ಅನ್ಲಾಕ್ ಬೆನ್ನಲ್ಲೇ ಬೆಂಗಳೂರಲ್ಲಿ ಹೆಚ್ಚಾದ ಕ್ರೈಂ.. ರೌಡಿ ಪರೇಡ್ ನಡೆಸಲು ತಯಾರಿ

ಅನ್ಲಾಕ್ ಬೆನ್ನಲ್ಲೇ ಬೆಂಗಳೂರಲ್ಲಿ ಹೆಚ್ಚಾದ ಕ್ರೈಂ.. ರೌಡಿ ಪರೇಡ್ ನಡೆಸಲು ತಯಾರಿ

ಬೆಂಗಳೂರು: ನಗರದಲ್ಲಿ ಅನ್ಲಾಕ್ ಆಗಿದ್ದೇ ಆಗಿದ್ದು, ಸೈಲೆಂಟಾಗಿದ್ದ ರೌಡಿಗಳೆಲ್ಲ ಲಾಂಗು ಮಚ್ಚು ಹಿಡ್ದು ಫೀಲ್ಡಿಗೆ ಇಳಿತಿದ್ದಾರೆ. ಪರಿಣಾಮ ಮತ್ತೆ ಸಿಲಿಕಾನ್ ಸಿಟಿಯಲ್ಲಿ ಕ್ರೈಂ ಆಕ್ಟಿವಿಟೀಸ್ ಹೆಚ್ಚಾಗ್ತಿದೆ. ರೌಡಿಗಳಿಗೆ ಸರಿಯಾಗಿ ಬುದ್ದಿ ಕಲಿಸ್ಬೇಕು, ಸಖತ್ ಸೌಂಡ್ ಮಾಡ್ತಿರೋ ಭೂಗತಲೋಕವನ್ನ ಸೈಲೆಂಟ್ ಮಾಡ್ಲೆಬೇಕು ಅಂತ ಕಮಿಷನರ್ ಕಮಲ್ ಪಂತ್ ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ.

ಕಳೆದ ಇಪ್ಪತ್ತು ದಿನಗಳಲ್ಲಿ ಹತ್ತಕ್ಕೂ ಹೆಚ್ಚು ಕೊಲೆ, ಇಪ್ಪತ್ತಕ್ಕೂ ಹೆಚ್ಚು ಸರಗಳವು ಸೇರಿ ನೂರಾರು ವಾಹನ ಕಳವು ಪ್ರಕರಣಗಳು ವರದಿಯಾಗಿವೆ. ಏನಾದ್ರು ಮಾಡಿ ರೌಡಿಗಳಿಗೆ ಕಡಿವಾಣ ಹಾಕ್ಲೇಬೇಕು ಅಂತ ನಿರ್ಧರಿಸಿರೋ ಪೊಲೀಸರು, ನಗರದಲ್ಲಿ ಮತ್ತೆ ರೌಡಿ ಪರೇಡ್ ನಡೆಸಲಿಕ್ಕೆ ಸಿದ್ದತೆ ನಡೆಸಿದ್ದಾರೆ. ಕೊರೊನಾ ಹಾಗೂ ಲಾಕ್​​ಡೌನ್ ಹಿನ್ನಲೆ ಕಳೆದ ಒಂದೂವರೆ ವರ್ಷದಿಂದ ಬೆಂಗಳೂರಲ್ಲಿ ರೌಡಿ ಪರೇಡ್​ಗಳನ್ನ ನಿಲ್ಲಿಸಲಾಗಿತ್ತು. ಕ್ರೈಂ ಪೊಲೀಸ್ ಸಿಬ್ಬಂದಿಯನ್ನು ಕೊರೊನಾ ಡ್ಯೂಟಿಗೆ ನಿಯೋಜಿಸಿದ್ರಿಂದ ರೌಡಿಗಳ ಮೇಲೆ ಪೊಲೀಸರು ನಿಗಾ ಇಡೋದನ್ನ ನಿಲ್ಲಿಸಬೇಕಾಗಿ ಬಂದಿತ್ತು. ಪರಿಣಾಮ ಅನ್ಲಾಕ್ ಆಗ್ತಿದ್ದಂತೆ ಮತ್ತೆ ರೌಡಿಗಳು ಬಾಲ ಬಿಚ್ಚಲಿಕ್ಕೆ ಶುರು ಮಾಡಿದ್ದಾರೆ.

