ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​​

ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​​

1. ಇಂದು ಕೇಂದ್ರ ಸಚಿವ ಸಂಪುಟ ವಿಸ್ತರಣೆ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗಿದೆ. ಇಂದು ಸಂಜೆ 5.30ಕ್ಕೆ 22 ಮಂದಿ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ. 2022ರ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಸಂಪುಟ ವಿಸ್ತರಣೆಗೆ ತೀರ್ಮಾನಿಸಲಾಗಿದೆ. ಬಿಜೆಪಿ ನಾಯಕರಾದ ಜ್ಯೋತಿರಾದಿತ್ಯ ಸಿಂಧಿಯಾ, ಸುಶೀಲ್ ಮೋದಿ, ಸರ್ಬಾನಂದ್ ಸೊನಾವಾಲ್ ಕ್ಯಾಬಿನೆಟ್​​ನಲ್ಲಿ ಸ್ಥಾನ ಪಡೆಯೋದು ಕನ್ಫರ್ಮ್ ಆಗಿದ್ದು, ಜೆಡಿಯುನಿಂದ ಇಬ್ಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯಲಿರುವ ಕಾರಣ ಯೋಗಿ ರಾಜ್ಯಕ್ಕೆ ಸಿಂಹಪಾಲು ಸಿಗುವ ನಿರೀಕ್ಷೆ ಇದೆ.

2. ಮೋದಿ ಸಂಪುಟಕ್ಕೆ ರಾಜ್ಯದ ಮೂವರು?
ಇನ್ನು ಮೋದಿ ಕ್ಯಾಬಿನೆಟ್​ಗೆ ಸೇರಲಿರುವ ಸುಮಾರು 22 ಮಂದಿ ಸಚಿವರ ಪೈಕಿ ರಾಜ್ಯದ ಮೂವರು ಸಂಸದರು ಪ್ರಮಾಣವಚನ ಸ್ವಿಕರಿಸೋದು ಪಕ್ಕಾ ಆಗಿದೆ. ಒಕ್ಕಲಿಗ, ವೀರಶೈವ-ಲಿಂಗಾಯತ, ಎಸ್​​ಸಿ ಕೋಟಾದಿಂದ ಒಬ್ಬೊಬ್ಬರನ್ನು ಕ್ಯಾಬಿನೆಟ್ ಸೇರ್ಪಡೆಗೆ ಮೋದಿ ನಿರ್ಧರಿಸಿದ್ದು, ಈಗಾಗಲೇ ಆ ರೇಸ್​ನಲ್ಲಿ 9 ಮಂದಿ ಸಂಸದರಿದ್ದಾರೆ. ಒಕ್ಕಲಿಗ ಸಮುದಾಯದಿಂದ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ ರೇಸ್​​ನಲ್ಲಿದ್ದರೆ, ಎಸ್​ಸಿ ಕೋಟಾದಡಿ ಎ.ನಾರಾಯಣಸ್ವಾಮಿ, ಉಮೇಶ್ ಜಾಧವ್, ರಮೇಶ್ ಜಿಗಜಿಣಗಿ ಮುಂಚೂಣಿಯಲ್ಲಿದ್ದಾರೆ. ವೀರಶೈವ ಲಿಂಗಾಯತ ಕೋಟಾದಡಿ ಬಿ.ವೈ. ರಾಘವೇಂದ್ರ, ಶಿವಕುಮಾರ್ ಉದಾಸಿ, ಪಿ.ಸಿ‌. ಗದ್ದೀಗೌಡರ್ ಹಾಗೂ ಭಗವಂತ ಖೂಬಾ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

