16 ರಾಜ್ಯಗಳಲ್ಲಿ 100ರ ಗಡಿ ದಾಟಿದ ಪೆಟ್ರೋಲ್ ಬೆಲೆ; ಸದ್ಯದಲ್ಲೇ 150 ರೂಪಾಯಿಗೆ ಏರಿಕೆ?

16 ರಾಜ್ಯಗಳಲ್ಲಿ 100ರ ಗಡಿ ದಾಟಿದ ಪೆಟ್ರೋಲ್ ಬೆಲೆ; ಸದ್ಯದಲ್ಲೇ 150 ರೂಪಾಯಿಗೆ ಏರಿಕೆ?

ಪೆಟ್ರೋಲ್‌ ದರ ಈಗಾಗಲೇ 100 ರೂಪಾಯಿ ಗಟಿದಾಟಿ ಎಷ್ಟೋ ದಿನ ಆಗಿ ಹೋಯ್ತು. ಈಗಲೂ ಪ್ರತಿ ನಿತ್ಯ 7 ರಿಂದ 37 ಪೈಸೆ ಏರಿಕೆಯಾಗುತ್ತಲೇ ಇದೆ. ಹೀಗಾದ್ರೆ ಹೇಗಪ್ಪ ಜೀವನ ಅಂತ ಚಿಂತಿಸುತ್ತಿದ್ದೀರಿ. ಆದ್ರೆ, ಇಷ್ಟೇ ಅಲ್ಲ, ಇನ್ನೂ ಏರುತ್ತೆ. ಅದು ಯಾವ ಪ್ರಮಾಣದಲ್ಲಿ ಏರುತ್ತೆ ಅಂತ ಹೇಳಿದ್ರೆ ನೀವು ಬೆಚ್ಚಿ ಬೀಳ್ತೀರಿ!

ಇದನ್ನೂ ಓದಿ: ರಾಜ್ಯದಲ್ಲೂ ಶತಕ ದಾಟಿದ ಪೆಟ್ರೋಲ್ ರೇಟ್.. ತೈಲ ದರ ಏರಿಕೆಗೆ ಕಾರಣವೇನು? ಇಲ್ಲಿದೆ ಡೀಟೇಲ್ಸ್

ಕೊರೊನಾ ಲಾಕ್‌ಡೌನ್‌ ನಿರ್ಬಂಧ ಈಗ ತಾನೆ ಸಡಿಲಿಕೆಯಾಗಿದೆ. ವ್ಯಾಪಾರಕ್ಕೆ ಅಂಗಡಿಗಳು ಬಾಗಿಲು ತೆರೆದಿವೆ. ಆಫೀಸ್‌ಗಳು ಓಪನ್‌ ಆಗಿವೆ. ವಾಹನ ಸಂಚಾರವೂ ಆರಂಭವಾಗಿದೆ. ಆದರೆ ಈ ನಡುವೆ ಜನರಿಗೆ ಶಾಕ್‌ ಮೇಲೆ ಶಾಕ್‌ ನೀಡ್ತಾ ಇರೋದು ತೈಲ ದರ ಏರಿಕೆ. ಹೌದು, ಲಾಕ್‌ಡೌನ್‌ನಿಂದ ವ್ಯಾಪಾರ ಇಲ್ಲದೇ, ಕೆಲಸ ಇಲ್ಲದೇ ಸಂಕಷ್ಟ ಪಡ್ತಾ ಇರೋ ಜನರಿಗೆ ಇದೊಂದು ರೀತಿಯಲ್ಲಿ ಗಾಯದ ಮೇಲೆ ಬರೆ ಎಳೆದಂತಾಗಿ ಬಿಟ್ಟಿದೆ. ಇಷ್ಟೇ ಆದ್ರೆ ಏನೋ ಸಹಿಸಿಕೊಳ್ಳಬಹುದಿತ್ತು. ಆದ್ರೆ ಮತ್ತೊಂದು ದೊಡ್ಡ ಶಾಕಿಂಗ್‌ ಸುದ್ದಿಯನ್ನು ತಜ್ಞರು ಹೇಳ್ತಾ ಇದ್ದಾರೆ. ಅದೇನಂದ್ರೆ ಭಾರತದಲ್ಲಿ ಪೆಟ್ರೋಲ್‌, ಡೀಸೆಲ್‌ ದರ 150 ರೂಪಾಯಿ ಗಡಿ ದಾಟುತ್ತೆ ಅನ್ನೋದು. ಹೌದು, ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಅಂತಹ ಎಲ್ಲಾ ಸಾಧ್ಯತೆಯೂ ಇದೆ. ಅದಕ್ಕೆ ಬಲವಾದ ಕಾರಣವೂ ಇದೆ.

