ವಿಶ್ವದ ದೊಡ್ಡಣ್ಣನ ಮೇಲೆ  ನಡೀತು ಸೈಬರ್ ಅಟ್ಯಾಕ್, 200 ಸಂಸ್ಥೆಗಳಿಗೆ ಸೈಬರ್ ಖದೀಮರಿಂದ ಕನ್ನ

ವಿಶ್ವದ ದೊಡ್ಡಣ್ಣನ ಮೇಲೆ  ನಡೀತು ಸೈಬರ್ ಅಟ್ಯಾಕ್, 200 ಸಂಸ್ಥೆಗಳಿಗೆ ಸೈಬರ್ ಖದೀಮರಿಂದ ಕನ್ನ

ಕೊರೊನಾ ಗೆದ್ದಿದ್ದೇವೆಂದು ಬೀಗುತ್ತಿದ್ದ ವಿಶ್ವದ ದೊಡ್ಡಣ್ಣ ಡಿಜಿಟಲ್ ಯುದ್ಧದಿಂದ ಇದೀಗ ಹೈರಾಣಾಗಿದ್ದಾನೆ. ಅಮೆರಿಕ , ಸ್ವೀಡನ್ ಕಂಪನಿಗಳ ಮೇಲೆ ಸೈಬರ್ ವಾರ್ ನಡೆದಿದೆ. ಡಿಜಿಟಲ್ ಯುದ್ಧಕ್ಕೆ ಬೆದರಿದ ಸ್ವೀಡನ್ ಬರೋಬ್ಬರಿ 800ಕ್ಕೂ ಅಧಿಕ ಸೂಪರ್ ಮಾರ್ಕೆಟ್ ಗಳಿಗೆ ಬೀಗ ಹಾಕಿದೆ.

ಇದು ಸೈಬರ್ ಯುದ್ಧ. ಇಲ್ಲಿ ಆಯುಧಗಳಿಲ್ಲ, ಬಾಂಬ್ ಗುಂಡುಗಳ ಶಬ್ದ ಇರಲ್ಲ. ಹೊಡೆದಾಟ, ಬಡಿದಾಟ, ಯಾವುದು ಕೂಡ ಇರಲ್ಲ. ಇಲ್ಲೇನಿದ್ರೂ ಡಿಜಿಟಲ್ ಯುದ್ಧ. ಇವರದೇನಿದ್ರೂ ಲ್ಯಾಪ್ ಟಾಪ್ ಜೊತೆ ಆಟ, ಇಂಟರ್ನೆಟ್ ಜೊತೆ ಒಡನಾಟ. ಇಂಟರ್ನೆಟ್ ಎಂಬ ಮಾಯಾಜಾಲವನ್ನು ಬೆರಳ ತುದಿದಲ್ಲಿ ತಮ್ಮ ಇಶಾರೆಯಂತೆ ಅಲುಗಾಡಿಸುತ್ತಾರೆ. ಎಲ್ಲಿ ದುಡಿರುತ್ತೋ, ಅಲ್ಲೆಲ್ಲ ಈ ಸೈಬರ್ ಕ್ರಿಮಿಗಳ ಒಂದು ಕಣ್ಣು ಇದ್ದೇ ಇರುತ್ತೆ. ಜಗತ್ತಿನ ಯಾವ ಮೂಲೆಯಲ್ಲಿರುವ ದುಡ್ಡಿನ ವಾಸನೆ ಸಿಕ್ಕಿದ್ರೆ ಸಾಕು, ಹೆಗ್ಗಣದಂತೆ ನುಸುಳಿ ಬಿಡ್ತಾರೆ.

