ತೆಂಗು ರಫ್ತಿಗೆ ಅವಕಾಶ, ಮೋದಿ ಸರ್ಕಾರದ ಐತಿಹಾಸಿಕ ನಿರ್ಧಾರ: ಶೋಭಾ ಕರಂದ್ಲಾಜೆ

ನವದೆಹಲಿ: ದೇಶದಲ್ಲಿ ಮೊದಲ ಬಾರಿ ತೆಂಗು ರಫ್ತಿಗೆ ಅವಕಾಶ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ. ಸರ್ಕಾರ ರೈತ ಪರವಾಗಿದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ದೆಹಲಿಯಲ್ಲಿ ಕೇಂದ್ರ ಸಚಿವ ಸಂಪುಟ ನಿರ್ಧಾರಗಳ ಬಗ್ಗೆ ಮಾತನಾಡಿದ ಅವರು, ತೆಂಗು ಬೆಳೆಗಾರರಿಗೆ ಉತ್ತಮ ಬೆಲೆ ಕೊಡಿಸುವ ದೃಷ್ಟಿಯಿಂದ ರಫ್ತಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ತೆಂಗಿಗೆ ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಅವರ ಪಾಕಿಸ್ತಾನ ಪ್ರೇಮ ಈ ಹಿಂದೆಯೇ ಪ್ರಕಟ – ಬಿಜೆಪಿ ಟೀಕೆ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರೈತ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಈ ನಿರ್ಧಾರಗಳ ಮೂಲಕ ಸರ್ಕಾರ ರೈತ ಪರವಾಗಿದೆ ಎಂದು ಮೋದಿ ಸಾಬೀತು ಪಡಿಸಿದ್ದಾರೆ. ತೆಂಗು ಅಭಿವೃದ್ಧಿ ಮಂಡಳಿಗೆ ಈ ಮುಂಚೆ ಐಎಎಸ್ ಅಧಿಕಾರಿಗಳನ್ನು ನಿರ್ದೇಶಕರಾಗಿ ನೇಮಿಸಲಾಗುತ್ತಿತ್ತು. ಈಗ ತೆಂಗು ಬೆಳೆಯುವ ರೈತನನ್ನೆ ನಿರ್ದೇಶಕರನ್ನಾಗಿ ಮಾಡಲು ನಿರ್ಧರಿಸಿದೆ. ಜೊತೆಗೆ ಆರು ಸದಸ್ಯರ ಬದಲು ಎಂಟು ಸದಸ್ಯರಿಗೆ ಅವಕಾಶ ನೀಡಿದ್ದು ತೆಂಗು ಬೆಳೆಗೆ ಉತ್ತೇಜನ ನೀಡಲಾಗುತ್ತಿದೆ. ಈ ನಿರ್ಧಾರದಿಂದ ಕರ್ನಾಟಕವೂ ಸೇರಿ ವಿಶೇಷವಾಗಿ ದಕ್ಷಿಣ ಭಾರತಕ್ಕೆ ಹೆಚ್ಚು ಲಾಭವಾಗಲಿದೆ ಎಂದು ಹೇಳಿದರು.

ರೈತರ ಪ್ರತಿಭಟನೆ ನಡುವೆ ಎಪಿಎಂಸಿ ಮುಚ್ಚಲಾಗುತ್ತೆ ಎಂದು ಸುಳ್ಳು ಹೇಳಲಾಗುತ್ತಿತ್ತು ಆದರೆ ಈಗ ಮೋದಿ ಸರ್ಕಾರ ಅವುಗಳ ಅಭಿವೃದ್ಧಿಗೆ ಮುಂದಾಗಿದೆ. ಎಪಿಎಂಸಿಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಎರಡು ಕೋಟಿ ಸಾಲವನ್ನು ಸರ್ಕಾರಿ ಸಂಸ್ಥೆಗಳಿಗೆ ನೀಡಲಾಗುತ್ತಿತ್ತು. ಈಗ ಈ ಸಾಲವನ್ನು ಖಾಸಗಿ ಸಂಸ್ಥೆಗಳಿಗೂ ಸಾಲ ವಿಸ್ತರಿಸಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಅಂಬಿ-ಸುಮಲತಾ ಬಗ್ಗೆ ಮಾತಾಡಿದ್ರೆ ಹುಷಾರ್-ಅಂಬಿ ಅಭಿಮಾನಿಗಳಿಂದ ಎಚ್ಚರಿಕೆ

ಶೀಥಲಿಕರಣ ಘಟಕ ಮತ್ತು ಆಹಾರ ಸಂಸ್ಕರಣೆ ಘಟಕ ಸೇರಿ ಹಲವು ಸುಮಾರು 25 ರೀತಿಯ ಘಟಕಗಳ ನಿರ್ಮಾಣಕ್ಕೆ ಹೆಚ್ಚಿನ ಸಾಲ ಸೌಲಭ್ಯ ನೀಡಲು ಕ್ಯಾಬಿನೆಟ್ ನಲ್ಲಿ ನಿರ್ಧರಿಸಿದ್ದು ರೈತ ಸಂಘಗಳು, ಸಹಕಾರ ಸಂಸ್ಥೆಗಳು, ಸ್ವ ಸಹಾಯ ಗುಂಪುಗಳು ಇದರ ಲಾಭ ಪಡೆಯಬಹುದು ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

The post ತೆಂಗು ರಫ್ತಿಗೆ ಅವಕಾಶ, ಮೋದಿ ಸರ್ಕಾರದ ಐತಿಹಾಸಿಕ ನಿರ್ಧಾರ: ಶೋಭಾ ಕರಂದ್ಲಾಜೆ appeared first on Public TV.

Source: publictv.in

Source link