ಮೋದಿ ಕ್ಯಾಬಿನೆಟ್​​ನಲ್ಲಿ 35 ವರ್ಷಕ್ಕೇ​ ಸಚಿವನಾದ ಯುವಕ: ಯಾರೀ ನಿಶಿತ್ ಪ್ರಮಾಣಿಕ್..?

ಮೋದಿ ಕ್ಯಾಬಿನೆಟ್​​ನಲ್ಲಿ 35 ವರ್ಷಕ್ಕೇ​ ಸಚಿವನಾದ ಯುವಕ: ಯಾರೀ ನಿಶಿತ್ ಪ್ರಮಾಣಿಕ್..?

ಭಾರೀ ನಿರೀಕ್ಷೆ ಮೂಡಿಸಿದ್ದ ಕೇಂದ್ರ ಸಂಪುಟ ವಿಸ್ತರಣೆ ಮುಗಿದಿದ್ದು 43 ಮಂದಿ ನಾಯಕರು ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಪೈಕಿ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದು ಕಟ್ಟಕಡೆಯಲ್ಲಿ ಪ್ರಮಾಣವಚನ ಸ್ವೀಕರಿಸಿದ ನಿಶಿತ್ ಪ್ರಮಾಣಿಕ್ ಪಶ್ಚಿಮ ಬಂಗಾಳದ ಕೂಚ್​ಬೆಹರ್ ಜಿಲ್ಲೆಯಿಂದ ಮೊಟ್ಟ ಮೊದಲ ಬಾರಿಗೆ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

2019 ರಲ್ಲಿ ನಿಶಿತ್ ಪ್ರಾಮಾಣಿಕ್ ಉತ್ತರ ಬಂಗಾಳದಲ್ಲಿ ಅರ್ಧ ಟಿಎಂಸಿಯನ್ನೇ ತೊಳೆದುಹಾಕುತ್ತೇನೆಂದು(ಉನಿಶೆ ಹಾಫ್, ಎಕುಸೆ ಸಾಫ್) ಶಪಥ ಮಾಡಿದವರು. ಅದರಂತೆ 2021 ರ ಚುನಾವಣೆಯಲ್ಲಿ ಉತ್ತರ ಬಂಗಾಳದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಿತು. ಬಿಜೆಪಿಯ ಈ ಸಾಧನೆಗೆ ಕಾರಣರಾಗಿದ್ದೇ ನಿಶಿತ್ ಪ್ರಮಾಣಿಕ್ ಎಂಬ ಮಾತಿದೆ.

blank

 

ಇತ್ತೀಚೆಗೆ ನಡೆದ 2021 ರ ವಿಧಾನಸಭಾ ಚುನಾವಣೆಯಲ್ಲಿ ಬಂಗಾಳದ ಜನರ ಮನಸ್ಸು ಟಿಎಂಸಿಯತ್ತಲೇ ವಾಲಿತ್ತಾದರೂ ಬಿಜೆಪಿ ಉತ್ತರ ಬಂಗಾಳದಲ್ಲಿ ತನ್ನ ಪಕ್ಷವನ್ನ ಬಲಪಡಿಸಿಕೊಳ್ತು. ನಿಶಿತ್ ಕ್ಷೇತ್ರವಾದ ಕೂಚ್​​ಬೆಹರ್​​ನಲ್ಲಿ 9 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು.ಅಲಿಪಿರುದುವಾರ್, ಜಲ್ಪಾಯ್​ಗುರಿ, ದಾರ್ಜೀಲಿಂಗ್ ಮತ್ತು ಕಲಿಂಪೊಂಗ್​​ನಲ್ಲಿ ಕೇಸರಿ ಬಾವುಟ ಹಾರಿಸುವಲ್ಲಿ ಬಿಜೆಪಿ ಯಶಸ್ವಿಯಾಯಿತು. ಈ ಪೈಕಿ ಅಲಿಪುರುದುವಾರ್ ಕ್ಷೇತ್ರದ ಸಂಸದ ಜಾನ್​ ಬರ್ಲಾ ಉತ್ತರ ಬಂಗಾಳವನ್ನ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸುವಂತೆ ಒತ್ತಾಯಿಸಿದರು. ಆದ್ರೆ ಜಾನ್ ಬರ್ಲಾ ಒತ್ತಾಯಕ್ಕೆ ನಿಶಿತ್ ದನಿಗೂಡಿಸಲಿಲ್ಲ. ಇದೀಗ ನಿಶಿತ್ ಅವರನ್ನ ನೂತನ ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಮೋದಿ ಸರ್ಕಾರ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಸಂದೇಶವೊಂದನ್ನ ರವಾನಿಸಿದೆ ಎನ್ನಲಾಗ್ತಿದೆ.

