ನಾನು ಕ್ಷಮೆ ಕೇಳೋದಿಲ್ಲ ಸುಮಲತಾ ಕುತಂತ್ರಿ: ಎಚ್‍ಡಿಕೆ

ಬೆಂಗಳೂರು: ತಮ್ಮ ಹೇಳಿಕೆ ಕುರಿತು ಮಾಜಿ ಸಿಎಂ ಕುಮಾರಸ್ವಾಮಿ ಕ್ಷಮೆ ಕೇಳಬೇಕು ಎಂಬ ಸಂಸದೆ ಸುಮಲತಾ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಕ್ಷಮೆ ಕೇಳೋದಿಲ್ಲ ಎಂದು ಎಚ್‍ಡಿಕೆ ಸ್ಪಷ್ಟಪಡಿಸಿದ್ದಾರೆ.

ಜೆಪಿ ಭವನದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಸುಮಲತಾ ವಿರುದ್ದ ಕಿಡಿಕಾರಿದರು. ನಾನು ಯಾಕೆ ಕ್ಷಮೆ ಕೇಳಲಿ. ನಾನು ಕ್ಷಮೆ ಕೇಳೊದಿಲ್ಲ. ನಾನು ಕ್ಷಮೆ ಕೇಳೋ ಪದ ಬಳಿಕೆ ಮಾಡಿಲ್ಲ. ಯಾವ ತರಹ ಪದ ಬಳಕೆ ಮಾಡಬೇಕಿತ್ತು ನಾನು. ನಾನು ಸಂಸ್ಕೃತಿ, ಕನ್ನಡ ಭಾಷೆ ತಿಳಿದುಕೊಂಡಿದ್ದೇನೆ. ಕ್ಷಮೆ ಕೇಳಬೇಕಾದ ಪದ ನಾನು ಬಳಕೆ ಮಾಡಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಇದೇ ವೇಳೆ ಮಾಧ್ಯಮಗಳ ವಿರುದ್ಧವು ಮತ್ತೆ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ನಾನು ಪ್ರಸ್ತಾಪ ಮಾಡುವ ವಿಚಾರ ಮಾಧ್ಯಮಗಳಲ್ಲಿ ರೆಕಾರ್ಡ್ ಇರುತ್ತೆ. ನಾನು ಅಡ್ಡಡ್ಡ ಮಲಗಿ ಅಂತ ಮಾತಾಡಿಲ್ಲ. ಮಾಧ್ಯಮಗಳು ಸುದ್ದಿ ಬಿತ್ತರಿಸುವ ಮುನ್ನ ಜವಾಬ್ದಾರಿ ಅರಿತುಕೊಳ್ಳಲಿ. ನಾನೇನು ಅಕ್ರಮ ಗಣಿಗಾರಿಕೆ ಮಾಡಿ ಅಂತ ಹೇಳಿಲ್ಲ, 2018 ರಲ್ಲಿ ಸಿಎಂ ಇದ್ದಾಗ ಕೆ.ಆರ್.ಎಸ್. ಸುತ್ತಮುತ್ತಾ ಎಲ್ಲಾ ಗಣಿಗಾರಿಕೆ ಮಾಡುತ್ತಿದ್ದರು ನಿಲ್ಲಿಸುವಂತೆ ಆದೇಶ ಮಾಡಿದ್ದು ನಾನು. ಕಮೀಷನ್ ತೆಗೆದುಕೊಂಡು ನಾನು ಕೆಲಸ ಮಾಡಿಲ್ಲ. ಈಗ ಗಣಿಗಾರಿಕೆ ತೋರಿಸಲು ಸಂಸದರು ಹೋಗಿದ್ದಾರೆ. ಕೆ.ಆರ್.ಎಸ್ ಬಿರುಕು ಬಿಟ್ಟಿರೊದನ್ನು ತೋರಿಸಬೇಕು ಅದು ಬಿಟ್ಟು ಅಕ್ರಮ ಗಣಿಗಾರಿಕೆ ತೋರಿಸಲು ಯಾಕೆ ಹೋಗಿರೋದು ಎಂದು ಪ್ರಶ್ನೆ ಮಾಡಿದರು.

