ಜಪಾನ್​ನಲ್ಲಿ ಮೇಘಸ್ಫೋಟ; ಎದೆ ಝಲ್ಲೆನಿಸುತ್ತೆ ಪ್ರವಾಹದ ಭೀಕರತೆ

ಜಪಾನ್​ನಲ್ಲಿ ಮೇಘಸ್ಫೋಟ; ಎದೆ ಝಲ್ಲೆನಿಸುತ್ತೆ ಪ್ರವಾಹದ ಭೀಕರತೆ

ದ್ವೀಪ ರಾಷ್ಟ್ರ ಜಪಾನಿಗೆ ಜಲ ಕಂಟಕ ಎದುರಾಗಿದೆ. ಜಪಾನಿನ ಅಟಾಮಿ ಪಟ್ಟಣದಲ್ಲಿ ಆದ ದುರ್ಘಟನೆ ನೋಡಿದರಂತೂ ಬೆಚ್ಚಿ ಬೀಳಿಸುವಂತಿದೆ. ಕಳೆದ ಮೂರ್ನಾಲ್ಕು ದಿನಗಳಲ್ಲಿ ಜಪಾನಿನಲ್ಲಿ ಆದ ಅನಾಹುತ ಅಷ್ಟಿಷ್ಟಲ್ಲ. ಜಪಾನಿನಲ್ಲಾದ ಪ್ರಾಕೃತಿಕ ದುರಂತದ ಬಗ್ಗೆ ಇಲ್ಲಿದೆ ಮಾಹಿತಿ..

ಈ ದೃಶ್ಯವನ್ನು ನೋಡಿ ಎಂಥವರ ಎದೆಯಾದರೂ ಝಲ್ ಅನ್ನುತ್ತೆ. ಜನ ವಸತಿ ಪ್ರದೇಶದಲ್ಲಿ ಹೀಗೆ ಏಕಾ ಏಕಿ ಧರೆ ಕುಸಿದು ಕೊಚ್ಚಿಕೊಂಡು ಬಂದು ಬಿಟ್ಟರೆ ಇಲ್ಲಿ ವಾಸವಾಗಿರೋರು ಯಾರಾದರೂ ಬದುಕುಳಿಯಲು ಸಾಧ್ಯವಾ. ಅಬ್ಬಾ. ಎಷ್ಟೊಂದು ಭಯಾನಕವಾಗಿದೆ ನೋಡಿ. ಇಳಿಜಾರಿನಲ್ಲಿರುವ ಈ ಪ್ರದೇಶದಲ್ಲಿ ಅದೆಲ್ಲಿಂದ ಬಂತೋ ಈ ಜಲ ಪ್ರವಾಹ, ಅದೇಗೆ ಗುಡ್ಡ ಕುಸಿದು ಇಳಿಜಾರಿನಲ್ಲಿ ನುಗ್ಗಿ ಬಂತೋ ಏನೋ ಸಿಕ್ಕ ಸಿಕ್ಕ ಮನೆ ಮಾರುಗಳೆಲ್ಲ ನೆಲಸಮವಾಗಿ ಹೋಗಿವೆ.