3. ‘ಕೊರೊನಾ 2ನೇ ಅಲೆ ಇನ್ನೂ ಮುಗಿದಿಲ್ಲ’
ದೇಶದಲ್ಲಿ ಎಲ್ಲಾ ಕಡೆಗಳಲ್ಲೂ ಕೋವಿಡ್ ಸೋಂಕಿತರ ಪ್ರಮಾಣ ಒಂದೇ ತೆರನಾಗಿಲ್ಲ. ಶೇಕಡಾ 80ರಷ್ಟು ಕೋವಿಡ್ ಪ್ರಕರಣಗಳು ಕೇವಲ 90 ಜಿಲ್ಲೆಗಳಲ್ಲಿ ಕಂಡುಬಂದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕೋವಿಡ್ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್, ನಾವು ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಎಲ್ಲಾದರೂ ಒಂದೆಡೆ ಕೋವಿಡ್ ಪ್ರಕರಣಗಳು ದಾಖಲಾದರೆ, ಎಲ್ಲಾ ರಾಜ್ಯಗಳು ಕಟ್ಟುನಿಟ್ಟಾದ ನಿರ್ಬಂಧಗಳನ್ನು ಜಾರಿಗೆ ತರಲೇಬೇಕು. ಸಾಂಕ್ರಾಮಿಕ ರೋಗದ ಎರಡನೇ ಅಲೆ ಇನ್ನೂ ಮುಗಿದಿಲ್ಲ. ಹೀಗಾಗಿ ಎಲ್ಲ ರಾಜ್ಯಗಳು ಎಚ್ಚರದಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.

4. ‘2 ಬಾರಿ ಸಿಎಂ ಬದಲಾಗಲು ಅರ್ಚಕರ ಶಾಪವೇ ಕಾರಣ’
ಉತ್ತರಾಖಂಡದಲ್ಲಿ ಬಿಜೆಪಿಯು ಎರಡು ಬಾರಿ ಸಿಎಂ ಬದಲಾವಣೆ ಮಾಡುವಂತಾಗಲು ಅರ್ಚಕರ ಶಾಪ ಕಾರಣ ಅಂತ ಗಂಗೋತ್ರಿ ಮಂದಿರ್ ಸಮಿತಿ ಹೇಳಿದೆ. ದೇವಸ್ಥಾನಂ ಮಂಡಳಿಯನ್ನು ವಿಸರ್ಜಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿರುವುದೇ ಅರ್ಚಕರ ಶಾಪಕ್ಕೆ ಕಾರಣ. ಮಂಡಳಿಯನ್ನು ವಿಸರ್ಜಿಸದಿದ್ದಲ್ಲಿ ಮುಂದಿನ ವರ್ಷ ಬಿಜೆಪಿಗೆ ಮರಳಿ ಅಧಿಕಾರ ದೊರೆಯದು ಎಂದು ಸಮಿತಿಯ ಜಂಟಿ ಕಾರ್ಯದರ್ಶಿ ರಾಜೇಶ್ ಸೆಮ್‌ವಾಲ್ ತಿಳಿಸಿದ್ದಾರೆ. ತ್ರಿವೇಂದ್ರ ಸಿಂಗ್ ರಾವತ್ ಮುಖ್ಯಮಂತ್ರಿಯಾಗಿದ್ದಾಗ ದೇವಸ್ಥಾನಂ ಮಂಡಳಿ ರಚಿಸಲಾಗಿತ್ತು. ಇದು ತಮ್ಮ ಹಕ್ಕುಗಳ ಮೇಲಿನ ಅತಿಕ್ರಮಣ ಎಂದು ಭಾವಿಸಿರುವ ಗಂಗೋತ್ರಿ, ಯಮುನೋತ್ರಿ ದೇಗುಲಗಳ ಅರ್ಚಕರು ಮಂಡಳಿಯನ್ನು ವಿಸರ್ಜಿಸಬೇಕೆಂದು ಒತ್ತಾಯಿಸಿದ್ರು.

