ಕಾರು ಮರಕ್ಕೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ದುರ್ಮರಣ

ನೆಲಮಂಗಲ: ತುಮಕೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದೊಡ್ಡೇರಿ ಕಾಲೋನಿಯ ತಾಳೆಕೆರೆ ಗೇಟ್ ಬಳಿ ನಡೆದಿದೆ.

ತುಮಕೂರಿನಿಂದ ಬೆಂಗಳೂರಿಗೆ ಬರುತ್ತಿದ್ದಾಗ ನೆಲಮಂಗಲ ಸಮೀಪದ ದೊಡ್ಡೇರಿ ಕಾಲೋನಿಯ ತಾಳೆಕೆರೆ ಗೇಟ್ ಬಳಿ ಕಾರಿಗೆ ಶ್ವಾನ ಒಂದು ಅಡ್ಡ ಬಂತೆಂದು ತಪ್ಪಿಸಲು ಹೋಗಿ ಕಾರು ರಸ್ತೆಯ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಂಭೀರ ಗಾಯಗೊಂಡು ನೆಲಮಂಗಲದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ : ನಿಖಿಲ್‍ಗೆ ಗಂಡು ಮಗುವಾಗಲಿದೆ: ವಿನಯ್ ಗುರೂಜಿ

ತುಮಕೂರು ಹೊರಪೇಟೆ ಮೂಲದ ಪವನ್ ಮತ್ತು ಉದಯ್ ಮೃತ ದುರ್ದೈವಿಗಳಾಗಿದ್ದು, ಮಣಿಕಂಠ ಗಂಭೀರ ಗಾಯಗೊಂಡವರು ಎನ್ನಲಾಗಿದೆ. ತುಮಕೂರುನಿಂದ ನೆಲಮಂಗಲ ಮಾರ್ಗವಾಗಿ, ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಕಾರಿಗೆ ಶ್ವಾನ ಅಡ್ಡ ಬಂದ ಕಾರಣ ಕಾರು ಚಲಾಯಿಸುತ್ತಿದ್ದ ಪವನ್ ಅವರ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಪವನ್ ಹಾಗೂ ಮುಂಭಾಗದಲ್ಲಿ ಕೂತಿದ್ದ ಉದಯ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಿಂಬದಿ ಕುಳಿತಿದ್ದ ಮಣಿಕಂಠ ಕಾಲಿಗೆ ಗಂಭೀರ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರಿಸಿದ್ದಾರೆ.

The post ಕಾರು ಮರಕ್ಕೆ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ದುರ್ಮರಣ appeared first on Public TV.

Source: publictv.in

Source link