ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಿಕೊಡುವಂತೆ ಮನವಿ

ಮಂಡ್ಯ: ಅಕ್ರಮ ಗಣಿಗಾರಿಕೆಯ ಕುರಿತು ತೀವ್ರ ಚರ್ಚೆ ನಡೆಯುತ್ತಿರುವುದರ ಮಧ್ಯೆ ಅಕ್ರಮ ಕಲ್ಲು ಗಣಿಗಾರಿಕೆಯನ್ನು ಸಕ್ರಮ ಮಾಡಲು ಅನುಮತಿ ಕೊಡಬೇಕೆಂದು ಶ್ರೀರಂಗಪಟ್ಟಣ ತಾಲೂಕು ಚನ್ನನಕೆರೆ, ಜಕ್ಕನಹಳ್ಳಿ ಗ್ರಾಮಸ್ಥರು ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿ ಶೈಲಜಾ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಈ ಎರಡು ಗ್ರಾಮದಲ್ಲಿ ಸುಮಾರು 300 ರಿಂದ 400 ಕುಟುಂಬ ವಾಸವಾಗಿವೆ. ಗ್ರಾಮಗಳಲ್ಲಿ 20 ವರ್ಷದಿಂದ ಹಿಡುವಳಿ ಜಮೀನಿನಲ್ಲಿ ಕಲ್ಲು ಬಂಡೆ ಇದ್ದು, ಕೈಯಲ್ಲಿ ಜಲ್ಲಿ, ಸೈಜು ಮತ್ತು ಬೋಡ್ರಸ್‍ಗಳನ್ನು ಮಾಡುತ್ತಾ ಜೀವನ ಸಾಗಿಸುತ್ತಿದ್ದೇವೆ. ಸ್ಥಳೀಯ ಹಣಕಾಸು ಸಂಸ್ಥೆಗಳಲ್ಲಿ ಸಾಲ ಪಡೆದು ಸಣ್ಣ ಪುಟ್ಟ ಟ್ರ್ಯಾಕ್ಟರ್, ಲಾರಿಗಳನ್ನು ತೆಗೆದುಕೊಂಡು ಅಕ್ಕ ಪಕ್ಕದ ಗ್ರಾಮಗಳಲ್ಲಿ ಮನೆ ಕಟ್ಟಲು ಸಾಮಗ್ರಿಗಳನ್ನು ಒದಗಿಸಿಕೊಡುತ್ತಿದ್ದೇವೆ. ಹೀಗಾಗಿ ಸಕ್ರಮ ಮಾಡಿಕೊಂಡಿ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಗ್ರಾಮಗಳ ವ್ಯಾಪ್ತಿಯಲ್ಲಿ ಕ್ರಷರ್‍ಗಳನ್ನು ಎಂ ಸ್ಯಾಂಡ್, ಜಲ್ಲಿಪುಡಿ ಮಾಡಲು ಸರ್ಕಾರದಿಂದ ಪರವಾನಗಿ ನೀಡಲಾಗಿದೆ. ಕಾವೇರಿ ಸ್ಟೋನ್ ಕ್ರಷರ್, ಧನಲಕ್ಷ್ಮೀ ಸ್ಟೋನ್ ಕ್ರಷರ್, ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ಟೋನ್ ಕ್ರಷರ್, ಜೆ.ಜೆ.ಸ್ಟೋನ್ ಕ್ರಷರ್ ಮಾಲೀಕರು ಸ್ಥಳೀಯ ಯುವಕರಿಗೆ ಉದ್ಯೋಗ ನೀಡಿದ್ದಾರೆ. ಇದನ್ನೇ ನಂಬಿ ನೂರಾರೂ ಕುಟುಂಬ ಜೀವನ ನಡೆಸುತ್ತಿವೆ. ಆದ್ದರಿಂದ ಗಣಿಗಾರಿಕೆ ಸಕ್ರಮ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು.

ಮಳೆಯನ್ನೇ ನಂಬಿ ವ್ಯವಸಾಯ ಮಾಡುತ್ತಿದ್ದೇವೆ. ಕೋವಿಡ್ ಕಾರಣದಿಂದ ನಗರದಲ್ಲಿ ಕೆಲಸ ಮಾಡುತ್ತಿದ್ದ ಯುವಕರು, ಇದೀಗ ಉದ್ಯೋಗ ಕಳೆದುಕೊಂಡು ಗ್ರಾಮೀಣ ಭಾಗಕ್ಕೆ ಬಂದು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಸಕಾಲಕ್ಕೆ ಮಳೆ ಬಾರದೇ ನಷ್ಟ ಅನುಭವಿಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.

The post ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಿಕೊಡುವಂತೆ ಮನವಿ appeared first on Public TV.

Source: publictv.in

Source link