ಸದಾನಂದಗೌಡರನ್ನು ಕೇಂದ್ರ ಸಂಪುಟದಿಂದ ಕೈಬಿಟ್ಟಿದ್ದೇಕೆ? ಶೋಭಾ ಆಯ್ಕೆಗೆ ಯಾವ ಅಂಶ ಪ್ಲಸ್ ಆಯ್ತು?

ಸದಾನಂದಗೌಡರನ್ನು ಕೇಂದ್ರ ಸಂಪುಟದಿಂದ ಕೈಬಿಟ್ಟಿದ್ದೇಕೆ? ಶೋಭಾ ಆಯ್ಕೆಗೆ ಯಾವ ಅಂಶ ಪ್ಲಸ್ ಆಯ್ತು?

ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಿದೆ. ಜೊತೆಗೆ ಪುನಾರಚನೆಯೂ ಆಗಿದೆ. ಘಟಾನುಘಟಿ ಎನಿಸಿಕೊಂಡಿದ್ದ ಕೆಲವು ಸಚಿವರೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸಬರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಎರಡನೇ ಅವಧಿಯ ಮೊದಲ ಸಂಪುಟ ಸರ್ಜರಿ ಭರ್ಜರಿಯಾಗಿಯೇ ನಡೆದಿದೆ. ಇಲ್ಲಿ ಅನುಸರಿಸಲಾದ ಮಾನದಂಡ, ದೂರದೃಷ್ಟಿ ಮತ್ತು ಆದ್ಯತೆಯ ಬಗ್ಗೆ ವಿಮರ್ಶೆಗಳು ಶುರುವಾಗಿವೆ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕರ್ನಾಟಕಕ್ಕೆ ದಕ್ಕಿದ್ದೇನು, ತಪ್ಪಿದ್ದೇನು ಅನ್ನೋ ಚರ್ಚೆ ಶುರುವಾಗಿದೆ.

ರಾಜ್ಯದಿಂದ ನಾಲ್ವರು ಸಂಸದರಿಗೆ ಈ ಬಾರಿ ಅವಕಾಶ
ಹಾಲಿ ಇಬ್ಬರು ಸಚಿವರು ಸೇರಿ ರಾಜ್ಯಕ್ಕೆ 6 ಸಚಿವ ಸ್ಥಾನ
ಕರ್ನಾಟಕಕ್ಕೆ ಮೋದಿ ಸಂಪುಟದಲ್ಲಿ ಸಾಕಷ್ಟು ಪ್ರಾತಿನಿಧ್ಯ

ರಾಜ್ಯದಿಂದ ಈ ಬಾರಿ ನಾಲ್ವರು ಸಂಸದರಿಗೆ ಕೇಂದ್ರ ಸಂಪುಟದಲ್ಲಿ ಅವಕಾಶ ಕಲ್ಪಿಸಲಾಗಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶೋಭಾ ಕರಂದ್ಲಾಜೆ, ಬೀದರ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಭಗವಂತ ಖೂಬಾ, ಚಿತ್ರದುರ್ಗದ ಸಂಸದ ನಾರಾಯಣಸ್ವಾಮಿ ಮತ್ತು ರಾಜ್ಯಸಭಾ ಸದಸ್ಯರಾಗಿರುವ ರಾಜೀವ್ ಚಂದ್ರಶೇಖರ್ ಕೇಂದ್ರ ಸಂಪುಟವನ್ನು ಸೇರ್ಪಡೆಯಾಗಿದ್ದಾರೆ. ಹಾಲಿ ಹುಬ್ಬಳ್ಳಿ-ಧಾರವಾಡ ಸಂಸದ ಪ್ರಹ್ಲಾದ್ ಜೋಷಿ ಮತ್ತು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಹೀಗಾಗಿ ರಾಜ್ಯದ ಪಾಲಿಗೆ ಆರು ಸಚಿವ ಸ್ಥಾನಗಳು ಕೇಂದ್ರದಲ್ಲಿ ಸಿಕ್ಕಂತಾಗಿದೆ.

ಶೋಭಾ ಕರಂದ್ಲಾಜೆಯವರಿಗೆ ಅವಕಾಶ ಸಿಕ್ಕಿದ್ದು ಹೇಗೆ?
ಯಾವ ಅಂಶ ಶೋಭಾ ಕರಂದ್ಲಾಜೆಯವರಿಗೆ ಪ್ಲಸ್ ಆಯ್ತು?
ಡಿವಿಎಸ್ ಬದಲಿಗೆ ಶೋಭಾ ಆಯ್ಕೆ ಮಾಡಿಕೊಂಡಿದ್ದು ಏಕೆ?

ಶೋಭಾ ಕರಂದ್ಲಾಜೆಯವರ ಹೆಸರು ಸಂಭಾವ್ಯರ ಪಟ್ಟಿಯಲ್ಲಿತ್ತು. ಆದರೆ, ಡಿ.ವಿ.ಸದಾನಂದಗೌಡರ ರಾಜೀನಾಮೆ ಪಡೆದು ಇವರಿಗೆ ಕೊಡಬಹುದೆಂದು ಯಾರೂ ನಿರೀಕ್ಷಿಸಿರಲಿಲ್ಲ. ಡಿವಿಎಸ್ ರಾಜೀನಾಮೆಗೂ ಶೋಭಾ ಕರಂದ್ಲಾಜೆಯವರಿಗೆ ಅವಕಾಶ ಸಿಕ್ಕಿರೋದಕ್ಕೂ ಒಂದಕ್ಕೊಂದು ಸಂಬಂಧ ಇದೆ. ಸದಾನಂದಗೌಡರು ಒಕ್ಕಲಿಗ ಸಮುದಾಯವರು. ಶೋಭಾ ಕರಂದ್ಲಾಜೆಯವರೂ ಒಕ್ಕಲಿಗ ಸಮುದಾಯದವರು. ಇಬ್ಬರು ಕೂಡ ಬೆಂಗಳೂರಿಗಿಂತ ಕರಾವಳಿ ಭಾಗದಲ್ಲಿ ಹೆಚ್ಚು ಪ್ರಭಾವ ಹೊಂದಿರುವವರು. ಹೀಗಾಗಿ ಡಿವಿಎಸ್ ಬದಲಿಗೆ ಶೋಭಾ ಕರಂದ್ಲಾಜೆಯವರೇ ಸೂಕ್ತ ಅಂತ ಇವರ ಹೆಸರನ್ನು ಫೈನಲ್ ಮಾಡಲಾಯ್ತು ಎಂದು ಹೇಳಲಾಗ್ತಾ ಇದೆ. ಇದಲ್ಲದೆ ಮಹಿಳಾ ಕೋಟಾದಲ್ಲೂ ಶೋಭಾ ಕರಂದ್ಲಾಜೆಯವರು ಮುಂಚೂಣಿಯಲ್ಲಿದ್ದರು.