5. ಅಮೆರಿಕಾ ಅಧ್ಯಕ್ಷ ಬೈಡನ್ – ಪ್ರಧಾನಿ ಮೋದಿ ಶೃಂಗಸಭೆ
ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಈ ವರ್ಷದ ಬಳಿಕ ಭಾರತ, ಆಸ್ಟ್ರೇಲಿಯಾ, ಜಪಾನ್ ಜೊತೆ ಶೃಂಗಸಭೆ ನಡೆಸಲಿದ್ದಾರೆ. ದಿನಾಂಕ ಇನ್ನೂ ಖಾತ್ರಿಯಾಗದಿದ್ದರೂ ಲಾಕ್ಡೌನ್ ಬಳಿಕ ನಡೆಯುವ ಮೊದಲ ಶೃಂಗಸಭೆ ಇದಾಗಲಿದೆ. ಜೊತೆಗೆ ಪ್ರಧಾನಿ ಮೋದಿ ಹಾಗೂ ಜೋ ಬೈಡನ್ ಜೊತೆಯಾಗಿ ಭಾಗಿಯಾಗುವ ಮೊದಲ ಸಭೆ ಇದಾಗಲಿದೆ. ಅಲ್ಲದೇ ಈ ಸಭೆಯು ಕೊರೊನಾ ಲಸಿಕೆ, ರಾಜತಾಂತ್ರಿಕತೆ ಮತ್ತು ಮೂಲಸೌಕರ್ಯದಲ್ಲಿ ನಿರ್ಣಾಯಕವಾಗಲಿದೆ ಅಂತ ಇಂಡೋ-ಪೆಸಿಫಿಕ್ ಪ್ರದೇಶದ ಅಮೆರಿಕಾ ಸಂಯೋಜಕ ಕರ್ಟ್ ಕ್ಯಾಂಪ್ಬೆಲ್ ಹೇಳಿದ್ದಾರೆ.

6. ‘ಮಕ್ಕಳಿಗೆ ಕೊರೊನಾ ಭಯಕ್ಕಿಂತ ಆತಂಕ, ಕಿರಿಕಿರಿ ಅಧಿಕ’
ಕನಿಷ್ಠ ಶೇಕಡ 22.5ರಷ್ಟು  ಮಕ್ಕಳು ಕೊರೊನಾ ಬಗ್ಗೆ ಭಯ ಹೊಂದಿದ್ರೆ, ಸುಮಾರು 42.3 ರಷ್ಟು ಮಕ್ಕಳು ಕೋಪ, ಕಿರಿಕಿರಿ ಮತ್ತು ಅಜಾಗರೂಕತೆಯಿಂದ ಬಳಲುತ್ತಿದ್ದಾರೆ ಅಂತ ಏಮ್ಸ್ ಅಧ್ಯಯನ ತಿಳಿಸಿದೆ. ಮೊದಲೇ ಇಂತ ನಡವಳಿಕೆಯ ಸಮಸ್ಯೆ ಇರುವ ಮಕ್ಕಳು ಮುಂದೆ ಇದನ್ನು ಮತ್ತಷ್ಟು ಹದಗೆಡಿಸಿಕೊಳ್ಳುವ ಸಾಧ್ಯತೆ ಇದೆ. 2 ವರ್ಷ ವಯಸ್ಸಿನ ಮಕ್ಕಳು ಸುತ್ತಲಿನ ಬದಲಾವಣೆಗಳನ್ನು ಗಮನಿಸಿ ಅದರಿಂದ ಪ್ರಭಾವಿತರಾಗುತ್ತಾರೆ ಅಂತ ಅಧ್ಯಯನ ತಿಳಿಸಿದೆ. ಒಟ್ಟು 22,996 ಮಕ್ಕಳನ್ನು ವಿವರಿಸುವ 15 ಅಧ್ಯಯನಗಳನ್ನು ಈ ಅಧ್ಯಯನಕ್ಕೆ ಬಳಸಲಾಗಿದೆ.

