ಉತ್ತರಾಖಂಡ್ ಮುಂದಿನ ಮುಖ್ಯಮಂತ್ರಿ ಯಾರು?

ನವದೆಹಲಿ: ನಾಲ್ಕು ತಿಂಗಳ ಹಿಂದಷ್ಟೇ ಉತ್ತರಾಖಂಡ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಸಂಸದ ತೀರ್ಥ್ ಸಿಂಗ್ ರಾವತ್ ನಿನ್ನೆ ತಡ ರಾತ್ರಿ ರಾಜೀನಾಮೆ ನೀಡಿದ್ದಾರೆ. 115 ದಿನಗಳ ಆಡಳಿತದ ಬಳಿಕ ಹೈಕಮಾಂಡ್ ಸೂಚನೆ ಮೇರೆಗೆ ಅವರು ರಾಜೀನಾಮೆ ನೀಡಿದ್ದಾರೆ. ಇದೀಗ ಉತ್ತರಾಖಂಡ ಮುಂದಿನ ಸಿಎಂ ಯಾರು ಅನ್ನೋ ಲೆಕ್ಕಾಚಾರಗಳು ನಡೆಯುತ್ತಿವೆ.

ಮೂಲಗಳ ಪ್ರಕಾರ, ಉನ್ನತ ಶಿಕ್ಷಣ ಸಚಿವರಾಗಿರುವ ಧನ್ ಸಿಂಗ್ ರಾವತ್, ಮಾಜಿ ರಾಜ್ಯಧ್ಯಕ್ಷ ಬನ್ಶಿಧರ್ ಭಗತ್, ನೀರಾವರಿ ಸಚಿವ ಸತ್ಪಾಲ್ ಮಹಾರಾಜ್ ಮತ್ತು ಅರಣ್ಯ ಸಚಿವ ಹರಕ್ ಸಿಂಗ್ ರಾವತ್ ಸಿಎಂ ಸ್ಥಾನದಲ್ಲಿ ರೇಸ್‍ನಲ್ಲಿದ್ದಾರೆ. ಕಳೆದ ಬಾರಿ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನೀಡಿದಾಗ ಧನ್ ಸಿಂಗ್ ರಾವತ್ ಹೆಸರು ಮುಂಚೂಣಿಯಲ್ಲಿತ್ತು.

2013ರ ಪ್ರವಾಹದ ಬಳಿಕ ಕೇದಾರನಾಥ್ ಮರು ನಿರ್ಮಾಣಕ್ಕೆ ಸಹಾಯ ಮಾಡಿದ ನಿವೃತ್ತ ಕರ್ನಲ್ ಅಜಯ್ ಕೋತಿಯಾಲ್ ಗೆ ಆಮ್ ಅದ್ಮಿ ಪಕ್ಷದಿಂದ ಉಪ ಚುನಾವಣೆಗೆ ಟಿಕೆಟ್ ಘೋಷಣೆ ಬಳಿಕ ಬಿಜೆಪಿ ಹೈಕಮಾಂಡ್ ಇಂತದೊಂದು ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ. ತೀರ್ಥ್ ಸಿಂಗ್ ರಾವತ್, ಪೌರಿ ಲೋಕಸಭೆ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ. ಮಾರ್ಚ್ 10 ರಂದು ಅವರು ಸಿಎಂ ಆಗಿ ಪ್ರಮಾಣ ವಚನ ಪಡೆದುಕೊಂಡಿದ್ದರು. ಹಾಲಿ ಸಂಸದರಾಗಿರುವ ಕಾರಣ ಅವರು ಸೆಪ್ಟೆಂಬರ್ 10 ರೊಳಗೆ ವಿಧಾನಸಭೆಗೆ ಆಯ್ಕೆಯಾಗಬೇಕಿತ್ತು.

ಸದ್ಯ ಗಂಗೋತ್ರಿ ಮತ್ತು ಹಲ್ದ್ವಾನಿ ಕ್ಷೇತ್ರಗಳು ಖಾಲಿ ಇದ್ದು ಈ ಎರಡು ಕ್ಷೇತ್ರಗಳ ಪೈಕಿ ಒಂದರಿಂದ ತೀರಥ್ ಸಿಂಗ್ ರಾವತ್ ಆಯ್ಕೆಯಾಗಬೇಕಿತ್ತು. ಆದರೆ ಕೊರೊನಾ ಕಾರಣಗಳಿಂದ ಸದ್ಯ ಕೇಂದ್ರ ಚುನಾವಣಾ ಆಯೋಗ ಈ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸುವುದು ಅನುಮಾನ ಎನ್ನಲಾಗಿದ್ದು, ಈ ಕಾರಣಗಳಿಂದ ರಾಜೀನಾಮೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿದ್ರೆ ಕೊರೊನಾ ಬರಲ್ಲ: ತೀರ್ಥ್ ಸಿಂಗ್ ರಾವತ್

ಸಿಎಂ ರಾಜೀನಾಮೆ ಬಳಿಕ ಬಿಜೆಪಿ ಹೈಕಮಾಂಡ್ ಉತ್ತರಾಖಂಡ್‍ಗೆ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರನ್ನು ವೀಕ್ಷಕರಾಗಿ ಕಳುಹಿಸಿದ್ದು ಮುಂದಿನ ಸಿಎಂ ಆಯ್ಕೆ ಬಗ್ಗೆ ಶಾಸಕರ ಅಭಿಪ್ರಾಯ ಸಂಗ್ರಹಿಸಲು ಸೂಚಿಸಿದೆ. ಇಂದು ಡೆಹ್ರಾಡೂನ್‍ನಲ್ಲಿರುವ ಪಕ್ಷದ ಕಚೇರಿಯಲ್ಲಿ ಎಲ್ಲ ಶಾಸಕರು ಸಭೆ ಸೇರಲಿದ್ದು ಸಿಎಂ ಆಯ್ಕೆಯಾಗಲಿದೆ. ಇದನ್ನೂ ಓದಿ: ಶಾರ್ಟ್ಸ್ ಧರಿಸಿ ಅಂಗಾಂಗ ಪ್ರದರ್ಶನಕ್ಕೆ ಕಾಲೇಜಿಗೆ ಬರೋದಾ? ಮಹಿಳೆಯರ ಉಡುಪು ಪ್ರಶ್ನಿಸಿದ ಸಿಎಂ ರಾವತ್

The post ಉತ್ತರಾಖಂಡ್ ಮುಂದಿನ ಮುಖ್ಯಮಂತ್ರಿ ಯಾರು? appeared first on Public TV.

Source: publictv.in

Source link