ಪರೇಡ್ ಮಾಡೋವಾಗ ಹೈ ಹೀಲ್ಸ್ ಹಾಕಲೇಬೇಕಂತೆ.. ಉಕ್ರೇನ್ ಮಹಿಳಾ ಆರ್ಮಿಗೆ ಇದೆಂಥಾ ಶಿಕ್ಷೆ..?

ಪರೇಡ್ ಮಾಡೋವಾಗ ಹೈ ಹೀಲ್ಸ್ ಹಾಕಲೇಬೇಕಂತೆ.. ಉಕ್ರೇನ್ ಮಹಿಳಾ ಆರ್ಮಿಗೆ ಇದೆಂಥಾ ಶಿಕ್ಷೆ..?

ಮಹಿಳೆಯರಿಗೆ ಸೇನೆಯಲ್ಲಿ ಅವಕಾಶ ಕಲ್ಪಿಸಿರುವ ಕೆಲವೇ ಕೆಲ ದೇಶಗಳ ಪೈಕಿ ಉಕ್ರೇನ್ ಕೂಡ ಒಂದು. ಆದ್ರೆ ಇದೀಗ ಸೇನೆಯಲ್ಲಿರುವ ಮಹಿಳೆಯರು ಉಕ್ರೇನ್ ಸ್ವಾತಂತ್ರ್ಯದ ದಿನದಂದೇ ತಮ್ಮ ಸ್ವಾತಂತ್ರ್ಯವನ್ನ ಕಳ್ಕೊಂಡ್ರಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಇದಕ್ಕೆ ಕಾರಣವಾಗಿದ್ದು ಉಕ್ರೇನ್ ಸರ್ಕಾರ ಹೊರಡಿಸಿರುವ ಆದೇಶ. ಅಷ್ಟಕ್ಕೂ ಉಕ್ರೇನ್ ಸರ್ಕಾರ ಹೊರಡಿಸಿರುವ ಆದೇಶ ಏನು..? ವೀರ ನಾರಿಯರು ಸಿಡಿಮಿಡಿಗೊಂಡಿದ್ದೇಕೆ..?

ಸೈನ್ಯ ಅಂದ್ರೆ ಸಾಕು ಮೊದ್ಲು ನೆನಪಾಗುವುದೇ ಶೌರ್ಯ, ಧೈರ್ಯ, ಶಿಸ್ತು, ಸ್ಫೂರ್ತಿ. ಸೈನಿಕರಿಗಿರುವ ನಿಷ್ಠೆ ಶ್ರದ್ಧೆಗೆ ಸಲಾಂ ಹೊಡಿಯಲೇ ಬೇಕು. ಶತ್ರುವಿನ ವಿರುದ್ಧ ಅಂಜದೆ, ಅಳುಕದೆ, ಮುನ್ನುಗ್ಗಿ ಹೋರಾಡುವ ಸೈನಿಕರಿಗೆ ಸೈನಿಕರೇ ಸಾಟಿ. ಶತ್ರುವಿನ ಗುಂಡು ಯಾವ ಕ್ಷಣಬೇಕಾದ್ರೆ ತನ್ನ ದೇಹಕ್ಕೆ ಹೊಕ್ಕಬಹುದು ಎನ್ನುವ ವಿಷ್ಯಾ ಗೊತ್ತಿದ್ರೂ ಧೈರ್ಯದಿಂದ ಮುನ್ನುಗ್ತಾರೆ. ಅಪಘಾತ ಭೂಮಿ ಮೇಲೆನೆ ಇರಲಿ, ಸಾಗರದಲ್ಲೇ ಆಗಿರ್ಲಿ ಅಲ್ಲೆಲ್ಲ ಸೈನಿಕರು ಕ್ಷಣಾರ್ಧದಲ್ಲಿ ಎಂಟ್ರಿ ಕೊಟ್ಟು ಅಲ್ಲಿರುವ ಜನರನ್ನು ರಕ್ಷಣೆ ಕೊಡ್ತಾರೆ. ಪ್ರಾಕೃತಿಕ ವಿಕೋಪದ ಸಂದರ್ಭದಲ್ಲೂ ಮೊದ್ಲು ನೆನ್ಪಾಗುವುದೇ ಇದೇ ಸೈನಿಕರು. ಸೈನಿಕರಲ್ಲಿ ಬರೀ ಪುರುಷರು ಮಾತ್ರವಲ್ಲ ಮಹಿಳೆಯರು ಕೂಡ ಇದ್ದಾರೆ.

