ಉಡುಪಿ-ಚಿಕ್ಕಮಗಳೂರು ಜನತೆಗೆ ಮೊದಲ ಧನ್ಯವಾದ: ಶೋಭಾ ಕರಂದ್ಲಾಜೆ

ಉಡುಪಿ: ಎರಡು ಬಾರಿ ಗೆಲ್ಲಿಸಿದ ಉಡುಪಿ-ಚಿಕ್ಕಮಗಳೂರಿನ ಎಲ್ಲಾ ಜನತೆಗೆ ನನ್ನ ಮೊದಲ ಧನ್ಯವಾದ ಎಂದು ಹೇಳಿ ನೂತನ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವೀಡಿಯೋ ರಿಲೀಸ್ ಮಾಡಿದ್ದಾರೆ.

ನೀವು ನನ್ನನ್ನು ಎರಡು ಬಾರಿ ಗೆಲ್ಲಿಸಿದ್ದೀರಿ. ಹೀಗಾಗಿ ಪ್ರಧಾನಿ ಮೋದಿ ಅಮಿತ್ ಶಾ- ನಡ್ಡಾ ನನ್ನನ್ನು ಗುರುತಿಸಿ ಸಚಿವ ಸ್ಥಾನ ನೀಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ದೆಹಲಿಯಿಂದ ವೀಡಿಯೋ ರಿಲೀಸ್ ಮಾಡಿರುವ ಶೋಭಾ ಕರಂದ್ಲಾಜೆ, ನಿಮ್ಮ ಪ್ರೀತಿ ವಿಶ್ವಾಸದಿಂದ ಇದು ಸಾಧ್ಯವಾಗಿದೆ ಎಂದರು.

ಮತದಾರ ಆಶೀರ್ವಾದದಿಂದ ಎರಡು ಬಾರಿ ಆಯ್ಕೆಯಾದೆ. ಕಾರ್ಯಕರ್ತರ ಶ್ರಮದಿಂದ ನಾನು ಗೆದ್ದಿದ್ದು, ಇದೀಗ ನಾನು ಸಚಿವೆಯಾಗಿದ್ದೇನೆ. ಎಲ್ಲಾ ಮತದಾರರು, ಕಾರ್ಯಕರ್ತರು ಸಚಿವೆಯಾಗಿ ಆಯ್ಕೆ ಮಾಡಿದ ಎಲ್ಲಾ ನಾಯಕರಿಗೆ ಧನ್ಯವಾದ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಇದನ್ನೂ ಓದಿ: ಅಮಿತ್ ಶಾಗೆ ಸಹಕಾರ, ಶೋಭಾ ಕರಂದ್ಲಾಜೆಗೆ ಕೃಷಿ – ಯಾರಿಗೆ ಯಾವ ಖಾತೆ?

ಮೋದಿ ಸಂಪುಟಕ್ಕೆ ಭರ್ಜರಿ ಸರ್ಜರಿಯಾಗಿದೆ. ಬುಧವಾರ 43 ಮಂದಿ ಕೇಂದ್ರ ಸಚಿವ ಸಂಪುಟ ಸೇರಿದ್ದಾರೆ. ಈ ಪೈಕಿ ಕರ್ನಾಟಕಕ್ಕೆ ಬಂಪರ್ ಪಾಲೇ ಸಿಕ್ಕಿದೆ. ರಾಜ್ಯ ನಾಲ್ವರು ಸಂಸದರಿಗೆ ಮಂತ್ರಿ ಸ್ಥಾನ ಸಿಕ್ಕಿದೆ. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಬೀದರ್ ಸಂಸದ ಭಗವಂತ್ ಖೂಬಾ, ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್‍ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರತಿಜ್ಞಾವಿಧಿ ವಿಧಿ ಬೋಧಿಸಿದರು.

ಈ ನಾಲ್ವರೊಂದಿಗೆ ಕೇಂದ್ರ ಸಂಪುಟದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸಚಿವರ ಸಂಖ್ಯೆ ಆರಕ್ಕೇರಿದೆ. ಈಗಾಗಲೇ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾಗಿ ಪ್ರಹ್ಲಾದ್ ಜೋಷಿ, ಕರ್ನಾಟದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೋದಿ ಸಂಪುಟದ ಆಯಾಕಟ್ಟಿನ ಜಾಗಗಳಲ್ಲಿ ಇದ್ದಾರೆ. ಶೋಭಾ ಕರಂದ್ಲಾಜೆ ಸಚಿವೆ ಆಗುವ ಮೂಲಕ ಸರೋಜಿನಿ ಮಹಿಷಿ, ಬಸವರಾಜೇಶ್ಚರಿ, ರತ್ನಮಾಲಾ ಸವಣೂರು, ಡಿಕೆ ತಾರಾದೇವಿ, ಮಾರ್ಗರೇಟ್ ಆಳ್ವಾ ಬಳಿಕ ಸಂಪುಟ ಸೇರಿದ ರಾಜ್ಯದ ಆರನೇ ಮಹಿಳೆ ಎಂಬ ಗರಿಮೆಗೆ ಪಾತ್ರರಾಗಿದ್ದಾರೆ. ನಿರೀಕ್ಷೆಯಂತೆ ಮೋದಿ ಸಂಪುಟದಿಂದ ಡಿವಿ ಸದಾನಂದಗೌಡಗೆ ಕೊಕ್ ನೀಡಲಾಗಿದೆ. ಇದನ್ನೂ ಓದಿ: ಮೋದಿ ಸಂಪುಟ ಪುನಾರಚನೆ – ಟ್ರೆಂಡಿಂಗ್ ಆದ ಅಣ್ಣಾಮಲೈ