ಮೊದಲ ಬಾರಿಗೆ ಪೆಟ್ರೋಲ್‌ 100ರ ಗಡಿ ದಾಟ್ಟಿದ್ದು ಎಲ್ಲಿ?
ಈಗ 16 ರಾಜ್ಯಗಳಲ್ಲಿ 100ರ ಗಡಿ ದಾಟಿ ಬಿಟ್ಟಿದೆ ಪೆಟ್ರೋಲ್‌

ಇದೇ ನಾಲ್ಕು ತಿಂಗಳ ಹಿಂದೆೆ ಪೆಟ್ರೋಲ್‌, ಡೀಸೆಲ್‌ ದರ ನಿಧಾನಕ್ಕೆ ಏರಿಕೆಯಾಗುತ್ತಲೇ ಇತ್ತು. ಪ್ರತಿನಿತ್ಯ 10 ಪೈಸೆಯಿಂದ 40 ಪೈಸೆಯವರೆಗೂ ಏರಿಕೆ ಕಾಣಿಸುತ್ತಿತ್ತು. ಅಂತೂ ಅದೊಂದು ದಿನ ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 101 ರೂಪಾಯಿ ನಿಗದಿಯಾಗಿ ಬಿಡ್ತು. ಇತಿಹಾಸವೇ ನಿರ್ಮಾಣವಾಗಿ ಬಿಡ್ತು. ಭಾರತದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಪೆಟ್ರೋಲ್‌ ನೂರರ ಗಡಿ ದಾಟಿದ್ದು ಎಲ್ಲಿ ಅಂತ ಈಗ ನೋಡಿದ್ರೆ ಅದು ರಾಜಸ್ಥಾನದಲ್ಲಿ ಅಂತ ಉತ್ತರ ಬರುತ್ತೆ. ಅಲ್ಲಿಂದ ಏರಿಕೆ ಆರಂಭವಾಗಿದ್ದು, ಒಂದೆರೆಡು ಬಾರಿ ಮಾತ್ರ ಅಲ್ಪ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಹೊರತುಪಡಿಸಿ ಬಹುತೇಕ ದಿನ ಏರಿಕೆಯಾಗುತ್ತಲೇ ಸಾಗುತ್ತಿದೆ. ಇಂದು ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ಕರ್ನಾಟಕ, ಲಡಾಕ್‌, ಜಮ್ಮು ಕಾಶ್ಮೀರ, ಓಡಿಶಾ, ತಮಿಳುನಾಡು, ಬಿಹಾರ, ಕೇರಳ, ಪಂಜಾಬ್‌, ಸಿಕ್ಕಿಂ, ದೆಹಲಿ, ಪಶ್ಚಿಮ ಬಂಗಾಳ…ಈ 16 ರಾಜ್ಯಗಳಲ್ಲಿ ಪೆಟ್ರೋಲ್‌ ದರ 100ರ ಗಡಿ ದಾಟಿದೆ. ಸದ್ಯದಲ್ಲಿಯೇ ಇನ್ನಷ್ಟು ರಾಜ್ಯಗಳು ಈ ಲೀಸ್ಟ್‌ಗೆ ಸೇರಿಕೊಳ್ಳಲಿವೆ.