blank

ಸದ್ಯ ಇರುವ ನೂತನ ಸಂಪುಟದಲ್ಲಿ 35 ವರ್ಷದ ನಿಶಿತ್ ಪ್ರಮಾಣಿಕ್ ಅತೀ ಕಡಿಮೆ ವಯಸ್ಸಿನ ಸಚಿವ. ವಯಸ್ಸು 35 ಆದ್ರೂ ನಿಶಿತ್ ನಡೆದುಬಂದ ಹಾದಿ ರೋಚಕವಾದುದು. ಕೊಲ್ಕತ್ತಾದ ನೆರಳಿನಲ್ಲಿ ಸಿಲುಕಿದ್ದ ಕೂಚ್ ಬೆಹರ್​ನ್ನು ಹೊರಗೆ ತಂದದ್ದು, ಮತ್ತು ಅದನ್ನ ರಾಷ್ಟ್ರದ ಭೂಪಟದಲ್ಲಿ ಕಾಣುವಂತೆ ಮಾಡಿದ್ದು ನಿಶಿತ್ ಎನ್ನುವ ಮಾತಿದೆ. ಕೂಚ್ ಬೆಹರ್​ನಿಂದ ಮೊದಲ ಕೇಂದ್ರ ಸಚಿವನಾಗಿರುವ ರಾಜ್​ಬೋಂಗ್​ಶಿ ಸಮುದಾಯದ ನಿಶಿತ್ ಪ್ರಮಾಣಿಕ್.. ರಾಜ್ಯತ್ವಕ್ಕಾಗಿ ಹೋರಾಟ ನಡೆಸುತ್ತಿರುವವರ ಪಾಲಿನ ಆಶಾಕಿರಣವಾಗ್ತಾರಾ ಎಂಬ ಚರ್ಚೆ ಶುರುವಾಗಿದೆ.

blank

ಪ್ರಮಾಣಿಕ್ 2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿಯಿಂದ ಬಿಜೆಪಿಗೆ ಜಿಗಿದ ಹಲವು ನಾಯಕರಲ್ಲಿ ಒಬ್ಬರು. ಪ್ರೈಮರಿ ಸ್ಕೂಲ್​ನಲ್ಲಿ ಸಹಾಯಕ ಟೀಚರ್ ಕೂಡ ಆಗಿದ್ದ ಇವರು ಬಿಸಿಎ ಪದವಿ ಮುಗಿಸಿದ್ದಾರೆ. ಇನ್ನು ನಿಶಿತ್ ಪ್ರಮಾಣಿಕ್ ವಿರುದ್ಧ ಪಕ್ಷದ ಮುಖಂಡರೇ ಪ್ರತಿಭಟನೆಗಳನ್ನು ನಡೆಸಿದ್ದರು ಎನ್ನಲಾಗಿದೆ.. ಅಲ್ಲದೇ ಟಿಎಂಸಿಯಿಂದ ಆಫರ್ ಬಂದರೂ ತಿರಸ್ಕರಿಸಿ ಪಕ್ಷಕ್ಕೆ ಪ್ರಾಮಾಣಿಕವಾಗಿ ಉಳಿದ ನಿಶಿತ್ ಪ್ರಮಾಣಿಕ್​ ಅವರಿಗೆ ಇದೀಗ ಸಚಿವ ಸ್ಥಾನ ಒಲಿದಿರುವುದು ಕೂಚ್​​ಬೆಹರ್​ ಜಿಲ್ಲೆಯ ಜನರಲ್ಲಿ ಸಂತಸ ತಂದಿದೆ.

ವಿಶೇಷ ವರದಿ: ರಾಜಶೇಖರ್ ಬಂಡೆ, ಡಿಜಿಟಲ್ ಡೆಸ್ಕ್

The post ಮೋದಿ ಕ್ಯಾಬಿನೆಟ್​​ನಲ್ಲಿ 35 ವರ್ಷಕ್ಕೇ​ ಸಚಿವನಾದ ಯುವಕ: ಯಾರೀ ನಿಶಿತ್ ಪ್ರಮಾಣಿಕ್..? appeared first on News First Kannada.

Source: newsfirstlive.com

Source link