ಲಾಲು ಪುತ್ರನಿಂದ ಅಗರಬತ್ತಿ ಬ್ಯುಸಿನೆಸ್​!​ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

ಲಾಲು ಪುತ್ರನಿಂದ ಅಗರಬತ್ತಿ ಬ್ಯುಸಿನೆಸ್​!​ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​

SSLC ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಸಚಿವರ ಸಂವಾದ
ಜುಲೈ 19 ಮತ್ತು 22ರಂದು ಎಸ್​ಎಸ್​ಎಲ್​ಸಿ ಪರೀಕ್ಷೆಗಳು ನಡೆಯಲಿವೆ. ಈ ಹಿನ್ನೆಲೆ ಇಂದು ಎಸ್​ಎಸ್​ಎಲ್​ಸಿ ಪರೀಕ್ಷಾರ್ಥಿಗಳೊಂದಿಗೆ ಶಿಕ್ಷಣ ಸಚಿವರು ಸಂವಾದ ಕಾರ್ಯಕ್ರಮ ನಡೆಸಲಿದ್ದಾರೆ. ಬನ್ನಿ ವಿದ್ಯಾರ್ಥಿಗಳೇ SSLC ಪರೀಕ್ಷೆಯನ್ನ ಆತ್ಮಸ್ಥೈರ್ಯದಿಂದ ಬರೆಯೋಣ ಎಂಬ ಶೀರ್ಷಿಕೆ ಅಡಿ ಸಂವಾದ ಕಾರ್ಯಕ್ರಮ ನಡೆಯಲಿದೆ. ಇವತ್ತು ಬೆಳಗ್ಗೆ 11ರಿಂದ ಮಧ್ಯಾಹ್ನ 1.30ರವರೆಗೆ ಕಾರ್ಯಕ್ರಮ ನನಡೆಯಲಿದೆ. ಇನ್ನು ಈ ಸಂವಾದ ಕಾರ್ಯಕ್ರಮ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ನಡೆಯಲಿದ್ದು, ಆಯಾ ಜಿಲ್ಲೆಯ ಡಯಟ್ ಮತ್ತು ಡಿ.ಡಿ.ಪಿ.ಐ ಅಧಿಕಾರಿಗಳು ಭಾಗಿ ಆಗಲಿದ್ದಾರೆ.

ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ ವಿಟಿಯು
ಕೊರೊನಾ 2ನೇ ಅಲೆಯ ಹಿನ್ನೆಲೆ ಮುಂದೂಡಲಾಗಿದ್ದ ಸೆಮಿಸ್ಟರ್​​ ಪರೀಕ್ಷೆಗಳನ್ನ ನಡೆಸೋಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಸಿದ್ಧತೆ ನಡೆಸಿದೆ. UG & PG ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಪ್ರಾರಂಭ ದಿನಾಂಕವನ್ನು ವಿಟಿಯು ಪ್ರಕಟ ಮಾಡಿದೆ. ಜುಲೈ 26 ರಿಂದ ವಿಟಿಯು ಪರೀಕ್ಷೆಗಳು ಆರಂಭವಾಗಲಿದ್ದು, ಜುಲೈ 19 ರಿಂದಲೇ ವಿದ್ಯಾರ್ಥಿಗಳಿಗೆ ಸ್ಟಡಿ ಹಾಲಿಡೇಸ್​ ನೀಡಲಾಗಿದೆ. ಇನ್ನು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆನ್​ಲೈನ್ ಮೂಲಕ ಅಥವಾ ಸಿಡಿ ಮೂಲಕ ಪ್ರಾಜೆಕ್ಟ್ & ಸೆಮಿನಾರ್ ಸಲ್ಲಿಸಲು ಅವಕಾಶ ನೀಡಲಾಗಿದೆ.