ಇದನ್ನೂ ಓದಿ: ಹೆಚ್ಚಿದ ಪೆಟ್ರೋಲ್ ರೇಟ್, ಖರ್ಚಿಗೆ ಬ್ರೇಕ್.. ಸೈಕಲ್​​ಗೆ ಡಿಮ್ಯಾಂಡ್

ಬೆಂಗಳೂರಿನಲ್ಲಿ ಏರುಮುಖವಾದ ದರ
ಕಳೆದ 10 ದಿನದಲ್ಲಿ ಬೆಂಗಳೂರಲ್ಲಿ ಪೆಟ್ರೋಲ್‌ ದರ ಏರಿಕೆ ಹೇಗಾಗಿದೆ ಅಂತ. ಜೂನ್ 29 ರಂದು 102.11 ರೇಟ್, ಮರುದಿನವೇ 102.18 ರೂಪಾಯಿ ತಲುಪಿತ್ತು. ಜುಲೈ 1 ರಂದು 7 ಪೈಸೆ ಇಳಿಕೆ ಕಂಡಿದ್ದ ಪೆಟ್ರೋಲ್ ಜುಲೈ 2 ರಂದು ಮತ್ತೆ ಏರಿಕೆ ಕಂಡಿತ್ತು. ಜುಲೈ 01 ರಂದು 102.11 ರಷ್ಟಿದ್ದ ದರ ಜುಲೈ 02 ರಂದು 102.48 ರೂಪಾಯಿ ಗೆ ಏರಿಕೆಯಾಗಿತ್ತು. ಜುಲೈ 03 ರಂದು ಮತ್ತೆ 36 ಪೈಸೆ ಏರಿಕೆ ಕಂಡ ದರ ಜುಲೈ 5 ರಷ್ಟರಲ್ಲೇ 103 ರ ಗಡಿ ದಾಟಿ ಬಿಟ್ಟಿತ್ತು. ಆದ್ರೆ ಜುಲೈ 6 ರಂದು ಏರಿಕೆ ಕಾಣದಿದ್ರೂ ಜುಲೈ 7 ರಂದು ಮತ್ತೆ 36 ಪೈಸೆ ಏರಿಕೆ ಕಂಡಿತ್ತು. ಇಷ್ಟಕ್ಕೂ ನಿಲ್ಲದ ಇದರ ಓಟ ಜುಲೈ 8 ತಲುಪುವ ಅಷ್ಟರಲ್ಲೇ 104 ರ ಸನಿಹದಲ್ಲಿ ಬಂದು ನಿಂತ್ತಿತ್ತು. ಜುಲೈ 8 ರಷ್ಟರಲ್ಲೇ ಇದ್ರ ದರ 103.93 ರೂಪಾಯಿಗೆ ಏರಿಕೆಯಾಗಿತ್ತು.

blank

ಭಾರತದಲ್ಲಿ ತೈಲ ದರ ಏರಿಕೆಗೆ ಕಾರಣವಾಗಿರೋದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿರುವ ತೈಲ ಬ್ಯಾರೆಲ್‌ ದರ ಏರಿಕೆ. ಹೌದು, ಪ್ರತಿ ನಿತ್ಯ ತೈಲ ಬ್ಯಾರೆಲ್‌ ದರ ಏರಿಕೆಯಾಗುತ್ತಲೇ ಹೋಗುತ್ತಿದೆ. ಇದು ಭಾರತದ ಮೇಲೆ ಹೊರೆಯಾಗುತ್ತಲೇ ಸಾಗುತ್ತಿದೆ.