blank

ಇಲ್ಲೇನೋ ಸ್ಫೋಟವಾದಂತೆ ಕಾಣುತ್ತಿದೆ. ಆದರೆ ಇಲ್ಲಿ ಆಗಿದ್ದು ಮೇಘ ಸ್ಫೋಟ..ಮೇಘ ಸ್ಫೋಟ ಆದ ಮೇಲೆ ತಕ್ಷಣದಲ್ಲಿ ಆಗಿದ್ದು ಭೂ ಕುಸಿತ. ಭೂಕುಸಿತದ ಜೊತೆಗೆ ವಿಪರೀತ ಮಳೆಯಿಂದಾಗಿ ನೆಲ ಕೊಚ್ಚಿ ಈ ರೀತಿ ಬಂದು ಬಿಟ್ಟರೆ ಈ ಜನವಸತಿ ಪ್ರದೇಶವೆಲ್ಲ ನಿಮಿಷಾರ್ಧದಲ್ಲಿ ಧರಾಶಾಹಿ. ಕಂಪ್ಲೀಟ್ ಆಗಿ ಎಲ್ಲವೂ ಕೊಚ್ಚಿಕೊಂಡು ಹೋಗಿ ಬಿಟ್ಟಿದೆ. ಕೆಸರಿನ ಪ್ರವಾಹದಲ್ಲಿ ಸಿಕ್ಕ ಸಿಕ್ಕ ಕಟ್ಟಡಗಳೆಲ್ಲ ಇಳಿಜಾರಿನಲ್ಲಿ ಕುಸಿದು ಬಿದ್ದು ಹೋಗಿವೆ.

ಇದು ಜಪಾನಿನ ಅಟಾಮಿ ಪಟ್ಟಣದಲ್ಲಿ ಆಗಿರುವ ದುರಂತ. ಇಲ್ಲಿಗೆ ಬಂದಿದ್ದು ಜಲಕಂಟಕ. ಈ ಜಲ ಕಂಟಕದಿಂದ ಜಪಾನಿನ ಕೆಲವು ಪ್ರದೇಶಗಳು ತತ್ತರಿಸಿ ಹೋಗಿವೆ. ಬಿರುಮಳೆಯಿಂದ ಹತ್ತಾರು ಕಿಲೋ ಮೀಟರ್ ಪ್ರದೇಶ ಜಲಾವೃತವಾಗಿ ಬಿಟ್ಟಿದೆ. ಎಲ್ಲೆಲ್ಲೂ ಕೆಸರಿನ ಪ್ರವಾಹದಿಂದಾಗಿ ರಸ್ತೆ, ಸೇತುವೆಗಳೆಲ್ಲ ಮುಚ್ಚಿ ಹೋಗಿವೆ. ಮನೆಗಳೆಲ್ಲ ಕೆಸರಿನಲ್ಲಿ ಹೂತು ಹೋಗಿವೆ. ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನಗಳೆಲ್ಲ ಕೆಸರಿನಡಿ ಸಮಾಧಿಯಾಗಿ ಬಿಟ್ಟಿವೆ.

blank

ಸುರಿದಿದ್ದು ಕೆಲವೇ ಗಂಟೆಗಳ ಕಾಲದ ಮಳೆ. ಆದರೆ ದಿಢೀರ್ ಮೇಘ ಸ್ಫೋಟ. ಇದ್ದಕ್ಕಿದ್ದಂತೆ ಬಂದ ಭಯಂಕರವಾದ ಮಳೆ. ಹೀಗಾಗಿ ಸುಮಾರು 36 ಸಾವಿರ ಜನ ವಾಸ ಮಾಡುವ ಅಟಾಮಿ ಪಟ್ಟಣದವಂತೂ ಸಂಪೂರ್ಣವಾಗಿ ನಲುಗಿ ಹೋಗಿದೆ. ರಸ್ತೆ ರಸ್ತೆಗಳಲ್ಲಿ ಕೆಸರಿನ ಪ್ರವಾಹ ನುಗ್ಗಿ ಬಂದಿದೆ. ಇಲ್ಲಿ ನೋಡಿ ,ಕೆಸರಿನ ಪ್ರವಾಹ ಈ ಕಾರನ್ನೇ ಹೇಗೆ ದೂಡಿಕೊಂಡು ಮುಂದೆ ಬರುತ್ತಿದೆ. ರಸ್ತೆ, ಕಾಲುವೆಗಳೆಲ್ಲ ಕೆಸರಿನಿಂದ ಆವೃತವಾಗಿ ಸಂಪೂರ್ಣವಾಗಿ ಇಡೀ ಪಟ್ಟಣವೇ ಕೆಸರುಮಯವಾಗಿ ಬಿಟ್ಟಿದೆ.

