ಮಮತಾ ಬ್ಯಾನರ್ಜಿ ಕುರ್ಚಿಗೆ ಬಂತಾ ಸಂಚಕಾರ?ಅಧಿಕಾರ ಹಿಡಿದು ಕೆಲವೇ ದಿನಗಳಲ್ಲಿ ಅದೇನಾಗಿದೆ?

ಮಮತಾ ಬ್ಯಾನರ್ಜಿ ಕುರ್ಚಿಗೆ ಬಂತಾ ಸಂಚಕಾರ?ಅಧಿಕಾರ ಹಿಡಿದು ಕೆಲವೇ ದಿನಗಳಲ್ಲಿ ಅದೇನಾಗಿದೆ?

ಪಶ್ಚಿಮ ಬಂಗಾಳದಿಂದ ಒಂದು ಲೇಟೆಸ್ಟ್ ನ್ಯೂಸ್ ಬಂದಿದೆ. ಅದೇನು ಅಂದ್ರೆ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಕುರ್ಚಿಗೆ ಕುತ್ತು ತರುವ ಸಮಾಚಾರ. ಹಾಗಾದ್ರೆ ಬಂಗಾಳದಲ್ಲಿ ಆಗಿದ್ದಾದರೂ ಏನು, ಅದನ್ನು ಎದುರಿಸಲು ದೀದಿ ಮಾಡಿಕೊಂಡಿರುವ ಪ್ಲಾನ್ ಏನು. ಇಲ್ಲಿದೆ ಸ್ಪೆಷಲ್ ರಿಪೋರ್ಟ್.

ಪಶ್ಚಿಮ ಬಂಗಾಳ ರಾಜಕಾರಣದ ಹುಲಿ ಅನಿಸಿಕೊಂಡವರು ಮಮತಾ ಬ್ಯಾನರ್ಜಿ. ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಮೋದಿ-ಅಮಿತ್ ಷಾ ಅಕ್ಷೋಹಿಣಿ ಸೈನ್ಯವನ್ನೇ ಎದುರಿಸಿ ವಿಜಯ ಮಾಲೆ ಧರಿಸಿ ಬಂದ ಗಟ್ಟಿ ಹೆಣ್ಣುಮಗಳು ಈ ಮಮತಾ ಬ್ಯಾನರ್ಜಿ. ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಈ ಬಾರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯನ್ನ ಸೋಲಿಸಿ ಅಧಿಕಾರದ ಗದ್ದುಗೆ ಹಿಡಿಯಬೇಕೆಂಬ ಸಂಕಲ್ಪವನ್ನು ಬಿಜೆಪಿ ನಾಯಕರು ಮಾಡಿ ಬಿಟ್ಟಿದ್ರು. ಆದರೆ ಸಂಕಲ್ಪ ಈಡೇರಲಿಲ್ಲ. ಬಂಗಾಳದಲ್ಲಿ ಬಿಜೆಪಿ ಸಾಕಷ್ಟು ಸಾಧನೆ ಮಾಡಿತಾದರೂ ಅಧಿಕಾರ ಗಿಟ್ಟಿಸಲು ಆಗಲೇ ಇಲ್ಲ. ಇನ್ನು ಮಮತಾ ಬ್ಯಾನರ್ಜಿ ಮರಳಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ನಂದಿ ಗ್ರಾಮದಲ್ಲಿ ಸೋತು ಹೋದರೂ ಮಮತಾ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ತಿಂಗಳುಗಳೇ ಕಳೆಯುತ್ತಿವೆ. ಅಷ್ಟರಲ್ಲೇ ಮತ್ತೊಂದು ಲೇಟೆಸ್ಟ್ ನ್ಯೂಸ್ ಬಂಗಾಳದಿಂದ ಬರ್ತಾ ಇದೆ. ಅದು ಅಂತಿಂಥ ಸುದ್ದಿ ಅಲ್ಲ. ಮಮತಾ ಬ್ಯಾನರ್ಜಿಯವರ ಸ್ಥಾನಕ್ಕೆ ಕುತ್ತು ತರುವ ಸಮಾಚಾರ.

