ಕೇಂದ್ರ ಸಂಪುಟಕ್ಕೂ ರಾಜ್ಯ ರಾಜಕಾರಣಕ್ಕೂ ಲಿಂಕ್.. ಅಲ್ಲಿ ಸಿಗಲಿಲ್ಲ.. ಇಲ್ಲಿ ಬದಲಿಲ್ಲ..!

ಕೇಂದ್ರ ಸಂಪುಟಕ್ಕೂ ರಾಜ್ಯ ರಾಜಕಾರಣಕ್ಕೂ ಲಿಂಕ್.. ಅಲ್ಲಿ ಸಿಗಲಿಲ್ಲ.. ಇಲ್ಲಿ ಬದಲಿಲ್ಲ..!

ಇತ್ತೀಚೆಗಷ್ಟೇ ಕೇಂದ್ರ ಸಚಿವ ಸಂಪುಟದ ವಿಸ್ತರಣೆಯಾಗಿದೆ. ಆದರೆ, ಯಾಕೋ ರಾಜ್ಯ ರಾಜಕಾರಣಕ್ಕೂ ಕೇಂದ್ರ ಸಂಪುಟ ವಿಸ್ತರಣೆಗೂ ಲಿಂಕ್ ಕಲ್ಪಿಸಲಾಗುತ್ತಿತ್ತು. ಇದಕ್ಕೊಂದು ಕಾರಣವೂ ಇತ್ತು. ನಾಯಕತ್ವ ಬದಲಾವಣೆ ವಿಚಾರದ ಚರ್ಚೆ ಬಿಜೆಪಿಯಲ್ಲಿ ಮುನ್ನೆಲೆಗೆ ಬಂದಿದ್ದಾಗ ಇದು ಮಹತ್ವ ಪಡೆದುಕೊಂಡಿತ್ತು. ಆದರೆ, ಇವತ್ತು ಹಾಗಾಗಲಿಲ್ಲ. ಹಾಗಾದ್ರೆ ಮುಂದೇನಾಗಬಹುದು? ನಾಯಕತ್ವ ಬದಲಾವಣೆ ಆಗೋದೇ ಆದ್ರೆ ಇನ್ಯಾವ ಸೂತ್ರ ಅಪ್ಲೈ ಮಾಡಬಹುದು ಅನ್ನೋ ನಿರೀಕ್ಷೆ ಹುಟ್ಟಿಕೊಂಡಿದೆ.

blank

ಹಲವು ಸಂಸದರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ರಾಜ್ಯದ ಸಂಸದರೂ ಕೂಡ ಕೇಂದ್ರ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ. ಈ ಸಂಪುಟ ವಿಸ್ತರಣೆಗೂ ರಾಜ್ಯ ರಾಜಕಾರಣಕ್ಕೂ ಲಿಂಕ್ ಮಾಡಲಾಗ್ತಾ ಇತ್ತು. ಕೇಂದ್ರ ಸಂಪುಟ ವಿಸ್ತರಣೆಯಲ್ಲಾಗುವ ವಿದ್ಯಮಾನಕ್ಕೂ ರಾಜ್ಯ ಬಿಜೆಪಿಯಲ್ಲಿನ ನಾಯಕತ್ವ ಬದಲಾವಣೆಗೂ ಸಂಬಂಧ ಕಲ್ಪಿಸಲಾಗಿತ್ತು. ಕೇಂದ್ರದಲ್ಲಿ ಅಂತಹದ್ದೊಂದು ಬೆಳವಣಿಗೆ ನಡೆದರೆ, ಅದು ರಾಜ್ಯದಲ್ಲಿನ ಬದಲಾವಣೆಗೆ ನಾಂದಿ ಅಂತಾನೂ ವಿಶ್ಲೇಷಿಸಲಾಗುತ್ತಿತ್ತು. ಹಾಗಾದ್ರೆ ಅದೇನದು?