ಕೊರೊನಾ ಸಂಕಷ್ಟದ ಮಧ್ಯೆ ಸೈಬರ್ ವಾರ್
ಅಮೆರಿಕದ-ಸ್ವೀಡನ್ ಗೂ ಶಾಕ್ ಕೊಟ್ಟ ಹ್ಯಾಕರ್ಸ್

ಜಗತ್ತಿನಾದ್ಯಂತ ಕೊರೊನಾ ವಿರುದ್ಧದ ಯುದ್ಧ ಗೆಲ್ಲುವ ಹೊತ್ತಲ್ಲೇ ಇದೀಗ ಸೈಬರ್ ವಾರ್ ಶುರುವಾಗಿದೆ. ಕೊರೊನಾ ದುಡಿಯುವ ಕೈಗಳನ್ನ ಕಟ್ಟಿಹಾಕಿತ್ತೇ ವಿನಃ ಖದೀಮರ ಕೈಗಳನ್ನಲ್ಲ. ಅಮೆರಿಕ ಸೇರಿದಂತೆ ಜಗತ್ತಿನ ಪ್ರಮುಖ ದೇಶಗಳು ಲಾಕ್ ಡೌನ್ ನಲ್ಲಿದ್ದ ಸಂದರ್ಭದಲ್ಲಿಯೂ ಕೂಡ ಈ ಸೈಬರ್ ಕ್ರಿಮಿಗಳು ಆ್ಯಕ್ಟೀವ್ ಆಗಿದ್ರು. ಜನರೆಲ್ಲ ನಿದ್ದೆಗೆ ಜಾರುತ್ತಿದ್ದಂಗೆ ಎಂಟ್ರಿ ಕೊಡ್ತಿದ್ದ ಈ ಸೈಬರ್ ಹುಳಗಳು ಎಲ್ಲೋ ಕತ್ತಲೆ ಕೋಣೆಯಲ್ಲಿ ಕೂತು ಇನ್ಯಾವುದೋ ದೇಶದ ಮೇಲೆ ಸಮರ ಸಾರ್ತಿದ್ದಾರೆ. ಕೊರೊನಾ ಬೆನ್ನಲ್ಲೇ ಇದೀಗ ಸೈಬರ್ ಕ್ರಿಮಿಗಳ ಕಾಟ ಶುರುವಾಗಿದೆ. ಮಾಸ್ಕ್ ಮೂಲೆಗಿಟ್ಟು ಅಗೋಚರ ವೈರಸ್ ವಿರುದ್ಧದ ಗೆದ್ದಿದ್ದೇವೆಂದು ಭೀಗುತ್ತಿದ್ದ ವಿಶ್ವದ ದೊಡ್ಡಣ್ಣಿಗೆ ಇದೀಗ ಕಾಣದ ಮನುಷ್ಯನ ಭೀತಿ ಶುರುವಾಗಿದೆ.

ಈ ಸೈಬರ್ ಕ್ರಿಮಿಗಳು ಕೂಡ ಒಂಥರಾ ಕೊರೊನಾ ವೈರಸ್ ಇದ್ದಂಗೆ. ಯಾಕಂದ್ರೆ ಕೊರೊನಾ ವೈರಸ್ ಯಾವ ರೀತಿಯಲ್ಲಿ ಗೋಚರವಾಗಲ್ವೋ, ಇವ್ರೂ ಕೂಡ ಹಾಗೆ ಅಷ್ಟು ಬೇಗ ಯಾರ ಕಣ್ಣಿಗೂ ಬೀಳಲ್ಲ. ಗುಣ ಲಕ್ಷಣ ಕಾಣಿಸಿಕೊಂಡ್ಮೇಲೆನೆ ಕೊರೊನಾ ಬಂದಿರೋದು ಯಾವ ರೀತಿ ಗೊತ್ತಾಗುತ್ತೋ , ಅದೇ ರೀತಿ ಸರ್ವರ್ ಹ್ಯಾಕ್ ಅದಾಗ್ಲೇ ಈ ಸೈಬರ್ ಖದೀಮರು ಅಟ್ಯಾಕ್ ಮಾಡಿದ್ದಾರೆಂದು ಗೊತ್ತಾಗೊದು. ಅಮೆರಿಕದ ಕಸೆಯಾ ಕಂಪನಿಯ ಮೇಲೆ ಸೈಬರ್ ದಾಳಿಯಾದ ಬೆನ್ನಲ್ಲೇ ಇದೀಗ ಸ್ವೀಡನ್ ದೇಶ ಕೂಡ ತಮ್ಮ ದೇಶದ ಸೂಪರ್ ಮಾರ್ಕೆಟ್ ಬಂದ್ ಮಾಡಿದೆ. ಕೊರೊನಾ ಕಡ್ಮೆಯಾಗಿರುವ ಕಾರಣ ಮತ್ತೆ ಓಪನ್ ಆಗಿದ್ದ ಕಂಪನಿಗಳು ಇದೀಗ ಮತ್ತೆ ಬಾಗಿಲು ಹಾಕಿದೆ.

ವಿಶ್ವದ ದೊಡ್ಡಣ್ಣನಿಗೂ ಸೈಬರ್ ಖದೀಮರ ಕಾಟ
ಇದು ವಿಶ್ವದ ಅತೀ ದೊಡ್ಡ ಸೈಬರ್ ದಾಳಿ
200 ಸಂಸ್ಥೆಗಳ ಮಾಹಿತಿಗೆ ಸೈಬರ್ ಕ್ರಿಮಿಗಳ ಕನ್ನ
ಕಸೆಯಾ ಸಂಸ್ಥೆಯ ಮೇಲೂ ಸೈಬರ್ ಅಟ್ಯಾಕ್