7. ಭಾರತದ ವಲಸೆ ಕಾರ್ಮಿಕನಿಗೆ ಸಿಂಗಪೂರ್​​ನಲ್ಲಿ ಪ್ರಶಸ್ತಿ
ಸಿಂಗಪೂರ್ ಸರ್ಕಾರ ವಲಸೆ ಕಾರ್ಮಿಕರಿಗಾಗಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಭಾರತ ಮೂಲದ ಗಣೇಶನ್‌ ಸಂಧಿರಕಾಸನ್ ಪ್ರಥಮ ಬಹುಮಾನ ಗಳಿಸಿದ್ದಾರೆ. ಭಾರತದ ಸಾಂಪ್ರದಾಯಿಕ ಸಮರ ಕಲೆ ಸಿಲಾಂಬಮ್ ಪ್ರದರ್ಶಿಸುವ ಮೂಲಕ ಗಣೇಶನ್‌ 55 ಸಾವಿರ ರೂಪಾಯಿ ನಗದು ಬಹುಮಾನ ಗೆದ್ದಿದ್ದಾರೆ. ವಿಡಿಯೋ ಮೂಲಕ ತಮ್ಮ ಪ್ರತಿಭೆ ತೋರಿಸುವಂತೆ ವಲಸೆ ಕಾರ್ಮಿಕರಿಗೆ ಸೂಚಿಸಲಾ‌ಗಿತ್ತು. ಸ್ಪರ್ಧಿಸಿದ್ದ 600ಕ್ಕೂ ಮಂದಿಯಲ್ಲಿ 19 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಗಣೇಶನ್‌ ಅವರ ಸಿಲಾಂಬಮ್ ವಿಡಿಯೊಗೆ ಟಿಕ್‌ಟಾಕ್‌ನಲ್ಲಿ ಅತಿ ಹೆಚ್ಚು ಲೈಕ್‌ ಮತ್ತು ವ್ಯೂವ್ಸ್ ಬಂದಿವೆ.

8. ಪೊಲೀಸ್ ಮನೆಗೆ ಕನ್ನ ಹಾಕಿ ಪತ್ರ ಬರೆದ ಭೂಪ
ಪೊಲೀಸ್ ಅಧಿಕಾರಿ ಮನೆಗೆ ಕನ್ನ ಹಾಕಿದ ಕಳ್ಳನೊಬ್ಬ ಕಳವು ಮಾಡಿದ್ದಲ್ಲದೇ ಕ್ಷಮಾಪಣಾ ಪತ್ರ ಬರೆದಿಟ್ಟ ಘಟನೆ ಮಧ್ಯಪ್ರದೇಶದ ಬಿಂದ್​​ನಲ್ಲಿ ನಡೆದಿದೆ. ಕೊಟ್ಟಾಲಿ ಪೊಲೀಸ್ ಠಾಣೆಯ ಎಎಸ್‌ಐ ಕಮಲೇಶ್ ಕಟಾರೆ ಮನೆಯಲ್ಲಿ ಕಳ್ಳತನವಾಗಿತ್ತು. ಪರಿಶೀಲನೆ ವೇಳೆ ಕಳ್ಳ ಬರೆದಿಟ್ಟು ಹೋದ ಕ್ಷಮಾಪಣಾ ಪತ್ರ ಸಿಕ್ಕಿದೆ. ಪತ್ರದಲ್ಲಿ ನಾನು ಮನಸ್ಸಿನಿಂದ ತುಂಬಾ ಒಳ್ಳೆಯವನು, ಆದ್ರೆ ಪರಿಸ್ಥಿತಿಗೆ ಸಿಕ್ಕಿ ನನ್ನ ಸ್ನೇಹಿತನ ಪ್ರಾಣ ಉಳಿಸಲು ಈ ಕೆಲಸ ಮಾಡುತ್ತಿದ್ದೇನೆ. ಕದ್ದ ಹಣವನ್ನ ಮತ್ತೆ ಹಿಂತಿರುಗಿಸುತ್ತೇನೆ. ದಯವಿಟ್ಟು ಕ್ಷಮಿಸಿ ಅಂತ ಬರೆದಿದ್ದಾನೆ. ಸದ್ಯ ಚಿನ್ನಾಭರಣವನ್ನೆಲ್ಲ ಕಳೆದುಕೊಂಡಿರುವ ಪೊಲೀಸ್ ಅಧಿಕಾರಿ, ಕಳ್ಳನ ಪತ್ರ ನೋಡಿ ಏನು ಮಾಡಬೇಕೆಂದು ತೋಚದೆ ಕಂಗಾಲಾಗಿದ್ದಾರೆ.

