ಮೊದಲ ಪತ್ನಿ 16 ವರ್ಷ.. ಎರಡನೇ ಪತ್ನಿ 15 ವರ್ಷ.. ಇದು ಆಮಿರ್ ಖಾನ್ ಮ್ಯಾರೇಜ್​ ಸ್ಟೋರಿ

ಮೊದಲ ಪತ್ನಿ 16 ವರ್ಷ.. ಎರಡನೇ ಪತ್ನಿ 15 ವರ್ಷ.. ಇದು ಆಮಿರ್ ಖಾನ್ ಮ್ಯಾರೇಜ್​ ಸ್ಟೋರಿ

ಆಮಿರ್​ ಖಾನ್ ಮತ್ತು ಕಿರಣ್​ ರಾವ್ 15 ವರ್ಷಗಳ ದಾಂಪತ್ಯ ಜೀವನಕ್ಕೆ ತಿಲಾಂಜಲಿ ಹಾಡಿದ್ದು, ಇಬ್ಬರೂ ವಿಚ್ಛೇದನ ಪಡೆಯುತ್ತಿರುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಕಿರಣ್​ ರಾವ್​ ಅವರನ್ನು ವಿವಾಹ ಆಗುವುದಕ್ಕೂ ಮುನ್ನ ಆಮಿರ್ ಖಾನ್​ ರೀನಾ ದತ್ತ ಅವರನ್ನು ಮದುವೆಯಾಗಿ 16 ವರ್ಷಗಳ ದಾಂಪತ್ಯ ಜೀವನ ನಡೆಸಿದ್ದರು. ಇಬ್ಬರ ವಿವಾಹ 2002ರಲ್ಲಿ ಅಂತ್ಯವಾಗಿತ್ತು. ಆ ವೇಳೆ ಇಬ್ಬರಿಗೂ ಜುನೈದ್ ಖಾನ್, ಇರಾ ಖಾನ್ ಎಂಬ ಪುತ್ರ ಹಾಗೂ ಪುತ್ರಿ ಜನಿಸಿದ್ದರು.

ಇನ್ನು ರೀನಾ ದತ್ತ ಹಾಗೂ ಅಮಿರ್ ಖಾನ್ ಅವರ ಸ್ಟೋರಿ ನೋಡುವುದಾದರೆ ಸಿನಿಮಾ ಸ್ಟೈಲ್​​ನಲ್ಲೇ ಇಬ್ಬರೂ ಒಂದಾಗಿದ್ದರು. ಅಕ್ಕಪಕ್ಕದ ಮನೆಯವರಾಗಿದ್ದ ಇಬ್ಬರೂ ಕಿಟಕಿಯಿಂದಲೇ ಒಬ್ಬರನ್ನು ಒಬ್ಬರು ನೋಡಿಕೊಂಡು ಪ್ರೀತಿಯ ಬಲೆಯಲ್ಲಿ ಸಿಲುಕಿದ್ದರು.
ಮೊದಲು ಆಮಿರ್​ ಖಾನ್, ರೀನಾ ದತ್ತಗೆ ತಮ್ಮ ಪ್ರೇಮ ನಿವೇದನೆಯನ್ನು ವ್ಯಕ್ತಪಡಿಸಿದ ಸಂದರ್ಭದಲ್ಲಿ ರೀನಾ ಅದನ್ನು ನಿರಾಕರಿಸಿದ್ದರು. ಆದರೆ ಇದನ್ನು ಊಹೆಯೂ ಮಾಡದ ಅಮಿರ್ ಖಾನ್ ಸಾಕಷ್ಟು ದಿನ ಮನೆಯ ಕಿಟಕಿ ಬಳಿ ತೆರಳಲಿಲ್ಲ. ಕೆಲ ದಿನಗಳ ಬಳಿಕ ಮತ್ತೆ ರೀನಾ ಎದುರು ಅಮಿರ್ ಖಾನ್ ನಿಂತ ಸಂದರ್ಭದಲ್ಲೂ ರೀನಾ ನೋ ಎಂದೇ ಹೇಳಿದ್ದರು ಎಂದು ಸಂದರ್ಶನವೊಂದರಲ್ಲಿ ಸ್ವತಃ ಅಮಿರ್ ಖಾನ್ ಹೇಳಿಕೊಂಡಿದ್ದರು.