ಕಸೆಯಾ, ಅಮೆರಿಕದ ಪ್ರಮುಖ ಐಟಿ ಸ್ವಾಫ್ಟ್ ವೇರ್ ಕಂಪನಿ. ಅಮೆರಿಕ ಮಾತ್ರವಲ್ಲದೇ ಇತರೆ ದೇಶಗಳಲ್ಲೂ ಇತರೆ ನೆಟ್ ವರ್ಕ್ ವಿಸ್ತರಿಸಿದೆ. ಅಮೆರಿಕದ ಪ್ರಮುಖ ಸಂಸ್ಥೆ ಕಸೆಯಾ ಮೇಲೆ ಸೈಬರ್ ಖದೀಮರ ಕಣ್ಣು ಬಿದ್ದಿದ್ದೆ ತಡ, ಈ ಸೈಬರ್ ಕ್ರಿಮಿಗಳು ಕಳ್ಳ ಬೆಕ್ಕಿನಂತೆ ಎಂಟ್ರಿ ಕೊಟ್ಟಿದ್ದಾರೆ. ಸರಿಸುಮಾರು 200 ಕಂಪನಿಗಳ ಮಾಹಿತಿ ಹ್ಯಾಕ್ ಮಾಡಿದ್ದಾರೆ ಎನ್ನಲಾಗಿದೆ. ಹ್ಯಾಕ್ ಮಾಡಿರುವ ಮಾಹಿತಿಯನ್ನು ಮತ್ತೆ ಹಿಂದಿರುಗಿಸಬೇಕಾದ್ರೆ ಸರಿಸಮಾರು 520 ಕೋಟಿಯಷ್ಟು ಬೇಡಿಕೆ ಇಟ್ಟಿದ್ಧಾರೆ ಎನ್ನಲಾಗಿದೆ. ಸೈಬರ್ ಅಟ್ಯಾಕ್ ಆದ ಬೆನ್ನಲ್ಲೇ ಕಸೆಯಾ ಕಂಪನಿಯ ಅಧಿಕಾರಿಗಳು ಕೂಡಲೇ 200 ಸಂಸ್ಥೆಗಳ ನೆಟ್ ವರ್ಕನ್ನು ಸ್ಥಗಿತಗೊಳಿಸಿದ್ದಾರೆ.

ಕಸೆಯಾದ ಮೇಲೆ ಸೈಬರ್ ದಾಳಿ ಬೆನ್ನಲ್ಲೆ ಎಚ್ಚೆತ್ತ ಸ್ವೀಡನ್
ಡಿಜಿಟಲ್ ಸುಲಿಗೆಕೋರರಿಂದ ರಕ್ಷಣೆ ಪಡೆದುಕೊಳ್ಳಲು ಪ್ಲಾನ್
ಸ್ವೀಡನ್ ದೇಶದ 800 ಸೂಪರ್ ಮಾರ್ಕೆಟ್ ಗಳಿಗೆ ಬೀಗ

ತನ್ನೆಲ್ಲಾ ವ್ಯವಸ್ಥೆಯನ್ನು ಸುರಕ್ಷಿತವಾಗಿಟ್ಟುಕೊಳ್ಳುವ ಅಮೆರಿಕದ ಡಿಟಿಜಟ್ ವ್ಯವಸ್ಥೆಯ ಮೇಲೆ ಸೈಬರ್ ಖದೀಮರು ಅಟ್ಯಾಕ್ ಮಾಡಿದ್ಮೇಲೆ ಇತರೆ ದೇಶಗಳು ಕೂಡ ತಮ್ಮ ದೇಶಗಳ ಪ್ರಮುಖ ಕಂಪನಿಗಳನ್ನು ಸೈಬರ್ ಸುಲಿಕೋರರಿಂದ ರಕ್ಷಣೆ ಮಾಡಲು ಮುಂದಾಗಿದೆ. ಅಮೆರಿಕದ ಕಸೆಯಾ ಕಂಪನಿಯ ಮೇಲೆ ದಾಳಿ ಇತರೆ ದೇಶದ ಕಂಪನಿಗಳ ಮೇಲೂ ಪರಿಣಾಮ ಬೀರಿದೆ. ಇದ್ರಿಂದ ಸ್ವೀಡನ್ ದೇಶವು ತಮ್ಮ ದೇಶದ ಪ್ರಮುಖ 800 ಸೂಪರ್ ಮಾರ್ಕೆಟ್ ಗಳಿಗೆ ಬೀಗ ಹಾಕಿದೆ. ಈ ಮೂಲಕ ಸೈಬರ್ ಖದೀಮರ ಸರಪಳಿಯಿಂದ ರಕ್ಷಣೆ ಮಾಡ್ಕೊಂಡಿದೆ. ಸೈಬರ್ ಖದೀಮರು ಆನ್ ಲೈನ್ ವ್ಯವಹಾರಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಿದ್ದರಿಂದ, ಕೆಲ ದಿನಗಳ ಕಾಲ ಆನ್ ಲೈನ್ ಶಾಪಿಂಗ್ ಗೆ ಕೂಡ ಅವಕಾಶ ನಿರಾಕರಣೆ ಮಾಡಲಾಗಿದೆ.