ಮಮತಾ ಬ್ಯಾನರ್ಜಿ ಕುರ್ಚಿಗೆ ಒದಗಿ ಬಂತಾ ಸಂಚಕಾರ?
ಸಿಎಂ ಕುರ್ಚಿಯಿಂದ ಇಳಿಬೇಕಾಗುತ್ತಾ ಮಮತಾ ಬ್ಯಾನರ್ಜಿ?
ಅಧಿಕಾರ ಹಿಡಿದು ಕೆಲವೇ ದಿನಗಳಲ್ಲಿ ಅದೇನಾಗಿದೆ ಗೊತ್ತಾ?

ಈಗ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಬಿಸಿ ಬಿಸಿ ಚರ್ಚೆ ಇದೇನೇ. ಮಮತಾ ಬ್ಯಾನರ್ಜಿ ಸ್ವಲ್ಪ ಹೆಚ್ಚು ಕಡಿಮೆ ಆದರೆ ಸಿಎಂ ಕುರ್ಚಿಯಿಂದಲೇ ಇಳಿಯಬೇಕಾಗಿ ಬರಬಹುದು. ಅಂತಹ ಸಂದರ್ಭ ಒದಗಿ ಬಂದರೂ ಅಚ್ಚರಿ ಇಲ್ಲ. ಹಾಗಾದರೆ ಅಧಿಕಾರ ಹಿಡಿದ ಕೆಲವೇ ದಿನಗಳಲ್ಲಿ ಅದೇನಾಗಿದೆ ಅಂತ ನೀವು ಕೇಳಬಹುದು. ಹೌದು ..ಬಂಗಾಳದಲ್ಲಿ ಒಂದು ರಾಜಕೀಯ ಅನಿವಾರ್ಯತೆ, ಕಾನೂನಾತ್ಮಕ ಸವಾಲನ್ನು ಮಮತಾ ಎದುರಿಸಲೇಬೇಕಾಗಿದೆ. ಮಮತಾ ಎದುರಿಸಲು ಸಜ್ಜಾಗಿದ್ದಾರೆ.. ಆದರೆ ಅದಕ್ಕೆ ಮುಹೂರ್ತ ಫಿಕ್ಸ್ ಆಗ್ತಾ ಇಲ್ಲ ಅಷ್ಟೇ.

6 ತಿಂಗಳಲ್ಲಿ ವಿಧಾನಸಭೆ ಸದಸ್ಯರಾಗಲೇಬೇಕು ಬ್ಯಾನರ್ಜಿ
ಎಲೆಕ್ಷನ್ ನಲ್ಲಿ ಸೋತಿದ್ದರಿಂದ ಮತ್ತೆ ಈಗ ಗೆದ್ದು ಬರಬೇಕು
6 ತಿಂಗಳಲ್ಲಿ ಶಾಸನ ಸಭೆ ಪ್ರವೇಶಿಸದಿದ್ರೆ ಕುರ್ಚಿ ಬಿಡಲೇಬೇಕು