ಕೊಪ್ಪಳದಲ್ಲಿ ಕಳೆಗಟ್ಟಿದ ಮಣ್ಣೆತ್ತಿನ ಅಮಾವಾಸ್ಯೆ
ಕಳೆದ ವರ್ಷ ಕೊರೊನಾ ಲಾಕ್​ಡ್​ನಿಂದ ಕಳೆ ಕಳೆದುಕೊಂಡಿದ್ದ ಮಣ್ಣೆತ್ತಿನ ಅಮಾವಾಸ್ಯೆ ಈ ಬಾರಿ ಜೋರಾಗಿದೆ. ಅದರಲ್ಲೂ ಕೊಪ್ಪಳದ ಗ್ರಾಮೀಣ ಭಾಗದ ಜನರು ಪ್ರತಿ ಹಬ್ಬವನ್ನು ಸಂಭ್ರಮಿಸುತ್ತಾರೆ. ಆರ್ಥಿಕ ಸಮಸ್ಯೆಯಿಂದ ಇತ್ತೀಚೆಗೆ ಹಬ್ಬಗಳಲ್ಲಿ ಕಳೆ ಇಲ್ಲದಂತ್ತಾಗಿತ್ತು. ಇದೀಗ ಕೊಪ್ಪಳದಲ್ಲಿ‌ ಮಣ್ಣೆತ್ತು ಮಾರುವ ಕುಂಬಾರಿಕೆ ಕುಟುಂಬಗಳು ಎತ್ತುಗಳಿಗೆ ಆಧುನಿಕ್ ಟಚ್ ನೀಡಿದ್ದು, ಜನರನ್ನು ಆಕರ್ಷಿಸುತ್ತಿದ್ದಾರೆ. ಆಧುನಿಕತೆಗೆ ತಕ್ಕಂತೆ ಶಾಪ್​ಗಳಲ್ಲಿ ಅಲಂಕಾರಿಕವಾಗಿ ಇಡಲಾಗಿದ್ದು, ಇದರಿಂದ ಆಕರ್ಷಿತರಾದ ಜನರು ಮಣ್ಣೆತ್ತುಗಳನ್ನ ಮುಗಿಬಿದ್ದು ಖರೀದಿಸುತ್ತಿದ್ದಾರೆ. ಈ ಬಾರಿ ಮಣ್ಣೆತ್ತಿನ ಅಮಾವಾಸ್ಯೆ ಕೊಪ್ಪಳದಲ್ಲಿ ಮತ್ತೆ ಕಳೆಗಟ್ಟಿದೆ.

