ಇವತ್ತೇ ಪ್ರಧಾನಿ ನರೇಂದ್ರ ಮೋದಿ ಸಂಪುಟ ಬದಲಾವಣೆ

ನವದೆಹಲಿ: ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಎಂದೇ ಕರೆಯಲಾಗುವ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆ ಮತ್ತು ಹಲವು ರಾಜ್ಯಗಳಲ್ಲಿ ನಾಯಕತ್ವ ಬದಲಾವಣೆಯ ಹಿನ್ನೆಲೆಯಲ್ಲಿ ಇವತ್ತು ಪ್ರಧಾನಿ ಮೋದಿ ಸರ್ಕಾರದ ಸಚಿವ ಸಂಪುಟ ಬದಲಾವಣೆ ಆಗಲಿದೆ. ಹಲವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಿ ಉಳಿದವರಿಗೆ ಮಣೆ ಹಾಕಲಿದ್ದಾರೆ. ಸಂಜೆ 5.30ರಿಂದ 6 ಗಂಟೆ ನಡುವೆ ರಾಷ್ಟ್ರಪತಿ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ.

ಮುಂದಿನ ವರ್ಷ ಉತ್ತರಪ್ರದೇಶ, ಪಂಜಾಬ್, ಗುಜರಾತ್, ಉತ್ತರಾಖಂಡ್‍ನಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ ಪ್ರಮುಖ ಸಮುದಾಯಗಳನ್ನು ಸೆಳೆದುಕೊಳ್ಳುವ ನಿಟ್ಟಿನಲ್ಲಿ ವಿಸ್ತರಣೆಯಲ್ಲಿ ಸಂಸದರಿಗೆ ಅವಕಾಶ ನೀಡಲಾಗುತ್ತದೆ. ಪಂಜಾಬ್‍ನಲ್ಲಿ ಅಕಾಲಿದಳ ಮತ್ತು ಮಹಾರಾಷ್ಟ್ರದಲ್ಲಿ ಶಿವಸೇನೆ ಮೈತ್ರಿಕೂಟದಿಂದ ಹೊರಬಂದಿದೆ. ಹೀಗಾಗಿ 24 ಹೆಚ್ಚು ಹಿಂದುಳಿದ ವರ್ಗಗಳನ್ನೇ ಗುರಿಯಾಗಿಸಿಕೊಂಡು ಸಂಪುಟ ವಿಸ್ತರಣೆ ಲೆಕ್ಕಾಚಾರ ಹಾಕಲಾಗಿದೆ ಎಂಬ ಮಾಹಿತಿ ಇದೆ. ಇನ್ನು ಸಹಕಾರ ಕ್ಷೇತ್ರಕ್ಕಷ್ಟೇ ಪರ್ಯಾಯವಾಗಿ ಮೋದಿ ಸರ್ಕಾರ ಹೊಸ ಖಾತೆಯೊಂದನ್ನು ಸೃಷ್ಟಿಸಿದೆ. ನಿಯಮಗಳ ಪ್ರಕಾರ 81 ಮಂದಿ ಸಂಸದರು ಮಂತ್ರಿ ಆಗಬಹುದು. ಆದರೆ ಈಗ 53 ಸಚಿವರಷ್ಟೇ ಖಾತೆಯಲ್ಲಿದ್ದಾರೆ. ಇದನ್ನೂ ಓದಿ: ಭಿನ್ನರ ಬ್ಲಾಸ್ಟಿಂಗ್ ಹೇಳಿಕೆಗಳ ಬೆನ್ನಲ್ಲೇ ಬಿಜೆಪಿಯಲ್ಲಿ ಚುರುಕಿನ ಬೆಳವಣಿಗೆ

ಕರ್ನಾಟಕದಿಂದ ಯಾರಿಗೆ ಮೋದಿ ಸಂಪುಟದಲ್ಲಿ ಸ್ಥಾನ ಸಿಗಬಹುದು ಅಂತ ನೋಡೋದಾದ್ರೆ ಇಬ್ಬರಿಗೆ ಹೊಸದಾಗಿ ಮೋದಿ ಸಂಪುಟ ಸೇರಬಹುದು ಮತ್ತು ಒಬ್ಬರನ್ನು ಕೈಬಿಡಬಹುದು ಎಂಬ ಮಾಹಿತಿ ಇದೆ. ಆದರೆ ಮಂತ್ರಿ ಸ್ಥಾನದ ರೇಸ್‍ನಲ್ಲಿ ರಾಜ್ಯದ 9 ಸಂಸದರ ಹೆಸರು ಕೇಳಿಬರುತ್ತಿದೆ. ಲಿಂಗಾಯತ, ದಲಿತ ಮತ್ತು ಒಕ್ಕಲಿಗ ಕೋಟಾದಲ್ಲಿ ಕರ್ನಾಟಕದ ಸಂಸದರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಮಾಹಿತಿ ಇದೆ. ಇನ್ನು ಈಗಾಗಲೇ ರಮೇಶ್ ಜಿಗಜಿಣಗಿ, ಉಮೇಶ್ ಜಾಧವ್ ಮತ್ತು ಶೋಭಾ ಕರಂದ್ಲಾಜೆ ದೆಹಲಿಗೆ ಪ್ರಯಾಣಿಸಿದ್ದಾರೆ. ಇದನ್ನೂ ಓದಿ: ಜೂನ್‌ನಲ್ಲಿ 92,849 ಕೋಟಿ ಜಿಎಸ್‌ಟಿ ಸಂಗ್ರಹ – ಕಳೆದ 10 ತಿಂಗಳಲ್ಲಿ ಭಾರೀ ಕಡಿಮೆ

* ರಮೇಶ್ ಜಿಗಜಿಣಗಿ, ವಿಜಯಪುರ ಸಂಸದ
* ನಾರಾಯಣಸ್ವಾಮಿ, ಚಿತ್ರದುರ್ಗ ಸಂಸದ
* ಉಮೇಶ್ ಜಾಧವ್, ಕಲಬುರಗಿ ಸಂಸದ
* ಶಿವಕುಮಾರ್ ಉದಾಸಿ, ಹಾವೇರಿ ಸಂಸದ
* ಬಿ.ವೈ. ರಾಘವೇಂದ್ರ, ಶಿವಮೊಗ್ಗ ಸಂಸದ
* ಪ್ರತಾಪ್ ಸಿಂಹ, ಮೈಸೂರು-ಕೊಡಗು ಸಂಸದ
* ಶೋಭಾ ಕರಂದ್ಲಾಜೆ, ಉಡುಪಿ-ಚಿಕ್ಕಮಗಳೂರು ಸಂಸದೆ
* ಭಗವಂತ್ ಖೂಬಾ, ಬೀದರ್ ಸಂಸದ
* ಪಿ.ಸಿ.ಗದ್ದಿಗೌಡರ್, ಬಾಗಲಕೋಟೆ ಸಂಸದ

The post ಇವತ್ತೇ ಪ್ರಧಾನಿ ನರೇಂದ್ರ ಮೋದಿ ಸಂಪುಟ ಬದಲಾವಣೆ appeared first on Public TV.

Source: publictv.in

Source link