ಮಮತಾ ಬ್ಯಾನರ್ಜಿ ತಮ್ಮ ಸ್ವಕ್ಷೇತ್ರ ಭವಾನಿಪುರ ಬಿಟ್ಟು ಹಿಂದೆ ತಮ್ಮ ಅತ್ಯಾಪ್ತರಾಗಿ ಬಿಜೆಪಿ ಸೇರಿದ್ದ ಸುವೆಂದು ಅಧಿಕಾರಿ ವಿರುದ್ಧ ನಂದಿಗ್ರಾಮಕ್ಕೆ ಹೋಗಿ ಎಲೆಕ್ಷನ್​ನಲ್ಲಿ ಸ್ಪರ್ಧೆ ಮಾಡಿದ್ರು. ನಂದಿಗ್ರಾಮ ಮಮತಾ ಬ್ಯಾನರ್ಜಿಯವರ ಹೋರಾಟದ ನೆಲ. ಮಮತಾ ಬ್ಯಾನರ್ಜಿಯವರ ರಾಜಕೀಯ ಭವಿಷ್ಯವನ್ನು ಉಜ್ವಲಗೊಳಿಸಿದ್ದು ಇದೇ ನಂದಿಗ್ರಾಮ. ಹೀಗಾಗಿ ಈ ಬಾರಿ ಬಿಜೆಪಿಯ ವಿರುದ್ಧ ಅಗ್ನಿ ಪರೀಕ್ಷೆಯನ್ನೇ ಗೆಲ್ಲಬೇಕಾದ ಪರಿಸ್ಥಿತಿ ಬಂದಾಗ ಮಮತಾ ಬ್ಯಾನರ್ಜಿ ಆಯ್ದುಕೊಂಡಿದ್ದು ಇದೇ ನಂದಿಗ್ರಾಮ. ಮತ್ತೆ ಎದ್ದು ಬರುವೆ, ಗೆದ್ದು ಬರುವೆ ಅನ್ನೋ ಸಂದೇಶ ರವಾನಿಸಬೇಕಿತ್ತು. ಹೀಗಾಗಿಯೇ ಸ್ವಕ್ಷೇತ್ರ ಬಿಟ್ಟು ನಂದಿಗ್ರಾಮ ಆಯ್ದುಕೊಂಡು ಸ್ಪರ್ಧೆ ಮಾಡಿದ್ದರು. ಆದರೆ, ನಂದಿ ಗ್ರಾಮದಲ್ಲಿ ಸುವೆಂದು ಅಧಿಕಾರಿ ಸಿಕ್ಕಾಪಟ್ಟೆ ಪ್ರಭಾವಿ. ಗೊತ್ತಿದ್ದು ಗೊತ್ತಿದ್ದು ಮಮತಾ ಬ್ಯಾನರ್ಜಿ ಯಾಕೆ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ ಅಂತ ಚುನಾವಣೆಗೆ ಮುನ್ನವೇ ಅನೇಕ ಮಂದಿ ಮಾತನಾಡಿಕೊಂಡಿದ್ರು. ಆದರೆ ಮಮತಾ ಬ್ಯಾನರ್ಜಿ ಹಿಂದೆ ಸರಿಯಲೇ ಇಲ್ಲ. ನಂದಿಗ್ರಾಮಕ್ಕೆ ಹೋಗಿ ನಾಮಪತ್ರ ಸಲ್ಲಿಸಿ ವಾಪಸ್ ಬರುವಾಗ ಕಾಲಿಗೂ ಗಾಯ ಮಾಡಿಕೊಂಡಿದ್ರು.

blank

ಮುಂದೆ ಗಾಲಿ ಕುರ್ಚಿಯಲ್ಲೇ ಕುಳಿತು ರಾಜ್ಯ ಸುತ್ತಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು ಮಮತಾ ಬ್ಯಾನರ್ಜಿ. ಅವತ್ತು ಮಮತಾ ಚಂಡಿ ಪಠಣ ಮಾಡಿದ್ದು ನಿಮಗೆ ನೆನಪಿರಬಹುದು. ಹೀಗೆ ಚಂಡಿ ಪಠಣ ಮಾಡಿದ್ದ ಮಮತಾ ಬ್ಯಾನರ್ಜಿ, ಹಿಂದುತ್ವದ ಮಂತ್ರ ಪಠಿಸುವ ಬಿಜೆಪಿ ನಾಯಕರಿಗೆ ಭರ್ಜರಿ ಟಾಂಗ್ ಕೊಟ್ಟಿದ್ದರು. ಅಷ್ಟೇ ಅಲ್ಲ , ಏಕಾಂಗಿಯಾಗಿಯೇ ರಾಜ್ಯ ಸುತ್ತಿ, ಬಿಜೆಪಿಯ ಮಹಾ ಸೈನ್ಯವನ್ನು ಮಣಿಸಿ ಅಧಿಕಾರದ ಗದ್ದುಗೆಯನ್ನು ಮರಳಿ ಏರಿದ್ದರು. ಆದರೆ ಅವರಿಗೆ ಈಗ ಒಂದು ಸಮಸ್ಯೆ ಸೃಷ್ಟಿಯಾಗಿದೆ. ಮಮತಾ ಬ್ಯಾನರ್ಜಿ ಹಾಲಿ ಶಾಸಕರಲ್ಲ. ಶಾಸನ ಸಭೆ ಸದಸ್ಯರಲ್ಲ. ಹೀಗಾಗಿ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಬೇಕಾದರೆ ಅಧಿಕಾರ ಸ್ವೀಕರಿಸಿದ 6 ತಿಂಗಳ ಒಳಗಾಗಿ ಯಾವುದಾದರೂ ಒಂದು ಕ್ಷೇತ್ರದಿಂದ ಆಯ್ಕೆಯಾಗಿ ಬರಲೇಬೇಕು.