blank

ಸಂಘ ನಿಷ್ಠೆ, ಪಕ್ಷ ನಿಷ್ಠೆ, ಅನುಭವ ತಂದು ಕೊಟ್ಟ ಸ್ಥಾನ
ದಶಕಗಳ ಶ್ರಮದಿಂದ ಮೇಲೆ ಬಂದ ಶೋಭಾ ಕರಂದ್ಲಾಜೆ

ಶೋಭಾ ಕರಂದ್ಲಾಜೆ ಪುತ್ತೂರಿನವರು. ಬಾಲ್ಯದಿಂದಲೂ ಆರ್​ಎಸ್​ಎಸ್​ ಒಡನಾಟ ಇಟ್ಟುಕೊಂಡವರು. ಅವರು ಓದಿದ್ದು ಕೂಡ ಮಾಸ್ಟರ್ ಆಫ್ ಸೋಷಿಯಲ್ ವರ್ಕ್. ಅವರು ಆಯ್ದುಕೊಂಡಿದ್ದು ಕೂಡ ಸಮಾಜ ಸೇವೆ. ನಿರಂತರವಾಗಿ ಸಮಾಜಮುಖಿ ಕೆಲಸದಿಂದ ಮುಂದೆ ಬಂದ ಶೋಭಾ ಕರಂದ್ಲಾಜೆ ಶಾಸನಸಭೆ ಪ್ರವೇಶಿಸಿದ್ದು 2004ರಲ್ಲಿ. ಬಳಿಕ ಶೋಭಾ ಕರಂದ್ಲಾಜೆ ರಾಜಕೀಯ ಉನ್ನತಿಗೇರುತ್ತ ಬಂದರು. ಆದರೆ ಮಧ್ಯೆ ಯಡಿಯೂರಪ್ಪನವರು ಕೆಜಿಪಿ ಕಟ್ಟಿದಾಗ ಅವರೊಂದಿಗೆ ಗುರುತಿಸಿಕೊಂಡು ರಾಜಕೀಯ ಹಿನ್ನಡೆ ಅನುಭವಿಸಿದ್ದರು. ಶೋಭಾ ಕರಂದ್ಲಾಜೆಯವರು ದಕ್ಷಿಣ ಕನ್ನಡದವರಾಗಿದ್ದರು ಬೇರೆ ಬೇರೆ ಕಡೆ ನಿಂತು ಗೆಲುವು ಸಾಧಿಸಿದ ಗಟ್ಟಿ ಹೆಣ್ಣು ಮಗಳು, ಅಷ್ಟೇ ಪ್ರಭಾವಿ.

ಮೊದಲು ಪರಿಷತ್ ಸದಸ್ಯೆ, ಬಳಿಕ ಯಶವಂತಪುರ ಕ್ಷೇತ್ರದಿಂದ ಶಾಸಕಿ
2 ಬಾರಿ ಸಂಸದೆ, ಕೇಂದ್ರ ಸಚಿವರಾಗಿ ಪ್ರಮಾಣ ವಚನ

2004ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಶೋಭಾ ಕರಂದ್ಲಾಜೆ ,ಬಳಿಕ ರಾಜಕೀಯದಲ್ಲಿ ಹಲವು ಮೆಟ್ಟಿಲುಗಳನ್ನು ಏರುತ್ತ ಬಂದರು. ದಕ್ಷಿಣ ಕನ್ನಡ ಜಿಲ್ಲೆಯವರಾದರೂ ಬೆಂಗಳೂರಿನ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಅಚ್ಚರಿ ಮೂಡಿಸಿದ್ದರು ಶೋಭಾ ಕರಂದ್ಲಾಜೆ. ಅಷ್ಟೇ ಅಲ್ಲ ತಮ್ಮ ರಾಜಕೀಯ ಚಾಣಾಕ್ಷತೆಯಿಂದ ಸಂಘಟನಾ ಚತುರೆ ಅಂತಾ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ರು. 2008ರಲ್ಲಿ ಮೊದಲ ಬಾರಿಗೆ ಶಾಸಕಿಯಾಗಿ ವಿಧಾನಸಭೆ ಪ್ರವೇಶಿಸಿದ್ದ ಶೋಭಾ ಕರಂದ್ಲಾಜೆ ಬಿಜೆಪಿ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಇಂಧನ ಖಾತೆಯನ್ನು ನಿರ್ವಹಿಸಿದ್ರು. ಅವತ್ತಿನ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದವರು ಶೋಭಾ ಕರಂದ್ಲಾಜೆ. ಅದಾದ ಬಳಿಕ ಯಡಿಯೂರಪ್ಪನವರು ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ ಇವರು ಕೂಡ ಪಕ್ಷ ಬಿಟ್ಟಿದ್ದರು. ಆದರೆ ಮತ್ತೆ ಯಡಿಯೂರಪ್ಪನವರು ಮರಳಿದಾಗ ಇವರು ಮರಳಿದ್ದರು. ನಂತರ 2014ರಲ್ಲಿ ಮತ್ತು 2019ರಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸಂಸದರಾಗಿ ಆಯ್ಕೆಯಾದರು.

ಈ ಬಾರಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಬಳಿಕ ಶೋಭಾ ಕರಂದ್ಲಾಜೆಯವರು ಆಪ್ತ ವಲಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಇವರ ಸಂಘ ನಿಷ್ಠೆ, ಅನುಭವ ಮತ್ತು ಪಕ್ಷ ಸಂಘಟನೆಯಲ್ಲಿನ ಚುರುಕುತನವೇ ಇವರಿಗೆ ಕೇಂದ್ರ ಸಂಪುಟಕ್ಕೆ ಹಾದಿ ಮಾಡಿಕೊಟ್ಟಿದೆ. ಈಗ ನರೇಂದ್ರ ಮೋದಿಯವರ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ ಶೋಭಾ. ಈ ಮೂಲಕ ಕೇಂದ್ರ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡ ರಾಜ್ಯದ ಐದನೇ ಹೆಣ್ಣು ಮಗಳು ಎಂಬ ಕೀರ್ತಿಗೆ ಶೋಭಾ ಕರಂದ್ಲಾಜೆ ಪಾತ್ರರಾಗಿದ್ದಾರೆ.

