ಆನ್​​ಲೈನ್​​ ಜೂಜು ರದ್ದು ಕೋರಿ ಪಿಐಎಲ್​​​; ರಾಜ್ಯ ಸರ್ಕಾರದ ನಡೆಗೆ ಹೈಕೋರ್ಟ್ ಬೇಸರ

ಆನ್​​ಲೈನ್​​ ಜೂಜು ರದ್ದು ಕೋರಿ ಪಿಐಎಲ್​​​; ರಾಜ್ಯ ಸರ್ಕಾರದ ನಡೆಗೆ ಹೈಕೋರ್ಟ್ ಬೇಸರ

ಬೆಂಗಳೂರು: ಆನ್ ಲೈನ್ ಜೂಜು ರದ್ದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್​​ ಮುಖ್ಯ ವಿಭಾಗೀಯ ಪೀಠ, ಸರ್ಕಾರದ ಆನ್​​ಲೈನ್ ಬೆಟ್ಟಿಂಗ್ ಮತ್ತು ಗ್ಯಾಂಬ್ಲಿಂಗ್ ನಿಷೇಧಿಸುವ ಕುರಿತು ಎರಡು ವಾರದಲ್ಲಿ ಸ್ಪಷ್ಟ ನಿಲುವು ತಿಳಿಸುವಂತೆ ಸೂಚನೆ ನೀಡಿದೆ.

ಆನ್​​ಲೈನ್ ಬೆಟ್ಟಿಂಗ್ ಮತ್ತು ಗ್ಯಾಂಬ್ಲಿಂಗ್ ನಿಷೇಧಿಸುವ ಕುರಿತು ದಾವಣಗೆರೆ ನಿವಾಸಿ ಡಿ.ಆರ್. ಶಾರದಾರವರು ಹೈಕೋರ್ಟ್​​​ನಲ್ಲಿ ಸಾರ್ವಜನಿಕರ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಪಿಐಎಲ್ ವಿಚಾರಣೆ ಮಾಡಿದ ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠ, ಆನ್ ಲೈನ್ ಜೂಜು ರದ್ದು ಮಾಡುವ ಬಗ್ಗೆ 2 ವಾರದಲ್ಲಿ ಸ್ಪಷ್ಟ ನಿಲುವು ತಿಳಿಸಿ ಎಂದು ಸರ್ಕಾರಕ್ಕೆ ಸೂಚನೆ ನೀಡಿದೆ.

blank

ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸರ್ಕಾರದ ಪರ ಎಎಜಿ ಧ್ಯಾನ್ ಚಿನ್ನಪ್ಪ ಮಾಹಿತಿ ನೀಡಿದರು. ಆನ್​​ಲೈನ್ ಗ್ಯಾಂಬ್ಲಿಂಗ್ ಮತ್ತು ಬೆಟ್ಟಿಂಗ್ ನಿಷೇಧ ಸಂಬಂಧ ಕ್ರಮದ ಪ್ರಕ್ರಿಯೆ ಆರಂಭವಾಗಿದೆ. ಆನ್ ಲೈನ್ ಗ್ಯಾಂಬ್ಲಿಂಗ್ ಸಂಬಂಧ ಕಾಯ್ದೆ ರೂಪಿಸಲಾಗುತ್ತಿದೆ. ಶೀಘ್ರದಲ್ಲೇ ಕರಡು ಪ್ರತಿಯನ್ನು ಸಚಿವ ಸಂಪುಟದ ಮುಂದಿಟ್ಟು ಚರ್ಚೆ ಮಾಡಲಾಗುವುದು. ಸದ್ಯ ಪೊಲೀಸ್ ಆ್ಯಕ್ಟ್ ಬಿಟ್ಟು ಇದರ ನಿಯಂತ್ರಣಕ್ಕೆ ಬೇರೆ ಕಾನೂನುಗಳಿಲ್ಲ. ಹೀಗಾಗಿ ಕರಡು ಬಿಲ್ ರಚಿಸಿ ಕ್ಯಾಬಿನೆಟ್ ಮುಂದಿಟ್ಟು ಚರ್ಚಿಸಲಾಗುವುದು. ಅದಕ್ಕಾಗಿ ಸ್ವಲ್ಪ ಸಮಯ ನೀಡಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: ಆನ್​​ಲೈನ್​ ಗ್ಯಾಂಬ್ಲಿಂಗ್ ನಿರ್ಬಂಧ..? ಸರ್ಕಾರಕ್ಕೆ ಹೈಕೋರ್ಟ್​ ನೀಡಿದ ಸೂಚನೆ ಏನು..?

ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಈ ವೇಳೆ ರಾಜ್ಯ ಸರ್ಕಾರದ ಧೋರಣೆಗೆ ಮತ್ತೆ ಹೈಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿದೆ. ಈಗಾಗಲೇ ಈ ಕುರಿತು ಸಮಯಾವಕಾಶ ಕೇಳಿದ ಕಾರಣ ಸರ್ಕಾರದ ವಿರುದ್ಧ ಹೈಕೋರ್ಟ್ ಬೇಸರ ವ್ಯಕ್ತಪಡಿಸಿದ್ದು, ಕಳೆದ ಫೆಬ್ರವರಿ 1 ರಿಂದ ಇದೇ ಹೇಳಿಕೆ ನೀಡುತ್ತಿದ್ದೀರಿ. ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಯಾಕೆ ಸಾಧ್ಯವಾಗುತ್ತಿಲ್ಲ? ಇಷ್ಟೊಂದು ಹಿಂಜರಿಕೆ ಯಾಕೆ? ಕಳೆದ ನಾಲ್ಕು ಬಾರಿಯೂ ನಾವೂ ಪ್ರತಿಕ್ರಿಯೆ ಕೇಳುತ್ತಲೇ ಇದ್ದೇವೆ. ಆದರೆ ನಿಯಂತ್ರಿಸುವ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ. ಹಲವು ಬಾರಿ ನಿರ್ದೇಶನ ನೀಡಿದ್ದರೂ ಸರ್ಕಾರ ತನ್ನ ನಿಲುವು ತಿಳಿಸಿಲ್ಲ. ಈಗ ಅಂತಿಮವಾಗಿ ಎರಡು ವಾರ ಸಮಯ ಕೊಡುತ್ತಿದ್ದು, ಈ ಸಮಯದ ಒಳಗೆ ಕ್ಯಾಬಿನೆಟ್ ನಲ್ಲಿ ನಿರ್ಧಾರ ಕೈಗೊಂಡು ತಿಳಿಸಿ ಎಂದು ವಿಚಾರಣೆಯನ್ನು ಎರಡು ವಾರ ಮುಂದೂಡಿಕೆ ಮಾಡಿತು.

The post ಆನ್​​ಲೈನ್​​ ಜೂಜು ರದ್ದು ಕೋರಿ ಪಿಐಎಲ್​​​; ರಾಜ್ಯ ಸರ್ಕಾರದ ನಡೆಗೆ ಹೈಕೋರ್ಟ್ ಬೇಸರ appeared first on News First Kannada.

Source: newsfirstlive.com

Source link