ಆದರೆ, ಬೈ ಎಲೆಕ್ಷನ್ ಘೋಷಣೆ ಆಗದ ಕಾರಣ ತೃಣಮೂಲ ಕಾಂಗ್ರೆಸ್​​ನಲ್ಲಿ ಈಗ ಟೆನ್ಷನ್ ಶುರುವಾಗಿದೆ. ಎಲೆಕ್ಷನ್ ಕಮಿಷನ್ ಅದ್ಯಾವಾಗ ಬೈ ಎಲೆಕ್ಷನ್ ಘೋಷಣೆ ಮಾಡುತ್ತೋ ಅಂತ ಕಾಯ್ತಾ ಇದ್ದಾರೆ. ಕಾರಣ, ಆರು ತಿಂಗಳ ಒಳಗೆ ಎಲೆಕ್ಷನ್ ಗೆದ್ದು ಬರದೇ ಇದ್ದರೆ ಮಮತಾ ಬ್ಯಾನರ್ಜಿ ಕುರ್ಚಿ ಬಿಟ್ಟು ಇಳಿಯಲೇಬೇಕಾಗುತ್ತದೆ.

ಬೈ ಎಲೆಕ್ಷನ್ ಗೆ ರೆಡಿಯಾಗಿ ಕುಳಿತಿದ್ದಾರೆ ಮಮತಾ ಬ್ಯಾನರ್ಜಿ
ಸ್ವಕ್ಷೇತ್ರ ಬಿಟ್ಟುಕೊಟ್ಟಿರುವ ಮಮತಾ ಅಪ್ತ ಶೋಭಾನ್ ದೇವ್
ಭವಾನಿಪುರ ಬೈ ಎಲೆಕ್ಷನ್ ಘೋಷಣೆ ಕಾಯುತ್ತಿರುವ ಟಿಎಂಸಿ

ದೀದಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಕೆಲವೇ ದಿನದಲ್ಲಿ ಶಾಸಕ ಶೋಭಾನ್‌ ದೇವ್‌ ಚಟ್ಟೋಪಾಧ್ಯಾಯ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆ ಮೂಲಕ ಭವಾನಿಪುರ ಕ್ಷೇತ್ರವನ್ನು ಮಮತಾ ಬ್ಯಾನರ್ಜಿಗೆ ಬಿಟ್ಟುಕೊಟ್ಟಿದ್ದಾರೆ. 2016ರಲ್ಲಿ ದೀದಿ ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ಸಿಎಂ ಸ್ಥಾನ ಪಡೆದಿದ್ರು. ಹೀಗಾಗಿ ಕ್ಷೇತ್ರದಲ್ಲಿ ಮಮತಾಗೆ ಸಂಪೂರ್ಣ ಹಿಡಿತ ಇದ್ದೇ ಇದೆ. ಯಾವಾಗ ಎಲೆಕ್ಷನ್‌ ನಡೆದ್ರೂ ದೀದಿಗೆ ಭರ್ಜರಿ ಗೆಲುವು ಕಟ್ಟಿಟ್ಟ ಬುತ್ತಿ ಅಂತಾನೇ ಹೇಳಲಾಗ್ತಿದೆ. ಆದ್ರೆ, ಸಮಸ್ಯೆ ಇರೋದು ಚುನಾವಣೆ ನಡೆಯುತ್ತಾ ಅನ್ನೋದ್ರದಲ್ಲಿ.