ಕೇಂದ್ರ ಸಂಪುಟ ವಿಸ್ತರಣೆಗೂ, ಬಿಎಸ್ ವೈ ಬದಲಾವಣೆಗೂ ಲಿಂಕ್!
ಮಗನಿಗೆ ಸ್ಥಾನ ಕೊಟ್ಟು ಇಲ್ಲಿ ಬದಲಾಯಿಸುವ ಸೂತ್ರ ಎಂದೇ ಮಾತು
ಆದರೆ, ಸದ್ಯಕ್ಕಂತು ಈ ಸೂತ್ರ ಅಪ್ಲೈ ಮಾಡಲಿಲ್ಲ, ಇಲ್ಲಿ ಏನೂ ಆಗಲಿಲ್ಲ
ವಿಜಯೇಂದ್ರಗೆ ಸ್ಥಾನ ಸಿಕ್ಕಿಲ್ಲ-ಹಾಗಾದ್ರೆ ನಾಯಕತ್ವ ವಿಚಾರ ಏನಾಗುತ್ತೆ?

ಕೇಂದ್ರ ಸಚಿವ ಸಂಪುಟ ವಿಸ್ತರಣೆಗೂ ಕರ್ನಾಟಕದ ರಾಜಕಾರಣಕ್ಕೂ ಲಿಂಕ್ ಮಾಡಲಾಗ್ತಾ ಇದ್ದಿದ್ದೇ ಈ ಕಾರಣಕ್ಕೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಬದಲಾವಣೆ ಚರ್ಚೆ ಬಿಜೆಪಿಯಲ್ಲಿ ಮುನ್ನೆಲೆಗೆ ಬರ್ತಾ ಇದ್ದಂತೆ ಇದೇ ಮಾತು ಕೇಳಿ ಬಂದಿತ್ತು. ಶಿವಮೊಗ್ಗದಿಂದ ಸಂಸದರಾಗಿರುವ ಬಿ.ವೈ ರಾಘವೇಂದ್ರಗೆ ಕೇಂದ್ರದಲ್ಲಿ ಸಚಿವ ಸ್ಥಾನ ನೀಡಿ, ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುತ್ತಾರೆ ಅಂತಾನೇ ಗುಸು ಗುಸು ಕೇಳಿ ಬರ್ತಿತ್ತು. ಈ ಹಿಂದೆ ಹೈಕಮಾಂಡ್ ಮಟ್ಟದಲ್ಲೂ ಇದೇ ಚರ್ಚೆಯಾಗಿದೆ ಅಂತಾನೂ ಹೇಳಲಾಗ್ತಾ ಇತ್ತು. ಇದಕ್ಕೆ ಯಡಿಯೂರಪ್ಪ ಒಂದು ಹಂತದಲ್ಲಿ ಒಪ್ಪಿದ್ದಾರೆ ಅಂತಾನೂ ಕೆಲವರು ಹೇಳ್ತಾ ಇದ್ರು. ಬಹುಷಃ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡ್ತಾ ಇರೋರೇ ಇಂತಹದ್ದನ್ನೆಲ್ಲ ಹಬ್ಬಿಸ್ತಾ ಇರಬಹುದು. ಆದರೆ, ಈಗ ಹಾಗಾಗಲಿಲ್ಲ. ಕೇಂದ್ರ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಯಡಿಯೂರಪ್ಪ ಪುತ್ರನಿಗೆ ಸ್ಥಾನ ಸಿಗಲಿಲ್ಲ. ಹೀಗಾಗಿ ಯಡಿಯೂರಪ್ಪ ಸದ್ಯಕ್ಕಂತೂ ಇಲ್ಲಿ ಬದಲಾವಣೆ ಆಗಲ್ಲ ಅಂತ ಫಸ್ಟ್ ರಿಯಾಕ್ಷನ್ ರೀತಿಯಲ್ಲೇ ರಾಜ್ಯ ಬಿಜೆಪಿಯಲ್ಲಿ ಚರ್ಚೆಯಾಗ್ತಾ ಇರುವ ವಿಷಯ.

