ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

1. ಗಣಿಗಾರಿಕೆಗಳ ಮೇಲೆ ದಂಡೆತ್ತಿ ಹೋದ ಸುಮಲತಾ
ಅಕ್ರಮ ಗಣಿಗಾರಿಕೆ ಮೇಲೆ ಮಂಡ್ಯ ಸಂಸದೆ ಸುಮಲತಾ ಸಿಡಿದೆದ್ದಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಚನ್ನನಕೆರೆ, ಹಂಗರಹಳ್ಳಿಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿದೆ ಅನ್ನೋ ಆರೋಪ ಹಿನ್ನೆಲೆ ಸುಮಲತಾ ಅಂಬರೀಶ್ ಪರಿಶೀಲನೆ ನಡೆಸಿದ್ರು. ಕಲ್ಲು ಗಣಿಗಾರಿಕೆಗಳಿಗೆ ಸಂಸದೆ, ಡಿಸಿ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದಾಗ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಸುಮಲತಾ ಅಬರೀಶ್​ಗೆ ಮುತ್ತಿಗೆ ಹಾಕಿದ್ರು. ಕೇವಲ ನಮ್ಮ ಶಾಸಕರದ್ದು, ಬೆಂಬಲಿಗರದ್ದು ಅಂತ ಹೇಳ್ತಿರೋ ಕ್ವಾರಿಗಷ್ಟೇ ಯಾಕೆ ಹೋಗ್ತೀರಿ, ಮಾಜಿ ಶಾಸಕ ರಮೇಶ್ ಬಂಡಿಸಿದ್ದೇಗೌಡರ ಕ್ವಾರಿಗೂ ಭೇಟಿ ನೀಡಿ ಅಂತ ಆಕ್ರೋಶ ವ್ಯಕ್ತಪಡಿಸಿದ್ರು. ಈ ವೇಳೆ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಹಾಗೂ ಸುಮಲತಾರ ಬೆಂಬಲಿಗರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ.

2. ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಅಂತ ಆಗ್ರಹ
ಇನ್ನು ಅಕ್ರಮ ಗಣಿಗಾರಿಕೆ ಬಗ್ಗೆ ಮಾತನಾಡಿದ ಅವರು, ಕೆಲವರು ಗೂಂಡಾಗಳನ್ನ ಕಟ್ಟಿಕೊಂಡು ಸಾಮ್ರಾಜ್ಯ ನಿರ್ಮಿಸಿದ್ದಾರೆ. ಪಾಕಿಸ್ತಾನ, ಇಂಡಿಯಾ ಗಡಿಯಲ್ಲೂ ಇಂತಹ ಬಾರ್ಡರ್ ನಿರ್ಮಿಸಿರೋದನ್ನ ನೋಡಿಲ್ಲ. ಸ್ಥಳೀಯ ಶಾಸಕರಿಗೆ ಇದೆಲ್ಲಾ ಗೊತ್ತಿಲ್ವಾ ಅಂತ ಪ್ರಶ್ನಿಸಿದರು. ರಾಜಕಾರಣದಲ್ಲಿ ಸಿನಿಮಾ ತೋರಿಸಿದ್ದೀರಿ. ನೂರಾರು ಕೋಟಿ ರಾಯಲ್ಟಿ ಕಟ್ಟದೆ ಅಕ್ರಮ ಎಸಗಿರುವ ಈ ಪ್ರಕರಣವನ್ನ ಸಿಬಿಐಗೆ ವಹಿಸಲೇಬೇಕು ಅಂತ ಸುಮಲತಾ ಆಗ್ರಹಿಸಿದ್ದಾರೆ.