ಬೈ ಎಲೆಕ್ಷನ್‌ ನಡೆಸಲು ಇರುವ ಸಮಸ್ಯೆ ಆದ್ರು ಏನು?
ಮಮತಾ ಸಿಎಂ ಕುರ್ಚಿ ಉಳಿಯಬೇಕು ಅಂದ್ರೆ ನಾಲ್ಕು ತಿಂಗಳಲ್ಲಿ ಬೈ ಎಲೆಕ್ಷನ್‌ ಆಗಲೇಬೇಕು. ಆದ್ರೆ ಎಲೆಕ್ಷನ್‌ ಯಾವಾಗ ನಡೆಸಬೇಕು ಅನ್ನೋದನ್ನು ಕೇಂದ್ರ ಚುನಾವಣಾ ಆಯೋಗ ನಿರ್ಧಾರ ಮಾಡುತ್ತೆ. ಅಷ್ಟಕ್ಕೂ ಬೈ ಎಲೆಕ್ಷನ್‌ ನಡೆಸಲು ಇರುವ ಅಡ್ಡಿಯಾದ್ರು ಏನು ಅನ್ನೋದು ನೋಡಿದಾಗ ಕಾಣಿಸೋದು ಕೊರೊನಾ ಸೋಂಕು. ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿಯೇ ಪಂಚರಾಜ್ಯಗಳಲ್ಲಿ ಚುನಾವಣೆ ನಡೆಸಲಾಗಿತ್ತು. ಅದು, ಭಾರತದಲ್ಲಿ ಎರಡನೇ ಅಲೆ ಹೆಚ್ಚಳಕ್ಕೆ ಕಾರಣವಾಗಿತ್ತು. ಇಂತಹ ಸಂದರ್ಭದಲ್ಲಿ ಚುನಾವಣೆ ಬೇಕಿತ್ತಾ ಅಂತ ಸಾರ್ವಜನಿಕರಿಂದ ಭಾರೀ ಟೀಕೆ ವ್ಯಕ್ತವಾಗಿತ್ತು. ಅಷ್ಟೇ ಅಲ್ಲ, ಈ ಬಗ್ಗೆ ಸುಪ್ರೀಂ ಕೋರ್ಟ್‌ ಕೂಡ ಅಸಮಾಧಾನ ವ್ಯಕ್ತಪಡಿಸಿತ್ತು. ಅದೇ ರೀತಿ ಈಗಲೂ ಭಾರತದಲ್ಲಿ ಕೊರೊನಾ ಕೇಸ್‌ಗಳು ಸಂಪೂರ್ಣ ಕಮ್ಮಿಯಾಗಿಲ್ಲ. ಎರಡನೇ ಅಲೆ ಸ್ವಲ್ಪ ಮಟ್ಟಿಗೆ ತಗ್ಗಿರಬಹುದು ಅಷ್ಟೇ. ಆದ್ರೆ, ಮೂರನೇ ಅಲೆಯ ಬಗ್ಗೆ ತಜ್ಞರು ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಇದೇ ಕಾರಣ ಮುಂದಿಟ್ಟುಕೊಂಡು ಕೇಂದ್ರ ಚುನಾವಣಾ ಆಯೋಗ ಉಪಚುನಾವಣೆ ನಡೆಸಲು ಹಿಂದೇಟು ಹಾಕಬಹುದು. ಅದು ಪಶ್ಚಿಮ ಬಂಗಾಳದ 7 ಕ್ಷೇತ್ರಗಳಲ್ಲಿ ಬೈಎಲೆಕ್ಷನ್ ನಡೆಯಬೇಕಾಗಿದೆ.

