ಸಚಿವ ಸ್ಥಾನಕ್ಕೆ ಡಿ.ವಿ ಸದಾನಂದ ಗೌಡ ರಾಜೀನಾಮೆ

ಬೆಂಗಳೂರು: ಪ್ರದಾನಿ ನರೇಂದ್ರ ಮೋದಿ ಸಚಿವ ಸಂಪುಟ ಪುನರ್ ರಚನೆಯಾಗುತ್ತಿದ್ದು, ಕರ್ನಾಟಕದ ನಾಲ್ವರು ಮೋದಿ ಸಂಪುಟ ಸೇರಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ ಸದಾನಂದ ಗೌಡ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಸ್ಥಾನಕ್ಕೆ ಡಿವಿಎಸ್ ಇಂದು ರಾಜೀನಾಮೆ ನೀಡಿದ್ದಾರೆ. 68 ವರ್ಷದ ಡಿ.ವಿ. ಸದಾನಂದ ಗೌಡ ಅವರು ಮೋದಿ ಸಂಪುಟದಲ್ಲಿ ಎರಡು ಬಾರಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಲ್ಲದೆ ಕರ್ನಾಟಕದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ರಾಜ್ಯ ಬಿಜೆಪಿಗೆ ಮತ್ತೆ ಶಾಕ್ ನೀಡಿದ ಹೈಕಮಾಂಡ್

ಕೇಂದ್ರ ಸಂಪುಟದಲ್ಲಿರುವ ವರಿಷ್ಠರ ಸೂಚನೆಯಂತೆ ಡಿವಿಎಸ್ ರಾಜೀನಾಮೆ ನೀಡಿದ್ದಾರೆ. ಸದಾನಂದ ಗೌಡ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸೇರ್ಪಡೆಗೊಳ್ಳುತ್ತಿದ್ದಾರೆ.

2004ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿ ಲೋಕಸಭೆ ಪ್ರವೇಶಿಸಿದ್ದ ಡಿವಿಎಸ್, 2009ರಲ್ಲಿ ಉಡುಪಿ, 2014 ಮತ್ತು 2019ರಲ್ಲಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸಂಸತ್‍ಗೆ ಆಯ್ಕೆಯಾಗಿದ್ದರು. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿದ್ದ ಅನಂತ್ ಕುಮಾರ್ ಅವರ ನಿಧನದ ಬಳಿಕ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವಾಲಯವನ್ನು ಅವರಿಗೆ ವಹಿಸಲಾಗಿತ್ತು.

The post ಸಚಿವ ಸ್ಥಾನಕ್ಕೆ ಡಿ.ವಿ ಸದಾನಂದ ಗೌಡ ರಾಜೀನಾಮೆ appeared first on Public TV.

Source: publictv.in

Source link