ವೀರಶೈವ-ಲಿಂಗಾಯತ ಕೋಟಾದಲ್ಲಿ ಖೂಬಾಗೆ ಸ್ಥಾನ
ಶಿವಕುಮಾರ್ ಉದಾಸಿ, ಬಿ.ವೈ.ರಾಘವೇಂದ್ರಗೆ ಸಿಗಲಿಲ್ಲ

blank

ರೈಲ್ವೈ ಖಾತೆ ಸಹಾಯಕ ಸಚಿವರಾಗಿದ್ದ ಬೆಳಗಾವಿಯ ಸುರೇಶ್ ಅಂಗಡಿಯವರ ನಿಧನದಿಂದ ಲಿಂಗಾಯತ ಸಮುದಾಯದ ಪ್ರಾತಿನಿಧ್ಯ ಕೇಂದ್ರ ಸಂಪುಟದಲ್ಲಿ ಖಾಲಿ ಇತ್ತು. ಸುರೇಶ್ ಅಂಗಡಿಯವರ ಬದಲಿಗೆ ಶಿವಕುಮಾರ್ ಉದಾಸಿ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ.ರಾಘವೇಂದ್ರ ಅವರ ಹೆಸರೂ ಕೂಡ ಇತ್ತು. ಬಿ.ವೈ.ರಾಘವೇಂದ್ರ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಕೊಟ್ಟರೆ ಅದು ಬಿಎಸ್​​ವೈರನ್ನ ಕೆಳಗಿಳಿಸುವ ಪ್ರಕ್ರಿಯೆಗೆ ನಾಂದಿ ಆಗುತ್ತೆ ಅಂತಾನೇ ವಿಶ್ಲೇಷಿಸಲಾಗ್ತಾ ಇತ್ತು. ಆದರೆ, ಬಿ.ವೈ.ರಾಘವೇಂದ್ರ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ. ಫೈನಲಿ ವೀರಶೈವ-ಲಿಂಗಾಯತ ಕೋಟಾದಲ್ಲಿ ಬೀದರ್ ಸಂಸದ ಭಗವಂತ ಖೂಬಾ ಅವರಿಗೆ ಸಚಿವ ಸ್ಥಾನ ದೊರೆತಿದೆ.

ಮಾಜಿ ಸಿಎಂ ಧರ್ಮಸಿಂಗ್ ವಿರುದ್ಧ ಗೆದ್ದಿದ್ದ ಭಗವಂತ್ ಖೂಬಾ
ಎರಡನೇ ಬಾರಿ ಸಂಸದರಾಗಿ ಈಗ ಕೇಂದ್ರ ಸಚಿವರಾಗಿ ಪ್ರಮಾಣ

ಇಂಜಿನಿಯರಿಂಗ್ ಪದವಿಧರರಾಗಿರುವ ಭಗವಂತ ಖೂಬಾ ತಮ್ಮ ರಾಜಕೀಯ ಜೀವನದ ಆರಂಭಿಕ ದಿನಗಳಿಂದಲೂ ಭಾರತೀಯ ಜನತಾ ಪಕ್ಷದೊಂದಿಗೆ ಗುರುತಿಸಿಕೊಂಡವರು. 2014ರಲ್ಲಿ ಬೀದರ್​​ ಕ್ಷೇತ್ರದಿಂದ ಮೊದಲ ಬಾರಿಗೆ ಸಂಸತ್ತಿಗೆ ಪ್ರವೇಶಿಸಿದ್ದರು. ಅವತ್ತು ಮಾಜಿ ಮುಖ್ಯಮಂತ್ರಿ ಎನ್. ಧರ್ಮಸಿಂಗ್ ವಿರುದ್ಧ ಬರೋಬ್ಬರಿ 1 ಲಕ್ಷ ಮತಗಳಿಂದ ಜಯ ಗಳಿಸಿದ್ದರು. 2014ರಲ್ಲಿ ರೈಲ್ವೆ ಖಾತೆ ಸಲಹಾ ಸಮಿತಿಯ ಸದಸ್ಯರಾಗಿ, 2016ರಲ್ಲಿ ಪಡಿತರ ಸರಬರಾಜು ಸ್ಥಾಯಿ ಸಮಿತಿ ಸದಸ್ಯರಾಗಿ, 2018ರಲ್ಲಿ ಆರ್ಕಿಟೆಕ್ಚರ್ ಶಿಕ್ಷಣ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 2019ರಲ್ಲಿ ಬೀದರ್​​ ಕ್ಷೇತ್ರದಿಂದ 2ನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದ ಖೂಬಾ ಈಗ ಪ್ರಧಾನಿ ನರೇಂದ್ರ ಮೋದಿಯವರ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.

ಯೂರೂ ಊಹಿಸದ ಅಚ್ಚರಿಯ ಆಯ್ಕೆ ನಾರಾಯಣಸ್ವಾಮಿ
ಡಾ.ಉಮೇಶ್ ಜಾಧವ್, ರಮೇಶ್ ಜಿಗಜಿಣಗಿಗೆ ಸಿಗಲಿಲ್ಲ ಸ್ಥಾನ
ಕೇಂದ್ರದ ಸಂಪುಟದಲ್ಲಿ ಸ್ಥಾನ ಪಡೆದ ಚಿತ್ರದುರ್ಗ ಸಂಸದರು

blankಚಿತ್ರದುರ್ಗದ ಸಂಸದ ಆನೇಕಲ್ ನಾರಾಯಣಸ್ವಾಮಿ ಕೇಂದ್ರ ಸಚಿವ ಸಂಪುಟ ಸೇರ್ಪಡೆಗೊಂಡಿದ್ದಾರೆ. ನಾರಾಯಣಸ್ವಾಮಿಯವರ ಹೆಸರು ಈ ಹಿಂದೆ ಅಷ್ಟಾಗಿ ಕೇಂದ್ರ ಸಚಿವ ಸ್ಥಾನದ ವಿಚಾರದಲ್ಲಿ ಕೇಳಿ ಬಂದಿರಲಿಲ್ಲ. ಇವರ ಬದಲಿಗೆ ಕಲಬುರಗಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಉಮೇಶ್ ಜಾಧವ್ ಅವರ ಹೆಸರೇ ಮುಂಚೂಣಿಯಲ್ಲಿತ್ತು. ಜೊತೆಗೆ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿಯವರ ಹೆಸರು ಕೂಡ ಮತ್ತೆ ಮುನ್ನೆಲೆಗೆ ಬಂದಿತ್ತು. ಡಾಕ್ಟರ್ ಉಮೇಶ್ ಜಾಧವ್ ಅವರಿಗೆ ಕಾಂಗ್ರೆಸ್ ಹಿರಿಯ ನಾಯಕ, ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕನ ಸ್ಥಾನ ನಿರ್ವಹಿಸಿದ್ದ ಮಲ್ಲಿಕಾರ್ಜುನ ಖರ್ಗೆಯವರನ್ನು ಸೋಲಿಸಿದ್ದರೆಂಬ ಹೆಗ್ಗಳಿಕೆ ಬಿಜೆಪಿಯಲ್ಲಿತ್ತು. ಆದರೆ, ಉಮೇಶ್ ಜಾಧವ್ ಅವರಿಗಾಗಲಿ,ರಮೇಶ್ ಜಿಗಜಿಣಗಿ ಅವರಿಗಾಗಲಿ ಸ್ಥಾನ ಸಿಗಲಿಲ್ಲ.