ಎಮ್ಮೆಗಳಿಂದ ಅಕ್ರಮ ಮದ್ಯ ಮಾರಾಟ ಜಾಲ ಪತ್ತೆ
ಗುಜರಾತ್​​ನ ಅಹಮದಾಬಾದ್​​ನಲ್ಲಿ ಅಕ್ರಮ ಮದ್ಯ ಮಾರಾಟ ಸಂಬಂಧ ಮೂವರು ರೈತರನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ರೈತರ ಬಳಿಯಲ್ಲಿದ್ದ ಎಮ್ಮೆಗಳ ಮೂಲಕ ಈ ಪ್ರಕರಣ ಬಯಲಿಗೆ ಬಂದಿದೆ. ಬಂಧಿತ ಆರೋಪಿಗಳು ಮದ್ಯದ ಬಾಟಲಿಗಳನ್ನು ನೀರಿನ ತೊಟ್ಟಿಯಲ್ಲಿ ಅಡಗಿಸಿಟ್ಟಿದ್ದರು ಎನ್ನಲಾಗಿದ್ದು, ಕೆಲ ಬಾಟಲ್​​ಗಳು ಒಡೆದು ನೀರಿನಲ್ಲಿ ಮಿಕ್ಸ್ ಆಗಿವೆ. ಈ ನೀರನ್ನು ಕುಡಿದ ಎಮ್ಮೆಗಳು ವಿಚಿತ್ರವಾಗಿ ವರ್ತಿಸಿದ್ದಾವೆ. ಈ ಹಿನ್ನೆಲೆ ಪಶು ವೈದ್ಯರನ್ನು ಕರೆಸಿ ತೋರಿಸಿದಾಗ ಎಮ್ಮೆಗಳು ಮದ್ಯ ಸೇವಿಸಿರುವುದು ದೃಢವಾಗಿದೆ. ಇನ್ನು ಸ್ಥಳಕ್ಕೆ ಆಗಮಿಸಿರುವ ಪೊಲೀಸರು 32 ಸಾವಿರ ರೂಪಾಯಿ ಮೌಲ್ಯದ 100 ಬಾಟಲಿಗಳ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಸವಾರರೇ, ದಾಖಲೆ ಕಾಪಿ ಇಲ್ಲ ಅಂತ ಚಿಂತೆ ಪಡಬೇಡಿ
ವಾಹನ ಹಾಗೂ ಚಾಲಕರಿಗೆ ಸಂಬಂಧಪಟ್ಟ ದಾಖಲೆಗಳ ಬದಲಿಗೆ ಡಿಜಿ ಲಾಕರ್ ಹಾಗೂ ಎಂ.ಪರಿ ವಾಹನ್ ಆ್ಯಪ್ ಮೂಲಕ ದಾಖಲೆಗಳನ್ನು ಪೊಲೀಸರಿಗೆ ತೋರಿಸಬಹುದು. ಹಾಗಂತ ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ. ಆರ್‌.ಸಿ, ಡಿ.ಎಲ್, ವಿಮೆ, ವಾಹನ ಸಾಮರ್ಥ್ಯ ಪ್ರಮಾಣ ಪತ್ರ, ವಾಯು ಮಾಲಿನ್ಯ ತಪಾಸಣಾ ಪತ್ರ ಸೇರಿದಂತೆ ಹಲವು ದಾಖಲೆಗಳನ್ನು ವಿದ್ಯುನ್ಮಾನ ರೂಪದಲ್ಲಿ ಹಾಜರುಪಡಿಸಲು ಸೂಚಿಸಲಾಗಿದೆ. ಜನರಿಗೆ ಅವಕಾಶ ನೀಡಿ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಸಾರ್ವಜನಿಕರು ಆ್ಯಪ್‌ ಇನ್‌ಸ್ಟಾಲ್ ಮಾಡಿಕೊಂಡು ದಾಖಲೆಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಜಲಪಾತದ ಬಳಿ ಜನಜಂಗುಳಿ, ನಿಯಮ ಪಾಲನೆಗೆ ನಿರ್ಲಕ್ಷ್ಯ
ಕೊರೊನಾ 3ನೇ ಅಲೆಯ ಎಚ್ಚರಿಕೆಯ ಮಧ್ಯೆಯೇ ಸರ್ಕಾರಗಳೂ ಲಾಕ್​​​​ಡೌನ್​​ಗಳನ್ನ ಸಡಿಲಿಕೆ ಮಾಡಿದೆ. ಆದರೆ ಜನ ಮಾತ್ರ ಕೊರೊನಾ ಹೋಗೇ ಬಿಡ್ತು ಎಂಬಂತ ರೀತಿಯಲ್ಲಿ ಕೊರೊನಾ ಮಾರ್ಗಸೂಚಿಗಳನ್ನ ಉಲ್ಲಂಘಿಸಿ ಬೇಜವಾಬ್ದಾರಿ ಮೆರೀತಿದ್ದಾರೆ. ಉತ್ತರಾಖಂಡ್​​ನ ಮುಸ್ಸೋರಿ ಬಳಿಯ ಕೆಂಪ್ಟಿ ಜಲಪಾತದಲ್ಲಿ ನೂರಾರು ಮಂದಿ ಪ್ರವಾಸಿಗರು ಕೊರೊನಾ ರೂಲ್ಸ್​ ಬ್ರೇಕ್ ಮಾಡಿದ್ದಾರೆ. ನಿಯಮ ಉಲ್ಲಂಘಿಸಿದ್ದಲ್ಲದೇ ಮಾಸ್ಕ್​, ಅಂತರ ಕಾಪಾಡದೇ ಮೋಜು ಮಸ್ತಿಯಲ್ಲಿ ತೊಡಗಿದ್ದ ವೀಡಿಯೋ ಹರಿದಾಡ್ತಿದೆ. ಈ ಬಗ್ಗೆ ಸ್ಥಳೀಯ ಜಿಲ್ಲಾಡಳಿತದ ವಿರುದ್ಧ ಸಾಕಷ್ಟು ಟೀಕೆಗಳೂ ಕೇಳಿಬಂದಿತ್ತು. ಈ ಹಿನ್ನೆಲೆ ಅಲ್ಲಿನ ಜಿಲ್ಲಾ ಮ್ಯಾಜಿಸ್ಟ್ರೇಟ್ ಈಗ ಕ್ರಮ ಕೈಗೊಂಡಿದ್ದಾರೆ. ಜಲಪಾತದ ಬಳಿ ಪ್ರತಿ 30 ನಿಮಿಷಕ್ಕೆ 50 ಮಂದಿ ಪ್ರವಾಸಿಗರಿಗೆ ಮಾತ್ರ ವೀಕ್ಷಣೆಗೆ ಅವಕಾಶ ನೀಡಿ ಆದೇಶ ಹೊರಡಿಸಲಾಗಿದೆ.