ಇವತ್ತಿನ ಬೆಳವಣಿಗೆ ಬದಲಾವಣೆ ಮಾತಿಗೆ ಫುಲ್ ಸ್ಟಾಪ್ ಹಾಕ್ತಾ?
ಬಿಜೆಪಿಯ ಹೈಕಮಾಂಡ್ ಮುಂದೆ ಬೇರೆ ಸೂತ್ರಗಳು ರೆಡಿ ಇದ್ಯಾ?

ಕೇಂದ್ರ ಸಚಿವ ಸಂಪುಟದಲ್ಲಿ ಬಿ.ವೈ.ರಾಘವೇಂದ್ರಗೆ ಸಚಿವ ಸ್ಥಾನ ನೀಡಿ ಯಡಿಯೂರಪ್ಪನವರನ್ನು ಸಮಾಧಾನಗೊಳಿಸಿ ನಂತರ ಸಿಎಂ ಸ್ಥಾನ ಬಿಟ್ಟುಕೊಡುವಂತೆ ನೋಡಿಕೊಳ್ಳುವುದು ಮೊದಲ ಸೂತ್ರ ಅಂತಾನೇ ಬಿಂಬಿಸಲಾಗ್ತಾ ಇತ್ತು. ಆದರೆ ಈಗ ಹೀಗಂತೂ ಆಗಲಿಲ್ಲ. ಬಿ.ವೈ.ರಾಘವೇಂದ್ರ ಕೇಂದ್ರ ಮಂತ್ರಿಯಾಗಲಿಲ್ಲ. ಹಾಗಾದ್ರೆ ಯಡಿಯೂರಪ್ಪ ಕುರ್ಚಿ ಗಟ್ಟಿಯಾಗಿ ಬಿಡ್ತಾ? ಇವತ್ತು ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ಬೆಳವಣಿಗೆ ಕರ್ನಾಟಕ ಬಿಜೆಪಿಯ ನಾಯಕತ್ವ ಬದಲಾವಣೆ ಮಾತಿಗೆ ಫುಲ್ ಸ್ಟಾಪ್ ಹಾಕಿ ಬಿಡ್ತಾ? ಹೀಗಂತ ಕೇಳಿದ್ರೆ ಇಲ್ಲಾ ಅಂತಾನೇ ಹೇಳ್ತಿವೆ ಬಿಜೆಪಿಯ ಮೂಲಗಳು. ಇತ್ತೀಚೆಗೆ ನಡೆಯುತ್ತಿರುವ ಕೆಲವು ಬೆಳವಣಿಗಳು ಇದಕ್ಕೆ ಪುಷ್ಟಿಯನ್ನು ಕೂಡ ನೀಡುತ್ತಿವೆ. ಹಾಗಾದ್ರೆ ಬಿಜೆಪಿಯ ಹೈಕಮಾಂಡ್ ಮುಂದೆ ಬೇರೆ ಸೂತ್ರಗಳು ರೆಡಿ ಇದ್ಯಾ ಅಂತ ಕೇಳಿದ್ರೆ ಇಲ್ಲಾ ಅಂತಾನೂ ಹೇಳೋದಕ್ಕೆ ಆಗಲ್ಲ ಅಂತಿದಾರೆ ರಾಜಕೀಯ ವಿಶ್ಲೇಷಕರು.

ವಿಜಯೇಂದ್ರಗೆ ಸ್ಥಾನ ಕೊಟ್ಟು ಬಿಎಸ್​ವೈ ಬದಲಾಯಿಸ್ತಾರಾ?
ಹಾನಗಲ್ ಬೈ ಎಲೆಕ್ಷನ್​​ನಲ್ಲಿ ಟಿಕೆಟ್ ಕೊಟ್ಟು ಮನವೊಲಿಸ್ತಾರಾ?
ಇಲ್ಲಿ ವಿಜಯೇಂದ್ರರಿಗೆ ಮಂತ್ರಿ ಮಾಡಿ ಬಿಎಸ್ ವೈ ಒಪ್ಪಿಸುತ್ತಾರಾ?

ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ಬಿ.ವೈ ರಾಘವೇಂದ್ರಗೆ ಸ್ಥಾನ ಸಿಗಲಿಲ್ಲ. ಹೀಗಾಗಿ ಯಡಿಯೂರಪ್ಪ ಬದಲಾವಣೆ ಆಗೋದೇ ಇಲ್ಲ ಅಂತಾನೂ ಹೇಳೋದಕ್ಕೆ ಆಗಲ್ಲ ಅಂತಿದಾರೆ ಹೆಸರು ಹೇಳದ ಕೆಲವು ಬಿಜೆಪಿ ನಾಯಕರು. ಆದರೆ, ಮುಂದಿನ ಸೂತ್ರವೇನು ಅಂತ ಕೇಳಿದ್ರೆ ಇದೊಂದು ಹೊಸ ರೀತಿಯ ಚರ್ಚೆ ರಾಜ್ಯ ಬಿಜೆಪಿಯಲ್ಲಿ ಶುರುವಾಗಿದೆ.

blank

ಸಿ.ಎಂ ಉದಾಸಿ ಅವರ ನಿಧನದಿಂದ ತೆರವಾಗಿರುವ ಹಾನಗಲ್ ಕ್ಷೇತ್ರದಲ್ಲಿ ವಿಜಯೇಂದ್ರಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬಂದು ಅವರನ್ನು ರಾಜ್ಯದಲ್ಲಿ ಮಂತ್ರಿ ಮಾಡಿ ಯಡಿಯೂರಪ್ಪನವರನ್ನು ಕೆಳಗಿಳಿಸುವ ಸೂತ್ರವೂ ರೆಡಿ ಇರಬಹುದು ಅಂತಿದ್ದಾರೆ ಬಿಜೆಪಿಯ ಚಿಂತಕರ ಚಾವಡಿಯ ಮುಖಂಡರು. ಇದು ಆಗಿದ್ದೇ ಆದರೆ, ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಸ್ವಲ್ಪ ಮುಂದಕ್ಕೆ ಹೋಗಬಹುದು. ಆದರೆ ಮುಂದಿನ ಸಾರ್ವತ್ರಿಕ ಚುನಾವಣೆಗೆ ಒಂದು ವರ್ಷಕ್ಕು ಮುನ್ನವೇ ನಾಯಕತ್ವ ಬದಲಾವಣೆ ಆಗುತ್ತೆ ಅಂತಾನೂ ಹೇಳಲಾಗ್ತಿದೆ.

ನಾಯಕತ್ವ ಬದಲಾವಣೆಗೆ ಮತ್ತೊಂದು ಸೂತ್ರ ಸಿದ್ಧವಾಗಿದ್ಯಾ?
ಇಲ್ಲಿ ಕೆಳಗಿಳಿಸಿ ಯಡಿಯೂರಪ್ಪನವರನ್ನ ಗೌರ್ನರ್ ಮಾಡ್ತಾರಾ?
ನೆರೆಯ ಆಂಧ್ರಪ್ರದೇಶದಲ್ಲಿ ಇಂತದ್ದೊಂದು ಸುದ್ದಿಗೆ ರೆಕ್ಕೆ ಪುಕ್ಕ

