ರೈತಪರ ಕೆಲಸ ಮಾಡದಿದ್ದರೆ ಬೀದಿಗಿಳಿದು ಹೋರಾಟ: ಅಶೋಕ್ ಕೊಡವೂರು

ಉಡುಪಿ: ಶೋಭಾ ಕರಂದ್ಲಾಜೆ ಕೃಷಿ ಮಂತ್ರಿಯಾಗಿ ನೇಮಕವಾಗಿದ್ದಾರೆ. ನೂತನ ಸಚಿವೆ, ನಮ್ಮ ಸಂಸದೆಗೆ ಶುಭಾಶಯಗಳು. ಮುಂದೆ ರೈತರ ಪರ ಕೆಲಸ ಮಾಡಲಿ, ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ಎಚ್ಚರಿಕೆ ನೀಡಿದ್ದಾರೆ.

ಉಡುಪಿಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅಶೋಕ್ ಕೊಡವೂರು ಅವರು, ಕೃಷಿ ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆ ಅವರಿಂದ ಒಳ್ಳೆಯ ಕೆಲಸಗಳು ನಡೆಯಲಿ ಎಂದು ಹಾರೈಸುತ್ತೇನೆ. ಇಡೀ ದೇಶದ ರೈತರು ಬೀದಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಕೃಷಿ ಮಸೂದೆಯ ಸಮಸ್ಯೆಯನ್ನು ಶೋಭಾ ಅವರು ಶೀಘ್ರ ಬಗೆಹರಿಸಲಿ. ಕೊರೊನಾ ಸಾಂಕ್ರಾಮಿಕದಿಂದ ಬಳಲುತ್ತಿರುವ ರೈತರಿಗೆ ಸವಲತ್ತುಗಳನ್ನು ಒದಗಿಸಿ. ದೇಶದಲ್ಲಿ ನಶಿಸುತ್ತಿರುವ ಕೃಷಿಯನ್ನು ಉಳಿಸುವ ಜವಾಬ್ದಾರಿ ಕರಂದ್ಲಾಜೆ ಮೇಲಿದೆ ಎಂದರು. ಇದನ್ನೂ ಓದಿ: ಉಡುಪಿ-ಚಿಕ್ಕಮಗಳೂರು ಜನತೆಗೆ ಮೊದಲ ಧನ್ಯವಾದ: ಶೋಭಾ ಕರಂದ್ಲಾಜೆ

ಶೋಭಾ ಕರಂದ್ಲಾಜೆ ಮಾಡುವ ಒಳ್ಳೆಯ ಕೆಲಸಗಳಿಗೆ ಬೆಂಬಲವಿದೆ. ಕರ್ತವ್ಯಲೋಪ ಮಾಡಿದರೆ ಬೀದಿಗಿಳಿದು ಹೋರಾಟ ಮಾಡಲು ಮೀನಮೇಷ ಎಣಿಸೋದಿಲ್ಲ. ಡಿವಿ ಸದಾನಂದ ಗೌಡ ಅವರನ್ನು ಹುದ್ದೆಯಿಂದ ಇಳಿಸಲಾಗಿದೆ. ಕರಾವಳಿಗೆ ಪ್ರಾತಿನಿಧ್ಯತೆ ಕೊಡುವ ಉದ್ದೇಶದಿಂದ ಶೋಭಾ ಕರಂದ್ಲಾಜೆಯನ್ನು ನೇಮಿಸಲಾಗಿದೆ. ಒಕ್ಕಲಿಗ ಸಮುದಾಯವನ್ನು ಓಲೈಸುವ ಉದ್ದೇಶವೂ ಇದರ ಹಿಂದೆ ಇದೆ ಎಂದು ಅಭಿಪ್ರಾಯಪಟ್ಟರು.

The post ರೈತಪರ ಕೆಲಸ ಮಾಡದಿದ್ದರೆ ಬೀದಿಗಿಳಿದು ಹೋರಾಟ: ಅಶೋಕ್ ಕೊಡವೂರು appeared first on Public TV.

Source: publictv.in

Source link