9. ಟೋಕಿಯೋ ಒಲಿಂಪಿಕ್ಸ್​​​ಗೆ ಟಿಕೆಟ್ ಕಲೆಕ್ಟರ್ ರೇವತಿ ಆಯ್ಕೆ
ಜುಲೈ 23ರಿಂದ ಆರಂಭವಾಗಲಿರುವ ಟೋಕಿಯೋ ಒಲಂಪಿಕ್ಸ್​ಗೆ ದಕ್ಷಿಣ ರೈಲ್ವೆ ವಿಭಾಗದ ರೇವತಿ ವೀರಮಣಿ ಆಯ್ಕೆ ಆಗಿದ್ದಾರೆ. ಸದ್ಯ ರೇವತಿ ಮಧುರೈ ವಿಭಾಗದಲ್ಲಿ ಟಿಕೆಟ್ ಕಲೆಕ್ಟ್ರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಒಲಂಪಿಕ್ಸ್​​ನಲ್ಲಿ ಭಾರತವನ್ನ ಪ್ರತಿನಿಧಿಸಲಿದ್ದಾರೆ. ರೇವತಿ ವೀರಮಣಿ ರಿಲೇಯಲ್ಲಿ ಭಾಗವಹಿಸಲಿದ್ದಾರೆ ಅಂತ ದಕ್ಷಿಣ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಮತ್ತೊಬ್ಬ ಸ್ಟಾರ್ ಅಥ್ಲೀಟ್ ಹಿಮಾದಾಸ್ ಒಲಿಪಿಂಕ್ಸ್​ನಿಂದ ಹೊರಗುಳಿದಿದ್ದಾರೆ. ಕಳೆದ ತಿಂಗಳು ನಡೆದಿದ್ದ ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​​​ನಲ್ಲಿ 100 ಮೀಟರ್ ಓಟದ ವೇಳೆ ಹಿಮಾ ದಾಸ್ ಮಂಡಿ ನೋವಿನಿಂದ ಬಳಲಿದ್ದರು. ಈಗ ಗಾಯದ ಸಮಸ್ಯೆಯಿಂದಲೇ ಅವ್ರು ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹೊರಗುಳಿಯುವಂತಾಗಿದೆ.

10. 2ನೇ ಡೋಸ್ ಲಸಿಕೆ ಪಡೆಯಲಿರುವ ಟೀಮ್ ಇಂಡಿಯಾ
5 ಸರಣಿಯ ಟೆಸ್ಟ್​​ಗೆ ಇಂಗ್ಲೆಂಡ್ನಲ್ಲಿರುವ ಟೀಂ ಇಂಡಿಯಾದ ಆಟಗಾರರು ಇಂದು ಕೊರೊನಾ ಲಸಿಕೆಯ ಎರಡನೇ ಡೋಸ್ ಪಡೆಯಲಿದ್ದಾರೆ. ಸದ್ಯ ಇಂಗ್ಲೆಂಡ್​​ನಲ್ಲಿ ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗ್ತಿರುವ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಎಲ್ಲಾ ಆಟಗಾರರು ಹಾಗೂ ಸಿಬ್ಬಂದಿ 2ನೇ ಡೋಸ್ ಲಸಿಕೆ ಪಡೆಯಲಿದ್ದಾರೆ. ಈಗಾಗಲೇ ಮೊದಲ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದಿರುವ ಆಟಗಾರರು ಎರಡು ಬ್ಯಾಚ್​​ಗಳಂತೆ ಇಂದು ಮತ್ತು ಶುಕ್ರವಾರ ಎರಡನೇ ಡೋಸ್​​ ಲಸಿಕೆ ಪಡೆಯಲಿದ್ದಾರೆ.

The post ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​​ appeared first on News First Kannada.

Source: newsfirstlive.com

Source link