ಹೆಣ್ಣು ಅಬಲೆಯಲ್ಲ, ಸಬಲೆ. ಈ ಸಮಾಜದಲ್ಲಿ ಮಹಿಳೆ ತನ್ನ ಸ್ಥಾನವನ್ನು ಇಂದು ಗಟ್ಟಿಗೊಳಿಸಿಕೊಂಡಿದ್ದಾಳೆ. ಪುರುಷರಿಗೆ ಸರಿಸಮಾನಳಾಗಿ ಜವಾಬ್ದಾರಿಯನ್ನು ಹೊತ್ತಿದ್ದಾಳೆ. ಯವ್ವನ ಎಂಬ ಬೆಳದಿಂಗಳು ಮೈಯಲ್ಲಿ ತುಂಬಿಕೊಳ್ಳೋದಕ್ಕೆ ಶುರುವಾಗ್ತಿದ್ದಂಗೆ ಎದುರಿಗಿದ್ದ ಅಡೆತಡೆಗಳನ್ನು ಹೊಡೆದು ಬದುಕಿನಲ್ಲಿ ಹೆಜ್ಜೆ ಮೇಲೆ ಹೆಜ್ಜೆಗಳನ್ನು ಹಾಕಿ ಮೇಲೆದ್ದು ಬಂದಿದ್ದಾಳೆ. ಅಡುಗೆ ಕೋಣೆಯಿಂದ ಹಿಡಿದು ಅಂತರಿಕ್ಷದವರೆಗೆ ಹೆಣ್ಮಕ್ಕಳು ಮೂಡಿಸಿರುವ ಸಾಧನೆ ಗಣನೀಯ.

ಸಮರ ಭೂಮಿಗೂ ಎಂಟ್ರಿ ಕೊಟ್ಟಿರುವ ಧೀರೆ!

ಆರ್ಥಿಕ, ರಾಜಕೀಯ, ರಕ್ಷಣೆ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ. ಪುರುಷರಂತೆ ತಾವೇನೂ ಕಡ್ಮೆ ಇಲ್ಲ ಎಂಬಂತೆ ನಾರಿಯರು ಕೂಡ ಕೂಡ ಇಂದು ಎಲ್ಲಾ ರಂಗದಲ್ಲೂ ಛಾಪು ಮೂಡಿಸಿದ್ದಾರೆ. ಮಹಿಳೆ ಇಲ್ಲದ ಜಗತ್ತು ಏನು ನಡೆಯದು ಎಂಬಂತೆ ದೇಶದ ರಕ್ಷಣೆಗೆ ಧೀರೆ ಧೈರ್ಯದಿಂದ ನಿಂತಿದ್ದಾರೆ. ಶಕ್ತಿ, ಚತುರತೆ ಹೆಣ್ಮಕ್ಕಳಿಗಿದ್ದು, ಸಮರ ಭೂಮಿಗೆ ಎಂಟ್ರಿ ಕೊಟ್ಟಿದ್ದಾರೆ.

ಆದ್ರೆ ಹೆಣ್ಮಮ್ಮಕ್ಕಳಿಗೆ ಒಂದಲ್ಲ ಒಂದು ರೀತಿಯಲ್ಲಿ ಸವಾಲುಗಳು , ಕಷ್ಟಗಳು ಎದುರಾಗ್ತಾಲೆ ಇರುತ್ತೆ. ಪುರುಷ ಪ್ರಧಾನ ಸಮಾಜ ಹೆಣ್ಣನ್ನು ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಕೊಡ್ತಾನೆ ಇರುತ್ತೆ. ಹೆಣ್ಮಕ್ಕಳಿಗೆ ಸೇನೆಯಲ್ಲಿ ಅವಕಾಶ ಕಲ್ಪಿಸಿರುವ ಕೆಲವು ಕೆಲ ದೇಶಗಳ ಪೈಕಿ ದೇಶಗಳಲ್ಲಿ ಉಕ್ರೇನ್ ಕೂಡ ಒಂದು. ಉಕ್ರೇನ್ ನಾರಿಯರು ಯುದ್ಧ ಭೂಮಿಯಲ್ಲೂ ಶತ್ರುಗಳ ರುಂಡ ಚೆಂಡಾಡಲು ತಯಾರಾಗಿ ನಿಂತ್ತಿದ್ದಾರೆ. ಆದ್ರೆ ಇದೀಗ ಉಕ್ರೇನ್ ಸರ್ಕಾರ ಅದೊಂದು ಆದೇಶ ಹೊರಡಿಸಿದ್ದು, ಸೇನೆಯಲ್ಲಿರುವ ಮಹಿಳೆಯರ ಕಣ್ಣು ಕೆಂಪಾಗುವಂತೆ ಮಾಡಿದೆ.