3. ಜುಲೈ 12 ರಿಂದ ಕೇರಳಕ್ಕೆ ರಾಜ್ಯದ ಬಸ್ ಓಡಾಟ
ಕಳೆದೆರಡು ತಿಂಗಳಿನಿಂದ ಸಂಪೂರ್ಣ ಸ್ಥಬ್ಧಗೊಂಡಿದ್ದ ರಾಜ್ಯ ಸಾರಿಗೆ ವ್ಯವಸ್ಥೆ ಈಗ ಅನ್ಲಾಕ್ ಆಗಿ ಪೂರ್ಣ ಪ್ರಮಾಣದಲ್ಲಿ ಓಡಾಟ ಶುರು ಮಾಡಿಕೊಂಡಿದೆ. ಆರಂಭದಲ್ಲಿ ರಾಜ್ಯದ ಒಳಗಷ್ಟೇ ಓಡಾಡಿಕೊಂಡಿದ್ದ ಸಾರಿಗೆ ಬಸ್​ಗಳು ಈಗ ಹಂತ ಹಂತವಾಗಿ ಅಂತರರಾಜ್ಯ ಸೇವೆಯನ್ನೂ ಪ್ರಾರಂಭಿಸುತ್ತಿವೆ. ಇದೀಗ ಇದೇ ಜುಲೈ 12 ರಿಂದ ಕೇರಳ ರಾಜ್ಯಕ್ಕೆ ಸೇವೆ ಒದಗಿಸಲು ಮುಂದಾಗಿದ್ದು, ಕೇರಳದಿಂದ ಬರುವವರಿಗೆ ಷರತ್ತು‌ ಬದ್ಧ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ರಾಜ್ಯದಲ್ಲಿ ಸಂಪೂರ್ಣ ಅನ್ ಲಾಕ್ ಆಗಿರುವ ಹಿನ್ನೆಲೆಯಲ್ಲಿ ಕೇರಳಕ್ಕೆ ಸೇವೆ ಆರಂಭಿಸಲಿದೆ ಎಂದು ಅಧಿಕೃತ ಆದೇಶ ಹೊರಡಿಸಿದೆ.

4. ಡೆಲ್ಟಾಗಿಂತ ಹೆಚ್ಚು ಅಪಾಯಕಾರಿ ಲ್ಯಾಂಬ್ಡಾ
ಕೊರೊನಾ ಎರಡನೇ ಅಲೆಯ ಹಾವಳಿ ಈಗಷ್ಟೇ ತಣ್ಣಗಾಗಿರುವಾಗ ಕೊರೊನಾದ ಸೋಂಕಿನ ಮತ್ತೊಂದು ರೂಪಾಂತರ ಲ್ಯಾಂಬ್ಡಾ ವೈರಸ್ ಪತ್ತೆಯಾಗಿದೆ. ಇದು ಡೆಲ್ಟಾ ಪ್ಲಸ್ಗಿಂತ ಅಪಾಯಕಾರಿಯಾಗಿದೆ ಅಂತ ಹೇಳಲಾಗ್ತಿದೆ. ಈ ಬಗ್ಗೆ ಮಾತನಾಡಿದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ ಮ್ಯಾಕ್ಸಿಮಮ್ ಕಂಟೈನ್‌ಮೆಂಟ್ ಫೆಸಿಲಿಟಿ ಮುಖ್ಯಸ್ಥ ಡಾ. ಪ್ರಜ್ಞಾ ಯಾದವ್, ಲ್ಯಾಂಬ್ಡಾ ರೂಪಾಂತರ 30 ದೇಶಗಳಲ್ಲಿ ಪತ್ತೆಯಾಗಿದೆ. ಈ ರೂಪಾಂತರದಿಂದ ವರದಿಯಾದ ಪ್ರಕರಣಗಳ ಸಂಖ್ಯೆ ವಿವಿಧ ದೇಶಗಳಲ್ಲಿ ಹೆಚ್ಚುತ್ತಿದೆ. ಇದು ಹೆಚ್ಚು ಹರಡಬಲ್ಲದು ಎಂದು ತಿಳಿಸಿದ್ದಾರೆ.