ಇಲ್ಲಿರುವ ಮನೆಗಳನ್ನು ನೋಡಿ. ಮೇಘ ಸ್ಫೋಟದಿಂದ ,ಗುಡ್ಡ ಕುಸಿತದಿಂದ,ಕೆಸರಿನ ಪ್ರವಾಹದಿಂದ ಸಂಪೂರ್ಣವಾಗಿ ಹಾನಿಗೊಳಗಾಗಿ ಹೋಗಿವೆ. ಅಯ್ಯೋ ಈ ದೃಶ್ಯಗಳಂತೂ ಭೀಕರವಾಗಿವೆ. ಈ ಮನೆಗಳಲ್ಲಿ ಅದೆಷ್ಟು ಜನರಿದ್ದರೋ ಇನ್ನು ಸ್ಪಷ್ಟ ಲೆಕ್ಕ ಸಿಕ್ಕಿಲ್ಲ. ಈಗ ಅಂದಾಜು ಮಾಡಲಾಗಿರುವ ಪ್ರಕಾರ ಈ ಮಳೆ ಮತ್ತು ಪ್ರವಾಹದಿಂದಾಗಿ 100ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರಂತೆ. ಇಡೀ ಪಟ್ಟಣದಲ್ಲಿ ರಕ್ಷಣಾ ಪಡೆಗಳು ಬಿರುಸಿನ ಕಾರ್ಯಾಚರಣೆ ನಡೆಸುತ್ತಿವೆ. ಆದರೆ, ಕೆಸರಿನ ಪ್ರವಾಹ ಬಂದು ಬಿಟ್ಟರೆ ಈ ಕೆಸರನ್ನು ತೆರವುಗೊಳಿಸೋಕೆ ತಿಂಗಳುಗಟ್ಟಲೇ ಬೇಕು. ಅಲ್ಲಿಯವರೆಗೆ ಕೆಸರಿನಡಿ ಹೂತು ಹೋಗಿದ್ದರೆ ಅಲ್ಲೇ ಸಮಾಧಿಯಾಗಿರೋದು ಖಚಿತ.

blank

ನಿಮಗೆ ನೆನಪಿರಬಹುದು. ಕೊಡಗಿನಲ್ಲಿ ,ಕೇರಳದಲ್ಲಿ ಏನಾಗಿತ್ತು ಅಂತ. ದೊಡ್ಡ ದೊಡ್ಡ ಗುಡ್ಡಗಳೇ ಕುಸಿದು ಹೋಗಿದ್ದವು. ಹಳ್ಳ-ತೊರೆಗಳೇ ಹರಿವಿನ ದಿಕ್ಕನ್ನೇ ಬದಲಿಸಿ ಬಿಟ್ಟಿದ್ದವು. ತೋಟ-ಮನೆಗಳೆಲ್ಲ ಗುಡ್ಡದ ಅಡಿಗೆ ಸಿಲುಕಿ ಸಮಾಧಿಯಾಗಿ ಹೋಗಿದ್ದವು. ಅಷ್ಟೇ ಯಾಕೆ ತಲಕಾವೇರಿಯಲ್ಲೂ ಇದೇ ರೀತಿ ಗುಡ್ಡ ಕುಸಿದು ಅನಾಹುತ ಸಂಭವಿಸಿತ್ತು. ಜಪಾನಿನಲ್ಲೂ ಇದೇ ರೀತಿಯ ದೃಶ್ಯಗಳು ಕಾಣಿಸ್ತಾ ಇವೆ. ನೋಡಿ ಇಡೀ ಗುಡ್ಡವೇ ಕುಸಿದಿದೆ. ಅರಣ್ಯದ ಮಧ್ಯಭಾಗದಲ್ಲಿರುವ ಭೂಮಿ ದಿಢೀರ್ ಅಂತ ಕುಸಿದು ದೊಡ್ಡ ಕಂದಕವೇ ಸೃಷ್ಟಿಯಾಗಿ ಬಿಟ್ಟಿದೆ. ಮೇಘ ಸ್ಫೋಟವಾದಾಗ ದಿಢೀರ್ ಅಂತ ವಿಪರೀತ ಮಳೆ ಸುರಿದು ಬಿಟ್ರೆ ಹೀಗೆ ಒತ್ತಡ ತಡೆದುಕೊಳ್ಳಲಾಗದೆ ಗುಡ್ಡಗಳು ಕುಸಿದು ಹೋಗುತ್ತವೆ. ಇಂತಹ ಘಟನೆಗಳು ಈಗ ವಿಶ್ವದಲೆಲ್ಲ ಸಾಮಾನ್ಯವಾಗ್ತಾ ಇದೆ. ಈಗ ಜಪಾನಿನ ಸರದಿ.

