ಅಶೋಕ್ ಪಿಎ ವಿರುದ್ಧ ದೂರು ನೀಡಿದ್ದ ಶೃಂಗೇರಿ ಸಬ್ ರಿಜಿಸ್ಟ್ರಾರ್ ಸೇವೆಯಿಂದ ವಜಾ

ಚಿಕ್ಕಮಗಳೂರು: ಸರ್ಕಾರಕ್ಕೆ ಸೇರಬೇಕಿದ್ದ ಹಣವನ್ನು ಬ್ಯಾಂಕಿಗೆ ಸಂದಾಯ ಮಾಡಿದ ಬಳಿಕ ಚಲನ್ ತಿದ್ದಿ ಸರ್ಕಾರಕ್ಕೆ 1.78 ಲಕ್ಷ ರೂ. ವಂಚನೆ ಮಾಡಿದ ಪ್ರಕರಣದಡಿ ಶೃಂಗೇರಿ ತಾಲೂಕಿನ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಅವರನ್ನು ಸರ್ಕಾರಿ ಸೇವೆಯಿಂದ ವಜಾ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಸಬ್ ರಿಜಿಸ್ಟ್ರಾರ್ ಚೆಲುವರಾಜ್, ಮಂಡ್ಯದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವಾಗ ಕರ್ತವ್ಯ ಲೋಪ ನಡೆಸಿದ ಆರೋಪದಡಿ ಅವರ ವಿರುದ್ಧ ದೂರು ದಾಖಲಾಗಿತ್ತು. ಈ ಹಿನ್ನೆಲೆ ಚೆಲುವರಾಜ್ ಅವರನ್ನ ಸರ್ಕಾರಿ ಸೇವೆಯಿಂದ ವಜಾಗೊಳಿಸಿದ ಸರ್ಕಾರ ಆದೇಶ ಹೊರಡಿಸಿದೆ. ಇದನ್ನೂ ಓದಿ: ಉತ್ತಮ ಗುಣಮಟ್ಟದಿಂದ ಸರ್ಕಾರಿ ಶಾಲೆಗೆ ದಾಖಲಾತಿ ಹೆಚ್ಚು: ಸುರೇಶ್ ಕುಮಾರ್

ಮಂಡ್ಯ ಉಪನೋಂದಣಿ ಕಚೇರಿಯಲ್ಲಿ 2005-06ರಲ್ಲಿ ಸೇವೆಯಲ್ಲಿರುವಾಗ ಕರ್ತವ್ಯ ಲೋಪದ ದೂರು ದಾಖಲಾಗಿತ್ತು. ವಿಚಾರಣಾ ವರದಿಯಲ್ಲಿ ಆರೋಪ ಸಾಬೀತಾಗಿರುವ ಹಿನ್ನೆಲೆ ಮತ್ತು ಅದಕ್ಕೆ ಅವರು ಕೊಟ್ಟಿರುವ ಉತ್ತರ ತೃಪ್ತಿಕರವಾಗಿಲ್ಲದ ಕಾರಣ ಅವರನ್ನ ಸೇವೆಯಿಂದ ವಜಾ ಮಾಡಿ ಸರ್ಕಾರ ಆದೇಶ ನೀಡಿದೆ.

ಆರೋಪಿ ಅಧಿಕಾರಿಯ ವಾರ್ಷಿಕ ವೇತನ ಬಡ್ತಿ ಕಡಿತಗೊಳಿಸಲು ಇಲಾಖೆ ಸೂಚಿಸಿದ್ದು, ಶಿಸ್ತು ಪ್ರಾಧಿಕಾರಿ ಹಾಗೂ ನೋಂದಣಿ ಮಹಾಪರಿವೀಕ್ಷಕ ಮತ್ತು ಮುದ್ರಾಂಕಗಳ ಆಯುಕ್ತ ಕೆ.ಪಿ.ಮೋಹನರಾಜ್ ಆದೇಶಿಸಿದ್ದಾರೆ. ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಇಲಾಖೆಯ ಆಯುಕ್ತರ ಕಛೇರಿ ಆದೇಶ ಪತ್ರದಂತೆ ಚಲುವರಾಜು ಸೇರಿದಂತೆ ಮಂಡ್ಯ ಉಪ ನೊಂದಣಾಧಿಕಾರಿ ಕಛೇರಿಗೆ ಸೇರಿದ 4 ಮಂದಿ ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ.

ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಕಂದಾಯ ಸಚಿವ ಆರ್.ಅಶೋಕ್ ವಿರುದ್ಧ ಶೃಂಗೇರಿ ಠಾಣೆಯಲ್ಲಿ ಇದೇ ಜನವರಿಯಲ್ಲಿ ದೂರು ನೀಡಿದ್ದರು. ಆ ದೂರಿನ ಸಚಿವ ಆರ್.ಅಶೋಕ್ ಪಿ.ಎ. ವಿರುದ್ಧ ದೂರು ದಾಖಲಾಗಿ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಲಂಚಕ್ಕೆ ಬೇಡಿಕೆ ಆರೋಪ – ಆರ್ ಅಶೋಕ್ ಪಿಎ ವಿರುದ್ಧ ಎಫ್‍ಐಆರ್

The post ಅಶೋಕ್ ಪಿಎ ವಿರುದ್ಧ ದೂರು ನೀಡಿದ್ದ ಶೃಂಗೇರಿ ಸಬ್ ರಿಜಿಸ್ಟ್ರಾರ್ ಸೇವೆಯಿಂದ ವಜಾ appeared first on Public TV.

Source: publictv.in

Source link