ಇನ್ನೊಂದು ವಿಚಾರ ಚರ್ಚೆಯಾಗ್ತಾ ಇರೋದು ಏನು ಅಂದ್ರೆ ಅದು ಯಡಿಯೂರಪ್ಪನವರನ್ನು ರಾಜ್ಯಪಾಲರ ಹುದ್ದೆಗೆ ನೇಮಕ ಮಾಡುವುದು. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಅವರಿಗೆ ಯಾವುದೇ ಸ್ಥಾನ ಮಾನ ನೀಡದಿದ್ರೆ ಸರಿ ಆಗೋದಿಲ್ಲ ಅಂತ ರಾಜ್ಯಪಾಲರನ್ನಾಗಿ ಮಾಡುವ ಸೂತ್ರವೂ ಹೈಕಮಾಂಡ್ ಬಳಿ ಇರಬಹುದು. ನೆರೆಯ ಆಂಧ್ರಪ್ರದೇಶದಲ್ಲಿ ಇಂತದ್ದೊಂದು ಸುದ್ದಿಗೆ ಈಗಾಗಲೇ ರೆಕ್ಕೆ ಪುಕ್ಕಗಳು ಬಂದು ಬಿಟ್ಟಿವೆ. ಕರ್ನಾಟಕದ ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪನವರೇ ಇಲ್ಲಿಗೆ ರಾಜ್ಯಪಾಲರಾಗಿ ಬರಬಹುದು ಅಂತ ಆಂಧ್ರದಲ್ಲಿ ಚರ್ಚೆ ಆಗ್ತಾ ಇದೆ. ಆದರೆ, ಹೈಕಮಾಂಡ್ ಯಾವ ಗುಟ್ಟನ್ನೂ ಬಿಟ್ಟುಕೊಡುತ್ತಿಲ್ಲ. ಕಾರಣ ಯಡಿಯೂರಪ್ಪನವರನ್ನು ಕೆಳಗಿಳಿಸಬೇಕೋ ಬೇಡವೋ ಎಂಬುದೇ ಇನ್ನೂ ಸ್ಪಷ್ಟವಾಗಿ ತೀರ್ಮಾನವಾಗಿಲ್ಲ. ಅಂತಹ ತೀರ್ಮಾನ ದೆಹಲಿಯಲ್ಲಿ ಆದರೆ ಬಹುಷಃ ಈ ಸೂತ್ರಗಳೆಲ್ಲ ಅಪ್ಲೈ ಆಗಬಹುದು.

ಏನೇ ಸೂತ್ರ ಅಳವಡಿಸಿದ್ರೂ ಬಿಎಸ್ ವೈಗೆ ಸರಿಸಮ ಯಾರು?
ಅಷ್ಟು ಸುಲಭವಾಗಿ ಸಮುದಾಯವೊಂದನ್ನು ಬಿಟ್ಟು ಕೊಡ್ತಾರಾ?
ಪುತ್ರರಿಗೆ ಏನೇ ಸ್ಥಾನ ಮಾನ ಕೊಟ್ಟರೂ ತೂಗಿಸೋಕೆ ಆಗುತ್ತಾ?

ಕೇಂದ್ರ ಸಂಪುಟದಲ್ಲಿ ಮಕ್ಕಳಿಗೆ ಸ್ಥಾನ ಕೊಡೋದು, ರಾಜ್ಯ ಸರ್ಕಾರದಲ್ಲಿ ಸ್ಥಾನ ಮಾನ ಕಲ್ಪಿಸೋದು ಅಥವಾ ಯಡಿಯೂರಪ್ಪನವರನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡೋದು ಇವೆಲ್ಲ ಸೂತ್ರಗಳೇನೋ ನಿಜ. ಆದರೆ ಒಮ್ಮೆ ಯಡಿಯೂರಪ್ಪನವರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ಅದರಿಂದಾಗುವ ಪರಿಣಾಮಗಳ ಲೆಕ್ಕಾಚಾರವೂ ನಡೆಯುತ್ತಲೇ ಇದೆ. ಯಡಿಯೂರಪ್ಪ ಸಿಎಂ ಆಗದೇ ಇದ್ರೆ, ಮಕ್ಕಳಿಗೆ ಸರ್ಕಾರದಲ್ಲಿ ಸ್ಥಾನ ಮಾನ ಕೊಟ್ಟು ಬಿಟ್ರೆ ಬಿಎಸ್ ವೈ ಬೆನ್ನಿಗೆ ನಿಂತಿರುವ ರಾಜ್ಯದ ಒಂದು ಪ್ರಬಲ ಸಮುದಾಯ ಮುಂದೆ ಬಿಜೆಪಿಯನ್ನೇ ಹೆಚ್ಚಾಗಿ ಬೆಂಬಲಿಸುತ್ತಾ ಅಥವಾ ಯಾವ ಪಕ್ಷದಲ್ಲಿ ಯಾವ ರೀತಿ ಅವಕಾಶ ಸಿಗುತ್ತೆ ಆ ಕಡೆಗೆ ದೃಷ್ಟಿ ಹಾಯಿಸುತ್ತಾ ಇಂತಹ ಸೂಕ್ಷ್ಮ ಪ್ರಶ್ನೆಗಳು ಕೂಡ ಬಿಜೆಪಿ ಹೈಕಮಾಂಡ್ ಮುಂದಿವೆ.

