ರಾಜ್ಯದ ಇನ್ನೂ ನಾಲ್ವರು ಸಂಸದರಿಗೆ ಸಚಿವ ಸ್ಥಾನ ನೀಡಿದರೂ ಪ್ರಯೋಜನವಿಲ್ಲ: ಸತೀಶ್ ಜಾರಕಿಹೊಳಿ

ಬೆಳಗಾವಿ: ಮೊದಲು ಕೇಂದ್ರ ಸರ್ಕಾರ 50 ಕಿ.ಮೀ. ಸ್ಪೀಡ್ ನಲ್ಲಿ ಓಡುತ್ತಿತ್ತು. ಇನ್ನು 30 ಕಿ.ಮೀ. ಸ್ಪೀಡ್ ನಲ್ಲೂ ಓಡುವುದಿಲ್ಲ ಎಂದು ಕೇಂದ್ರ ಸಂಪುಟ ಪುನಾರಚನೆ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫಂಡರಪುರಕ್ಕೆ ಹೋಗುವ ರೈಲಿನಲ್ಲಿ ಚಲಿಸುವಾಗಲೇ ಹತ್ತಿ ಇಳಿಯಬಹುದಿತ್ತು. ಆ ರೀತಿ ಇನ್ನು ಮುಂದೆ ಇವರ ಸರ್ಕಾರ ಹೋಗುತ್ತದೆ. ರಾಜ್ಯದ ಇನ್ನೂ ನಾಲ್ವರು ಸಂಸದರನ್ನು ಸಚಿವರನ್ನಾಗಿ ಮಾಡಿದರೂ ಯಾವುದೇ ಲಾಭವಾಗುವುದಿಲ್ಲ. ಕೆಲಸ ಮಾಡುವ ಇಚ್ಛಾಶಕ್ತಿ ಪ್ರಧಾನ ಮಂತ್ರಿಗಳಲ್ಲೇ ಇಲ್ಲ. ಟೀಮ್ ಲೀಡರ್ ಇಚ್ಛಾಶಕ್ತಿ ಹೊಂದಿದ್ದರೆ ಮಾತ್ರ ಕೆಲಸ ಸರಿಯಾಗಿ ನಡೆಯುತ್ತದೆ. ಇಲ್ಲದಿದ್ದರೇ ಅವರ ಕೆಳಗಿನವರು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಪ್ರಧಾನ ಮಂತ್ರಿಯನ್ನು ಈ ವರೆಗೆ ಯಾವ ಮಂತ್ರಿಗಳೂ ಸರಿಯಾಗಿ ಭೇಟಿಯಾಗಲು ಸಾಧ್ಯವಾಗಿಲ್ಲ. ಸೇನಾಪತಿ (ಪ್ರಧಾನಿ) ಸ್ಥಾನದಲ್ಲಿರುವ ಮೋದಿಯವರೇ ಫೇಲ್ಯೂರ್ ಆದಾಗ, ಅವರ ಕೆಳಗಿರುವ ಸೈನಿಕರಿಂದ (ಸಚಿವರು) ಏನೂ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ವಿಫಲ:
ಕೋವಿಡ್ ನಿರ್ವಹಣೆ ಹಾಗೂ ಲಸಿಕೆ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಸುಪ್ರೀಂ ಕೋರ್ಟ್ ಆದೇಶ ಮಾಡದಿದ್ದರೆ 1000 ಟನ್ ಆಕ್ಸಿಜನ್ ನಮಗೆ ಸಿಗುತ್ತಿರಲಿಲ್ಲ. ಮೊದಲು ಕೇವಲ 500 ಟನ್ ಆಕ್ಸಿಜನ್ ನೀಡುತ್ತಿದ್ದರು. ಆದರೆ ಸುಪ್ರೀಂ ಕೋರ್ಟ್ ಆದೇಶದಿಂದ ನಾವು ಹೆಚ್ಚು ಆಕ್ಸಿಜನ್ ಪಡೆಯುವಂತಾಯಿತು. ಕೇಂದ್ರ ಸರ್ಕಾರದವರು ಒಮ್ಮೆ ಹೆಚ್ಚು ಲಸಿಕೆ ಪೂರೈಕೆ ಮಾಡುವುದು, ಮತ್ತೊಮ್ಮೆ ಕಡಿಮೆ ನೀಡುವುದು ಮಾಡುತ್ತಿದ್ದಾರೆ. ಹೀಗಾದರೆ ಎಲ್ಲರಿಗೂ ಲಸಿಕೆ ನೀಡಲು ಇನ್ನೂ 2 ವರ್ಷ ಬೇಕಾಗುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಅಸಮರ್ಥ ರಾಜ್ಯ ಸರ್ಕಾರ:
ಕೋವಿಡ್ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಅವರ ಶಾಸಕರೇ ಮುಖ್ಯಮಂತ್ರಿಗಳ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳು, ಸಚಿವರು ಸರ್ಕಾರ ನಡೆಸಲು ಅಸಮರ್ಥರಾಗಿದ್ದಾರೆ. ಕಾಂಗ್ರೆಸ್ ನಿಂದ ಇದನ್ನು ಜನರ ಗಮನಕ್ಕೆ ತರುವ ಕಾರ್ಯ ಮಾಡುತ್ತಿದ್ದೇವೆ. ಕೇಂದ್ರ, ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಪೆಟ್ರೋಲ್, ಡೀಸೆಲ್ ಸೇರಿ ಇನ್ನಿತರ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬೆಳಗಾವಿಯಲ್ಲಿ ಇಂದು ಸೈಕಲ್ ಜಾಥಾ ನಡೆಸಲಾಗುತ್ತಿದೆ ಎಂದರು.

blank

ಈ ಸಂದರ್ಭದಲ್ಲಿ ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್, ಮಹಾಂತೇಶ ಕೌಜಲಗಿ, ಅಂಜಲಿ ನಿಂಬಾಳ್ಕರ್, ಎಐಸಿಸಿ ಗೋವಾ ವೀಕ್ಷಕ ಸುನೀಲ್ ಹನುಮಣ್ಣವರ, ನಗರ ಘಟಕದ ಅಧ್ಯಕ್ಷ ರಾಜು ಸೇಠ್, ಗ್ರಾಮೀಣ ಘಟಕದ ಅಧ್ಯಕ್ಷ ವಿನಯ್ ನಾವಲಗಟ್ಟಿ ಹಾಜರಿದ್ದರು.

The post ರಾಜ್ಯದ ಇನ್ನೂ ನಾಲ್ವರು ಸಂಸದರಿಗೆ ಸಚಿವ ಸ್ಥಾನ ನೀಡಿದರೂ ಪ್ರಯೋಜನವಿಲ್ಲ: ಸತೀಶ್ ಜಾರಕಿಹೊಳಿ appeared first on Public TV.

Source: publictv.in

Source link