ಟಾಗ್ರಾಮ್ನಲ್ಲಿ ಮಾಡುವ ಪ್ರತಿ ಪೋಸ್ಟ್ಗೆ ಅತೀಹೆಚ್ಚು ಹಣ ಪಡೆಯುವ ಕ್ರಿಡಾಪಟುಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 4 ನೇ ಸ್ಥಾನದಲ್ಲಿದ್ದಾರೆ. 12 ಕೋಟಿ ಪಡೆಯುವ ಮೂಲಕ ಫುಟ್ಬಾಲ್ ಆಟಗಾರರಾದ ಕ್ರಿಸ್ಟಿಯಾನೋ ರೊನಾಲ್ಡೋ ಅಗ್ರಸ್ಥಾನದಲ್ಲಿದ್ರೆ ಸುಮಾರು 9 ಕೋಟಿ ಪಡೆಯುವ ಮೂಲಕ ಮೆಸ್ಸಿ ದ್ವಿತೀಯ ಸ್ಥಾನ ಹಾಗೂ 6 ಕೋಟಿ ಪಡೆಯುವ ನೇಯ್ಮರ್ ತೃತೀಯ ಸ್ಥಾನದಲ್ಲಿದ್ದಾರೆ. ಹಲವು ಅಂತರಾಷ್ಟ್ರೀಯ ಬ್ರ್ಯಾಂಡ್ಗಳಿಗೆ ಆಟಗಾರರು ರಾಯಭಾರಿಗಳಾಗಿದ್ದು ಇನ್ಸ್ಟಾಗ್ರಾಂನಲ್ಲಿ ಪ್ರಚಾರ ಮಾಡಿದ್ದಾರೆ.

 

 

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link