ಕ್ರೈಂ ರಿವ್ಯೂ ಮೀಟಿಂಗ್​ನಲ್ಲಿ ಡಿಸಿಪಿಗಳಿಗೆ ಕಮಿಷನರ್ ಕ್ಲಾಸ್
ಅನ್ಲಾಕ್ ಆಗ್ತಿದ್ದಂತೆ ಬೆಂಗಳೂರಲ್ಲಿ ಮತ್ತೆ ಕ್ರೈಂ ಹೆಚ್ಚಾಗುತ್ತೆ. ಹಳೇ ದ್ವೇಷಕ್ಕೆ ರೌಡಿ ಗುಂಪುಗಳ ಮಧ್ಯೆ ನಗರದಲ್ಲಿ ಕೊಲೆಗಳಾಗುವ ಸಾಧ್ಯತೆ ಇದೆ ಎಂದು ರಾಜ್ಯ ಗುಪ್ತಚರ ಇಲಾಖೆ ಪೊಲೀಸರಿಗೆ ಮಾಹಿತಿ ನೀಡಿತ್ತು ಎನ್ನಲಾಗಿದೆ. ಹೀಗಿದ್ದರೂ ಈ ಬಗ್ಗೆ ಪೊಲೀಸರು ಗಮನ ಹರಿಸದ ಪರಿಣಾಮ ಕ್ರೈಂ ರೇಟ್ ಹೆಚ್ಚಾಗ್ತಿದೆ ಎಂದು ಆರೋಪಿಸಲಾಗಿದೆ. ಹೀಗಾಗಿ ನಿಮ್ಮ ಡಿವಿಜನ್ನಲ್ಲಿ ಯಾವ್ ರೌಡಿ ಏನ್ ಮಾಡ್ತಿದ್ದಾನೆ? ಅವರನ್ನ ಏನ್ ಮಾಡ್ಬೇಕು ಅಂತ ನಿಮಗೆ ಗೊತ್ತಿಲ್ವಾ? ಅಂತ ಡಿಸಿಪಿಗಳಿಗೆ ವೀಕ್ಲಿ ಕ್ರೈಂ ರಿವ್ಯೂ ಮೀಟಿಂಗ್​​ನಲ್ಲಿ ಕಮಿಷನರ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕೂಡಲೇ ನಗರದ ಎಲ್ಲ ರೌಡಿಗಳ ಲಿಸ್ಟ್ ರೆಡಿ ಮಾಡಿ. ಮೊದಲಿಗೆ ವಾರ್ನ್ ಮಾಡಿ. ಹೇಳಿದ ಮಾತು ಕೇಳ್ದೆ ಮತ್ತೆ ಕ್ರೈಂನಲ್ಲಿ ಆಕ್ಟೀವ್ ಆದ್ರೆ ಗೂಂಡಾ ಆಕ್ಟ್ ಹಾಕಿ ಅರೆಸ್ಟ್ ಮಾಡಿ ಅಂತ ಎಲ್ಲಾ ವಿಭಾಗದ ಡಿಸಿಪಿ ಹಾಗೂ ಇನ್ಸ್ ಪೆಕ್ಟರ್ ಗಳಿಗೆ ಕಮಿಷನರ್ ಕಮಲ್ ಪಂತ್ ಖಡಕ್ ಸೂಚನೆ ನೀಡಿದ್ದಾರೆ.

ಕಮಿಷನರ್ ಫೀಲ್ಡಿಗಿಳಿದು ಎಲ್ಲಾ ಸ್ಟೇಷನ್​ಗಳಿಗೆ ವೈರ್ಲೆಸ್ನಲ್ಲಿ ಮೆಸೇಜ್ ಕೊಡ್ತಿದ್ದಂತೆ, ಬೆಂಗಳೂರು ಭೂಗತ ಲೋಕ ಇನ್ನಷ್ಟು ಅಲರ್ಟ್ ಆಗಿದೆ. ಈ ಕಡೆ ಪೊಲೀಸರು ಕೂಡ ರೌಡಿಗಳ ಲಿಸ್ಟ್ ರೆಡಿ ಮಾಡಿದ್ದು ಶೀಘ್ರದಲ್ಲಿ ರೌಡಿ ಪರೇಡ್ ನಡೆಸೋದ್ರ ಮೂಲಕ ರೌಡಿಗಳಿಗೆ ವಾರ್ನ್ ಮಾಡಲು ವೇದಿಕೆ ಸಿದ್ದಪಡಿಸ್ತಿದ್ದಾರೆ. ಒಟ್ನಲ್ಲಿ ಇಷ್ಟು ದಿನ ಪೊಲೀಸರು ಕೊರೊನಾ ಡ್ಯೂಟಿಯಲ್ಲಿ ಬ್ಯೂಸಿಯಾಗಿದ್ದಾರೆ ನಾವ್ ಆರಾಮಾಗ್ ಫೀಲ್ಡಲ್ಲಿ ಆಟ ಆಡಬಹುದು ಅಂತಿದ್ದ ರೌಡಿಗಳು ಇನ್ಮುಂದೆ ಬಾಲಬಿಚ್ಚಲಿಕ್ಕೆ ಮುಂದಾದ್ರೆ ಹೊಸದಾಗಿ ರೌಡಿಶೀಟ್ ಒಪನ್ ಆಗೋದ್ರ ಜೊತೆ ಗೂಂಡಾ ಆಕ್ಟ್ ಅಡಿಯಲ್ಲಿ ಅಂದರ್ ಆಗಬೇಕಾಗತ್ತೆ.

 

The post ಅನ್ಲಾಕ್ ಬೆನ್ನಲ್ಲೇ ಬೆಂಗಳೂರಲ್ಲಿ ಹೆಚ್ಚಾದ ಕ್ರೈಂ.. ರೌಡಿ ಪರೇಡ್ ನಡೆಸಲು ತಯಾರಿ appeared first on News First Kannada.

Source: newsfirstlive.com

Source link