ಉಕ್ರೇನ್ ಸೇನೆಯಲ್ಲೂ ಶುರುವಾಯ್ತಾ ಲಿಂಗ ತಾರತಮ್ಯ?
ಉಕ್ರೇನ್ ಸರ್ಕಾರ ಮಹಿಳೆಯರಿಗೆ ಹಾಕಿದ ನಿರ್ಬಂಧ ಏನು?

ಕಲರ್ ಫುಲ್ ಹೈ ಹೀಲ್ಸ್ ಧರಿಸುವುದು ಮಹಿಳೆಯರೇ ಇಷ್ಟವೇ. ಹೈ ಹೀಲ್ಸ್ ಹಾಕಿ ನಡೆಯುವ ಭಂಗಿಯೇ ಬೇರೆ. ಫ್ಯಾಶನ್ ಶೋಗಳಲ್ಲಿ ಕೂಡ ಹೈ ಹೀಲ್ಸ್ ಧರಿಸಿಯೇ ಸುಂದರಿಯರು ಕಲರ್ ಫುಲ್ ಲೈಟ್ ನ ನಡುವೆ ಹೆಜ್ಜೆ ಮೇಲೆ ಹೆಜ್ಜೆ ಹಾಕ್ತಾರೆ. ಇವುಗಳನ್ನು ಸ್ಟೇಜ್ ಮೇಲೆ ನೋಡಲಷ್ಟೇ ರೋಚಕ. ಅದ್ರೆ ಈ ಹೈ ಹೀಲ್ಸ್ ಹಾಕಿ ನಡೆಯುವ ವೇಳೆ ಎದುರಾಗುವ ಸಮಸ್ಯೆಗಳು ಮಾತ್ರ ನಿಜಕ್ಕೂ ಭಯಾನಕ.
ಹೈ ಹೀಲ್ಸ್ ತೊಟ್ಟು ಜಾಸ್ತಿ ಹೊತ್ತು ನಡೆಯಕ್ಕಾಗಲ್ಲ. ಇದ್ರಿಂದ ಕಾಲಿನಲ್ಲಿ ಬೆರಳುಗಳು ಮಾತ್ರವಲ್ಲ, ಕಾಲಿನ ಗಂಟಲುಗಳ ನಡುವೆ ನೋವು ಕಾಣಿಸಿಕೊಳ್ಳುತ್ತೆ. ಪಾದವನ್ನು ಅಂಕುಡೊಂಕಾಗಿ ಇಟ್ಟುಕೊಳ್ಳುವಂತೆ ಮಾಡುವ ಕಾರಣ ಹೈ ಹೀಲ್ಸ್ ಬೆರಳುಗಳಿಗೆ ರಕ್ತ ಚಲನೆಯಾಗಲು ಕೂಡ ತೊಡಕು ಉಂಟು ಮಾಡುತ್ತೆ. ಬೆನ್ನು ನೋವು ಸೇರಿದಂತೆ ಹಲವು ಸಮಸ್ಯೆಗಳು ಹುಟ್ಟಿ ಹಾಕಲು ಕೂಡ ಕಾರಣವಾಗುತ್ತೆ. ಆದ್ರೆ ಇದೀಗ ಹೀಗೆ ಹಲವು ಸಮಸ್ಯೆಗಳನ್ನು ಸೃಷ್ಟಿ ಮಾಡುವ ಈ ಹೈ ಹೀಲ್ಸ್ ಗಳನ್ನ ಇದೀಗ ಕಡ್ಡಾಯವಾಗಿ ಧರಿಸಲೇಬೇಕಾದ ಅನಿವಾರ್ಯತೆ ಉಕ್ರೇನ್ ಮಹಿಳಾ ಸೇನಾಧಿಪತಿಗಳಿಗೆ ಎದುರಾಗಿದೆ.

