ಸಹಆಟಗಾರನಿಗೆ ಕನ್ನಡ ಮೇಷ್ಟ್ರಾದ ಗೌತಮ್

ಕೊಲಂಬೋ: ಭಾರತ ಕ್ರಿಕೆಟ್ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿದೆ. ಈ ತಂಡದಲ್ಲಿ ಮೊದಲ ಬಾರಿಗೆ ಕನ್ನಡಿಗ ಕೃಷ್ಣಪ್ಪ ಗೌತಮ್ ಸ್ಥಾನ ಪಡೆದುಕೊಂಡಿದ್ದಾರೆ. ಇದೀಗ ಗೌತಮ್ ತಂಡದಲ್ಲಿರುವ ಸಹ ಆಟಗಾರ ಋತುರಾಜ್ ಗಾಯಾಕ್ವಾಡ್‍ಗೆ ಕನ್ನಡ ಹೇಳಿಕೊಡುವ ಮೂಲಕ ಕನ್ನಡ ಮೇಷ್ಟ್ರಾಗಿ ಗಮನ ಸೆಳೆದಿದ್ದಾರೆ.

ಭಾರತ ಕ್ರಿಕೆಟ್ ತಂಡದ ಖಾಯಂ ನಾಯಕ ವಿರಾಟ್ ಕೊಹ್ಲಿ ಸಹಿತ ಹಿರಿಯ ಆಟಗಾರು ಇಂಗ್ಲೆಂಡ್ ಪ್ರವಾಸದಲ್ಲಿರುವುದರಿಂದಾಗಿ ಹೊಸ ಪ್ರತಿಭೆಗಳನ್ನೊಳಗೊಂಡ ಶಿಖರ್ ಧವನ್ ನೇತೃತ್ವದ ಭಾರತ ತಂಡ ಶ್ರೀಲಂಕಾಗೆ ತೆರಳಿದೆ. ತಂಡದಲ್ಲಿ ಕರ್ನಾಟಕದ ಆಲ್‍ರೌಂಡರ್ ಕೃಷ್ಣಪ್ಪ ಗೌತಮ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.

ಗೌತಮ್ ಬಿಡುವಿನ ವೇಳೆಯಲ್ಲಿ ಸಹ ಆಟಗಾರ ಮಹಾರಾಷ್ಟ್ರದ ಋತುರಾಜ್ ಗಾಯಾಕ್ವಾಡ್‍ಗೆ ಕನ್ನಡ ಹೇಳಿಕೊಟ್ಟಿದ್ದಾರೆ. ಗಾಯಾಕ್ವಾಡ್, ಗೌತಮ್‍ಗೆ ಮರಾಠಿ ಹೇಳಿಕೊಡುವ ಮೂಲಕ ಸುದ್ದಿಯಾಗಿದ್ದಾರೆ. ಈ ಇಬ್ಬರು ಆಟಗರರು ಕೂಡ ಪರಸ್ಪರ ಬೇರೆ, ಬೇರೆ ಭಾಷೆಗಳನ್ನು ಕಲಿಯುತ್ತಿರುವ ವೀಡಿಯೋ ಒಂದನ್ನು ಬಿಸಿಸಿಐ ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿದೆ. ಇದನ್ನೂ ಓದಿ: ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಮನಗೆದ್ದ ಪ್ರಸಿದ್ಧ್ ಕೃಷ್ಣ

ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಪರ ಗಾಯಾಕ್ವಾಡ್ ಮತ್ತು ಗೌತಮ್ ಜೊತೆಯಾಗಿ ಆಡುತ್ತಿದ್ದಾರೆ. ಹಾಗಾಗಿ ಉತ್ತಮ ಸ್ನೇಹಿತರಾಗಿರುವ ಇವರಿಬ್ಬರೂ ಕೂಡ ತಮ್ಮ, ತಮ್ಮ ಮಾತೃಭಾಷೆಗಳನ್ನು ಹೇಳಿಕೊಡಲು ಮುಂದಾಗಿದ್ದಾರೆ. ಹಾಗೆ ಶ್ರೀಲಂಕಾ ಸರಣಿಯನ್ನು ಕನ್ನಡ ಮತ್ತು ಮರಾಠಿ ಭಾಷೆಗಳಲ್ಲಿ ಟಿವಿಯಲ್ಲಿ ನೋಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಲಂಕಾ ಪ್ರವಾಸಕ್ಕೆ ಶಿಖರ್ ಧವನ್ ನಾಯಕ-ತಂಡದಲ್ಲಿ ಮೂವರು ಕನ್ನಡಿಗರಿಗೆ ಸ್ಥಾನ 

blank

ಈ ಹಿಂದೆ ಕನ್ನಡಿಗರಾದ ರಾಬಿನ್ ಉತ್ತಪ್ಪ, ಮನೀಷ್ ಪಾಂಡೆ, ಪ್ರಸಿದ್ಧ್ ಕೃಷ್ಣ, ಕೆ.ಎಲ್ ರಾಹುಲ್ ಪರಸ್ಪರ ಕನ್ನಡ ಮಾತನಾಡುವ ಮೂಲಕ ತಂಡದಲ್ಲಿ ಕನ್ನಡದ ಕಂಪನ್ನು ಮೂಡಿಸಿದ್ದರು.

ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ ತಂಡ ಲಂಕಾ ವಿರುದ್ಧ 3 ಏಕದಿನ ಮತ್ತು 3 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಏಕದಿನ ಪಂದ್ಯಗಳು ಜುಲೈ 13, 16 ಮತ್ತು 18ರಂದು ನಡೆಯಲಿದ್ದು, ಟಿ20 ಪಂದ್ಯಗಳು ಜುಲೈ 21,23 ಮತ್ತು 25ರಂದು ನಡೆಯಲಿದೆ.

The post ಸಹಆಟಗಾರನಿಗೆ ಕನ್ನಡ ಮೇಷ್ಟ್ರಾದ ಗೌತಮ್ appeared first on Public TV.

Source: publictv.in

Source link