ಸೈಬರ್ ವಾರ್ ತನಿಖೆಗೆ ಎಂಟ್ರಿ ಕೊಟ್ಟ ಎಫ್.ಬಿ.ಎ
ಅಮೆರಿಕ-ಸ್ವೀಡನ್ ಮೇಲೆ ಮಾತ್ರ ಅಟ್ಯಾಕ್ ಆಗಿರೋದಾ?

ಸೈಬರ್ ವಾರ್ ತನಿಖೆಗೆ ಇದೀಗ ಅಮೆರಿಕದ ಸಂಯುಕ್ತ ತನಿಖಾ ದಳ ಎಫ್.ಬಿ,ಐ ಎಂಟ್ರಿ ಕೊಟ್ಟಿದೆ. ಸೈಬರ್ ದಾಳಿ ಮಾಡಿದ್ದು ಯಾರು? ಅವರ ಉದ್ದೇಶ ಏನೆಂಬುದರ ಕುರಿತು ಎಫ್.ಬಿ.ಐ ಇಂಚಿಂಚು ಮಾಹಿತಿ ಕಲೆ ಹಾಕ್ತಿದೆ. ಡಿಜಿಟಲ್ ಯುದ್ಧ ಸಾರುತ್ತಿರುವ ಖದೀಮರ ಹೆಜ್ಜೆ ಗುರುತುಗಳನ್ನು ಎಫ್.ಬಿ.ಐ ಅಧಿಕಾರಿಗಳು ಜಾಲಾಡ್ತಿದ್ದಾರೆ. ಸೈಬರ್ ಕ್ರಿಮಿಗಳು ಬರೀ ಅಮೆರಿಕ, ಸ್ವೀಡನ್ ಮಾತ್ರವಲ್ಲದೇ ಇತರೆ ದೇಶಗಳ ಪ್ರತಿಷ್ಥಿತ ಕಂಪನಿಗಳ ಮೇಲೂ ಅಟ್ಯಾಕ್ ಮಾಡಿರುವ ಸಾಧ್ಯತೆ ಇದೆ. ಕೆಲವು ಕಂಪನಿಗಳು ಸೆಕ್ಯೂರಿಟಿ ಪರ್ಪಸ್ ಗೋಸ್ಕರ ಸೈಬರ್ ದಾಳಿಯ ರಹಸ್ಯವನ್ನು ಗುಪ್ತವಾಗಿರಿಸಿವೆ ಎಂಬ ಆರೋಪಗಳು ಕೂಡ ಕೇಳಿ ಬರ್ತಿದೆ. ಎಫ್.ಬಿ.ಐ ತನಿಖೆಯಿಂದಷ್ಟೇ ಅಸಲಿ ರಹಸ್ಯ ಹೊರ ಬರಬೇಕಾಗಿದೆ.

ಎಲ್ಲೋ ಮರೆಯಲ್ಲಿ ಕೂತು ಡಿಜಿಟಲ್ ಯುದ್ಧ ಸಾರುತ್ತಿರುವ ಸೈಬರ್ ಕ್ರಿಮಿಗಳ ಜನ್ಮ ಜಾಲಾಡಲು ಎಫ್.ಬಿ. ಐ ಎಂಟ್ರಿ ಕೊಟ್ಟಿದೆ. ಹಲವು ಕಂಪನಿಗಳ ಸರ್ವರ್ ಗಳನ್ನು ಖದೀಮರು ಹ್ಯಾಕ್ ಮಾಡಿರುವ ಸಾಧ್ಯತೆ ಇದ್ದು, ಎಫ್.ಬಿ.ಐ ತನಿಖೆಯಿಂದಷ್ಟೇ ಸ್ಪಷ್ಚವಾಗಬೇಕಾಗಿದೆ.

The post ವಿಶ್ವದ ದೊಡ್ಡಣ್ಣನ ಮೇಲೆ  ನಡೀತು ಸೈಬರ್ ಅಟ್ಯಾಕ್, 200 ಸಂಸ್ಥೆಗಳಿಗೆ ಸೈಬರ್ ಖದೀಮರಿಂದ ಕನ್ನ appeared first on News First Kannada.

Source: newsfirstlive.com

Source link