blank

ಯಾರಿಗೆ ಏನೇ ಕೊಟ್ರು, ಆ ಸಮುದಾಯಕ್ಕೇ ಮುಖ್ಯಮಂತ್ರಿ ಸ್ಥಾನ ಕೊಟ್ಟರೂ ಕೂಡ ಯಡಿಯೂರಪ್ಪನವರ ನಾಯಕತ್ವಕ್ಕೆ ಸರಿಸಮನರಾಗಿ ನಿಲ್ಲಬಲ್ಲವರು ಇದ್ದಾರಾ ಅಂದರೆ ಅದಕ್ಕೆ ಬಿಜೆಪಿ ಹೈಕಮಾಂಡ್ ಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಯಾವುದೇ ಒಂದು ಪಕ್ಷ ಒಂದು ರಾಜ್ಯದಲ್ಲಿ ಭದ್ರವಾಗಿರುವ ನೆಲೆಯನ್ನು ದಿಢೀರ್ ಅಂತ ಕಳೆದುಕೊಳ್ಳಲು, ಸಡಿಲ ಮಾಡಿಕೊಳ್ಳಲು ಬಿಡೋದಿಲ್ಲ. ಹೀಗಾಗಿಯೇ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರ ವಿಚಾರದಲ್ಲಿ ಏನೇ ತೀರ್ಮಾನ ಕೈಗೊಂಡರು ಅಳೆದು ತೂಗಿಯೇ ತೆಗೆದುಕೊಳ್ಳುತ್ತೆ ಅಂತ ಹೇಳಲಾಗ್ತಿದೆ.

ಅರುಣ್ ಸಿಂಗ್ ವರದಿ ಕೊಟ್ರಾ, ಏನಂತ ಕೊಟ್ಟಿರಬಹುದು?
ಅರುಣ್ ಸಿಂಗ್ ಬಂದು ಹೋದ ಮೇಲೆ ನಡೀತಿರೋದೇನು?

ರಾಜ್ಯ ಬಿಜೆಪಿ ಉಸ್ತುವಾರಿ ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದು ಹೋಗಿದ್ದಾರೆ. ಒಂದಿಷ್ಟು ಶಾಸಕರನ್ನು ಭೇಟಿ ಮಾಡಿ ಮಾತುಕತೆಯನ್ನೂ ನಡೆಸಿದ್ದಾರೆ. ಹಾಲಿ ರಾಜ್ಯ ಬಿಜೆಪಿಯಲ್ಲಿರುವ ವಾತಾವರಣವನ್ನು ಗಮನಿಸಿಕೊಂಡು ದೆಹಲಿಗೆ ಹೋಗಿದ್ದಾರೆ. ಆದ್ರೆ ಅವರು ಏನು ವರದಿ ಕೊಟ್ರು ಅನ್ನೋದು ಮಾತ್ರ ಯಾರಿಗೂ ಗೊತ್ತಿಲ್ಲ. ಶಾಸಕರು, ಸಚಿವರು ಅಭಿಪ್ರಾಯ ಹಂಚಿಕೊಂಡಿದ್ದರು. ಯೋಗೀಶ್ವರ್ ಅವರಂತೂ ಪರೀಕ್ಷೆ ಬರೆದಿದ್ದೇವೆ ರಿಸಲ್ಟ್ ಬರಬೇಕು ಅಂತಾನೂ ಹೇಳಿದ್ರು. ಆದರೆ ಉತ್ತರ ಪತ್ರಿಕೆಯನ್ನು ದೆಹಲಿ ನಾಯಕರು ನೋಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಈ ಮಧ್ಯೆ ಬಿಜೆಪಿಯಲ್ಲಿ ದೆಹಲಿ ಯಾತ್ರೆ ಮಾತ್ರ ನಿಂತಿಲ್ಲ. ದಿಢೀರ್ ಅಂತ ಸಚಿವ ಮುರುಗೇಶ್ ನಿರಾಣಿ ದೆಹಲಿಗೆ ಹೋಗಿ ಮಾತುಕತೆ ನಡೆಸಿದ್ದಾರೆ.