ಯಾವ ತಿಂಗಳಲ್ಲಿ ಬ್ಯಾರೆಲ್‌ ದರ ಹೇಗಿತ್ತು?
ಇದು, ಅಮೆರಿಕದ ಡಾಲರ್‌ ಲೆಕ್ಕದಲ್ಲಿ ಏರಿಕೆಯಾಗಿರುವ ಬ್ಯಾರೆಲ್‌ ಬೆಲೆ. 1 ಜುಲೈ 2020ರಲ್ಲಿ ಪ್ರತಿ ಬ್ಯಾರೆಲ್‌ ದರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 39.82 ಅಮೆರಿಕನ್‌ ಡಾಲರ್‌ ಆಗಿತ್ತು. ಹಾಗೇ ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ 40 ಡಾಲರ್‌ ದಾಟುತ್ತದೆ. ಆದ್ರೆ, ಅಕ್ಟೋರ್‌ನಲ್ಲಿ 38.72 ಡಾಲರ್‌ಗೆ, ನವೆಂಬರ್‌ನಲ್ಲಿ 36.81 ಡಾಲರ್‌ಗೆ ಇಳಿಕೆಯಾಗಿರುತ್ತದೆ. ತದ ನಂತರ ಏರಿಕೆ ಆರಂಭವಾಗಿದ್ದು ನಿಂತೇ ಇಲ್ಲ. ಕಳೆದ ವರ್ಷದ ಜುಲೈ 1 ರಲ್ಲಿ 39.82 ಡಾಲರ್‌ ಇದ್ದದ್ದು. ಈ ವರ್ಷದ ಜುಲೈ 1 ಕ್ಕೆ 75.23 ಡಾಲರ್‌ಗೆ ಏರಿಕೆಯಾಗಿದೆ. ಅಂದ್ರೆ, ಒಂದು ವರ್ಷದ ಅವಧಿಯಲ್ಲಿ 35.41 ಡಾಲರ್‌ನಷ್ಟು ಹೆಚ್ಚಳವಾಗಿದೆ.

6 ವರ್ಷದಲ್ಲಿಯೇ ಗರಿಷ್ಠ ಮಟ್ಟಕ್ಕೆ ಏರಿಕೆಯಾದ ಬ್ಯಾರೆಲ್‌ ದರ
ಮುಂದೆ ಪ್ರತಿ ಬ್ಯಾರೆಲ್​ಗೆ ದರ 100 ಡಾಲರ್‌ ಡಾಟಿ ಬಿಡುತ್ತಾ?
ಭಾರತದಲ್ಲಿ ಪೆಟ್ರೋಲ್‌ ದರ 150 ರೂಪಾಯಿಗೆ ತಲುಪುತ್ತಾ?

ಇದೊಂದು ಆಘಾತಕಾರಿ ವಿಷಯ. ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ಯಾರೆಲ್‌ ದರ ಏರಿಕೆ ಕಾಣುತ್ತಲೇ ಇದೆ. ಅದು, ಎಷ್ಟರ ಮಟ್ಟಿಕೆ ಏರಿಕೆಯಾಗಿದೆ ಅಂದ್ರೆ, ಕಳೆದ 6 ವರ್ಷದಲ್ಲಿಯೇ ದಾಖಲೆಯ ಬೆಲೆಯಾಗಿದೆ. 2014ರಲ್ಲಿ 93.17 ಡಾಲರ್‌ ದರ ಇತ್ತು. ಆನಂತರ ಇಳಿಕೆಯಾಗುತ್ತಾ ಸಾಗಿತ್ತು. ಆದ್ರೆ, ಇದೀಗ ಆ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದೆ. ಇದರಿಂದ ಭಾರತದಲ್ಲಿಯೂ ತೈಲ ಕೋಲಾಹಲವೇ ಸೃಷ್ಟಿಯಾಗಿ ಬಿಟ್ಟಿದೆ. ಸದ್ಯ ತಜ್ಞರು ಹೇಳುವ ಪ್ರಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ಬ್ಯಾರೆಲ್‌ ದರ 100 ಡಾಲರ್‌ ದಾಟುತ್ತೆ. ಒಮ್ಮೆ ಹಾಗೇನಾದ್ರೂ ಆದ್ರೆ ಭಾರತದಲ್ಲಿ ಪೆಟ್ರೋಲ್‌, ಡೀಸೆಲ್‌ ದರ 150 ರೂಪಾಯಿ ದಾಟುವುದು ಖಚಿತ.