ಲಾಲು ಪುತ್ರನಿಂದ ಅಗರಬತ್ತಿ ಬ್ಯುಸಿನೆಸ್​
ಸದಾ ಒಂದಿಲ್ಲೊಂದು ಸುದ್ದಿಗಳಿಗೆ ಗ್ರಾಸವಾಗೋ ತೇಜ್ ಪ್ರತಾಪ್ ಸಿಂಗ್ ಹೊಸ ಬ್ಯುಸಿನೆಸ್​ ಶುರು ಮಾಡಿದ್ದಾರೆ. ಎಲ್​ಆರ್​​ ಬ್ರ್ಯಾಂಡ್ ಹೆಸರಿನಲ್ಲಿ ತೇಜ್​​ ಪ್ರತಾಪ್ ಸಿಂಗ್​ ಅಗರಬತ್ತಿ ವ್ಯವಹಾರ ನಡೆಸುತ್ತಿದ್ದಾರೆ. ಆರ್​ಜೆಡಿ ಬೆಂಬಲಿಗರು ಇದಕ್ಕೆ ಲಾಲು ಪ್ರಸಾದ್ ಯಾದವ್ ಹಾಗೂ ರಾಬ್ರಿ ದೇವಿ ಹೆಸರಿನಲ್ಲಿ ಅಗರಬತ್ತಿ ವ್ಯವಹಾರ ನಡೆಸುತ್ತಿದ್ದಾರೆ ಎಂದು ಹೇಳ್ತಿದ್ದಾರೆ. ಆದ್ರೆ ನಿಜವಾಗಯೂ ಎಲ್​​ಆರ್​ ಅಂದ್ರೆ ‘ಲಾಂಗೆಸ್ಟ್​​ ಹಾಗೂ ರಿಚ್ಚರ್’ ಅಂತ ತೇಜ್​​ ಹೇಳ್ತಿದ್ದಾರೆ. ಬಿಹಾರದ ಪಟ್ನಾದಲ್ಲಿ ಅಗರಬತ್ತಿ ಶೋ ರೂಂ ಓಪನ್ ಮಾಡಿದ್ದಾರೆ. ಸದ್ಯ ತೇಜ್​ ಪ್ರತಾಪ್​ಸಿಂಗ್ ಅವರ ಅಗರಬತ್ತಿ ಹೊಸ ಬ್ಯುಸಿನೆಸ್​ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಜುಲೈನಲ್ಲಿ ರಾಜ್ಯಗಳಿಗೆ 12 ಕೋಟಿಗೂ ಹೆಚ್ಚು ಡೋಸ್ ಲಸಿಕೆ
ಜುಲೈ ತಿಂಗಳಲ್ಲಿ 12 ಕೋಟಿಗೂ ಹೆಚ್ಚು ಡೋಸ್​ಗಳ ಲಸಿಕೆ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸಿಗಲಿದೆ ಅಂತ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಸದ್ಯ ದೇಶಾದ್ಯಂತ ವ್ಯಾಕ್ಸಿನೇಷನ್ ಡ್ರೈವ್ ನಡೆಯುತ್ತಿದ್ದು ಲಸಿಕೆಗೆ ಡಿಮ್ಯಾಂಡ್ ಹೆಚ್ಚಾಗಿದೆ. ಆದ್ರೆ, ಅಗತ್ಯವಿರುಷ್ಟು ಡೋಸ್ ಲಸಿಕೆ ಲಭ್ಯವಿಲ್ಲ ಅನ್ನೋ ಆರೋಪಗಳು ದೇಶದ ವಿವಿಧ ಭಾಗಗಳಿಂದ ಕೇಳಿ ಬರ್ತಿದೆ. ಆದ್ರೆ ಈ ಆರೋಪವನ್ನ ತಳ್ಳಿ ಹಾಕಿರುವ ಆರೋಗ್ಯ ಸಚಿವಾಲಯ, ರಾಜ್ಯಗಳಿಗೆ ಮೊದಲೇ ಎಷ್ಟು ಲಸಿಕೆಯನ್ನ ನೀಡಲಾಗುತ್ತೆ ಅಂತ ಮಾಹಿತಿಯನ್ನ ಕೊಟ್ಟಿರುತ್ತೇವೆ. ಖಾಸಗಿ ಆಸ್ಪತ್ರೆಗಳಿಗೆ ನೀಡುವ ಲಸಿಕೆ ಪ್ರಮಾಣವೂ ಇದರಲ್ಲಿರುತ್ತೆ ಅಂತ ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.