ರಕ್ತದಲ್ಲಿ ಪತ್ರ ಬರೆದಿದ್ದ ಅಮಿರ್ ಖಾನ್..
ಅಮಿರ್​, ರೀನಾ ಪ್ರೀತಿಯ ಬಂಧ ಶುರುವಾದ ಬಳಿಕ ತನ್ನ ಪ್ರೀತಿಯ ಅಳವನ್ನು ತಿಳಿಸಲು ಪ್ರಯತ್ನಿಸಿದ್ದ ಅಮಿರ್ ಖಾನ್​, ತಮ್ಮ ರಕ್ತದಲ್ಲಿ ಪತ್ರಬರೆದು ಪ್ರೀತಿಯ ಕಾಣಿಕೆಯಾಗಿ ನೀಡಿದ್ದರು. ಆದರೆ ಇದು ರೀನಾ ಅವರಿಗೆ ಇಷ್ಟವಾಗಿರಲಿಲ್ಲ. ಯಾವುದೇ ಕಾರಣಕ್ಕೂ ಇನ್ನು ಮುಂದೆ ಇಂತಹ ಸ್ಟಂಟ್​ಗಳನ್ನು ಮಾಡಬೇಡ ಎಂದು ಆಮಿರ್​​ ಖಾನ್​ಗೆ ರೀನಾ ಎಚ್ಚರಿಕೆಯನ್ನು ನೀಡಿದ್ದರು. ಆ ವೇಳೆ ಅಮಿರ್​ ಖಾನ್​ಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ಇದಲ್ಲ ಎಂದು ಅವರಿಗೆ ಅರಿವಾಗಿತ್ತು.

ಲಗಾನ್​ ಸಿನಿಮಾ ನಿರ್ಮಾಣ ಮಾಡಲು ರೀನಾ ನೆರವು..
ಜೂನ್ 15ಕ್ಕೆ ಲಗಾನ್ ಸಿನಿಮಾ ಬಿಡುಗಡೆಯಾಗಿ 20 ವರ್ಷ ಕಳೆದಿದೆ. 2001ರಲ್ಲಿ ಬಿಡುಗಡೆಯಾಗಿದ್ದ ಲಗಾನ್ ಸಿನಿಮಾ ನಿರ್ಮಾಣದ ವೇಳೆ ರೀನಾ ದತ್ತ ನೆರವಾಗಿದ್ದ ಬಗ್ಗೆ ಆಮಿರ್ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದರು. ಆಮಿರ್ ಖಾನ್ ಅವರ ‘ಕಯಾಮತ್ ಸೆ ಕಯಾಮತ್ ತಕ್’ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟಿದ್ದ ರೀನಾ ದತ್ತ, ಮೊದಲ ಬಾರಿಗೆ ನಿರ್ಮಾಪಕರಾಗಿ ಲಗಾನ್​ಗೆ ಬಂಡವಾಳ ಹೂಡಿಕೆ ಮಾಡಿ ಅಮಿರ್ ಖಾನ್ ಅವರ ಕನಸನ್ನು ನನಸು ಮಾಡಿದ್ದರು.