5. ತಮಿಳುನಾಡು ಬಿಜೆಪಿ ಘಟಕಾಧ್ಯಕ್ಷರಾಗಿ ಅಣ್ಣಾಮಲೈ ನೇಮಕ?
ಬಿಜೆಪಿಯ ತಮಿಳುನಾಡು ಘಟಕದ ಅಧ್ಯಕ್ಷ ಸ್ಥಾನಕ್ಕೆ ಕರ್ನಾಟಕ ಕೇಡರ್‌ನ ಮಾಜಿ ಐಪಿಎಸ್‌ ಅಧಿಕಾರಿ ಕೆ.ಅಣ್ಣಾಮಲೈ ಹೆಸರು ಮುಂಚೂಣಿಯಲ್ಲಿದೆ. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅರವಕುರಿಚಿ ಕ್ಷೇತ್ರದಿಂದ ಸ್ಪರ್ಧಿಸಿ, ಪರಾಭವಗೊಂಡಿದ್ದರು. ಎಲ್‌.ಮುರುಗನ್‌ ಕೇಂದ್ರ ಸಂಪುಟದಲ್ಲಿ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ, ರಾಜ್ಯ ಘಟಕದ ಚುಕ್ಕಾಣಿ ಯಾರು ಹಿಡಿಯಲಿದ್ದಾರೆ ಎಂಬ ಚರ್ಚೆ ಪಕ್ಷದಲ್ಲಿ ಆರಂಭವಾಗಿದೆ. ಹೀಗಾಗಿ ನೂತನ ಅಧ್ಯಕ್ಷ ಸ್ಥಾನಕ್ಕೆ ಕೆ.ಅಣ್ಣಾಮಲೈ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಜೊತೆಗೆ ಎಐಎಡಿಎಂಕೆ ತೊರೆದು ಬಿಜೆಪಿ ಸೇರಿ ಶಾಸಕರಾಗಿರುವ ಎನ್‌.ನಾಗೇಂದ್ರನ್‌ ಹೆಸರೂ ಕೇಳಿಬರುತ್ತಿದೆ.

6. 40 ಸೆಕೆಂಡ್ ಅಂತರದಲ್ಲಿ ಮಹಿಳೆಗೆ ಎರಡು ಡೋಸ್ ಲಸಿಕೆ
ದೇಶದಲ್ಲಿ ಮಹಾಮಾರಿ ಕೊರೊನಾಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ವ್ಯಾಕ್ಸಿನೇಷನ್​​ ಪ್ರಕ್ರಿಯೆಗೆ ವೇಗ ನೀಡಿದೆ. ಈ ನಡುವೆ ಜನರ ವ್ಯಾಕ್ಸಿನೇಷನ್ ನಿರ್ಲಕ್ಷ್ಯ ಮುಂದುವರೆದಿದೆ. ರಾಜಸ್ಥಾನದ ಜುಂಜುಹುನು ಜಿಲ್ಲೆಯ ಮಹಿಳೆಗೆ ಕೇವಲ 40 ಸೆಕೆಂಡುಗಳ ಅಂತರದಲ್ಲಿ ಎರಡು ಡೋಸ್ ಲಸಿಕೆ ನೀಡಲಾಗಿದೆ. ಆರೋಗ್ಯ ಶಿಬಿರದಲ್ಲಿದ್ದ ಆರೋಗ್ಯ ಅಧಿಕಾರಿಗಳು ಲಸಿಕೆ ನೀಡುವಾಗ ಫೋನ್​ನಲ್ಲಿ ಮಾತಾನಾಡುತ್ತಾ ಇದ್ದರು ಅಂತ ಮಹಿಳೆ ಆರೋಪಿಸಿದ್ದಾರೆ. ತನ್ನ ಪತ್ನಿಗೆ ಏನಾದರೂ ಅನಾಹುತವಾದರೆ ಅದಕ್ಕೆ ಆರೋಗ್ಯ ಇಲಾಖೆಯೇ ಹೊಣೆ ಎಂದು ಮಹಿಳೆಯ ಪತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