ಪಥಸಂಚಲನದಲ್ಲಿ ಹೈ ಹೀಲ್ಸ್ ಕಡ್ಡಾಯಗೊಳಿಸಿದ ಉಕ್ರೇನ್..!
ನಾಲ್ಕು ಗಂಟೆಗಳ ಕಾಲ ಹೈ ಹೀಲ್ಸ್ ಧರಿಸಲೇಬೇಕೆಂದ ಸರ್ಕಾರ
ಹೈ ಹೀಲ್ಸ್ ಧರಿಸಲೇಬೇಕಾದ ಒತ್ತಡದಲ್ಲಿ ಸಿಲಕಿದ ಮಹಿಳೆಯರು

ಹೌದು. ಉಕ್ರೇನ್ ಸರ್ಕಾರ ಇದೀಗ ಸೇನೆಯಲ್ಲಿರುವ ಮಹಿಳೆಯರಿಗೆ ಕಡ್ಡಾಯವಾಗಿ ಹೈ ಹೀಲ್ಸ್ ಧರಿಸುವಂತೆ ಆದೇಶ ಹೊರಡಿಸಿದೆ. ಆಗಸ್ಟ್ಟ್ 24 ರಂದು ಉಕ್ರೇನ್ ನಲ್ಲಿ 30 ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ನಡೆಯಲಿದೆ. ಈ ಸ್ವಾತಂತ್ರ್ತೋತ್ಸವ ಸಂಭ್ರಮಾಚರಣೆಯಲ್ಲಿ ಸೇನೆಯಲ್ಲಿರುವ ಮಹಿಳೆಯರು ಕಡ್ಡಾಯವಾಗಿ ಹೈ ಹೀಲ್ಸ್ ಧರಿಸಿ ಪಥಸಂಚಲನದಲ್ಲಿ ಭಾಗಹಿಸುವಂತೆ ಉಕ್ರೇನ್ ಸರ್ಕಾರ ಸೂಚನೆ ನೀಡಿದೆ.

ಪಥಸಂಚಲನ ಅಂದ್ರೆ ಹೇಳ್ಬೇಕಾ ಹೇಳಿ.? ಅತ್ತ ಇತ್ತ ಕೈ ಕಾಲುಗಳನ್ನು ಚಾಚುತ್ತಾ ನಡೆಯುವ ಪಥಸಂಚಲನದಲ್ಲಿ ಭಾಗವಹಿಸುವರಿಗೆ ಕಿಂಚಿತ್ತೂ ವಿರಾಮ ಇರಲ್ಲ. ದಣಿವಾದ್ರೂ ಸತತವಾಗಿ ಯಾವುದೇ ವಿರಾಮ ಇಲ್ಲದೆ ಹೆಜ್ಜೆ ಹಾಕ್ಬೇಕು. ಸಾಮಾನ್ಯ ಶೂ ಹಾಕಿ ಈ ಪಥ ಸಂಚಲನದಲ್ಲಿ ಭಾಗವಹಿಸುವುದು ಕಷ್ಟ.. ಅಂಥದ್ರಲ್ಲಿ ಸರಿಯಾಗಿ ನಡೆಯಲೂ ಕೂಡ ಸಾಧ್ಯವಾಗದ ಇಂತಹ ಹೈ ಹೀಲ್ಸ್ ಧರಿಸಿ ಪಥಸಂಚಲನದಲ್ಲಿ ಭಾಗವಹಿಸುವವ ಸ್ಥಿತಿ ಹೇಗಿರ್ಬೇಡ ಹೇಳಿ..? ಉಕ್ರೇನ್ ಸರ್ಕಾರ ಮಾತ್ರ ಮಹಿಳೆಯರಿಗೆ ಕಡ್ಡಾಯವಾಗಿ ಹೈ ಹೀಲ್ಸ್ ಧರಿಸಿ ಸತತ ನಾಲ್ಕು ಗಂಟೆಗಳ ಕಾಲ ಹೈ ಹೀಲ್ಸ್ ಧರಿಸಿ ಭಾಗವಹಿಸುವಂತೆ ಸೂಚನೆ ನೀಡಿದೆ. ಇದು ಸಹಜವಾಗಿಯೇ ಸೇನೆಯಲ್ಲಿರುವ ಮಹಿಳೆಯರ ಕಣ್ಣು ಕೆಂಪಾಗಿಸಿದೆ.

ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಿ ಮಹಿಳೆಯರಿಗಿಲ್ವಾ ಸ್ವಾತಂತ್ರ್ಯ?
ಸ್ವಾತಂತ್ರ್ಯ ದಿನದಂದೇ ಮಹಿಳೆಯರು ಸ್ವಾತಂತ್ಯ್ರವನ್ನೇ ಕಳ್ಕೊಂಡ್ರಾ?
ಸಂಭ್ರಮಾಚರಣೆಯಂದು ಹೆಣ್ಮಕ್ಕಳ ಸ್ವಾತಂತ್ರ್ಯವನ್ನೇ ಹತ್ತಿಕ್ಕಲಾಯ್ತಾ?

ಸ್ವಾತಂತ್ರ್ಯ ಸಂಭ್ರಮಾಚರಣೆ ಎಂದಮೇಲೆ ಅಲ್ಲಿ ಎಲ್ಲದಕ್ಕೆ ಸ್ವಾತಂತ್ರ್ಯ ಇರ್ಬೇಕಲ್ವಾ? ಆದ್ರೆ ಇದೀಗ ಮಹಿಳೆಯರಿಗೆ ಸೇನೆಯಲ್ಲಿಯೇ ಸ್ವಾತಂತ್ರ್ಯ ಇಲ್ಲದಂತಾಗಿದೆ. ಉಕ್ರೇನ್ ಸರ್ಕಾರ ಸ್ವಾತಂತ್ರ್ಯ ಸಂಭ್ರಮಾಚರಣೆಯ ನೆಪದಲ್ಲಿ ಮಹಿಳೆಯರ ಸ್ವಾಂತಂತ್ರೋತ್ಸವನ್ನು ಹತ್ತಿಕ್ಕಲಾಯ್ತಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಯಾಕಂದ್ರೆ ಸ್ವಾಂತಂತ್ರ್ಯ ಸಂಭ್ರಮಾಚರಣೆಯ ವೇಳೆ ನಡೆಯುವ ಪಥಸಂಚಲನದಲ್ಲಿ ಉಕ್ರೇನ್ ಸೇನೆಯಲ್ಲಿರುವ ಮಹಿಳೆಯರು ಇದೇ ಹೈ ಹೀಲ್ಸ್ ಕಡ್ಡಾಯವಾಗಿ ಧರಿಸಬೇಕೆಂದು ಆದೇಶ ಹೊರಡಿಸಲಾಗಿದೆ.

ಉಕ್ರೇನ್ ನಲ್ಲಿ ಶುರುವಾಯ್ತು ಹೈ ಹೀಲ್ಸ್ ತರಬೇತಿ..!

ಆದೇಶದ ಬೆನ್ನಲ್ಲೇ ಸೇನೆಯಲ್ಲಿರುವ ಮಹಿಳೆಯರಿಗೆ ಹೈ ಹೀಲ್ಸ್ ಕುರಿತ ತರಬೇತಿ ನೀಡಲಾಗ್ತಿದೆ. ಹೈ ಹೀಲ್ಸ್ ಧರಿಸಿ ಪಥಸಂಚಲನದಲ್ಲಿ ಹೇಗೆ ಭಾಗಿಯಾಗ್ಬೇಕು ಎಂಬುದರ ಕುರಿತು ಟ್ರೈನಿಂಗ್ ನೀಡಲಾಗ್ತಿದೆ. ಎಷ್ಟೇ ಟ್ರೈನಿಂಗ್ ಕೊಟ್ರೂ ಪಥಸಂಚಲನದ ವೇಳೆ ಜಸ್ಟ್ ಯಾಮಾರಿದ್ರು ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವ ಮಾತುಗಳು ಕೂಡ ಕೇಳಿ ಬರ್ತಿದೆ. ಸದ್ಯ ಹೈ ಹೀಲ್ಸ್ ಟ್ರೈನಿಂಗ್ ಕೊಡುವ ಕೆಲ ಫೋಟೋಸ್ ಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡ್ತಿದೆ.

ಉಕ್ರೇನ್ ಸರ್ಕಾರದ ನಿಲುವಿಗೆ ಎದುರಾಯ್ತು ಭಾರಿ ವಿರೋಧ
ಯಾವುದೇ ಕಾರಣಕ್ಕೂ ಆದೇಶ ಹಿಂಪಡೆಯಲ್ಲವೆಂದ ಸರ್ಕಾರ?