ನೋಡಿ ಇಲ್ಲಿ. ಕಿಲೋ ಮೀಟರ್ ಗಟ್ಟಲೆ ಹೊಲ ಗದ್ದೆಗಳು, ಸಮತಟ್ಟು ಪ್ರದೇಶಗಳು ಜಲಾವೃತವಾಗಿ ಬಿಟ್ಟಿವೆ. ಉತ್ತರ ಕರ್ನಾಟಕದ ಭಾಗದಲ್ಲಿ ಇದೇ ರೀತಿ ದೃಶ್ಯಗಳು ಹಿಂದೆ ಕಂಡು ಬಂದಿದ್ದವು. ಜಪಾನ್ ಈಗ ಇಂತಹ ಜಲ ಪ್ರಳಯಕ್ಕೆ ಸಿಲುಕಿಕೊಂಡಿದೆ. ಕಿಲೋ ಮೀಟರ್ ಗಟ್ಟಲೇ ಪ್ರದೇಶ ಹೀಗೆ ನೀರಿನಲ್ಲಿ ಮುಳುಗಿ ಹೋಗಿರೋದ್ರಿಂದ ಅದೆಷ್ಟೋ ಜನ-ಜಾನುವಾರುಗಳು ಕಣ್ಮರೆಯಾಗಿ ಹೋಗಿದ್ದಾರೆ. ಕೆಲವರು ಮನೆ ಮೇಲ್ಛಾವಣಿ ಮೇಲೆ ಹತ್ತಿ ನಿಂತಿದ್ದರು. ಅವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗ್ತಾ ಇದೆ. ಇನ್ನು ಮನೆ ಕಳೆದುಕೊಂಡು ಬೀದಿಯಲ್ಲಿ ನಿಂತವರಿಗೆ ಜಪಾನ್ ಸರ್ಕಾರ ತುರ್ತು ಪರಿಹಾರ ಕೇಂದ್ರಗಳಲ್ಲಿ ವಸತಿ ಸೌಕರ್ಯ ಕಲ್ಪಿಸಿದೆ.