blank

ಸರ್ಕಾರದ ಮುಂದೆ ಕುಳಿತುಕೊಂಡು ಅಕ್ರಮ ಗಣಿಗಾರಿಕೆ ಮಾಡ್ತಿದ್ದರೆ ಇಲ್ಲಿ ಹೋರಾಟ ಮಾಡಿ. ಅಕ್ರಮ ಗಣಿಗಾರಿಕೆ ಮಾಡ್ತಿರೋರನ್ನು ಹೆದರಿಸಿ ದುಡ್ಡು ವಸೂಲಿ ಮಾಡೋಕೆ ಹೋಗಿದ್ದಾರಾ ಸಂಸದರು? ದುಡ್ಡು ವಸೂಲಿಗೆ ಹೋಗಿರಬಹುದು ಎಂದು ಆರೋಪಿಸಿದರು. ಡ್ಯಾಂ ಬಿರುಕು ಬಿಟ್ಟಿದ್ದರೆ ಅದನ್ನು ನಿಮಗೆ ತೋರಿಸಬೇಕು. ಗಣಿಗಾರಿಕೆ ಈ ಹೆಣ್ಣು ಮಗಳು ಬಂದಾಗಿನಿಂದ ನಡೆಯುತ್ತಿಲ್ಲ. 50,60 ವರ್ಷಗಳಿಂದ ನಡೆಯುತ್ತಿದೆ. ಸರ್ಕಾರಕ್ಕೆ ನಾನು ಡಿಮ್ಯಾಂಡ್ ಮಾಡ್ತೀನಿ. ರಾಜ್ಯದ ಅಕ್ರಮ-ಸಕ್ರಮ ಗಣಿಗಾರಿಕೆ ಬಗ್ಗೆ ಸಿಬಿಐ ತನಿಖೆಯೋ, ಅಥವಾ ಯಾವ ತನಿಖೆಯೋ ಸರ್ಕಾರ ಮಾಡಲಿ ಎಂದು ಆಗ್ರಹಿಸಿದರು. ಅಕ್ರಮ ಗಣಿಗಾರಿಕೆ ನಿಲ್ಲಿಸಿದವನು ನಾನು. ರಾಜ್ಯದ ಸಂಪತ್ತು ಲೂಟಿ ಮಾಡಲು ನಾನು ಅವಕಾಶ ಕೊಟ್ಟಿಲ್ಲ. ಬಿಡಿಎ 7 ಕಾಂಪ್ಲೆಕ್ಸ್ ಖಾಸಗಿಯವರಿಗೆ ಮೈತ್ರಿ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಜಾಗ ನೀಡಿಲ್ಲ. ಇದರ ದಾಖಲೆ ತೋರಿಸಿದರೆ ರಾಜಕೀಯವೇ ಬಿಡುತ್ತೇನೆ ಎಂದು ಸವಾಲ್ ಹಾಕಿದರು. ಇದನ್ನೂ ಓದಿ: ಸುಮಲತಾ Vs ಕುಮಾರಸ್ವಾಮಿ – ಮೈ ಶುಗರ್ ವಿವಾದ ಈಗ ಎದ್ದಿದ್ದು ಯಾಕೆ?

ಮಾಧ್ಯಮಗಳು ಪದೇ ಪದೇ ನನ್ನ ತೇಜೋವಧೆ ಮಾಡಬೇಡಿ. ಪದೇ ಪದೇ ಹೀಗೆ ಮಾಡೋದಾದ್ರೆ ಮಾಧ್ಯಮಗಳು ನನ್ನ ಬಳಿ ಬರೋದು ಬೇಡ. 50 ವರ್ಷ ದೇವೇಗೌಡರನ್ನು ಈ ಮಾಧ್ಯಮಗಳು ಹೇಗೆ ಬೆಳೆಸಿ, ಉಳಿಸಿದ್ದೀರಾ ಅಂತ ನಾನು ನೋಡಿದ್ದೇನೆ. ಪ್ರಧಾನಿ ಆಗೋದನ್ನು ಯಾರು ತಪ್ಪಿಸಲು ಆಗಲಿಲ್ಲ. ದೇವರು ಕೊಟ್ಟ. ನಾನು ಎರಡನೇ ಬಾರಿ ಸಿಎಂ ಆದ ಮೇಲೆ ಪ್ರತಿ ನಿತ್ಯ ನನ್ನ ತೇಜೋವಧೆ ಮಾಧ್ಯಮಗಳಲ್ಲಿ ನಡೆಯುತ್ತಿದೆ. ಮಂಡ್ಯ ಚುನಾವಣೆ ಹೇಗೆ ಮಾಧ್ಯಮಗಳು ನಡೆಸಿದ್ರಿ ಅಂತಾನೂ ಗೊತ್ತು. ಮಂಡ್ಯದಲ್ಲಿ ಸಂಸದರು ಏನ್ ಕೆಲಸ ಮಾಡಿದ್ದಾರೆ. ಇವರನ್ನು ಎಂಪಿ ಮಾಡಿದ್ದು ಕಲ್ಲು ಗಣಿಗಾರಿಕೆ ವೀಕ್ಷಣೆ ಮಾಡೋಕಾ? ಜನರ ಕಷ್ಟ ಸುಖ ನೋಡಲು ಸುಮಲತಾ ಹೋಗಿಲ್ಲ. ಜನ ಸತ್ತಾಗ ನೋಡೋಕೆ ಹೋಗಿಲ್ಲ. ನನಗೆ ಸಂಸ್ಕೃತಿ ಪಾಠ ಹೇಳಿಕೊಡ್ತಾರಾ? ನಾನು ಇವರಿಂದ ಸಂಸ್ಕೃತಿ ಕಲಿಬೇಕಾ? ಎಂದು ಕಿಡಿಕಾರಿದರು.

