ಉತ್ತಮ ಗುಣಮಟ್ಟದಿಂದ ಸರ್ಕಾರಿ ಶಾಲೆಗೆ ದಾಖಲಾತಿ ಹೆಚ್ಚು: ಸುರೇಶ್ ಕುಮಾರ್

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ನೀಡುತ್ತಿರುವ ಉತ್ತಮ ಗುಣಮಟ್ಟದ ಶಿಕ್ಷಣದಿಂದ ಈ ವರ್ಷ ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣ ಹೆಚ್ಚಾಗಿದೆ. ಬೆಂಗಳೂರಿನಂತಹ ಮಹಾನಗರದಲ್ಲೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳು ಮುಖ ಮಾಡುತ್ತಿರುವುದು ಸರ್ಕಾರಿ ಶಾಲೆಗಳ ಮೇಲೆ ಸಾರ್ವಜನಿಕರು ಭರವಸೆ ಹೊಂದಿರುವುದರ ದ್ಯೋತಕವಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.

ಇಂದು ಬೆಂಗಳೂರು ನಗರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ನೆಲಗದೇರನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಶಾಲಾ ದಾಖಲಾತಿ ಪ್ರಕ್ರಿಯೆಯನ್ನು ಸಚಿವರು ಪರಿಶೀಲಿಸಿದರು. ಅತ್ಯಂತ ಗುಣಮಟ್ಟದ ಶಿಕ್ಷಣ ನೀಡುವ ನೆಲಗದೇರನಹಳ್ಳಿ ಸರ್ಕಾರಿ ಶಾಲೆಯಲ್ಲಿ ದಾಖಲಾತಿಗಾಗಿ ಹಲವು ಕಡೆಗಳಿಂದ ಬೇಡಿಕೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿದ ಸಚಿವರು, ಶಾಲಾ ದಾಖಲಾತಿಗಾಗಿ ಸರದಿ ಸಾಲಿನಲ್ಲಿ ನಿಂತಿದ್ದ ಮಕ್ಕಳು ಮತ್ತು ಪೋಷಕರನ್ನು ಮಾತನಾಡಿಸಿದರು. ಇದನ್ನೂ ಓದಿ: ರಾಷ್ಟ್ರಮಟ್ಟಕ್ಕೆ ಕಾಫಿನಾಡಿನ ಎರಡು ಸರ್ಕಾರಿ ಶಾಲೆಗಳು ಆಯ್ಕೆ

ಶಾಲೆಯಲ್ಲಿ ದಾಖಲಾತಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಲೆಯ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು ಸದಸ್ಯರು ಮತ್ತು ಶಿಕ್ಷಕರೊಂದಿಗೆ ಸಚಿವರು ಚರ್ಚೆ ನಡೆಸಿದರು. ಮೊದಲೆಲ್ಲಾ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಹೊಂದಲು ಪ್ರಭಾವ ತರುವುದನ್ನು ಕಾಣುತ್ತಿದ್ದೆವು. ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಿರುವುದರಿಂದ ಈಗ ಇಂತಹ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪಡೆಯಲು ಹಲವಾರು ಮಂದಿ ಶಾಸಕರು ಮತ್ತು ಸಚಿವರ ಮೂಲಕ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ರಾಜ್ಯದೆಲ್ಲೆಡೆ ದಾಖಲಾತಿ ಪ್ರಕ್ರಿಯೆ ಮುಂದುವರಿದಿದ್ದು, ಚಂದನಾ ದೂರದರ್ಶನ ವಾಹಿನಿಯಲ್ಲಿ ಸಂವೇದ ಪಾಠಗಳು ಆರಂಭವಾಗಿವೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಗಣನೀಯ ಸಂಖ್ಯೆಯಲ್ಲಿ ಹೆಚ್ಚಾಗಿರುವುದು ಕಂಡು ಬರುತ್ತಿದೆ ಎಂದು ಮಾಹಿತಿ ಹಂಚಿಕೊಂಡರು.

The post ಉತ್ತಮ ಗುಣಮಟ್ಟದಿಂದ ಸರ್ಕಾರಿ ಶಾಲೆಗೆ ದಾಖಲಾತಿ ಹೆಚ್ಚು: ಸುರೇಶ್ ಕುಮಾರ್ appeared first on Public TV.

Source: publictv.in

Source link