ಸ್ವಾತಂತ್ರೋತ್ಸವದ ಪಥ ಸಂಚಲನದ ವೇಳೆ ಕಡ್ಡಾಯವಾಗಿ ಹೈ ಹೀಲ್ಸ್ ಧರಿಸಲೇಕೆಂದು ಸರ್ಕಾರದ ನಿಲುವಿಗೆ ಭಾರಿ ವಿರೋಧ ವ್ಯಕ್ತವಾಗ್ತಿದೆ. ಹೈ ಹೀಲ್ಸ್ ಕಡ್ಡಾಯಗೊಳಿಸುವ ಮೂಲಕ ಸರ್ಕಾರ ಲಿಂಗ ತಾರತಮ್ಯ ಎಸಗುತ್ತಿದೆ ಎನ್ನುವ ಮಾತುಗಳು ಕೂಡ ಕೇಳಿ ಬರ್ತಿದೆ. ಇಷ್ಟೆಲ್ಲಾ ಆರೋಪಗಳು, ವಿರೋಧಗಳು ಎದುರಾದ್ರು, ಯಾವುದೇ ಕಾರಣಕ್ಕೂ ತಾವು ಹೊರಡಿಸಿರವು ಆದೇಶವನ್ನ ಹಿಂಪಡೆಯಲ್ಲ ಎಂದು ಉಕ್ರೇನ್ ಸರ್ಕಾರ ಹೇಳಿದೆ ಎನ್ನಲಾಗಿದೆ. ಇದ್ರಿಂದ ಲಿಂಗ ಸಮಾನತೆಯ ಬಗ್ಗೆ ಎಷ್ಟೇ ಬೊಗಳೆ ಹೊಡೆದುಕೊಂಡರೂ ಇರುವ ಪುರುಷ ಕಂಗಳ ಮಧ್ಯೆ ಮಹಿಳೆ ಇನ್ನೂ ಹರಿಣಿಯಂತಿದ್ದಾಳೆ ಎಂಬುದನ್ನು ಸಾರಿದಂತಾಗಿದೆ.

ಒಟ್ಟಿನಲ್ಲಿ ಸ್ವಾವಲಂಬನೆ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಹೊರಟ ಎಷ್ಟೋ ಮಹಿಳೆಯರು ಈಗಾಗಲೇ ಕಾಲಲ್ಲಿ ಶಕ್ತಿ ಕಳೆದುಕೊಂಡವರಂತೆ ಹೈರಾಣಾಗಿದ್ದಾರೆ. ಜೀವದಲ್ಲಿ, ಬದುಕಿನಲ್ಲಿ ಹಲವು ರೋಲ್ ಗಳನ್ನು ಪ್ಲೇ ಮಾಡುವ ವನಿತೆಯರ ದುಡಿವ ಹಾದಿಯ ಮುಂದಿನ ಪಯಣ ಅದೆಷ್ಟು ಸುರಕ್ಷಿತ? ಎಂಬ ಪ್ರಶ್ನೆ ಹುಟ್ಟು ಹಾಕುವಂತಿದೆ.

ಉಕ್ರೇನ್ ಸರ್ಕಾರ ತನ್ನ ಸೇನೆಯಲ್ಲಿರುವ ಮಹಿಳೆಯರ ಮೇಲೆ ಒತ್ತಡ ಹಾಕ್ತಿದೆ. ಇವು ಮುಂದೊಂದು ದಿನ ಮಹಿಳೆಯರು ಸೇನೆಗೆ ಗುಡ್ ಬೈ ಹೇಳಲು ಕೂಡ ಕಾರಣವಾಗಬಹುದು. ಉಕ್ರೇನ್ ಸರ್ಕಾರದ ಈ ನಿಮಯ ಮಹಿಳೆಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಲ್ಲಿ ಎರಡು ಮಾತಿಲ್ಲ.

The post ಪರೇಡ್ ಮಾಡೋವಾಗ ಹೈ ಹೀಲ್ಸ್ ಹಾಕಲೇಬೇಕಂತೆ.. ಉಕ್ರೇನ್ ಮಹಿಳಾ ಆರ್ಮಿಗೆ ಇದೆಂಥಾ ಶಿಕ್ಷೆ..? appeared first on News First Kannada.

Source: newsfirstlive.com

Source link