blankಬ್ಯಾರೆಲ್‌ ದರ ಏರಿಕೆಗೆ ಕಾರಣ ಏನು?
ದರ ಏರಿಕೆ ಬಗ್ಗೆ ತಜ್ಞರು ಹೇಳೋದು ಏನು?
ತೈಲ ದರ ಮೇಲೆ ಕೊರೊನಾ ಕರಿನೆರಳು ಬಿತ್ತಾ?

ಇದನ್ನೂ ಓದಿ: ರಾಜ್ಯದಲ್ಲೂ ಸೆಂಚುರಿ ಹೊಡೆದ ಪೆಟ್ರೋಲ್ ರೇಟ್; ಯಾವ ಜಿಲ್ಲೆಯಲ್ಲಿ ಎಷ್ಟು ಬೆಲೆ?

ತೈಲ ದರ ಏರಿಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿದೆ. ಅಂತಾಷ್ಟ್ರೀಯ ಮಟ್ಟದಲ್ಲಾದ ಕೆಲವೊಂದು ಬದಲಾವಣೆಗಳು ತೈಲ ದರದ ಮೇಲೂ ಪರಿಣಾಮ ಬೀರುತ್ತವೆ. ಕೆಲವು ತಜ್ಞರ ಪ್ರಕಾರ ಕೊರೊನಾ ಕೂಡ ದರ ಏರಿಕೆಗೆ ಕಾರಣವಾಗಿದೆ. ಯಾಕೆಂದ್ರೆ, ಕಳೆದ ವರ್ಷ ಕೊರೊನಾ ಸಮಯದಲ್ಲಿ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್‌ ಘೋಷಣೆ ಮಾಡಿದ್ದವು. ಇರದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೇಡಿಕೆ ಕಡಿಮೆ ಇತ್ತು. ಹೀಗಾಗಿ ಆ ಸಂದರ್ಭದಲ್ಲಿ ತೈಲ ಉತ್ಪಾದಿತ ಅರಬ್‌ ರಾಷ್ಟ್ರಗಳು ಬಹುತೇಕ ತೈಲ ಉತ್ಪಾದನೆಯನ್ನೇ ನಿಲ್ಲಿಸಿ ಬಿಟ್ಟಿದ್ದವು. ಆದರೆ ಈಗ ಎಲ್ಲಾ ರಾಷ್ಟ್ರಗಳಲ್ಲಿಯೂ ಲಾಕ್‌ಡೌನ್‌ ತೆರವು ಆಗಿದೆ. ತೈಲಕ್ಕೆ ಬೇಡಿಕೆ ಹೆಚ್ಚಾಗಿದೆ. ಸಮಸ್ಯೆ ಅಂದ್ರೆ, ತೈಲ ಉತ್ಪಾದಿತ ರಾಷ್ಟ್ರಗಳಲ್ಲಿ ಈಗ ಹೆಚ್ಚಿನ ಸ್ಟಾಕ್‌ ಇಲ್ಲ. ದಿಢೀರ್‌ ಅಂತ ತೈಲ ಉತ್ಪಾದನೆ ಹೆಚ್ಚಿಸಲು ಅವು ಸಿದ್ಧವೂ ಇಲ್ಲ. ಇಷ್ಟೇ ಅಲ್ಲ, ತೈಲ ಉತ್ಪಾದಿತ ರಾಷ್ಟ್ರಗಳ ನಡುವಿನ ಬಿಕ್ಕಟ್ಟು ಕೂಡ ದರ ಏರಿಕೆಗೆ ಕಾರಣವಾಗುತ್ತಿದೆ ಎನ್ನುತ್ತಾರೆ ತಜ್ಞರು.