ಜನಪ್ರತಿನಿಧಿ ಕಾಯ್ದೆ ಏನು ಹೇಳುತ್ತೆ?
1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 151 ‘ಎ’ ಅನ್ವಯ ಖಾಲಿಯಾದ ಶಾಸಕ ಸ್ಥಾನಗಳಿಗೆ 6 ತಿಂಗಳೊಳಗೆ ಬೈ ಎಲೆಕ್ಷನ್‌ ನಡೆಸಬೇಕು. ಆದ್ರೆ, ತುರ್ತು ಸಂದರ್ಭದಲ್ಲಿ ಅದು ಮುಂದೂಡಿಕೆಯಾದ ಉದಾಹರಣೆಗಳು ಇವೆ. ಹೀಗಾಗಿ ಕೊರೊನಾ ಕಾರಣ ನೀಡಿ ಉಪಚುನಾವಣೆ 6 ತಿಂಗಳು ದಾಟಿ ಹೋದ್ರೂ ಅಚ್ಚರಿ ಇಲ್ಲ.

ಬೈ ಎಲೆಕ್ಷನ್‌ ಆಗದಿದ್ರೆ ದೀದಿ ಪ್ರತಿತಂತ್ರ ಏನು?
ರಾಜೀನಾಮೆ ನೀಡಿ ಮತ್ತೆ ಸಿಎಂ ಸ್ಥಾನ ಸ್ವೀಕರಿಸುತ್ತಾರಾ?

ಪಶ್ಚಿಮ ಬಂಗಾಳದಲ್ಲಿ ಭವಾನಿಪುರ ಸೇರಿದಂತೆ 7 ಕ್ಷೇತ್ರಗಳಿಗೆ ಬೈ ಎಲೆಕ್ಷನ್‌ ನಡೆಯಬೇಕು. ಆದ್ರೆ, ಒಮ್ಮೆ ಬೈ ಎಲೆಕ್ಷನ್‌ ಆಗದಿದ್ರೆ ಮುಂದೆ ಏನು ಅನ್ನೋದೇ ಪ್ರಶ್ನೆಯಾಗಿದೆ. ಒಂದು ಮೂಲದ ಪ್ರಕಾರ ಮಮತಾ ಸಿಎಂ ಸ್ಥಾನದ ಅವಧಿ 6 ತಿಂಗಳು ಕಳೆಯುವ ಎರಡು ದಿನ ಮುಂಚಿತವಾಗಿ ರಾಜೀನಾಮೆ ನೀಡುತ್ತಾರೆ. ಆದ್ರೆ ಮತ್ತೆ ಎರಡು ದಿನ ಬಿಟ್ಟು ಸಿಎಂ ಸ್ಥಾನ ಅಲಂಕರಿಸುತ್ತಾರಂತೆ. ಆದ್ರೆ ಇದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯಾ ಅನ್ನೋದೆ ಪ್ರಶ್ನೆ. ಕೆಲವು ತಜ್ಞರ ಪ್ರಕಾರ ಆ ರೀತಿಯ ಅವಕಾಶ ಇಲ್ಲ. ಇತಿಹಾಸದಲ್ಲಿ ಅಂತಹ ಘಟನೆಗಳು ನಡೆದಿಲ್ಲ ಅಂತ ಹೇಳುತ್ತಾರೆ. ಆದ್ರೆ, ಇನ್ನು ಕೆಲವು ತಜ್ಞರು ಕಾನೂನಿನಲ್ಲಿ ಅಂತಹ ಅವಕಾಶ ಇದೆ ಅನ್ನುತ್ತಾರೆ.

ತೀರತ್‌ ಸಿಂಗ್‌ ಸಿಎಂ ಸ್ಥಾನದಿಂದ ಕೆಳಕ್ಕಿಳಿದ್ದಿದ್ದು ಯಾಕೆ?
ಮಮತಾಗೆ ಪರೋಕ್ಷವಾಗಿ ಸಂದೇಶ ರವಾನೆ ಆಯ್ತಾ ?