ನಾಲ್ಕು ಬಾರಿ ಶಾಸಕರಾಗಿ,1 ಬಾರಿ ಸಚಿವರಾಗಿದ್ದ ಸ್ವಾಮಿ
ಮೊದಲ ಬಾರಿಗೆ ಸಂಸದರಾಗಿಯೇ ಸಚಿವರಾಗುವ ಅದೃಷ್ಟ

ನಾರಾಯಣಸ್ವಾಮಿ ಪುರಸಭೆ ಸದಸ್ಯರಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ್ದರು. ಬಳಿಕ ನಾಲ್ಕು ಭಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. 2010ರಲ್ಲಿ ಬಿಜೆಪಿ ಸರ್ಕಾರದಲ್ಲಿ ಸಮಾಜಕಲ್ಯಾಣ ಮತ್ತು ಬಂಧೀಖಾನೆ ಖಾತೆಯನ್ನು ನಿರ್ವಹಿಸಿದ್ದರು. ಬಿಜೆಪಿ ಎಸ್​ಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಹಾಗು ಎಸ್​ಸಿ ಮೋರ್ಚಾ ರಾಜ್ಯಾಧ್ಯಕ್ಷರಾಗಿಯೂ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಕೋಟೆನಾಡು ಚಿತ್ರದುರ್ಗದಿಂದ ಸಂಸದರಾಗಿ ಆಯ್ಕೆಯಾಗಿರುವ ನಾರಾಯಣಸ್ವಾಮಿ ಈಗ ಕೇಂದ್ರ ಸಚಿವರು.

ಸಚಿವರಾದ ಬಳಿಕ ಎ.ನಾರಾಯಣಸ್ವಾಮಿ ಪ್ರಧಾನಿ ಮೋದಿಯವರು ತಮ್ಮನ್ನು ಗುರುತಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಸಾಮಾನ್ಯ ಕಾರ್ಯಕರ್ತನೊಬ್ಬನನ್ನು ಬಿಜೆಪಿಯಲ್ಲಿ ಹೇಗೆ ಗುರುತಿಸಲಾಗುತ್ತೆ ಅನ್ನೋದಕ್ಕೆ ದೇಶಕ್ಕೆ ನಾನು ಉದಾಹರಣೆ ಅಂತ ಭಾವುಕರಾದರು ನಾರಾಯಣಸ್ವಾಮಿ.

ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಗೆ ಸ್ಥಾನ
ಸತತವಾಗಿ ಆಯ್ಕೆಯಾಗಿದ್ದ ಉದ್ಯಮಿ ರಾಜೀವ್ ಚಂದ್ರಶೇಖರ್

blank

ಕರ್ನಾಟಕದಿಂದ ಈ ಬಾರಿ ರಾಜ್ಯಸಭೆಯನ್ನ ಪ್ರತಿನಿಧಿಸಿರುವ ಎರಡನೇ ಪ್ರತಿನಿಧಿ ಕೇಂದ್ರ ಸಂಪುಟವನ್ನು ಸೇರಿದ್ದಾರೆ. ಮೊದಲು ನಿರ್ಮಲಾ ಸೀತಾರಾಮನ್, ಈಗ ರಾಜೀವ್ ಚಂದ್ರಶೇಖರ್. ರಾಜೀವ್ ಚಂದ್ರಶೇಖರ್ ಮೊದಲು ಜೆಡಿಎಸ್​​ನಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಬಳಿಕ ಜೆಡಿಎಸ್-ಬಿಜೆಪಿ ಅಭ್ಯರ್ಥಿಯಾಗಿ ಗೆದ್ದು ಹೋಗಿದ್ದರು. ಇದೀಗ ಬಿಜೆಪಿ ಸಂಸದರಾಗಿ ತಮ್ಮನ್ನು ತೊಡಿಗಿಸಿಕೊಂಡಿದ್ದರು ರಾಜೀವ್ ಚಂದ್ರಶೇಖರ್. ಇತ್ತೀಚೆಗೆ ನಡೆದ ಪಂಚ ರಾಜ್ಯ ಚುನಾವಣೆ ಸಂದರ್ಭದಲ್ಲಿ ಕೇರಳ ಮತ್ತು ಪುದುಚೇರಿಯಲ್ಲಿ ರಾಜೀವ್ ಹೆಚ್ಚಿನ ರೀತಿಯಲ್ಲಿ ಸಂಘಟನೆಯಲ್ಲಿ ನಿರತರಾಗಿದ್ದರು. ಯಶಸ್ವಿ ಉದ್ಯಮಿ ಎನಿಸಿಕೊಂಡಿರುವ ರಾಜೀವ್ ಚಂದ್ರಶೇಖರ್ ಅವರಿಗೆ ಈ ಬಾರಿ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.

ರಾಜ್ಯದಿಂದ ಯಾವ ಸಮುದಾಯಕ್ಕೆ ಸಂಪುಟದಲ್ಲಿ ಪ್ರಾತಿನಿಧ್ಯ?
ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ಈ ಬಾರಿ ಆರು ಸಂಸದರಿಗೆ ಸಚಿವರಾಗುವ ಅವಕಾಶ ಸಿಕ್ಕಿದೆ. ನಾಲ್ವರು ಲೋಕಸಭಾ ಸದಸ್ಯರು ಮತ್ತು ಕರ್ನಾಟಕದಿಂದ ಆಯ್ಕೆಯಾದ ಇಬ್ಬರು ರಾಜ್ಯಸಭಾ ಸದಸ್ಯರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ. ಇನ್ನು ಜಾತೀವಾರು ಪ್ರಾತಿನಿಧ್ಯ ನೋಡೋದಾದ್ರೆ.

 • ಪ್ರಹ್ಲಾದ್ ಜೋಷಿ (ಹುಬ್ಬಳ್ಳಿ-ಧಾರವಾಡ ಸಂಸದರು)-ಬ್ರಾಹ್ಮಣ
 • ಭಗವಂತ ಖೂಬಾ(ಬೀದರ್ ಕ್ಷೇತ್ರದ ಸಂಸದರು)ವೀರಶೈವ-ಲಿಂಗಾಯತ
 • ಶೋಭಾ ಕರಂದ್ಲಾಜೆ(ಉಡುಪಿ-ಚಿಕ್ಕಮಗಳೂರು ಸಂಸದೆ)-ಒಕ್ಕಲಿಗ
 • ಎ.ನಾರಾಯಣ ಸ್ವಾಮಿ(ಚಿತ್ರದುರ್ಗ ಕೇತ್ರದ ಸಂಸದರು)ಪರಿಶಿಷ್ಟ ಜಾತಿ
 • ನಿರ್ಮಲಾ ಸೀತಾರಾಮನ್(ರಾಜ್ಯಸಭಾ ಸದಸ್ಯರು)-ಬ್ರಾಹ್ಮಣ
 • ರಾಜೀವ್ ಚಂದ್ರಶೇಖರ್ (ರಾಜ್ಯಸಭಾ ಸದಸ್ಯರು)-ಬ್ರಾಹ್ಮಣ