ಅರುಣ್ ಸಿಂಗ್ ಭೇಟಿ ಬಳಿಕ ಬಹಿರಂಗವಾಗಿದ್ದೇನು?
ರಾಜ್ಯ ಬಿಜೆಪಿಯಲ್ಲಿ ಈಗ ಮೂರು ಬಣ, ನಾಲ್ಕು ದಿಕ್ಕು?

ರಾಜ್ಯ ಬಿಜೆಪಿಯಲ್ಲಿ ಇಷ್ಟು ದಿನ ಯಾರೋ ಒಬ್ಬರು ಮಾತನಾಡ್ತಾ ಇದ್ರು. ಇನ್ಯಾರೋ ಅದಕ್ಕೆ ಪ್ರತಿಕ್ರಿಯೆ ಕೊಡ್ತಾ ಇದ್ರು. ಆದ್ರೆ ಈಗ ಅರುಣ್ ಸಿಂಗ್ ಬಂದ ಮೇಲೆ ಮೂರು ಬಣ ಅಂತ ಆಗಿ ಹೋಗಿದೆ. ಒಂದು ಯಡಿಯೂರಪ್ಪ ಪರ ನಿಂತಿರೋ ಬಣ. ಇನ್ನೊಂದು ಯಡಿಯೂರಪ್ಪ ವಿರುದ್ಧ ಇರೋ ಬಣ. ಮತ್ತೊಂದು ತಟಸ್ಥ ಬಣ. ಒಂದು ಬಾರಿ ಬಣ ಅಂತ ಗುರುತಿಸಿಕೊಂಡ ಮೇಲೆ ಇನ್ನು ನಿರಂತರ ತಿಕ್ಕಾಟ ಇದ್ದೇ ಇರುತ್ತೆ. ಹೈಕಮಾಂಡ್ ನಾಯಕತ್ವದ ಬದಲಾವಣೆ ವಿಚಾರಕ್ಕೆ ಫುಲ್ ಸ್ಟಾಪ್ ಹಾಕೋವರೆಗೂ ಇದು ಕಂಟಿನ್ಯೂ ಆಗೋದ್ರಲ್ಲಿ ಅನುಮಾನ ಇಲ್ಲ. ಬಸನಗೌಡ ಪಾಟೀಲ್ ಯತ್ನಾಳ್ ಅವರಂತೂ ಹೋದಲ್ಲಿ ಬಂದಲ್ಲಿ ಮತ್ತೆ ನಾಯಕತ್ವ ಬದಲಾವಣೆ ಆಗಿಯೇ ಆಗುತ್ತೆ ಅಂತ ಹೇಳ್ತಾನೇ ಇದ್ದಾರೆ.

ಬಿಜೆಪಿಯಲ್ಲಿ ಬಹಿರಂಗ ಹೇಳಿಕೆಗಳು ಇನ್ನೂ ಯಾಕೆ ನಿಲ್ತಿಲ್ಲ?
ಹೈಕಮಾಂಡ್ ಯಾಕೆ ಬ್ರೇಕ್ ಹಾಕ್ತಾ ಇಲ್ಲ? ಹಿಂದೆ ಯಾರಿದ್ದಾರೆ?