ಮಾರ್ಚ್‌ನಲ್ಲಿ ಉತ್ತರಖಂಡದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ, ತೀರತ್‌ ಸಿಂಗ್‌ ರಾವತ್‌ ಅವರನ್ನು ಸಿಎಂ ಸ್ಥಾನದಲ್ಲಿ ಕೂರಿಸುತ್ತೆ. ಆದ್ರೆ ತೀರತ್‌ ಸಿಂಗ್‌ ವಿಧಾನಸಭೆ ಸದಸ್ಯರಾಗಿರುವುದಿಲ್ಲ. ಹೀಗಾಗಿ  6 ತಿಂಗಳೊಳಗೆ ವಿಧಾನಸಭೆ ಸದಸ್ಯತ್ವ ಪಡೆಯುವ ಸವಾಲು ಇರುತ್ತೆ. ಈ ನಡುವೆ ಬಿಜೆಪಿ ದಿಢೀರ್‌ ಅಂತ ತೀರತ್‌ ಸಿಂಗ್‌ ಅವರನ್ನು ಸಿಎಂ ಸ್ಥಾನದಿಂದ ಕೆಳಕ್ಕೆ ಇಳಿಸಿ ಪುಷ್ಕರ್‌ ಸಿಂಗ್‌ಗೆ ಅಧಿಕಾರ ನೀಡಿದೆ. ಇದು, ಯಾಕಾಗಿ ಅನ್ನೋದನ್ನು ನೋಡಿದಾಗ ಕೊರೊನಾ ಹಿನ್ನೆಲೆಯಲ್ಲಿ ಮುಂದಿನ ನಾಲ್ಕೈದು ತಿಂಗಳು ಬೈ ಎಲೆಕ್ಷನ್‌ ನಡೆಸಲು ಸಾಧ್ಯ ಇಲ್ಲ ಅನ್ನೋದು. ಇದೇ ಕಾರಣಕ್ಕೆ ಸಿಎಂ ಸ್ಥಾನ ಬದಲಾಯಿಸಲಾಗಿದೆ ಅನ್ನೋ ಮಾತು ಕೇಳಿ ಬಂದಿದೆ. ಈ ಮೂಲಕ ದೀದಿಗೂ ಕೂಡ ಬಿಜೆಪಿ ಸಂದೇಶ ರವಾನಿಸಿದೆ ಅಂತಾನೇ ವಿಶ್ಲೇಷಣೆಗಳು ಕೇಳಿ ಬರ್ತಾ ಇದೆ.

ದೀದಿ ಒಂದು ವೇಳೆ ಸಿಎಂ ಸ್ಥಾನವನ್ನ ಬಿಟ್ಟರೆ ಯಾರು ಅಲಂಕರಿಸುತ್ತಾರೆ ಅನ್ನೋ ಪ್ರಶ್ನೆಯೂ ಇದೆ. ಹಾಗೇ ತಾತ್ಕಾಲಿಕವಾಗಿ ಸಿಎಂ ಸ್ಥಾನಕ್ಕೆ ಬಂದವರು ಭಾರೀ ಪ್ರಭಾವಿಯಾಗಿ ಅವರೇ ಸಿಎಂ ಸ್ಥಾನದಲ್ಲಿ ಮುಂದುವರಿದ ಇತಿಹಾಸವೂ ಇದೆ. ಮುಂದೆನಾಗುತ್ತೋ ಕಾದು ನೋಡಬೇಕಿದೆ.

The post ಮಮತಾ ಬ್ಯಾನರ್ಜಿ ಕುರ್ಚಿಗೆ ಬಂತಾ ಸಂಚಕಾರ?ಅಧಿಕಾರ ಹಿಡಿದು ಕೆಲವೇ ದಿನಗಳಲ್ಲಿ ಅದೇನಾಗಿದೆ? appeared first on News First Kannada.

Source: newsfirstlive.com

Source link