blank

ಮಂಡ್ಯಕ್ಕೆ ಬೇಡ ಎಂದಿದ್ದರು:
ಅಂಬರೀಶ್ ಮೃತರಾದಾಗ ಸುಮಲತಾ ಮಂಡ್ಯಕ್ಕೆ ಮೃತ ದೇಹ ತೆಗೆದುಕೊಂಡು ಹೋಗಬಾರದು ಎಂದು ಹೇಳಿದ್ದರು. ಈಗ ಮಂಡ್ಯ ಮತ್ತು ಅಂಬರೀಶ್ ಮೇಲೆ ಪ್ರೀತಿ ತೋರಿಸ್ತಿದ್ದಾರೆ. ನಾಚಿಕೆ ಆಗಬೇಕು ನಿಮಗೆ. ಬದುಕಿದ್ದಾಗ ಅಂಬರೀಶ್‍ರನ್ನ ಹೇಗೆ ನೋಡಿಕೊಂಡಿದ್ರೊ ಗೊತ್ತಿಲ್ಲ. ಅವ್ರ ಸುತ್ತಮುತ್ತ ಇದ್ದವರು ಹೇಳ್ತಿದ್ದಾರೆ. ಈಗ ಅಂಬರೀಶ್ ಬಗ್ಗೆ ಪ್ರೀತಿ ಉಕ್ಕಿ ಹರಿಯುತ್ತಿದೆಯಾ? ನಾನು ಅವತ್ತು ಕಷ್ಟ ಪಟ್ಟು ರಕ್ಷಣಾ ಮಂತ್ರಿ ಜೊತೆ ಮಾತಾಡಿ ಮೃತ ದೇಹ ಮಂಡ್ಯಕ್ಕೆ ತೆಗೆದುಕೊಂಡು ಹೋದೆ. ದೇಹ ಇಟ್ಟುಕೊಂಡು ಮಂಡ್ಯ ನೆಲದಲ್ಲಿ ಹಣೆಗೆ ಮಣ್ಣು ಎತ್ತಿ ಬಳಿದುಕೊಂಡಿದ್ದು ನೋಡಿದೆ. ಯಾವತ್ತು ಮಂಡ್ಯ ಜನರ ಕಷ್ಟ-ಸುಖ ನೋಡಲು ಆಕೆ ಹೋಗಿರಲಿಲ್ಲ. ಸಿನಿಮಾದಲ್ಲಿ ನಡೆಸಿದ ರಾಜಕಾರಣ ಇಲ್ಲಿ ನಡೆಸುತ್ತೇನೆ ಅಂತ ತಿಳಿದುಕೊಂಡಿದ್ದಾರೆ. ನನ್ನ ಪಕ್ಷ ಹಾಳು ಮಾಡಿದ್ದಾರೆ ಅಂತ ಹೇಳಿದ್ದಾರೆ ಅಲ್ಲವಾ. ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗುತ್ತೆ. ಮಂಡ್ಯದಿಂದಲೇ ನಾನು ಏನು ಅಂತ ತೋರಿಸ್ತೀನಿ. ಮಂಡ್ಯದಲ್ಲಿ ನನ್ನ ಕುಟುಂಬ ಸೋಲಿಸಿದ್ರಿ ಅಲ್ಲವಾ ಮಂಡ್ಯದಿಂದಲೇ ಪ್ರಾರಂಭ ಮಾಡ್ತೀನಿ. ಇವ್ರಿಂದ ನಾನು ಸಂಸ್ಕೃತಿ ಹೇಳಿಸಿಕೊಳ್ಳಬೇಕಾಗಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಕುಟುಂಬ ಒಡೆಯಲ್ಲ:
ಪ್ರಜ್ವಲ್ ರೇವಣ್ಣ ಹೆಸರು ಪ್ರಸ್ತಾಪ ಮಾಡಿ ನಮ್ಮ ಕುಟುಂಬ ಒಡೆಯಬೇಕು ಅಂತ ನಿಮ್ಮ ಪ್ಲ್ಯಾನ್ ಅಲ್ಲವಾ? ನಮ್ಮ ಕುಟುಂಬ ಒಡೆಯಲು ಬಹಳ ಜನ ಪ್ರಯತ್ನ ಮಾಡಿ ಯಾರನ್ನು ಒಡೆಯಲು ಆಗಿಲ್ಲ. ಅ ಮಾತಿನ ಉದ್ದೇಶ ಏನು ಅಂತಾನೂ ನನಗೆ ಗೊತ್ತಿದೆ. ಕುಟುಂಬ ಒಡೆಯಲು ಅ ಪದ ಬಳಕೆ ಮಾಡಿದ್ದೀರಿ. ನಿಮ್ಮಂತ ಕುತಂತ್ರಿಗಳಿಂದ ನಮ್ಮ ಕುಟುಂಬ ಒಡೆಯಲು ಸಾಧ್ಯವಿಲ್ಲ. ನನ್ನ ರಾಜಕೀಯ ಬೆಳವಣಿಗೆಯನ್ನು ನಿಮ್ಮಂತ ಕುತಂತ್ರಿಗಳು ನಿಲ್ಲಿಸಲು ಸಾಧ್ಯವಿಲ್ಲ. ಈ ರಾಜ್ಯದಲ್ಲಿ ನನ್ನದೇ ಆದ ವರ್ಗ ಇದೆ. ನನ್ನ ಪ್ರೀತಿಸಿರುವ ಮತ್ತು ಬೆಳೆಸಿರುವ ವರ್ಗ ಇದೆ. ಸೋತಿದ್ದೇವೆ, ಗೆದ್ದಿದ್ದೇವೆ. ದೇವೇಗೌಡರು ಎರಡು ಬಾರಿ ಸೋತಿದ್ದರು. ಆಗ ದೇವೇಗೌಡ ರಾಜಕೀಯ ಮುಗಿದೇ ಹೋಯ್ತು ಅಂದ್ರು. ಅಮೇಲೆ ಪ್ರಧಾನಿ ಆದ್ರು. ಮುಂದಿನ 5 ವರ್ಷದಲ್ಲಿ ರಾಜಕಾರಣ ಏನೇನಾಗುತ್ತೆ ಅಂತ ನೋಡೋಣ. ಅವರು ಬದುಕಿರುತ್ತಾರೆ ಎಂದು ಸುಮಲತಾ ವಿರುದ್ಧ ಕೆಂಡಕಾರಿದರು. ಇದನ್ನೂ ಓದಿ: ಆಡಿಯೋ, ವೀಡಿಯೋ, ಫೋನ್ ಟ್ಯಾಪಿಂಗ್ ಕುಮಾರಸ್ವಾಮಿಗೆ ಅಭ್ಯಾಸ ಆಗಿದೆ: ಸುಮಲತಾ

