ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಣ್ಣಾಮಲೈ ನೇಮಕ- ನಡ್ಡಾ ಆದೇಶ

ನವದೆಹಲಿ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕರ್ನಾಟಕದ ನಿವೃತ್ತ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ ಅವರನ್ನು ನೇಮಕ ಮಾಡಲಾಗಿದೆ.

ಈ ಕುರಿತು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಆದೇಶಿಸಿದ್ದು, ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರನ್ನು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ತಕ್ಷಣದಿಂದಲೇ ಈ ಆದೇಶ ಜಾರಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ನಿನ್ನೆಯಷ್ಟೇ ಕೇಂದ್ರ ಸಚಿವ ಸಂಪುಟ ಪುನಾರಚನೆ, ನೂತನ ಸಚಿವರ ಪ್ರಮಾಣವಚನ ಸ್ವೀಕಾರದ ವೇಳೆ ಅಣ್ಣಾಮಲೈ ಟ್ವಿಟ್ಟರ್‍ನಲ್ಲಿ ಟ್ರೆಂಡಿಂಗ್‍ನಲ್ಲಿದ್ದರು. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಎಲ್.ಮುರುಗನ್ ಅವರು ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಹೀಗಾಗಿ ಅಣ್ಣಾಮಲೈ ಅವರನ್ನು ತಮಿಳುನಾಡಿನ ಮುಂದಿನ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಹಲವರು ಆಗ್ರಹಿಸಿದ್ದರು. ಹೀಗಾಗಿ ನಿನ್ನೆ ಅಣ್ಣಾಮಲೈ ಟ್ರೆಂಡಿಂಗ್‍ನಲ್ಲಿದ್ದರು.

ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಅಣ್ಣಾಮಲೈ ಸೋತರೂ, ಜನಪ್ರಿಯತೆ ಪಡೆದಿದ್ದಾರೆ. ಪಕ್ಷವನ್ನು ಮುನ್ನಡೆಸುವ ನಾಯಕತ್ವ ಗುಣ ಅವರಲ್ಲಿದೆ. ಹೀಗಾಗಿ ತಮಿಳುನಾಡು ಅಧ್ಯಕ್ಷ ಸ್ಥಾನವನ್ನು ಅಣ್ಣಾಮಲೈ ಅವರಿಗೆ ನೀಡಬೇಕು ಎಂದು ಬಿಜೆಪಿ ಅಭಿಮಾನಿಗಳು ಒತ್ತಾಯಿಸಿದ್ದರು.

ತಮಿಳುನಾಡು ಬಿಜೆಪಿಯ ಮುಂದಿನ ಅಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ಅವರೇ ಸೂಕ್ತ ವ್ಯಕ್ತಿ ಎಂದು ಹಲವರು ಹೇಳಿದ್ದರು. ಇನ್ನೂ ಕೆಲವರು ಬಿ.ಎಲ್.ಸಂತೋಷ್ ಅವರೊಂದಿಗೆ ಅಣ್ಣಾಮಲೈ ಅವರು ಇರುವ ಫೋಟೋ ಹಂಚಿಕೊಂಡು ಯಂಗ್‍ಸ್ಟರ್ಸ್ ವೇಟಿಂಗ್ ಫಾರ್ ಗುಡ್ ನ್ಯೂಸ್ ಎಂದು ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಅಣ್ಣಾಮಲೈ ಅವರನ್ನು ತಮಿಳುನಾಡು ರಾಜ್ಯಾಧ್ಯಕ್ಷರನ್ನಾಗಿ ಜೆ.ಪಿ.ನಡ್ಡಾ ನೇಮಿಸಿದ್ದಾರೆ.

The post ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಣ್ಣಾಮಲೈ ನೇಮಕ- ನಡ್ಡಾ ಆದೇಶ appeared first on Public TV.

Source: publictv.in

Source link