ರಾಜ್ಯಕ್ಕೆ ಅರುಣ್ ಸಿಂಗ್ ಭೇಟಿಯ ಸಂದರ್ಭದಲ್ಲಿ ಪಕ್ಷದಲ್ಲಿ ಬಹಿರಂಗವಾಗಿ ಹೇಳಿಕೆ ಕೊಡುವವರಿಗೆ ಎಚ್ಚರಿಕೆಯನ್ನೂ ಕೊಟ್ಟು ಹೋಗಿದ್ರು. ಆದರೆ, ಅರುಣ್ ಸಿಂಗ್ ಬಂದು ಹೋದ ಕೆಲವೇ ದಿನಗಳಲ್ಲಿ ಮತ್ತೆ ಬಸನಗೌಡ ಪಾಟೀಲ್ ಯತ್ನಾಳ್ ನಾಯಕತ್ವ ಬದಲಾವಣೆಯ ಮಾತು ಶುರು ಮಾಡಿಯೇ ಬಿಟ್ಟಿದ್ದಾರೆ. ಲೂಟಿ ಆಗ್ತಾ ಇದೆ ಅಂತೆಲ್ಲ ಆರೋಪ ಮಾಡಿದ್ರು. ಹೀಗೆ ಸ್ವಪಕ್ಷೀಯರೇ ಸರ್ಕಾರದ ವಿರುದ್ಧ, ಮುಖ್ಯಮಂತ್ರಿಗಳ ವಿರುದ್ಧ ಮಾತನಾಡಿದ್ರೆ ಪಕ್ಷಕ್ಕೇ ಮುಜುಗರ ಆಗಲ್ವಾ? ಪ್ರತಿಪಕ್ಷಗಳಿಗೆ ಇದೇ ಪ್ರಬಲ ಅಸ್ತ್ರ ಸಿಕ್ಕಂತಾಗಲ್ವಾ ಅಂತ ಕೇಳಿದ್ರೆ ನಿಜವಾಗಲೂ ಆಗುತ್ತೆ. ಹಾಗಾದರೆ ಇದು ಬಿಜೆಪಿ ಹೈಕಮಾಂಡ್​ಗೆ ಗೊತ್ತಿಲ್ವಾ ಅಂತ ಕೇಳಿದ್ರೆ ಅದು ಕೂಡ ಗೊತ್ತಿರುತ್ತೆ.

blank

ಹೀಗಿದ್ದಾಗಲೂ ಬಿಜೆಪಿ ಹೈಕಮಾಂಡ್ ಯಾಕೆ ಯತ್ನಾಳ್​ಗೆ ಅಂಬಾರಿ ಕಥೆ ಹೇಳಿದ ಸಚಿವ ಯೋಗೇಶ್ವರ್ ಗೆ ಯಾಕೆ ಬ್ರೇಕ್ ಹಾಕುತ್ತಿಲ್ಲ ಅನ್ನೋದೇ ಯಕ್ಷ ಪ್ರಶ್ನೆ. ಬಹುಷಃ ಯಾವ ರೀತಿ ರಿಯಾಕ್ಷನ್ ಬರಬಹುದು ಅಂತ ಟೆಸ್ಟ್ ಮಾಡೋ ಸಲುವಾಗಿಯೇ ಹೈಕಮಾಂಡ್ ಇಂತಹ ಪ್ರಯೋಗ ಮಾಡ್ತಾ ಇದ್ಯಾ ಅನ್ನೋ ವಿಶ್ಲೇಷಣೆಗಳೂ ಕೇಳಿ ಬರ್ತಿವೆ. ಏನೇ ಆದ್ರೂ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸೋದು ಅಷ್ಟು ಸುಲಭವಿಲ್ಲ, ಇಳಿಸಿದರೂ ಮುಂದೆ ಆಗಬಹುದಾದ ಪರಿಣಾಮಗಳನ್ನು ಅಷ್ಟು ಸುಲಭವಾಗಿ ನಿಯಂತ್ರಿಸೋದಕ್ಕೆ ಆಗಲ್ಲ ಅನ್ನೋದು ಕೂಡ ಹೈಕಮಾಂಡ್​ಗೆ ಗೊತ್ತು. ಮುಂದೇನಾಗುತ್ತೋ ನೋಡಬೇಕು.

The post ಕೇಂದ್ರ ಸಂಪುಟಕ್ಕೂ ರಾಜ್ಯ ರಾಜಕಾರಣಕ್ಕೂ ಲಿಂಕ್.. ಅಲ್ಲಿ ಸಿಗಲಿಲ್ಲ.. ಇಲ್ಲಿ ಬದಲಿಲ್ಲ..! appeared first on News First Kannada.

Source: newsfirstlive.com

Source link