ಪೆಟ್ರೋಲ್‌ ದರ 150 ರೂಪಾಯಿ ದಾಟಿದ್ರೆ ಪರಿಸ್ಥಿತಿ ಏನು?
ಹೌದು, ತಜ್ಞರು ಹೇಳುವ ಪ್ರಕಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಕೆಯಾಗುವ ಸಾಧ್ಯತೆ ಇಲ್ಲ. ಇದೇ ರೀತಿ ಏರಿಕೆ ಕಾಣುತ್ತಾ ಹೋದರೆ ಪ್ರತಿ ಬ್ಯಾರೆಲ್‌ ದರ 100 ಡಾಲರ್‌ ಗಡಿ ದಾಟುತ್ತೆ. ಒಮ್ಮೆ ಹಾಗಾದ್ರೆ ಭಾರತದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಗಗನಕ್ಕೇರಿ ಬಿಡುತ್ತೆ. ಈಗಾಗಲೇ ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ಜನರಿಗೆ ಇದು ಮತ್ತೊಂದು ಹೊರೆಯಾಗುತ್ತೆ. ಒಂದು ಲೀಟರ್‌ ಪೆಟ್ರೋಲ್‌, ಡೀಸೆಲ್‌ ದರ 150 ರೂಪಾಯಿ ದಾಟಿದ್ರೆ ಜನ ಸಾಮಾನ್ಯರ ಪರಿಸ್ಥಿತಿ ಅವಲೋಕಿಸುವುದು ಕಷ್ಟ. ಒಂದು ಕಡೆ ತೈಲ ದರ ಏರಿಕೆಯಾದಂತೆ ಮತ್ತೊಂದು ಕಡೆ ದಿನನಿತ್ಯದ ಅಗತ್ಯ ವಸ್ತುಗಳ ದರವೂ ಏರಿಕೆಯಾತ್ತೆ.

ಭಾರತದಲ್ಲಿನ ತೈಲ ಬೇಡಿಕೆ, ಲಭ್ಯತೆ

  • ಭಾರತದಲ್ಲಿ ನಿತ್ಯ ತೈಲ ಬಳಕೆ ಪ್ರಮಾಣ 44 ಲಕ್ಷದ 43 ಸಾವಿರ ಬ್ಯಾರೆಲ್
  • ತೈಲೋತ್ಪಾದನೆ ಪ್ರಮಾಣ ದಿನಕ್ಕೆ 10 ಲಕ್ಷದ 16 ಸಾವಿರ ಬ್ಯಾರೆಲ್ ಗಳು
  • ಅಂದರೆ ಉತ್ಪಾದನೆಗೂ, ಬಳಕೆಗೂ 30ಲಕ್ಷಕ್ಕೂ ಹೆಚ್ಚು ಬ್ಯಾರೆಲ್ ವ್ಯತ್ಯಾಸ
  • ಭಾರತದ ತೈಲ ಆಮದು ಪ್ರಮಾಣ ದಿನಕ್ಕೆ 42 ಲಕ್ಷದ 55 ಸಾವಿರ ಬ್ಯಾರೆಲ್

ಭಾರತದಲ್ಲಿ ಯಾಕೆ ತೈಲ ದರ ಇಷ್ಟೊಂದು ಏರಿಕೆ?
ಭಾರತ ಶೇಕಡಾ 83 ರಷ್ಟು ತೈಲವನ್ನು ಬೇರೆ ದೇಶದಿಂದ ಆಮದು ಮಾಡಿಕೊಳ್ಳುತ್ತದೆ. ಈ ಕಚ್ಚಾತೈಲದ ಮೌಲ್ಯ ಸುಮಾರು 6.7 ಲಕ್ಷ ಕೋಟಿ ರುಪಾಯಿ ಆಗಿರುತ್ತದೆ. ಪ್ರಮುಖವಾಗಿ ಇರಾಕ್‌, ಸೌದಿ ಅರೇಬಿಯಾ, ನೈಜೀರಿಯಾ ಮತ್ತು ಅಮೆರಿಕಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಅದರಲ್ಲಿಯೂ ಶೇ.30ಕ್ಕೂ ಹೆಚ್ಚು ತೈಲ ಇರಾಕ್‌ನಿಂದ ಆಮದಾಗುತ್ತದೆ. ತೈಲ ಖರೀದಿಯ ವೇಳೆ ಭಾರತ ಡಾಲರ್‌ ಅಥವಾ ಯೂರೋದಲ್ಲಿ ಹಣ ಸಂದಾಯ ಮಾಡುತ್ತದೆ. ಡಾಲರ್‌ ಎದುರು ರುಪಾಯಿ ಮೌಲ್ಯ ಕುಸಿಯುತ್ತಿರುವುದು ಕೂಡ ಭಾರತದಲ್ಲಿ ತೈಲ ದರ ಏರಿಕೆಗೆ ಕಾರಣವಾಗುತ್ತಿದೆ.