blank

ಈ ನದಿಯ ಪ್ರವಾಹ ನೋಡಿ. ಈ ನದಿಯ ಬಿರುಸಿನ ಹರಿವಿಗೆ ಸಿಕ್ಕ ಸಿಕ್ಕಿದ್ದನ್ನೆಲ್ಲ ತನ್ನ ಒಡಲಿಗೆ ಸೇರಿಸಿಕೊಂಡು ಮುನ್ನಡೆದು ಬಿಡುತ್ತಿದೆ. ಅಕ್ಕ ಪಕ್ಕದ ಮನೆ ಮಾರುಗಳೆಲ್ಲ ನದಿ ಪಾಲಾಗುತ್ತಿವೆ. ಪ್ರವಾಹದಿಂದ ನದಿ ತೀರದ ಜನರಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ. ಆದ್ರೆ ಎಚ್ಚರಿಕೆ ಸಂದೇಶ ರವಾನಿಸುವ ಮುನ್ನವೇ ದಿಢೀರ್ ಮೇಘ ಸ್ಫೋಟದಿಂದ ಆಗಬೇಕಾದ ಅನಾಹುತ ಆಗಿ ಬಿಟ್ಟಿದೆ. ಸಾಧಾರಣ ಮಳೆಯಾಗಬಹುದು ಅನ್ನುವ ಮುನ್ಸೂಚನೆ ಇತ್ತು. ಆದರೆ,ದಿಢೀರ್ ಅಂತ ಹೀಗೆ ಮಳೆ ಅಪ್ಪಳಿಸಿ ಬಿಟ್ಟರೆ ಪ್ರವಾಹ ಉಂಟಾಗಿ ಅದರಿಂದ ಅನಾಹುತ ಆಗೋದು ಖಚಿತ. ಇದಕ್ಕೆ ಇದೇ ದೃಶ್ಯಗಳು ಸಾಕ್ಷಿ.

ಒಂದು ಕಡೆ ವಿಪರೀತ ಮಳೆ, ಅಲ್ಲೇ ಭೂ ಕುಸಿತ, ಅದರಿಂದ ಉಂಟಾಗುವ ಕೆಸರಿನ ಪ್ರವಾಹದಿಂದ ಜಪಾನ್ ತತ್ತರಿಸಿ ಹೋಗಿದೆ. ದ್ವೀಪ ರಾಷ್ಟ್ರದ ಹಲವು ಕಡೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಆದರೆ ರಸ್ತೆ,ಸೇತುವೆಗಳು,ಮನೆಗಳು ಕೊಚ್ಚಿ ಹೋಗಿದ್ದು ಅಟಾಮಿ ಪಟ್ಟಣದಲ್ಲಂತೂ ಕೆಲವು ಪ್ರದೇಶಗಳು ಗುರುತಿಸಲಾಗದ ಮಟ್ಟಿಗೆ ಮಾಯವಾಗಿ ಹೋಗಿದೆ. ರಸ್ತೆಯಲ್ಲಿ ರಾಶಿ ರಾಶಿ ಕೆಸರು, ನದಿಯಲ್ಲಿ ವಿಪರೀತ ಪ್ರವಾಹ, ಕಾಡಿನ ಮಧ್ಯೆ ಕುಸಿದ ಗುಡ್ಡಗಳು, ನೀರಿನಲ್ಲಿ ಮುಳುಗಿದ ಸಮತಟ್ಟು ಪ್ರದೇಶ, ಇದರ ನಡುವೆ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಸಾರಿಗೆ-ವಿದ್ಯುತ್ ಸಂಪರ್ಕ ಸರಿಪಡಿಸಲು ರಕ್ಷಣಾ ಪಡೆಗಳು ಅಹೋ ರಾತ್ರಿ ಶ್ರಮಿಸುತ್ತಿದ್ದಾರೆ. ಇದಕ್ಕಾಗಿ ಹೆಚ್ಚುವರಿ ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಆದರೆ, ಕಣ್ಮರೆಯಾದವರು ಅದೆಷ್ಟು ಜನರೋ, ಅದೆಷ್ಟು ವಾಹನಗಳು ಜಖಂ ಆಗಿವೆಯೋ, ಅದೆಷ್ಟು ಮನೆಗಳು ನೆಲಸಮವಾಗಿದೆಯೋ ಇನ್ನಷ್ಟೇ ಲೆಕ್ಕ ಸಿಗಬೇಕಾಗಿದೆ.

blank

The post ಜಪಾನ್​ನಲ್ಲಿ ಮೇಘಸ್ಫೋಟ; ಎದೆ ಝಲ್ಲೆನಿಸುತ್ತೆ ಪ್ರವಾಹದ ಭೀಕರತೆ appeared first on News First Kannada.

Source: newsfirstlive.com

Source link