ಹೀಗೆ ಕರ್ನಾಟಕದಿಂದ ಆಯ್ಕೆಯಾಗಿ ಹೋದವರಿಗೆ ಕೇಂದ್ರ ಸಂಪುಟದಲ್ಲಿ ಪ್ರಾತಿನಿಧ್ಯ ದೊರೆತಿದೆ. ಕರ್ನಾಟಕದ ಮಟ್ಟಿಗೆ ಮೋದಿ ಸಂಪುಟದಲ್ಲಿ ಹೆಚ್ಚಿನ ಆದ್ಯತೆ ಸಿಕ್ಕಂತೆಯೇ ಆಗಿದೆ. ಇದು ರಾಜ್ಯಕ್ಕೆ ಮುಂದಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ಸಹಾಯವಾಗುತ್ತೆ ಅನ್ನೋದು ಕೂಡ ಬಹಳ ಮುಖ್ಯವಾಗುತ್ತೆ.

ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ರಾಜ್ಯದಿಂದ ಒಟ್ಟು ಆರು ಮಂದಿ ಸಚಿವರಾದಂತಾಗಿದೆ. ನಾಲ್ವರು ಲೋಕಸಭಾ ಸದಸ್ಯರು, ಇಬ್ಬರು ರಾಜ್ಯಸಭಾ ಸದಸ್ಯರು ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಆದ್ರೆ ಡಿ.ವಿ.ಸದಾನಂದಗೌಡರನ್ನು ಸಂಪುಟದಿಂದ ಕೈ ಬಿಟ್ಟಿದ್ದೇಕೆ ಎಂಬ ಬಗ್ಗೆ ಹಲವಾರು ರೀತಿಯ ವ್ಯಾಖ್ಯಾನಗಳು ಕೇಳಿ ಬರ್ತಾ ಇವೆ. ಈ ಬಾರಿ ಮೋದಿ ಸಂಪುಟಕ್ಕೆ ಭರ್ಜರಿ ಸರ್ಜರಿಯೇ ಆಗಿದೆ. ಹಿರಿಯ ನಾಯಕರೂ ಸೇರಿ ಬರೋಬ್ಬರಿ 11 ಜನ ಸಚಿವರನ್ನು ಕೈ ಬಿಡಲಾಗಿದೆ. ಇವರ ಬದಲಿಗೆ ಹೊಸಬರಿಗೆ ಅವಕಾಶ ನೀಡಲಾಗಿದೆ.

ಸಂಪುಟದಿಂದ ಕೈಬಿಡಲ್ಪಟ್ಟವರು

 • 1. ರಮೇಶ್ ಪೋಖ್ರಿಯಾಲ್
 • 2. ಸಂತೋಷ್ ಗಂಗ್ವಾರ್
 • 3. ಥಾವರಚಂದ್ ಗೆಹಲೋತ್
 • 4. ಡಿ.ವಿ ಸದಾನಂದ ಗೌಡ
 • 5. ಪ್ರಕಾಶ್ ಜಾವ್ಡೇಕರ್
 • 6. ಡಾ. ಹರ್ಷ ವರ್ಧನ್
 • 7. ರವಿಶಂಕರ್ ಪ್ರಸಾದ್
 • 8. ಬಾಬುಲ್ ಸುಪ್ರಿಯೋ
 • 9. ಪ್ರತಾಪ್ ಸಿಂಗ್ ಸಾರಂಗಿ
 • 10. ಸಂಜಯ್ ಧೋತ್ರೆ
 • 11. ರತನ್ ಲಾಲ್ ಕಟಾರಿಯಾ

ಕೇಂದ್ರ ಶಿಕ್ಷಣ ಸಚಿವರಾಗಿದ್ದ ರಮೇಶ್ ಪೋಖ್ರಿಯಾಲ್, ಕಾರ್ಮಿಕ ಸಚಿವರಾಗಿದ್ದ ಸಂತೋಷ್ ಗಂಗ್ವಾರ್, ಸಾಮಾಜಿಕ ನ್ಯಾಯ ಖಾತೆ ನಿಭಾಯಿಸುತ್ತಿದ್ದ ಥಾವರಚಂದ್ ಗೆಹಲೋತ್, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ, ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್, ಆರೋಗ್ಯ ಸಚಿವರಾಗಿದ್ದ ಡಾಕ್ಟರ್ ಹರ್ಷ ವರ್ಧನ್ ಮತ್ತು ಕಾನೂನು ಹಾಗು ಐಟಿ ಖಾತೆ ನಿಭಾಯಿಸುತ್ತಿದ್ದ ರವಿಶಂಕರ್ ಪ್ರಸಾದ್ ಅವರನ್ನು ಸಂಪುಟದಿಂದ ಕೈ ಬಿಡಲಾಗಿದೆ.

ಇವರಲ್ಲದೆ, ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಬಾಬುಲ್ ಸುಪ್ರಿಯೋ, ಪಶು ಸಂಗೋಪನಾ ರಾಜ್ಯ ಸಚಿವ ಪ್ರತಾಪ್ ಸಿಂಗ್ ಸಾರಂಗಿ, ಮಾನವ ಸಂಪನ್ಮೂಲ ರಾಜ್ಯ ಸಚಿವ ಸಂಜಯ್ ಧೋತ್ರೆ, ಮತ್ತು ರತನ್ ಲಾಲ್ ಕಟಾರಿಯಾ ಅವರನ್ನು ಕೈ ಬಿಡಲಾಗಿದೆ.

ಕೈ ಬಿಡಲು ಕಾರಣವೇನು?

 • ಕೆಲವು ಸಚಿವರ ಕಾರ್ಯ ನಿರ್ವಹಣೆ ತೃಪ್ತಿ ತರದೇ ಇರಬಹುದು
 • ಹೊಸಬರಿಗೆ ಅವಕಾಶ ನೀಡುವ ಉದ್ದೇಶ ಪಿಎಂಗೆ ಇರಬಹುದು
 • ಕೆಲವರನ್ನು ಪಕ್ಷ ಸಂಘಟನೆಯಲ್ಲಿ ತೊಡಗಿಸುವ ಉದ್ದೇಶ ಇರಬಹುದು
 • ಕೆಲವು ರಾಜ್ಯಗಳಲ್ಲಿನ ಚುನಾವಣೆ ದೃಷ್ಟಿಯಿಂದ ಅದಲು-ಬದಲು
 • ಜಾತಿ-ರಾಜ್ಯಾವಾರು ಪ್ರಾತಿನಿಧ್ಯ ಸರಿತೂಗಿಸಲು ಕೆಲವರನ್ನು ಬಿಟ್ಟಿರಬಹುದು