ವಿಚ್ಛೇದನ ಬಳಿಕವೂ ಆತ್ಮೀಯವಾಗಿದ್ದ ಅಮಿತ್ ಖಾನ್​, ರೀನಾ ದತ್ತ ಸ್ಟೋರಿ
2002ರಲ್ಲಿ ಅಮಿರ್ ಖಾನ್​, ರೀನಾ ದತ್ತ ವಿಚ್ಛೇದನ ಪಡೆದ ಬಳಿಕವೂ ಅವರ ಸ್ನೇಹ ಮುಂದುವರಿದಿತ್ತು. ಇಬ್ಬರೂ ಒಟ್ಟಿಗೆ ಸೇರಿ ಪಾನಿ ಫೌಂಡೇಶನ್ ಆರಂಭ ಮಾಡಿದ್ದರು. ಇದಕ್ಕೆ ರೀನಾ ಅವರೇ ಸಿಇಒ ಆಗಿದ್ದರು. ಇಬ್ಬರ ವಿಚ್ಛೇದನದ ಕುರಿತು ಹಲವು ಕಾರ್ಯಕ್ರಮಗಳಲ್ಲಿ ಮುಕ್ತವಾಗಿ ಮಾತನಾಡಿದ್ದ ಅಮಿರ್​ ಖಾನ್​, ರೀನಾ ಮತ್ತು ನಾನು ಮದುವೆಯಾಗಿ 16 ವರ್ಷಗಳಾಗಿವೆ. ಆದರೆ ನಾವಿಬ್ಬರೂ ಬೇರೆ ಆದಾಗ ಅದು ನಮ್ಮ ಕುಟುಂಬಗಳಿಗೆ ಆಘಾತಕಾರಿಯಾಗಿತ್ತು. ವಿಚ್ಛೇದನದ ಸಂದರ್ಭವನ್ನು ಉತ್ತಮವಾಗಿ ನಿಭಾಯಿಸಲು ಯತ್ನಿಸಿದ್ದೆವು. ಈಗ ನಾವು ಬೇರೆಯಾಗಿದ್ದರೂ ಕೂಡ ಇಬ್ಬರ ನಡುವಿನ ಪ್ರೀತಿ ಅಥವಾ ಗೌರವವನ್ನು ಕಳೆದುಕೊಳ್ಳಲಿಲ್ಲ ಎಂದು ಅಮಿರ್ ಖಾನ್ ಹೇಳಿದ್ದರು.

ಇದನ್ನೂ ಓದಿ: 15 ವರ್ಷದ ದಾಂಪತ್ಯಕ್ಕೆ ಬ್ರೇಕ್: ಬಾಲಿವುಡ್ ನಟ ಆಮೀರ್ ಖಾನ್ ಪತ್ನಿ ಕಿರಣ್ ರಾವ್ ಡಿವೋರ್ಸ್

2005 ರಲ್ಲಿ ಆಮಿರ್ ಖಾನ್ ಕಿರಣ್ ರಾವ್ ಅವರನ್ನ ಕೈಹಿಡಿದಿದ್ದರು. ಇದೀಗ 15 ವರ್ಷಗಳ ನಂತರ ಆಮಿರ್ ಖಾನ್ ಎರಡನೇ ಪತ್ನಿ ಜೊತೆಗೆ ಒಪ್ಪಿತ ಡಿವೋರ್ಸ್​​ ಮಾಡಿಕೊಂಡಿದ್ದಾರೆ. ಇವರಿಬ್ಬರಿಗೂ ಆಜಾದ್ ರಾವ್ ಖಾನ್ ಎಂಬ ಪುತ್ರನಿದ್ದು ಒಬ್ಬರಿಗೊಬ್ಬರು ಸಹಕಾರಿಯಾಗಿ ಆಜಾದ್​ನ ಭವಿಷ್ಯ ರೂಪಿಸಲಿದ್ದೇವೆ ಎಂದು ಜಂಟಿ ಹೇಳಿಕೆ ನೀಡಿದ್ದಾರೆ.

The post ಮೊದಲ ಪತ್ನಿ 16 ವರ್ಷ.. ಎರಡನೇ ಪತ್ನಿ 15 ವರ್ಷ.. ಇದು ಆಮಿರ್ ಖಾನ್ ಮ್ಯಾರೇಜ್​ ಸ್ಟೋರಿ appeared first on News First Kannada.

Source: newsfirstlive.com

Source link