ನೇಸಲ್ ಸ್ಪ್ರೇ 3ನೇ ಹಂತದ ಟ್ರಯಲ್​ಗೆ ಸಿದ್ಧತೆ
ಗ್ಲೆನ್ ಮಾರ್ಕ್ ಫಾರ್ಮಾಸುಟಿಕಲ್ಸ್ ಸಂಸ್ಥೆ, ಕೊರೊನಾ ವಿರುದ್ಧ ಪರಿಣಾಮಕಾರಿ ಅಂತ ಹೇಳಲಾಗುತ್ತಿರುವ ಮೂಗಿನ ಸ್ಪ್ರೇಯನ್ನ ಮೂರನೇ ಹಂತದ ಪ್ರಯೋಗಕ್ಕೆ ಒಳಪಡಿಸಲಿದೆ. ಕಳೆದ ವಾರವಷ್ಟೇ ಡಿಸಿಜಿಐನಿಂದ ತುರ್ತು ಬಳಕೆಗೆ ನೇಸಲ್ ಸ್ಪ್ರೇ ಆಮದು ಮಾಡಿಕೊಳ್ಳಲು ಗ್ಲೆನ್ ಮಾರ್ಕ್ ಫಾರ್ಮಾಸುಟಿಕಲ್ಸ್ ಅನುಮತಿಯನ್ನ ಕೋರಿತ್ತು. ಆದ್ರೆ ಡ್ರಗ್ ರೆಗ್ಯೂಲೇಟರ್ ಅಡಿಯಲ್ಲಿ ಬರುವ ಸಬ್ಜೆಕ್ಟ್ ಎಕ್ಸ್​ಪರ್ಟ್ ಸಮಿತಿ 3ನೇ ಹಂತದ ಪ್ರಯೋಗವನ್ನ ನಡೆಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಈಗ ಮೂರನೇ ಹಂತದ ಟ್ರಯಲ್ಸ್​​ ಗ್ಲೆನ್ ಮಾರ್ಕ್ ಸಿದ್ಧತೆ ಮಾಡಿಕೊಳ್ತಿದೆ.

ಶ್ರೀಲಂಕಾ ಬ್ಯಾಟಿಂಗ್ ಕೋಚ್​​​ಗೆ ಕೊರೊನಾ ಪಾಸಿಟಿವ್​
ಜುಲೈ 13 ರಿಂದ ನಡೆಯಲಿರೋ ಶ್ರೀಲಂಕಾ – ಭಾರತ ಕ್ರಿಕೆಟ್ ಸರಣಿಗೆ ಕೊರೊನಾ ಕಾಟ ಶುರುವಾಗಿದೆ. ಮೊದಲ ಟಿ-20 ಪಂದ್ಯ ಆರಂಭಕ್ಕೂ 5 ದಿನಗಳ ಮೊದಲೇ ಶ್ರೀಲಂಕಾ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲಾವರ್​ಗೆ ಕೊರೊನಾ ಪಾಸಿಟಿವ್ ಬಂದಿದೆ. ಇಂಗ್ಲೆಂಡ್ ಸರಣಿ ಮುಗಿಸಿಕೊಂಡು ಬಂದ ಕೋಚ್​​ ಗ್ರ್ಯಾಂಟ್​​​​​​ ಫ್ಲಾವರ್​​ಗೆ ಆರ್​​ಟಿಪಿಸಿಆರ್​ ಟೆಸ್ಟ್​ ವೇಳೆ ಕೊರೊನಾ ಸಿಮ್ಟಮ್ಸ್​ ಇರೋದು ದೃಢಪಟ್ಟಿದೆ. ಸದ್ಯ ಕೊರೊನಾ ಸೋಂಕು ಇರೋದ್ರಿಂದ ಕೋಚ್​ ಗ್ರ್ಯಾಂಟ್ ಕ್ವಾರೆಂಟೀನ್​ಗೆ ಒಳಗಾಗಿದ್ದಾರೆ.. ಶ್ರೀಲಂಕಾ ವಿರುದ್ಧ ಭಾರತ, 3 ಟಿ-20 ಹಾಗೂ 3 ಏಕದಿನ ಸರಣಿ ನಡೆಯಲಿದೆ.

The post ಲಾಲು ಪುತ್ರನಿಂದ ಅಗರಬತ್ತಿ ಬ್ಯುಸಿನೆಸ್​!​ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್​ appeared first on News First Kannada.

Source: newsfirstlive.com

Source link