ಪ್ರಧಾನಿ ನರೇಂದ್ರ ಮೋದಿ ಮೊದಲಿನಿಂದಲು ಕೂಡ ಎಲ್ಲಾ ಸಚಿವರ ಕಾರ್ಯನಿರ್ವಹಣೆ ಮೇಲೆ ಖುದ್ದಾಗಿ ಗಮನ ಇಡುತ್ತಾರೆ ಎಂಬುದು ಬಿಜೆಪಿ ವಲಯದಲ್ಲಿ ಜನಜನಿತ. ಹೀಗಾಗಿ ಕೆಲವರ ಕಾರ್ಯನಿರ್ವಹಣೆ ಮೋದಿಗೆ ತೃಪ್ತಿ ತರದೇ ಇರಬಹುದು. ಅಥವಾ ಹೊಸಬರಿಗೆ ಅವಕಾಶ ನೀಡುವ ಉದ್ದೇಶ ಪ್ರಧಾನಿಯವರಿಗೆ ಇರಬಹುದು. ಕೆಲವರನ್ನು ಪಕ್ಷದ ಸಂಘಟನೆಯಲ್ಲಿ ತೊಡಗಿಸುವ ಉದ್ದೇಶವೂ ಇರಬಹುದು. ಕೆಲವು ರಾಜ್ಯಗಳ ಚುನಾವಣೆಯ ದೃಷ್ಟಿಯಿಂದ ಅದಲು-ಬದಲಾಗಿರಬಹುದು. ಇನ್ನು ಜಾತಿ-ರಾಜ್ಯಾವಾರು ಪ್ರಾತಿನಿಧ್ಯ ಸರಿದೂಗಿಸಲು ಕೆಲವರನ್ನು ಪ್ರಧಾನಿ ಮೋದಿಯವರು ಕೈ ಬಿಟ್ಟಿರಬಹುದು ಎನ್ನಲಾಗಿದೆ.

ತಕ್ಷಣಕ್ಕೆ ಇಷ್ಟು ಕಾರಣಗಳನ್ನು ಮಾತ್ರ ಹೇಳಬಹುದು. ಇನ್ನು ಆಂತರಿಕವಾಗಿ ನಡೆದಿರಬಹುದಾದ ಬೆಳವಣಿಗೆ ಹಾಗೂ ಮತ್ತಷ್ಟು ಕಾರಣಗಳ ಇನ್ನಷ್ಟೇ ಗೊತ್ತಾಗಬೇಕಾಗಿದೆ. ಕರ್ನಾಟಕದ ವಿಚಾರ ಬಂದಾಗ ಕೇಂದ್ರ ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ದೊಡ್ಡ ಮಟ್ಟಿಗೆ ಸುದ್ದಿ-ಸದ್ದು ಮಾಡುತ್ತಿರುವುದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರ ವಿಚಾರ.

blank

ಡಿ.ವಿ ಸದಾನಂದಗೌಡರನ್ನು ಸಂಪುಟದಿಂದ ಕೈ ಬಿಟ್ಟಿದ್ದೇಕೆ?
ಕಳೆದ 7 ವರ್ಷಗಳಿಂದ ಸತತವಾಗಿ ಸಚಿವರಾಗಿದ್ದ ಡಿವಿಎಸ್
ರೈಲ್ವೇ,ಯೋಜನಾ-ಸಾಂಖ್ಯಿಕ,ರಸಗೊಬ್ಬರ ಖಾತೆ ನಿರ್ವಹಣೆ
ಈ ಬಾರಿ ಸದಾನಂದಗೌಡರನ್ನು ಕೈ ಬಿಡಲು ಕಾರಣವೇನು?

ಡಿ.ವಿ.ಸದಾನಂದಗೌಡರನ್ನು ಕೈ ಬಿಟ್ಟಿದ್ದೇಕೆ ಅನ್ನೋದೇ ಪ್ರಶ್ನೆಯಾಗಿದೆ. ರಾಷ್ಟ್ರ ಮಟ್ಟದ ಬಿಜೆಪಿ ವಲಯದಲ್ಲಿ ಇದು ಅಷ್ಟಾಗಿ ಚರ್ಚೆ ಆಗ್ತಾ ಇಲ್ಲ. ಕಾರಣ ಅನೇಕ ಹಿರಿಯ,ಅನುಭವಿಗಳನ್ನೂ ಕೈ ಬಿಡಲಾಗಿದೆ. ಡಾಕ್ಟರ್ ಹರ್ಷವರ್ಧನ್ ,ಸಂತೋಷ್ ಗಂಗ್ವಾರ್ ಅವರೆಲ್ಲ ಹಿರಿಯರೇ. ಆದರೂ ಇವರನ್ನೆಲ್ಲ ಕೈ ಬಿಟ್ಟಿದ್ದಾರೆ. ಹೀಗಾಗಿ ಡಿ.ವಿ.ಸದಾನಂದಗೌಡರು ಕೂಡ ಇವರಲ್ಲಿ ಒಬ್ಬರು ಅಂತಾನೇ ಕೇಂದ್ರ ನಾಯಕತ್ವ ಪರಿಗಣಿಸಿದೆ. ಆದ್ರೆ, ಕರ್ನಾಟಕದಲ್ಲಿ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಗ್ತಾ ಇದೆ. ಡಿ.ವಿ.ಸದಾನಂದಗೌಡರು ಮೋದಿ ಮೊದಲ ಅವಧಿಯಲ್ಲೇ ರೈಲ್ವೇ ಸಚಿವರಾಗಿದ್ದರು. ಆದರೆ, ಕೆಲವೇ ತಿಂಗಳುಗಳಲ್ಲಿ ರೈಲ್ವೇ ಖಾತೆಯಿಂದ ಸದಾನಂದಗೌಡರನ್ನು ಬದಲಾಯಿಸಲಾಗಿತ್ತು. ಬಳಿಕ ಡಿವಿಎಸ್, ಯೋಜನಾ ಮತ್ತು ಸಾಂಖ್ಯಿಕ ಖಾತೆ ನಿಭಾಯಿಸುತ್ತಿದ್ದರು. ಆದರೆ, ಅನಂತ್ ಕುಮಾರ್ ನಿಧನದ ಬಳಿಕ ಆಗ ತೆರವಾಗಿದ್ದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯನ್ನು ಸದಾನಂದಗೌಡರಿಗೆ ವಹಿಸಲಾಗಿತ್ತು. ಈ ಬಾರಿ ಸಂಪುಟ ಪುನಾರಚನೆ ಸಂದರ್ಭದಲ್ಲಿ ಸದಾನಂದಗೌಡರನ್ನು ಕೈ ಬಿಟ್ಟು ರಾಜ್ಯ ಬಿಜೆಪಿ ವಲಯದಲ್ಲಂತೂ ತೀವ್ರ ಚರ್ಚೆಗೆ ಗ್ರಾಸವಾದಂತಾಗಿದೆ.