ಅಡಿಯೋ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು,ಆಡಿಯೋ ಬಿಡುಗಡೆ ಮಾಡೋಣ. ಅವರಿಗೆ ಯಾಕೆ ಆತುರ. ನನಗೇನು ಆತುರ ಇಲ್ಲ. ನಾನು ಯಾವತ್ತಾದರು ದಾಖಲೆ ಬಗ್ಗೆ ಚರ್ಚೆ ಮಾಡಿದ್ರೆ ದಾಖಲೆ ಇಟ್ಟೆ ಮಾತಾಡೋನು. ಯಾರನ್ನು ಲಘುವಾಗಿ ಸುಮ್ಮನೆ ಎದುರಿಸಲು ಮಾತಾಡೋನು ಅಲ್ಲ. ಅ ಹೆಣ್ಣು ಮಗಳ ನಡವಳಿಕೆ ನನಗೂ ಗೊತ್ತಿದೆ ಅಂತ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಮಾಧ್ಯಮಗಳಿಂದ ತೇಜೋವಧೆ
ಮಾಧ್ಯಮಗಳು ನಿಮ್ಮ ನಡವಳಿಕೆ ಸರಿ ಮಾಡಿಕೊಳ್ಳಿ. ಸತ್ಯ ಏನು ತಿಳಿದುಕೊಂಡು ಪ್ರಚಾರ ಮಾಡಿ. ನನ್ನ ಹೇಳಿಕೆ ತಿರುಚೋದು ಮೊದಲು ಬಿಡಬೇಕು. ನಾನು ಮಾತಾಡೋವಾಗ ಪ್ರಜ್ಞೆ ಇಟ್ಟುಕೊಂಡು ಮಾತಾಡ್ತೀನಿ. ಹಿಂದೆ ರೈತ ಮಹಿಳೆ ಬಗ್ಗೆ ಹಿಂದೆ ಮಾತಾಡಿದ್ದೆ. ಆಗ ಏನ್ ಹೇಳಿದ್ದೆ. ಹಳ್ಳಿ ಭಾಷೆಯಲ್ಲಿ ನಾನು ಮಾತಾಡಿದ್ದೆ. ಅದನ್ನು ನಿಮಗೆ ಬೇಕಾದ ಹಾಗೆ ವಿಶ್ಲೇಷಣೆ ಮಾಡಿಕೊಂಡ್ರೆ ನಾನು ಉತ್ತರ ಕೊಡಲಾ? ಏನಾಗಿದೆ ಅಂತ ಎರಡು ದಿನಗಳಿಂದ ಸುದ್ದಿ ಮಾಡ್ತಿದ್ದೀರಾ? ನಿಮಗೆ ಬೇಕಾದ ಹಾಗೇ ಸುದ್ದಿ ನೀವು ಮಾಡಿಕೊಳ್ಳಿ. ಒಳ್ಳೆ ಕೆಲಸಗಳಿಗೆ  ಕೊಡಿ. ಇದರಿಂದ ನನಗೇನು ನಷ್ಟ ಇಲ್ಲ. ರಾಜ್ಯದ ಜನರಿಗೆ ನಷ್ಟ. ಇಂತಹವರನ್ನು ಬೆಳೆಸಿದ್ರೆ ರಾಜ್ಯದ ಜನ, ಮಂಡ್ಯದ ಜನರಿಗೆ ನಷ್ಟ. ದೇಶ, ರಾಜ್ಯ ಏನಾಗಿದೆ ಅಂತ ಸತ್ಯ ಹೊರ ತೆಗೆಯೋ ಕೆಲಸ ನೀವು ಮಾಡುತ್ತಿಲ್ಲ. ಮೊದಲು ಒಂದು ದಿನ ಸುದ್ದಿ ಮಾಡ್ತೀರಾ. ಅಮೇಲೆ ನಿಮ್ಮ ವ್ಯವಸ್ಥಾಪಕರಿಗೆ ಯಾರೋ ಬಂದು ದುಡ್ಡು ಕೊಡ್ತಾರೆ, ಅಮೇಲೆ ಅದಕ್ಕೆ ಬಣ್ಣ ಕಟ್ಟಿ ಬೇರೆ ತರಹ ಹೇಳ್ತೀರಾ. ನಿಮ್ಮ ಬಳಿ ನಾನು ಏನು ಮಾತಾಡೊಲ್ಲ. ನಿಮಗೆ ಬೇಕಾದ ಹಾಗೆ ಮಾಡಿಕೊಳ್ಳಿ ಅಂತ ಮಾಧ್ಯಮಗಳ ವಿರುದ್ಧ ಕುಮಾರಸ್ವಾಮಿ ಮತ್ತೆ ಆಕ್ರೋಶ ಹೊರ ಹಾಕಿದರು.

The post ನಾನು ಕ್ಷಮೆ ಕೇಳೋದಿಲ್ಲ ಸುಮಲತಾ ಕುತಂತ್ರಿ: ಎಚ್‍ಡಿಕೆ appeared first on Public TV.

Source: publictv.in

Source link