2014, 2019ರಲ್ಲಿ ಸತತ ಎರಡು ಬಾರಿ ಚಿಕ್ಕಮಗಳೂರು-ಉಡುಪಿ ಕ್ಷೇತ್ರದಿಂದ ಆಯ್ಕೆ ಆಗಿದ್ದಾರೆ. ಕರಾವಳಿ, ಒಕ್ಕಲಿಗ ಕೋಟಾ, ಡಿವಿಎಸ್ ಸ್ಥಾನಕ್ಕೆ ಭರ್ತಿ ಮಾಡಲಾಗಿದೆ. ರಾಜ್ಯ ಸರ್ಕಾರದಲ್ಲಿ ಸಚಿವೆಯಾಗಿ ಮಾಡಿದ್ದ ಕೆಲಸ, ಅನುಭವವನ್ನು ಪರಿಗಣಿಸಲಾಗಿದೆ. ಆರ್‍ಎಸ್‍ಎಸ್, ಹೈಕಮಾಂಡ್ ಸೂಚನೆ ಮೇರೆಗೆ ರಾಜ್ಯ ಸರ್ಕಾರದಿಂದ ಇವರು ಅಂತರವನ್ನು ಕಾಯ್ದುಕೊಂಡಿದ್ದರು. ಇದನ್ನೂ ಓದಿ: ರಾಜ್ಯದ ನಾಲ್ವರಿಗೆ ಮಂತ್ರಿಗಿರಿ – ಆಯ್ಕೆಗೆ ಮಾನದಂಡ ಏನು?

blank

ಹುಟ್ಟೂರಿನಲ್ಲಿ ಸಂಭ್ರಮ:
ಶೋಭಾ ಕರಂದ್ಲಾಜೆಗೆ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ಸಿಕ್ಕಿರುವ ಹಿನ್ನಲೆಯಲ್ಲಿ ಶೋಭಾ ಕರಂದ್ಲಾಜೆ ಹುಟ್ಟಿ ಬೆಳೆದ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕರಂದ್ಲಾಜೆ ಎಂಬ ಪುಟ್ಟ ಗ್ರಾಮ ಶೋಭಾ ಅವರ ಹುಟ್ಟೂರು. ಶೋಭಾ ಹುಟ್ಟಿ ಬೆಳೆದ ಮನೆಯಲ್ಲಿ ಸಚಿವ ಸ್ಥಾನ ಸಿಕ್ಕಿದ್ದಕ್ಕೆ ಸಂಭ್ರಮವಿದ್ದು, ಹುಟ್ಟಿದ ಮನೆಯಲ್ಲಿ ವಾಸವಾಗಿರುವ ಅಮ್ಮ, ತಮ್ಮ ಮತ್ತು ಪತ್ನಿ, ಮಕ್ಕಳು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಶೋಭಾ ಸಹೋದರ(ತಮ್ಮ) ಲಕ್ಷ್ಮಣ್ ಕರಂದ್ಲಾಜೆ ಮತ್ತು ಅವರ ಮಕ್ಕಳಿಂದ ಸಿಹಿ ಹಂಚಿದರು. ಈ ನಡುವೆ ಸಚಿವ ಸ್ಥಾನ ಸಿಕ್ಕ ಬೆನ್ನಲ್ಲೇ ಶೋಭಾ ಕರಂದ್ಲಾಜೆಯವರ ತಾಯಿ ವಿಮಾನದ ಮೂಲಕ ಬೆಂಗಳೂರಿಗೆ ತೆರಳಿದ್ದಾರೆ.

The post ಉಡುಪಿ-ಚಿಕ್ಕಮಗಳೂರು ಜನತೆಗೆ ಮೊದಲ ಧನ್ಯವಾದ: ಶೋಭಾ ಕರಂದ್ಲಾಜೆ appeared first on Public TV.

Source: publictv.in

Source link