ಅಜ್ಜಿಗಾಗಿ ಆಸ್ಪತ್ರೆಯಲ್ಲಿಯೇ ವಿವಾಹವಾದ ಮೊಮ್ಮಗಳು

– ಮದುವೆ ಬಳಿಕ ಇಹಲೋಕ ತ್ಯಜಿಸಿದ ಅಜ್ಜಿ

ವಾಷಿಂಗ್ಟನ್: ಅನಾರೋಗ್ಯದಿಂದ ಬಳಲುತ್ತಿರುವ ಅಜ್ಜಿಗಾಗಿ ಯುವತಿ ಆಸ್ಪತ್ರೆಯಲ್ಲಿ ವಿವಾಹವಾಗಿದ್ದಾರೆ. ಈ ಮೂಲಕ ಅಜ್ಜಿಗೆ ಸಪ್ರ್ರೈಸ್ ನೀಡಿ ತಾನೂ ಖುಷಿಪಟ್ಟಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ:  ಕಾಂಗ್ರೆಸ್ ಕಾರ್ಯಕರ್ತನಿಗೆ ಕಾರ್ಕಳ ಎಸ್‍ಐ ಮಧು ಹಲ್ಲೆ – ತನಿಖೆಗೆ ಸಿದ್ದರಾಮಯ್ಯ ಒತ್ತಾಯ

71 ವರ್ಷದ ಅವಿಸ್ ರಸ್ಸೆಲ್ ಎಂಬವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವಿಸ್ ಅವರ ಆರೋಗ್ಯ ಎಷ್ಟು ಪ್ರಯತ್ನಿಸಿದರೂ ದಿನದಿಂದ ದಿನಕ್ಕೆ ಕ್ಷೀಣಿಸುತ್ತಲೇ ಇತ್ತು. ಈ ನಡುವೆ ಅವಿಸ್ ಅವರ ಮೊಮ್ಮಗಳ ವಿವಾಹ ಈ ವರ್ಷದ ಕೊನೆಯಲ್ಲಿ ನಿಗದಿಯಾಗಿತ್ತು. ಆದರೆ ಅಜ್ಜಿ ತನ್ನ ವಿವಾಹದಲ್ಲಿ ಭಾಗಿಯಾಗಬೇಕೆಂಬ ಆಸೆ ಮೊಮ್ಮಗಳದ್ದಾಗಿತ್ತು. ಹೀಗಾಗಿ ಇವರು ಆಸ್ಪತ್ರೆಯಲ್ಲಿಯೇ ವಿವಾಹವಾಗಲು ನಿರ್ಧರಿಸಿದ್ದರು.

ಈ ಯುವತಿ ಮೆಥೋಡಿಸ್ಟ್ ಆಸ್ಪತ್ರೆಯಲ್ಲಿ ತನ್ನ ಬಹುಕಾಲದ ಸಂಗಾತಿಯೊಂದಿಗೆ ಹೊಸ ಜೀವನ ಆರಂಭಿಸಿದ್ದಾರೆ. ಅಜ್ಜಿಯ ಸಮ್ಮುಖದಲ್ಲಿ ಪರಸ್ಪರ ಬದ್ಧತೆಯನ್ನು ದಾಖಲಿಸಿಕೊಂಡ ಜೋಡಿ ಬಳಿಕ ಅಜ್ಜಿಯನ್ನು ಬಿಗಿದಪ್ಪಿದ್ದರು. ಅಜ್ಜಿಯೂ ಖುಷಿಯಿಂದ ನವಜೋಡಿಯನ್ನು ಹರಿಸಿದ್ದರು. ಈ ಹೃದಯಸ್ಪರ್ಶಿ ಕ್ಷಣವನ್ನು ಆಸ್ಪತ್ರೆ ತನ್ನ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದೆ. ಸಹಜವಾಗಿಯೇ ಈ ವೀಡಿಯೋ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ವಿವಾಹ ಹಲವರನ್ನು ಭಾವುಕರನ್ನಾಗಿಸಿದೆ.

ನೋವಿನ ಸಂಗತಿ ಎಂದರೆ ಈ ವಿವಾಹದ ಬಳಿಕ ರಸ್ಸೆಲ್ ಕೊನೆಯುಸಿರೆಳೆದಿದ್ದಾರೆ. ತಮ್ಮ ಬದುಕಿನ ಕೊನೆಯ ಕ್ಷಣಗಳಲ್ಲಿ ಮೊಮ್ಮಗಳ ವಿವಾಹದ ಖುಷಿಯನ್ನು ಕಂಡ ಅಜ್ಜಿ ಬಳಿಕ ಈ ಲೋಕದ ಯಾತ್ರೆಯನ್ನು ಮುಗಿಸಿದ್ದರು. ಅಜ್ಜಿಯ ಕೊನೆಯ ಕ್ಷಣದಲ್ಲಿ ಖುಷಿ ಮೂಡಿಸಲು ಅನುವು ಮಾಡಿಕೊಟ್ಟ ಆಸ್ಪತ್ರೆಗೆ ಮತ್ತು ಅಜ್ಜಿಯ ಖುಷಿಯಲ್ಲಿ ತಮ್ಮ ಖುಷಿಯನ್ನು ಕಂಡ ನವಜೋಡಿಯನ್ನು ಎಲ್ಲರೂ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಜೊತೆಗೆ ಈ ಜೋಡಿಯ ಭವಿಷ್ಯಕ್ಕೂ ಶುಭ ಹಾರೈಸಿದ್ದಾರೆ.

The post ಅಜ್ಜಿಗಾಗಿ ಆಸ್ಪತ್ರೆಯಲ್ಲಿಯೇ ವಿವಾಹವಾದ ಮೊಮ್ಮಗಳು appeared first on Public TV.

Source: publictv.in

Source link