7. 25 ವರ್ಷಗಳಿಂದ ಜಿಗರಿ ದೋಸ್ತ್​​​ಗಳ ಮ್ಯಾಚಿಂಗ್ ಡ್ರೆಸ್
25 ವರ್ಷಗಳಿಂದ ಒಂದೇ ರೀತಿಯ ಬಟ್ಟೆ ಹಾಕುವ ಮೂಲಕ ಆಪ್ತಮಿತ್ರರು ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಕೇರಳದ ಆಲಪ್ಪುಳ ಜಿಲ್ಲೆಯ ಕಾಯಂಕುಲಂ ಪ್ರದೇಶದಲ್ಲಿ ರವೀಂದ್ರನ್ ಮತ್ತು ಉದಯಕುಮಾರ್ ಸಾಕಷ್ಟು ಜನಪ್ರಿಯರಾಗಿದ್ದಾರೆ. ಈ ಜೋಡಿ ಯಾವಾಗಲೂ ಒಂದೇ ರೀತಿಯ ಬಟ್ಟೆಗಳನ್ನು ಧರಿಸುತ್ತಾರೆ. 1982ರಿಂದ ನಾವು ಸ್ನೇಹಿತರಾಗಿದ್ದೇವೆ. ಮತ್ತು ಯಾವಾಗಲೂ ಕಯಾಂಕುಲಂ ಬೀದಿಗಳಲ್ಲಿ ಒಟ್ಟಿಗೆ ಓಡಾಡುತ್ತಿದ್ದೆವು. ಇತರ ಅಂಗಡಿಯವರು ಜನಪ್ರಿಯ ಕಾರ್ಟೂನ್ ಪಾತ್ರಗಳಾದ ಪಾಚು ಮತ್ತು ಕೋವಲನ್ ಎಂದು ನಮ್ಮನ್ನು ಕರೆಯುತ್ತಿದ್ದರು ಎಂದಿದ್ದಾರೆ.

8. ದೀದಿಗೆ ₹ 5ಲಕ್ಷ ದಂಡ ವಿಧಿಸಿದ ಕೊಲ್ಕತ್ತಾ ಹೈಕೋರ್ಟ್
ಬಿಜೆಪಿಯ ಸುವೇಂದು ಅಧಿಕಾರಿ ಚುಣಾವಣಾ ಅರ್ಜಿ ಸಂಬಂಧ ವಿಚಾರಣೆಯಿಂದ ಹಿಂದೆ ಸರಿಯಲು ನ್ಯಾಯಮೂರ್ತಿಗೆ ಕೇಳಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಕಲ್ಕತ್ತಾ ಹೈಕೋರ್ಟ್ ₹ 5 ಲಕ್ಷ ದಂಡ ವಿಧಿಸಿದೆ. ಪಶ್ಚಿಮ ಬಂಗಾಳ ಸಿಎಂ ಹಿತಾಸಕ್ತಿ ಸಂಘರ್ಷದ ಪ್ರಕರಣ ವಿಚಾರಣೆ ನಡೆಸದಂತೆ ಕೇಳಿದ್ದರು. ಪ್ರಕರಣದಿಂದ ನಿರ್ಗಮಿಸುವ ಮೊದಲು, ನ್ಯಾಯಾಧೀಶರು ನ್ಯಾಯಾಧೀಶರನ್ನು ಕೆಣಕಲು ಪೂರ್ವಯೋಜಿತ ಕ್ರಮದೊಂದಿಗೆ ಮಮತಾ ಸಾಂವಿಧಾನಿಕ ಕರ್ತವ್ಯವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ, ದಂಡ ವಿಧಿಸಿ ಆದೇಶಿಸಿದ್ದಾರೆ.