ರಾಜ್ಯ ರಾಜಕಾರಣಕ್ಕೆ ಮರಳಲು ಸೂಚನೆ ಕೊಟ್ರಾ ನಾಯಕರು?
ಮತ್ತೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಸಂದೇಶ ಕೊಟ್ರಾ?
ಬೇರೆ ಯಾವುದಾದ್ರು ಉನ್ನತ ಹುದ್ದೆ ಕೊಡುತ್ತಾರಾ ಪಿಎಂ ಮೋದಿ?
ಪಕ್ಷದಲ್ಲಿ ಉನ್ನತ ಸ್ಥಾನ ಮಾನ ಕಲ್ಪಿಸುತ್ತಾ ಭಾರತೀಯ ಜನತಾ ಪಕ್ಷ?

ಡಿ.ವಿ.ಸದಾನಂದಗೌಡರು ಅನುಭವಿ ನಾಯಕರು. ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದವರು. ಇವರಿಗೆ ಪಕ್ಷ ಸಂಘಟನೆಯಲ್ಲಿ ಅನುಭವ ಇದೆ. ಇನ್ನು ಈ ಹಿಂದೆ ಯಡಿಯೂರಪ್ಪನವರು ಅಧಿಕಾರ ಬಿಟ್ಟುಕೊಟ್ಟಾಗ ಸದಾನಂದಗೌಡರಿಗೆ ಅದೃಷ್ಟ ಖುಲಾಯಿಸಿತ್ತು. ಶಾಸಕರಾಗದಿದ್ದರೂ ಅವತ್ತು ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದರು. 1 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದ ಸದಾನಂದಗೌಡರು ಬಳಿಕ ಮತ್ತೆ ಅಸಮಾಧಾನದ ಕಾರಣದಿಂದ ಸ್ಥಾನ ತೊರೆಯಬೇಕಾಯಿತು. ಅದಾದ ನಂತರ ಸದಾನಂದಗೌಡರಿಗೆ ಡಿ.ಬಿ.ಚಂದ್ರೇಗೌಡರ ಬದಲಿಗೆ ಬೆಂಗಳೂರಿನಲ್ಲಿ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಸಿಕ್ಕಿತ್ತು. ಮತ್ತೆ ಡಿವಿಎಸ್ ಗೆ ಅದೃಷ್ಟ ಒಲಿದು ಬಂದಿತ್ತು. ಮೊದಲ ಬಾರಿ ಸಂಸದರಾಗಿದ್ರೂ ಮುಖ್ಯಮಂತ್ರಿಯಾಗಿ ಅನುಭವ ಇದ್ದಿದ್ದರಿಂದ ಅವರಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನವೂ ಸಿಕ್ಕಿತ್ತು. ಈಗ ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳಲು ಕೇಂದ್ರ ನಾಯಕರು ಸದಾನಂದಗೌಡರಿಗೆ ಸೂಚನೆ ಕೊಟ್ರಾ ಅಥವಾ ಬೇರೆ ಯಾವುದಾದರು ಉನ್ನತ ಹುದ್ದೆಯನ್ನು ಪಿಎಂ ಮೋದಿ ಕೊಡ್ತಾರಾ ಅಥವಾ ಪಕ್ಷದಲ್ಲೇ ಮತ್ಯಾವುದಾದರೂ ಉನ್ನತ ಸ್ಥಾನ ಸಿಗುತ್ತಾ ಹೀಗೆ ಚರ್ಚೆಗಳು ಶುರುವಾಗಿದೆ. ಇದಕ್ಕೆಲ್ಲ ಮುಂದಿನ ದಿನಗಳಲ್ಲೇ ಉತ್ತರ ಸಿಗಬೇಕಾಗಿದೆ.

ನಮೋ ಸಂಪುಟದಲ್ಲಿ ಯಾರ್ಯಾರಿಗೆ ಸಿಕ್ಕಿದೆ ಪ್ರಾತಿನಿಧ್ಯ?
ಯಾವ ರಾಜ್ಯಕ್ಕೆ ಎಷ್ಟು, ಯಾವ ಸಮುದಾಯಕ್ಕೆ ಎಷ್ಟು?

ಇನ್ನು ನರೇಂದ್ರ ಮೋದಿಯವರ ಸಂಪುಟದಲ್ಲಿ ಯಾವೆಲ್ಲ ಸಮುದಾಯಗಳಿಗೆ ಎಷ್ಟರ ಮಟ್ಟಿಗೆ ಪ್ರಾತಿನಿಧ್ಯ ಸಿಕ್ಕಿದೆ ಅನ್ನೋದು ಕೂಡ ಬಹಳ ಮುಖ್ಯ.ಹಾಗೆಯೇ ಯಾವ ರಾಜ್ಯಕ್ಕೆ ಎಷ್ಟರ ಮಟ್ಟಿಗೆ ಪ್ರಾತಿನಿಧ್ಯ ಸಿಗಲಿದೆ ಅನ್ನೋದು ಕೂಡ ಗಮನಾರ್ಹ. ಅದನ್ನು ಒಮ್ಮೆ ನೋಡೋಣ.

ನಮೋ ಸಂಪುಟದಲ್ಲಿ ಪ್ರಾತಿನಿಧ್ಯ

 • ಕೇಂದ್ರ ಸಚಿವ ಸಂಪುಟದಲ್ಲಿ 25 ರಾಜ್ಯಗಳಿಗೆ ಪ್ರಾತಿನಿಧ್ಯ
  ಮೋದಿ ಸಚಿವ ಸಂಪುಟದಲ್ಲಿ 11 ಮಹಿಳೆಯರಿಗೆ ಸ್ಥಾನ
  ಮೊದಲ ಬಾರಿಗೆ ಇಷ್ಟು ಸಂಖ್ಯೆಯಲ್ಲಿ ಮಹಿಳಾ ಮಂತ್ರಿಗಳು
  ಹೊಸ ಮಂತ್ರಿ ಮಂಡಲದಲ್ಲಿ ನಾಲ್ವರು ಮಾಜಿ ಸಿಎಂಗಳು
  13ಮಂದಿ ವಕೀಲರು,6 ಮಂದಿ ವೈದ್ಯರು ಸಂಪುಟದಲ್ಲಿ
  5 ಮಂದಿ ಇಂಜಿನಿಯರ್ಸ್,7 ಮಂದಿ ನಾಗರಿಕ ಸೇವೆಯಲ್ಲಿದ್ದವರು
  ಎಸ್​ಸಿ ಸಮುದಾಯದ 12, ಎಸ್​ಟಿಯಿಂದ 8 ಸಚಿವರು
  ಹಿಂದುಳಿದ ವರ್ಗದ 27 ಮಂದಿ ಕೇಂದ್ರ ಸಚಿವ ಸಂಪುಟದಲ್ಲಿ
  ಇದೇ ಮೊದಲ ಬಾರಿಗೆ ಇಷ್ಟು ಸಂಖ್ಯೆಯಲ್ಲಿ ಒಬಿಸಿಗೆ ಪ್ರಾತಿನಿಧ್ಯ
  5 ಅಲ್ಪ ಸಂಖ್ಯಾತ, 29 ಇತರೆ ಸಮುದಾಯದವರಿಗೆ ಅವಕಾಶ
  50 ವರ್ಷದೊಳಗಿನ 14 ಮಂದಿ ನಮೋ ಸಚಿವ ಸಂಪುಟದಲ್ಲಿ