ಪೆಟ್ರೋಲ್ ಲೀಟರ್‌ಗೆ ಮೂಲ ದರ 30 ರಿಂದ 40 ರೂ. ಮಾತ್ರ
ಒಂದು ಲೀಟರ್ ಪೆಟ್ರೋಲ್‌ ಮೂಲ ದರ 30 ರಿಂದ 40 ರೂಪಾಯಿಗಳು ಮಾತ್ರ. ಆದ್ರೆ ಮೂಲ ದರ ಮೇಲೆ ಕೇಂದ್ರ ವಿಧಿಸುವ ತೆರಿಗೆ 32 ರೂಪಾಯಿಗೂ ಹೆಚ್ಚು. ಇನ್ನು ರಾಜ್ಯ ಸರ್ಕಾರ ವಿಧಿಸುವ ತೆರಿಗೆ 25 ರೂಪಾಯಿ. ಇದರ ಜೊತೆಗೆ ಡೀಸೆಲ್‌ ಶುಲ್ಕ ಮತ್ತು ಸೆಸ್ ಸೇರಿ 4 ರೂಪಾಯಿ ಸೇರ್ಪಡೆಯಾಗುತ್ತದೆ. ಹೀಗಾಗಿ ಈಗ ಪೆಟ್ರೋಲ್ ದರ 100 ರೂಪಾಯಿ ಡಾಟಿದೆ. ಒಮ್ಮೆ ತೈಲ ದರ ಇಳಿಯಬೇಕು ಅಂದ್ರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆರಿಗೆ ಇಳಿಸಬೇಕು. ತೈಲ ಉತ್ಪಾದಿಸುವ ಬೇರೆ ಬೇರೆ ರಾಷ್ಟ್ರಗಳ ಜೊತೆ ಒಪ್ಪಂದ ಮಾಡಿಕೊಳ್ಳಬೇಕು.

blank

ಇದೇ ರೀತಿ ತೈಲ ಬ್ಯಾರೆಲ್‌ ದರ ಏರಿಕೆಯಾಗುತ್ತಾ ಸಾಗಿದರೆ ಭಾರತದಲ್ಲಿ ಪೆಟ್ರೋಲ್‌, ಡೀಸೆಲ್‌ ದರ 150 ರೂಪಾಯಿ ದಾಟುತ್ತೆ. ಆದ್ರೆ, ದರ ಏರಿಕೆಗೆ ಇರುವ ಮಾರ್ಗವನ್ನು ಭಾರತ ಕಂಡುಕೊಳ್ಳಲೇಬೇಕು. ಇಲ್ಲದಿದ್ರೆ, ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿ ಬಿಡುತ್ತೆ.

The post 16 ರಾಜ್ಯಗಳಲ್ಲಿ 100ರ ಗಡಿ ದಾಟಿದ ಪೆಟ್ರೋಲ್ ಬೆಲೆ; ಸದ್ಯದಲ್ಲೇ 150 ರೂಪಾಯಿಗೆ ಏರಿಕೆ? appeared first on News First Kannada.

Source: newsfirstlive.com

Source link