9. ಉತ್ತರ ಕೊರಿಯದಲ್ಲಿ ಆಹಾರ ಕೊರತೆ!
ಉತ್ತರ ಕೊರಿಯಾವು ಈ ವರ್ಷ ಸುಮಾರು 8 ಲಕ್ಷದ 60 ಸಾವಿರ ಟನ್ ಆಹಾರ ಕೊರತೆಯನ್ನು ಎದುರಿಸುತ್ತಿದೆ ಅಂತ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ ತಿಳಿಸಿದೆ. ಆ ದೇಶವು ಮುಂದಿನ ತಿಂಗಳಿನಿಂದಲೇ ತೀವ್ರ ಆಹಾರ ಸಮಸ್ಯೆಯನ್ನು ಎದುರಿಸುವ ಸಾಧ್ಯತೆಯಿದೆ. ತನ್ನ ಪರಮಾಣು ಶಸ್ತ್ರ ಮತ್ತು ಕ್ಷಿಪಣಿ ಕಾರ್ಯಕ್ರಮಗಳಿಗಾಗಿ ಉತ್ತರ ಕೊರಿಯ ಹಲವಾರು ಅಂತರಾಷ್ಟ್ರೀಯ ಆರ್ಥಿಕ ದಿಗ್ಭಂಧನಗಳನ್ನು ಎದುರಿಸುತ್ತಿದೆ. ತುಂಬಾ ಹಿಂದಿನಿಂದಲೂ ಅದು ಆಹಾರದ ಸಮಸ್ಯೆಯನ್ನು ಎದುರಿಸುತ್ತಲೇ ಬಂದಿದೆ. ಕಳೆದ ವರ್ಷ ಕೊರೊನಾ ವೈರಸ್ ಸಾಂಕ್ರಾಮಿಕ ಮತ್ತು ಸರಣಿ ಚಂಡಮಾರುತಗಳು ದೇಶದ ಕುಸಿಯುತ್ತಿರುವ ಆರ್ಥಿಕತೆಯ ಮೇಲೆ ಇನ್ನಷ್ಟು ಹೊರೆಯನ್ನು ಹೇರಿವೆ. ತಾನು ತೀವ್ರ ಆಹಾರ ಸಮಸ್ಯೆಯನ್ನು ಎದುರಿಸುತ್ತಿರುವುದಾಗಿ ಉತ್ತರ ಕೊರಿಯ ಒಪ್ಪಿಕೊಂಡಿದೆ.

10. ಎಂಎಸ್ ಧೋನಿ ಹೊಸ ಲುಕ್​ಗೆ ಫ್ಯಾನ್ಸ್ ಫಿದಾ
ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿಗೆ ನಿನ್ನೆ 40ನೇ ಜನ್ಮದಿನದ ಸಂಭ್ರಮ ಹಿನ್ನೆಲೆ ಹುಟ್ಟು ಹಬ್ಬವನ್ನ ಗ್ರ್ಯಾಂಡ್ ಆಗಿ ಆಚರಿಸಿಕೊಂಡಿದ್ದಾರೆ. ಇದೇ ವೇಳೆ ಅವರ ಹೊಸ ಲುಕ್‌ನ ಪೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಧೋನಿ ವೃತ್ತಿಜೀವನದ ಆರಂಭದಿಂದಲೂ ವಿವಿಧ ಕೇಶಶೈಲಿಯ ಮೂಲಕ ಗಮನಸೆಳೆದವರು. ಇದೀಗ 40ನೇ ಜನ್ಮದಿನದಂದು ಬಿಳಿ ಗಡ್ಡದೊಂದಿಗೆ ಕಾಣಿಸಿಕೊಂಡಿದ್ದಾರೆ. 2 ವಾರದ ಹಿಂದೆ ಅವರು ಉದ್ದ ಮೀಸೆಯ ಲುಕ್‌ನೊಂದಿಗೆ ಮಿಂಚಿದ್ದರು. ಇದೀಗ ಕಪ್ಪು-ಬಿಳುಪಿನ ಲುಕ್ ಅಭಿಮಾನಿಗಳಿಗೆ ಮತ್ತಷ್ಟು ಅಚ್ಚರಿ ತಂದಿದೆ.

The post ಈ ಹೊತ್ತಿನ ಟಾಪ್​ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link