ಕೇಂದ್ರ ಸಚಿವ ಸಂಪುಟದಲ್ಲಿ 25 ರಾಜ್ಯಗಳಿಗೆ ಪ್ರಾತಿನಿಧ್ಯ ಸಿಕ್ಕಿದೆ.ಮೋದಿ ಸಚಿವ ಸಂಪುಟದಲ್ಲಿ 11 ಮಹಿಳೆಯರಿಗೆ ಅವಕಾಶ ದೊರೆತಿದೆ.ಮೊದಲ ಬಾರಿಗೆ ಇಷ್ಟು ಸಂಖ್ಯೆಯಲ್ಲಿ ಮಹಿಳಾ ಮಂತ್ರಿಗಳು ಕೇಂದ್ರ ಸಂಪುಟದಲ್ಲಿದ್ದಾರೆ. ಮೋದಿ ಮಂತ್ರಿ ಮಂಡಲದಲ್ಲಿ ಹಾಲಿ ನಾಲ್ವರು ಮಾಜಿ ಮುಖ್ಯಮಂತ್ರಿಗಳಿದ್ದಾರೆ. ಸಂಪುಟ ಸದಸ್ಯರ ಪೈಕಿ 13 ಜನರು ವಕೀಲರು, 6 ಜನರು ವೈದ್ಯರು, 5 ಇಂಜಿನಿಯರ್, 7 ಜನರು ನಾಗರಿಕ ಸೇವೆಯಲ್ಲಿದ್ದವರು ಸೇರಿದ್ದಾರೆ. ಎಸ್​ಸಿ ಸಮುದಾಯದ 12, ಎಸ್​ಟಿಯಿಂದ 8 ಸಚಿವರಾಗಿದ್ದಾರೆ. ಹಿಂದುಳಿದ ವರ್ಗದ 27 ಮಂದಿ ಕೇಂದ್ರ ಸಚಿವ ಸಂಪುಟದಲ್ಲಿದ್ದಾರೆ.ಇದೇ ಮೊದಲ ಬಾರಿಗೆ ಇಷ್ಟು ಸಂಖ್ಯೆಯಲ್ಲಿ ಒಬಿಸಿಗೆ ಪ್ರಾತಿನಿಧ್ಯ ಸಿಕ್ಕಿದೆ. 5 ಅಲ್ಪ ಸಂಖ್ಯಾತ, 29 ಇತರೆ ಸಮುದಾಯದವರಿಗೆ ಅವಕಾಶ ದೊರೆತಿದೆ.50 ವರ್ಷದೊಳಗಿನ 14 ಮಂದಿ ನಮೋ ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ…gfx voice..

ಸಂಪುಟ ಪುನಾರಚನೆ ವೇಳೆ ಹಲವು ಮಂದಿ ಸಚಿವರಿಗೆ ಭಡ್ತಿ
ಮೋದಿ ಸಂಪುಟದಲ್ಲಿ 36 ಹೊಸ ಮುಖಗಳಿಗೆ ಈ ಬಾರಿ ಅವಕಾಶ

ಸಂಪುಟ ಪುನಾರಚಣೆ ವೇಳೆ 11 ಮಂದಿ ಸಚಿವರನ್ನು ಕೈ ಬಿಟ್ಟಿದ್ದಷ್ಟೇ ಅಲ್ಲ. ಕೆಲವು ಸಚಿವರಿಗೆ ಭಡ್ತಿಯನ್ನೂ ಕೊಡಲಾಗಿದೆ. ಈ ಬಾರಿಯ ವಿಶೇಷವೇನು ಅಂದ್ರೆ 36 ಹೊಸ ಮುಖಗಳಿಗೆ ಮೋದಿ ಮಣೆ ಹಾಕಿದ್ದಾರೆ. ಇದು ಮತ್ತಷ್ಟು ವಿಶೇಷವಾಗಿದೆ. ಎಲ್ಲಿಯೂ ಸಮತೋಲನ ತಪ್ಪದಂತೆ ಪ್ಲಾನ್ ಮಾಡಿ ಸಂಪುಟ ಪುನಾರಚನೆ ಮಾಡಲಾಗಿದೆ.

ಮೋದಿ ನೇತೃತ್ವದ ಸರ್ಕಾರದ ಎರಡನೇ ಅವಧಿಯ ಮೊದಲ ಸಂಪುಟ ಪುನಾರಚನೆ ದೊಡ್ಡ ಮಟ್ಟದಲ್ಲೇ ಸದ್ದು ಮಾಡಿದೆ. ಆದರೆ, ಆಡಳಿತಾತ್ಮಕ ದೃಷ್ಟಿಯಿಂದ ಇದು ಮುಂದಿನ ದಿನಗಳಲ್ಲಿ ಯಾವ ರೀತಿ ಪರಿಣಾಮಗಳನ್ನು ತೋರಿಸುತ್ತೆ ಅನ್ನೋದಷ್ಟೇ ದೇಶವಾಸಿಗಳಿಗೆ ಮುಖ್ಯ.

ಒಟ್ಟಾರೆ ಮೋದಿ ಸಂಪುಟಕ್ಕೆ ಭರ್ಜರಿ ಸರ್ಜರಿ ಮಾಡಿದ್ದಾರೆ. ಕರ್ನಾಟಕದ ಮಟ್ಟಿಗೆ ಡಿ.ವಿ.ಸದಾನಂದಗೌಡರನ್ನು ಕೈ ಬಿಟ್ಟಿದ್ದು ವಿಶೇಷ ಚರ್ಚೆಗೆ ಗ್ರಾಸವಾಗಿದೆ. ಆದರೆ, ಕೇಂದ್ರ ಸಂಪುಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಹೆಚ್ಚು ಸದಸ್ಯರಿಗೆ ಅವಕಾಶ ಸಿಕ್ಕಿದ್ದು ಕೂಡ ಗಮನಾರ್ಹ.

The post ಸದಾನಂದಗೌಡರನ್ನು ಕೇಂದ್ರ ಸಂಪುಟದಿಂದ ಕೈಬಿಟ್ಟಿದ್ದೇಕೆ? ಶೋಭಾ ಆಯ್ಕೆಗೆ ಯಾವ ಅಂಶ ಪ್ಲಸ್ ಆಯ್ತು? appeared first on News First Kannada.

Source: newsfirstlive.com

Source link